ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಅಳದಂಗಡಿ ಬೆಟ್ಟದ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ


ಚಿತ್ರ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು.

ಉಜಿರೆ: ವಸ್ತುವಿನ ಸಹಜ ಸ್ವಭಾವವೇ ಧರ್ಮ. ಪರಿಶುದ್ಧ ಮನಸ್ಸಿನಿಂದ ಬದ್ಧತೆಯಿಂದ ಧರ್ಮವನ್ನು ಸಹಜವಾಗಿ ಆಚರಿಸಬೇಕು. ಧರ್ಮದ ಆಚರಣೆಗೆ ಕಷ್ಟಪಡಬೇಕಾಗಿಲ್ಲ. ಇಷ್ಟಪಟ್ಟು ಧರ್ಮದ ಪರಿಪಾಲನೆ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಬುಧವಾರ ಅಳದಂಗಡಿಯಲ್ಲಿ ಬೆಟ್ಟದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠೆ ಸಂದರ್ಭ ಆಯೋಜಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರಾವಕರು ದೇವರ ಪೂಜೆ, ಗುರುಗಳ ಸೇವೆ, ಸ್ವಾಧ್ಯಾಯ, ಸಂಯಮ, ತಪ, ದಾನ ಮೊದಲಾದ ಷಟ್ಕರ್ಮಗಳನ್ನು ಪ್ರತಿ ದಿನ ಸಹಜವಾಗಿಯೇ ಮುನಿಧರ್ಮ ಪಾಲನೆ ಮಾಡುತ್ತಾರೆ. ಹಕ್ಕಿಗಳು ಬಾನಿನಲ್ಲಿ ಸ್ವಚ್ಛಂದವಾಗಿ ಹಾರಾಡುವಂತೆ, ಮೀನುಗಳು ನೀರಿನಲ್ಲಿ ಸ್ವತಂತ್ರವಾಗಿ ಬದುಕುವಂತೆ ನಾವು ಕೂಡಾ ನಿತ್ಯವೂ ಧರ್ಮನುರಾಗಿಗಳಾಗಿ ಧರ್ಮದ ಪಾಲನೆ ಮಾಡಬೇಕು.

ಅಂತರಂಗ ಮತ್ತು ಬಹಿರಂಗದಲ್ಲಿ ಪರಿಶುದ್ಧರಾಗಿ ಧರ್ಮದ ಆಚಾರ-ವಿಚಾರಗಳನ್ನು, ಇಷ್ಟಪಟ್ಟು ವ್ರತ-ನಿಯಮಗಳನ್ನು ನಿಷ್ಠೆಯಿಂದ ಪಾಲಿಸಬೇಕು. ಧರ್ಮದ ಮರ್ಮವನ್ನು ಅರಿತು, ದೈನಂದಿನ ಜೀವನದಲ್ಲಿ ಧರ್ಮದ ಅನುಷ್ಠಾನದೊಂದಿಗೆ ಬಸದಿಗಳ ಸಂರಕ್ಷಣೆ ಹಾಗೂ ಧರ್ಮದ ಪ್ರಭಾವನೆ ಮಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ, ಯುವಜನತೆ ಉತ್ಸಾಹದಿಂದ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಸಮಾಜ ಸೇವಾ ಕಾಯಕದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಎಲ್ಲರೂ ಸಂಘಟಿತ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶುಭಾಶಂಸನೆ ಮಾಡಿ, ಭೂಸುಧಾರಣೆಯ ಪ್ರಭಾವದಿಂದಾಗಿ ಜೈನರು ಇಂದು ವಿದ್ಯಾವಂತರಾಗಿ, ಉದ್ಯಮಿಗಳಾಗಿ, ಶ್ರಮಜೀವಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸಮಾಜದ ಸರ್ವಧರ್ಮಿಯರಿಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆದರ್ಶ ನೇತಾರರಾಗಿ ಮಾರ್ಗದರ್ಶನ ನೀಡುತ್ತಿರುವುದು ಎಲ್ಲರಿಗೂ ಅಭಿಮಾನ ಉಂಟು ಮಾಡಿದೆ. ತನ್ನ ವ್ಯಕ್ತಿತ್ವ ಬೆಳವಣಿಗೆಯಲ್ಲಿಯೂ ಅವರೇ ಪ್ರೇರಕ ಶಕ್ತಿ ಎಂದು ಧನ್ಯತಾ ಭಾವ ವ್ಯಕ್ತಪಡಿಸಿದರು.

ಮೂಡಬಿದ್ರೆ ಜೈನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ಅಳದಂಗಡಿ ಬಸದಿಯಂತೆ ನದಿ ತೀರದಲ್ಲಿರುವ ಎಲ್ಲಾ ತೀರ್ಥಕ್ಷೇತ್ರಗಳೂ ಪ್ರಸಿದ್ಧ ತಾಣಗಳಾಗುತ್ತವೆ. ನಾವು ಸದಾ ಅಂತರ್ಮುಖಿಗಳಾಗಿ ನಮ್ಮನ್ನು ನಾವು ಅರಿತುಕೊಂಡು ಧರ್ಮ ಹಾಗೂ ದೇವರ ಬಗ್ಯೆ ಚಿಂತನ-ಮಂಥನ ಮಾಡಿಕೊಂಡು ಆತ್ಮಕಲ್ಯಾಣ ಮಾಡಿಕೊಳ್ಳಬೇಕು. ದೇವರ ದರ್ಶನ, ಪೂಜೆ, ಆರಾಧನೆ, ಧಾರ್ಮಿಕ ಶಿಬಿರಗಳು ಇತ್ಯಾದಿ ಕಾರ್ಯಗಳೊಂದಿಗೆ ಬಸದಿಯ ಸದುಪಯೋಗ ಮಾಡಬೇಕು ಎಂದು ಅವರು ಸಲಹೆ ನೀಡಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

‘ಹೊಸಬೆಳಕು’ ಆಶ್ರಮಕ್ಕೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ನೆರವು

Upayuktha

ಋಷಿವಾಕ್ಯ-ವಿಜ್ಞಾನ ಮೇಳೈಸಿದ ಸಂಸ್ಕಾರಯುತ ಶಿಕ್ಷಣದ ಕೇಂದ್ರ- ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠ

Upayuktha

ದೆಹಲಿ ಗಣರಾಜ್ಯೋತ್ಸವ ಪೆರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆ

Upayuktha