
ಹೊಸದಿಲ್ಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿರುವ ಲಾಕ್ಡೌನ್ ಅನ್ನು ಏಪ್ರಿಲ್ 14ರ ಬಳಿಕವೂ ಮುಂದುವರಿಸುವುದು ಅನಿವಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ.
ಮಹಾಮಾರಿ ಕೊರೊನಾ ಹರಡುವಿಕೆ ದೇಶದಲ್ಲಿ ಸಾಮಾಜಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದ್ದು, ಸಾಮಾಜಿಕ ಅಂತರ ಪಾಲನೆಗೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
‘ಮುಖ್ಯಮಂತ್ರಿಗಳು ಮತ್ತು ಜಿಲ್ಲಾಡಳಿತದ ಮುಖ್ಯಸ್ಥರ ಜತೆಗೆ ನಾನು ಸಮಾಲೋಚನೆಗಳನ್ನು ನಡೆಸಿದ್ದೇನೆ. ಲಾಕ್ಡೌನ್ ಅನ್ನು ಇನ್ನಷ್ಟು ಕಾಲ ಮುಂದುವರಿಸಬೇಕು ಎಂದು ಅವರೆಲ್ಲರೂ ಸರ್ವಾನುಮತದಿಂದ ಕೋರಿಕೆ ಸಲ್ಲಿಸಿದ್ದಾರೆ. ನಾನು ಇನ್ನೊಮ್ಮೆ ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ. ಲಾಕ್ ಡೌನ್ ತೆರವುಗೊಳಿಸುವುದು ಈಗ ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Had an in-depth interaction with leaders of various political parties earlier today. Leaders shared their views on tackling COVID-19 and the way ahead. https://t.co/XoDKj52MoW
— Narendra Modi (@narendramodi) April 8, 2020
ಪ್ರತಿಪಕ್ಷಗಳ ನಾಯಕರ ಜತೆ ನಡೆಸಿದ ಸಮಾಲೋಚನೆಯ ವೇಳೆ ಪ್ರಧಾನಿ ಈ ಹೇಳಿಕೆ ನೀಡಿರುವ ಆಡಿಯೋ ಕ್ಲಿಪ್ ಒಂದು ಬಹಿರಂಗವಾಗಿದೆ. ಪ್ರಧಾನಿ ಕಾರ್ಯಾಲಯ ಈ ಆಡಿಯೋ ಕ್ಲಿಪ್ ಸೋರಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ; ಆದರೆ ಈಗಿನ ಸನ್ನಿವೇಶ ರಾಷ್ಟ್ರೀಯ ತುರ್ತು ಪರಿಸ್ಥಿತಿಗೆ ಸಮನಾಗಿದೆ ಎಂಬ ಹೇಳಿಕೆಯನ್ನು ನಿರಾಕರಿಸಿಲ್ಲ.
‘ನಾವು ಕಠಿಣ ಸನ್ನಿವೇಶವನ್ನು ಹಾದುಹೋಗುತ್ತಿದ್ದು, ಇದು ರಾಷ್ಟ್ರೀಯ ತುರ್ತು ಪರಿಸ್ಥಿತಿಗಿಂತ ಕಡಿಮೆಯಲ್ಲ. ಕಾಲ ಕಾಲಕ್ಕೆ ಅತ್ಯಂತ ಕಠಿಣ ನಿರ್ಧಾರಗಳನ್ನು, ಅಭೂತಪೂರ್ವ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಒದಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಲಾಕ್ಡೌನ್ನಿಂದ ಉಂಟಾದ ಆರ್ಥಿಕ ಹಿನ್ನಡೆಗಳನ್ನು ಪರಿಗಣಿಸದೆ, ಜನರ ಜೀವಗಳನ್ನು ಉಳಿಸುವುದೇ ಈಗ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರತಿಪಕ್ಷ ನಾಯಕರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಶಿವಸೇನೆ ನಾಯಕ ಸಂಜಯ್ ರಾವತ್, ಡಿಎಂಕೆಯ ಟಿ.ಆರ್. ಬಾಲು, ಎನ್ಸಿಪಿಯ ಶರದ್ ಪವಾರ್, ಜೆಡಿ(ಯು)ನ ರಾಜೀವ್ ರಂಜನ್ ಸಿಂಗ್, ಲೋಕಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ಸಮಾಜವಾದಿ ಪಕ್ಷದ ಪ್ರೊ. ರಾಮ್ ಗೋಪಾಲ್ ಯಾದವ್, ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ ಪಾಲ್ಗೊಂಡಿದ್ದರು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ