ಪ್ರಮುಖ ವಾಣಿಜ್ಯ

4,335 ಕೋಟಿ ರೂ ಪಿಎಂಸಿ ಬ್ಯಾಂಕ್ ಹಗರಣ: ಎಚ್‌ಡಿಐಎಲ್ ನಿರ್ದೇಶಕರ ಬಂಧನ

ಮುಂಬಯಿಯ ಪಿಎಂಸಿ ಬ್ಯಾಂಕಿನ ಪ್ರಧಾನ ಕಚೇರಿ. (ಫೈಲ್‌ ಚಿತ್ರ)

ಮುಂಬಯಿ:

4,355 ಕೋಟಿ ರೂ.ಗಳ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್‌ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಹೌಸಿಂಗ್ ಡೆವಲಪ್‌ಮೆಂಟ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಎಚ್‌ಡಿಐಎಲ್) ನಿರ್ದೇಶಕರಾದ ರಾಕೇಶ್‌ ವಾಧ್ವಾನ್ ಮತ್ತು ಅವರ ಪುತ್ರ ಸಾರಂಗ್‌ ವಾಧ್ವಾನ್ ಅವರನ್ನು ಬಂಧಿಸಿದ್ದಾರೆ. ಮುಂಬಯಿ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಹಗರಣದ ತನಿಖೆ ನಡೆಸುತ್ತಿದೆ.

ಇಬ್ಬರೂ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಇವರಿಬ್ಬರನ್ನೂ ಪೊಲೀಸರು ಗುರುವಾರ ಬೆಳಗ್ಗೆ ಕರೆಸಿಕೊಂಡಿದ್ದರು. ಆದರೆ ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಮತ್ತು ಅವರ ಕಂಪನಿ ಪಿಎಂಸಿ ಬ್ಯಾಂಕಿನಿಂದ 4,355 ಕೋಟಿ ರೂ.ಗಳ ಬೃಹತ್ ಸಾಲ ಪಡೆದಿದ್ದು, ಮರುಪಾವತಿಸಿರಲಿಲ್ಲ. ಇದದರಿಂದಾಗಿ ಬ್ಯಾಂಕಿನ ಖಾತೆದಾರರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದೇ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಪಿಎಂಸಿ ಬ್ಯಾಂಕಿನ ವ್ಯವಹಾರಗಳಿಗೆ 6 ತಿಂಗಳ ಅವಧಿಗೆ ನಿರ್ಬಂಧಗಳನ್ನು ಹೇರಿತ್ತು.

ಇಒಡಬ್ಲ್ಯುಗೆ ಸಲ್ಲಿಸಿದ ದೂರಿನಲ್ಲಿ, ಬ್ಯಾಂಕಿನ ಆಡಳಿತ ಮಂಡಳಿ ಅನುತ್ಪಾದಕ ಆಸ್ತಿಗಳನ್ನು ಮುಚ್ಚಿಟ್ಟು ಮತ್ತೆ ಸಾಲಗಳನ್ನು ವಿತರಿಸುವ ಮೂಲಕ 4,355 ಕೋಟಿ ರೂ.ಗಳ ನಷ್ಟಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

ಬ್ಯಾಂಕಿನ ಚೇರ್ಮನ್‌ ವಾರ್ಯಂ ಸಿಂಗ್ ಮತ್ತು ಆಡಳಿತ ನಿರ್ದೇಶಕ ಜಾಯ್ ಥೋಮಸ್ ಮತ್ತು ಇತರ ಅಧಿಕಾರಿಗಳನ್ನು ದೂರಿನಲ್ಲಿ ಹೆಸರಿಸಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ವಿಶ್ವಾಸ ದ್ರೋಹದ ಕ್ರಿಮಿನಲ್ ಅಪರಾಧ, ಫೋರ್ಜರಿ ಮತ್ತು ಸುಳ್ಳು ದಾಖಲೆಗಳನ್ನು ಸಿದ್ಧಪಡಿಸಿದ ಆರೋಪ ಹೊರಿಸಲಾಗಿದೆ.

ದಿವಾಳಿಯಾದ ರಿಯಾಲ್ಟಿ ಕಂಪನಿ ಎಚ್‌ಡಿಐಎಲ್‌, ಅದರ ನಿರ್ದೇಶಕರಾದ ಸಾರಂಗ್ ಮತ್ತು ರಾಕೇಶ್ ವಾಧ್ವಾನ್ (ಸಾಲದ ಫಲಾನುಭವಿಗಳು) ಹೆಸರುಗಳನ್ನೂ ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.

ಎಚ್‌ಡಿಐಎಲ್‌ ಗ್ರೂಪ್‌ಗೆ ಪಿಎಂಸಿ ಬ್ಯಾಂಕ್‌ 6,500 ಕೋಟಿ ರೂ.ಗಳ ಸಾಲ ನೀಡಿ ಕೈಸುಟ್ಟುಕೊಂಡ ಹಗರಣ ಸೆಪ್ಟೆಂಬರ್ 19ರಂದು ಬೆಳಕಿಗೆ ಬಂದಿತ್ತು. ಆ ಬಳಿಕ ಆರ್‌ಬಿಐ ನಿರ್ಬಂಧಗಳನ್ನು ಹೇರಿತ್ತು.

‘ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಇಒಡಬ್ಲ್ಯು ಮುಖ್ಯಸ್ಥ ರಾಜ್‌ವರ್ಧನ್ ಸಿನ್ಹಾ ತಿಳಿಸಿದರು.

ತನಿಖಾ ವಿಭಾಗ 3,500 ಕೋಟಿ ರೂ.ಗಳ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದೆ.

ಪಿಎಂಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಎಚ್‌ಡಿಐಎಲ್‌ ಪ್ರವರ್ತಕರ ವಿರುದ್ಧ ಮುಂಬಯಿ ಪೊಲೀಸರು ಸೋಮವಾರ ಕೇಸು ದಾಖಲಿಸಿಕೊಂಡಿದ್ದರು.

Related posts

ಕೋವಿಡ್-19 ಮತ್ತು ಮುಖಕವಚ (ಮಾಸ್ಕ್‌)

Upayuktha

ನಾಳಿನ ಭಾನುವಾರದ ಕರ್ಫ್ಯೂ ಸಡಿಲಿಕೆ: ರಾಜ್ಯ ಸರಕಾರದಿಂದ ಮಹತ್ವದ ಪ್ರಕಟಣೆ

Upayuktha

ಸಿಎಎ ವಿರುದ್ಧ ಕೇರಳ ಅಸೆಂಬ್ಲಿ ನಿರ್ಣಯ

Upayuktha

Leave a Comment

error: Copying Content is Prohibited !!