ದೇಶ-ವಿದೇಶ ಪ್ರಮುಖ

ಮುಫ್ತಿ ಹೇಳಿಕೆ ಎಂದಿಗೂ ಒಪ್ಪಲಾಗದು: ದೇಶ ವಿರೋಧಿಗಳ ಮೇಲೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ವಾಗ್ದಾಳಿ

ಹೊಸದಿಲ್ಲಿ: ಸಂವಿಧಾನಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಹೇಳಿಕೆಗೆಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತ ಮೋದಿ ಅವರು ಗುರುವಾರ ಈ ಹೇಳಿಕೆ ನೀಡಿದರು.

ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಓಮರ್ ಅಬ್ದುಲ್ಲಾ ವಿರುದ್ಧ ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿ ಕೇಸು ದಾಖಲಿಸಿಕೊಳ್ಳುವ ಕೆಲವೇ ಗಂಟೆಗಳ ಮೊದಲು ಪ್ರಧಾನಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.

ಈ ನಾಯಕರ ಗೃಹಬಂಧನದ 6 ತಿಂಗಳ ಅವಧಿ ಮುಗಿಯುತ್ತಿದ್ದಂತೆಯೇ ಪಬ್ಲಿಕ್ ಸೇಫ್ಟಿ ಆಕ್ಟ್ ಅಡಿಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.

‘ಹಮ್‌ನೆ ಜಿಸ್‌ ದೇಶ್‌ ಕೆ ಸಾಥ್‌ ರಹನೆ ಕಾ ಫೈಸ್ಲಾ ಕಿಯಾ, ಉಸ್ ನೆ ದೋಖಾ ಕಿಯಾ ಹೈ… ಐಸಾ ಲಗ್ತಾ ಹೈ ಹಮ್‌ನೆ 1947 ಮೇ ಗಲತ್‌ ಚುನಾವ್‌ ಕಿಯಾ ಥಾ’ (ನಾವು ಯಾವ ದೇಶದ ಜತೆಗೆ ಇರಲು ಬಯಸಿದ್ದೆವೋ ಅವರು ದ್ರೋಹ ಎಸಗಿದರು… 1947ರಲ್ಲಿ ನಾವು ತಪ್ಪು ಆಯ್ಕೆ ಮಾಡಿದೆವು’ ಎಂದು ಮೆಹಬೂಬಾ ಮುಫ್ತಿ ಹೇಳಿದ್ದನ್ನು ಪ್ರಧಾನಿ ಉಲ್ಲೇಖಿಸಿದರು.

‘ಇಂತಹ ಹೇಳಿಕೆಯನ್ನು ಯಾರಾದರೂ ಹೇಗೆ ಸಮರ್ಥಿಸಲು ಸಾಧ್ಯ…? ಸಂವಿಧಾನ ಆಕೆಗೆ ದ್ರೋಹವೆಸಗಿದೆಯೆ?’ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕ್ರಮಕ್ಕೆ ಮೆಹಬೂಬಾ ಮುಫ್ತಿ ನೀಡಿದ್ದ ಪ್ರತಿಕ್ರಿಯೆಯನ್ನು ಪ್ರಧಾನಿ ಖಂಡಿಸಿದರು.

‘ಕಾಶ್ಮೀರ ಭಾರತದ ಕಿರೀಟ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ನನ್ನ ಸರಕಾರ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ವೇಗ ನೀಡಿದೆ. ಕಣಿವೆಯ ಜನರಲ್ಲಿ ನಮಗೆ ನಂಬಿಕೆಯಿದೆ; ಆದರೆ ಅಲ್ಲಿನ ನಾಯಕರ ಮೇಲೆ ಇಲ್ಲ’ ಎಂದು ಮೋದಿ ನುಡಿದರು.

1990ರ ಜನವರಿ 19ರಂದು ಭಯೋತ್ಪಾದನೆ ಉತ್ತುಂಗಕ್ಕೇರಿದಾಗ ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆದು ಸಾಮೂಹಿಕ ವಲಸೆ ಹೋದರೋ, ಆಗಲೇ ಕಾಶ್ಮೀರದ ಅಸ್ಮಿತೆಯನ್ನು ಹೂತುಹಾಕಲಾಯಿತು ಎಂದು ಮೋದಿ ಹೇಳಿದರು.

ಲಡಾಖ್‌ ಅನ್ನು ಇಂಗಾಲ ತಟಸ್ಥ (ಕಾರ್ಬನ್ ನ್ಯೂಟ್ರಲ್) ಕೇಂದ್ರಾಡಳಿತ ಪ್ರದೇಶವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮೋದಿ ನುಡಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಓಡಿಬಂದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರು ‘ಟುಕ್ಡೇ ಟುಕ್ಡೇ’ ಗ್ಯಾಂಗ್‌ ಜತೆ ಶಾಮೀಲಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಪಾಕಿಸ್ತಾನ ದಶಕಗಳಿಂದಲೂ ಯಾವುದಕ್ಕಾಗಿ ಪ್ರಯತ್ನಿಸುತ್ತಿತ್ತೋ, ಅದನ್ನೇ ಕಾಂಗ್ರೆಸ್‌ ಕೂಡ ಮಾಡಿದೆ. ದೇಶದ ಮುಸ್ಲಿಮರಲ್ಲಿ ಕಾಲ್ಪನಿಕ ಭಯವನ್ನು ಹುಟ್ಟಿಸಿದೆ. ಕಾಯ್ದೆಯನ್ನು ವಿರೋಧಿಸುವವರು ಟುಕ್‌ಡೇ ಟುಕ್ಡೇ ಗ್ಯಾಂಗ್ ಜತೆ ಶಾಮೀಲಾಗಿರುವುದು ಖಚಿತವಾಗಿದೆ’ ಎಂದು ಪ್ರಧಾನಿ ಹೇಳಿದರು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುದೀರ್ಘವಾದ ಉತ್ತರಗಳನ್ನು ನೀಡಿದ ಅವರು, ಸರಕಾರವು ‘ಸಿಎಎ’ ಮೂಲಕ ದೇಶವನ್ನು ವಿಭಜಿಸುತ್ತಿದೆ ಎಂಬ ಆರೋಪಗಳಿಗೆ ತಿರುಗೇಟು ನೀಡಿದರು. ಪಾಕಿಸ್ತಾನದ ಮುಸ್ಲಿಮೇತರರಿಗೆ ವಿಶೇಷ ಆದ್ಯತೆ ನೀಡುವ ನೀತಿಯನ್ನುಕಾಂಗ್ರೆಸ್ ಕಣ್ಮಣಿಗಳಾದ ಜವಾಹರಲಾಲ್ ನೆಹರೂ ಮತ್ತು ಲಾಲ್‌ ಬಹಾದ್ದೂರ್ ಶಾಸ್ತ್ರಿ ಅವರೇ ಸಮರ್ಥಿಸಿದ್ದರು ಎಂದು ಮೋದಿ ಹೇಳಿದರು.

‘ನೆಹರೂ ಕೋಮುವಾದಿಗಳಾಗಿದ್ದರೆ? ಅವರು ಹಿಂದೂ-ಮುಸ್ಲಿಮರ ನಡುವೆ ತಾರತಮ್ಯವೆಸಗಿದರೆ? ಅವರು ಹಿಂದೂ ರಾಷ್ಟ್ರವನ್ನು ಬಯಸಿದ್ದರೆ?’ ಎಂದು ಮೋದಿ ಪ್ರಶ್ನಿಸಿದರು. ಸಿಎಎ ಬಗ್ಗೆ ಕಾಂಗ್ರೆಸ್ ವಿರೋಧ ಕೇವಲ ‘ವೋಟ್ ಬ್ಯಾಂಕ್ ರಾಜಕಾರಣ’ದ ಉದ್ದೇಶ ಹೊಂದಿದೆ. ಪಾಕಿಸ್ತಾನದ ಅಲ್ಪಸಂಖ್ಯಾತರ ಬಗ್ಗೆ ಧ್ವನಿಯೆತ್ತಿದ ಕಾಂಗ್ರೆಸ್ ನಾಯಕರಿಗೂ ‘ಕೋಮುವಾದಿಗಳೆಂಬ’ ಹಣೆಪಟ್ಟಿ ಅಂಟಿಸುತ್ತೀರಾ? ಎಂದು ಕಾಂಗ್ರೆಸ್‌ ಅನ್ನು ಪ್ರಧಾನಿ ಮೋದಿ ಪ್ರಶ್ನಿಸಿದರು.

ಭಾರದತ ಪ್ರಥಮ ಪ್ರಧಾನಿ ದಶಕಗಳ ಹಿಂದೆಯೇ ಹೇಳಿದ್ದನ್ನು ತಮ್ಮ ಸರಕಾರ ಮಾಡಿ ತೋರಿಸಿದೆ ಎಂದು ಪ್ರಧಾನಿ ಮೋದಿ ಸಾರಿದರು.

ಸಂಸದೀಯ ಸಮಿತಿಗಳೂ ಸೇರಿದಂತೆ ಹಲವಾರು ವರದಿಗಳು ಸಿಎಎ ಮಾದರಿಯ ಕಾಯ್ದೆ ಜಾರಿಗೊಳಿಸಲು ಶಿಫಾರಸು ಮಾಡಿದ್ದವು. ಆದರೆ ಕಾಂಗ್ರೆಸ್‌ ಸರಕಾರಗಳು ಅದನ್ನು ಜಾರಿ ಮಾಡಲೇ ಇಲ್ಲ ಎಂದು ಮೋದಿ ಟೀಕಿಸಿದರು.

‘ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇರುವುದು ತಪ್ಪಲ್ಲ. ಆದರೆ ಪ್ರಧಾನಿಯಾಗಬೇಕೆಂಬ ವ್ಯಕ್ತಿಯ ಮಹತ್ವಾಕಾಂಕ್ಷೆಗಾಗಿ ದೇಶವನ್ನೇ ವಿಭಜಿಸಿದ್ದು ಸರಿಯಲ್ಲ’ ಎನ್ನುವ ಮೂಲಕ ನೆಹರೂ ಧೋರಣೆಯನ್ನು ಪ್ರಧಾನಿ ಮೋದಿ ಕುಟುಕಿದರು.

ಕಾಂಗ್ರೆಸ್ ಯಾವತ್ತೂ ಅಭಿವೃದ್ಧಿಗೆ ಬದಲಾಗಿ ವೋಟ್‌ ಬ್ಯಾಂಕ್ ಪಾಲಿಟಿಕ್ಸ್ ಅನ್ನೇ ಆಯ್ಕೆ ಮಾಡುತ್ತದೆ. ನೆರೆಯ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತರ ನೋವನ್ನು ಅದು ಅರ್ಥ ಮಾಡಿಕೊಳ್ಳಲೇ ಇಲ್ಲ. ಸಿಎಎ ವಿರುದ್ಧ ಪ್ರತಿಭಟನೆಗಳಲ್ಲಿ ಅಕ್ರಮ ನುಸುಳುಕೋರರು ಸೇರಿಕೊಂಡಿದ್ದಾರೆ ಎಂಬ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆಯನ್ನೂ ಪ್ರಧಾನಿ ಸಂಸತ್ತಿನಲ್ಲಿ ಉಲ್ಲೇಖಿಸಿದರು.

ಹಿಂದಿನ ಸರಕಾರಗಳ ಹೆಜ್ಜೆಯಲ್ಲೇ ತಮ್ಮ ಸರಕಾರವೂ ಅನುಸರಿಸಿದ್ದರೆ 370ನೇ ವಿಧಿಯನ್ನು ರದ್ದು ಮಾಡಲು, ಶತ್ರುಗಳ ಆಸ್ತಿ ಸ್ವಾಧೀನ ಕಾಯ್ದೆ ಮತ್ತು ಸಿಎಎ ಜಾರಿಗೆ ತರಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಬಲವಾಗಿ ಪ್ರಧಾನಿ ಸಮರ್ಥಿಸಿದರು. ಅಸ್ಸಾಂನ ಮೊದಲ ಮುಖ್ಯಮಂತ್ರಿ ಗೋಪಿನಾಥ್ ಬೋರ್ದಲೋಯ್ ಅವರಿಗೆ ನೆಹರೂ ಪತ್ರ ಬರೆದು, ಪಾಕಿಸ್ತಾನದಿಂದ ವಲಸೆ ಬಂದ ಹಿಂದೂ ನಿರಾಶ್ರಿತರು ಮತ್ತು ಮುಸ್ಲಿಂ ವಲಸಿಗರನ್ನು ಪ್ರತ್ಯೇಕವಾಗಿ ಗುರುತಿಸುವಂತೆ ಸೂಚಿಸಿದ್ದರು ಎಂದು ಮೋದಿ ನೆನಪಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಇಂದಿನಿಂದ ಸಂಸತ್ ಅಧಿವೇಶನ ಆರಂಭ

Harshitha Harish

ಪಾಕ್‌ ಪ್ರಪಾತಕ್ಕೆ ಕುಸಿದಷ್ಟೂ ಭಾರತ ಉತ್ತುಂಗಕ್ಕೇರಲಿದೆ: ಸಯ್ಯದ್ ಅಕ್ಬರುದ್ದೀನ್

Upayuktha

ಹತ್ರಾಸ್‌ ಅತ್ಯಾಚಾರ ಪ್ರಕರಣ: ಜಂತರ್ ಮಂತರ್‌ಗೆ ಬದಲಾದ ಪ್ರತಿಭಟನೆಯ ಕೇಂದ್ರ; ಎಸ್ಪಿ, ಇತರ ನಾಲ್ವರ ಅಮಾನತು

Upayuktha