ಕತೆ-ಕವನಗಳು

ಕವನ: ತಾಯಿ ಪಾಠ

ಪ್ರಕೃತಿ ಮಾತೆಯ ಸುಂದರ ನೋಟ (ಸಾಂದರ್ಭಿಕ ಚಿತ್ರ- ಕೃಪೆ: ಡೆಕ್ಕನ್ ಹೆರಾಲ್ಡ್)

ಸುರಿದ ಮಳೆಯ ರಭಸಕಂದು
ಜರಿದು ಹೋದ ಗುಡ್ಡ ಬೆಟ್ಟ
ಭರದಿ ಹರಿವ ಜಲದ ಜತೆಗೆ ಸೇರಿಕೊಂಡಿತು
ಮುರಿದ ಮರದ ರಾಶಿಯೊಡನೆ
ಹಿರಿಯ ಕಲ್ಲು ಬಂಡೆ ಸೇರಿ
ಮರೆಯಲಾರದಂಥ ಹೊಡೆತ ಜೀವಿಗಿಕ್ಕಿತು

ಹಕ್ಕಿ ಗೂಡು ಕಟ್ಟಿಕೊಂಡು
ಚಿಕ್ಕದಾದ ಮರಿಗಳೊಡನೆ
ಚೊಕ್ಕದಾದ ಜೀವನವನು ಮಾಡುವಂತೆಯೆ
ಪಕ್ಕದಲ್ಲಿ ಪೊಟರೆಯೊಳಗೆ
ಹೆಕ್ಕಿ ಹೆಕ್ಕಿ ತುತ್ತುಗಳನು
ಇಕ್ಕುತಿತ್ತು ತಾಯಿ ಹಕ್ಕಿ ನಿತ್ಯದಂತೆಯೆ

ಹರಿಯುತಿತ್ತು ಸಹಜವಾಗಿ
ಸುರಿವ ಮಳೆಯ ನೀರು ಕೂಡ
ಬೆರೆತು ಬಾಳುತಿತ್ತು ಜೀವ ಜಂತು ಎಲ್ಲವು
ಉರಗವಿರಲಿ ತುರಗವಿರಲಿ
ಹಾರುತಿರುವ ಚಿಟ್ಟೆ ಇರಲಿ
ಯಾರ ಹಂಗು ಇಲ್ಲದಂತೆ ಬಾಳುತಿದ್ದವು

ನದಿಯ ತಟದಿ ರೈತ ಜನರು
ಆದಿಯಿಂದ ಬದುಕುವಂತೆ
ಅದರ ಒಡನೆ ನಗರಗಳೂ ಬೆಳೆಯುತಿದ್ದರೆ
ಬಿದಿರು ಸೋಗೆ ಮನೆಗಳಲ್ಲು
ನಿದಿರೆ ಹಸಿವು ಚೆಂದಕಿದ್ದು
ಅದುವೆ ಜನರ ನಿತ್ಯ ಸುಖವು ಇಲ್ಲ ತೊಂದರೆ

ಅನ್ನ ಕೊಡುವ ಬೆಳೆಯ ಬಿಟ್ಟು
ಅನ್ಯ ಬೆಳೆಯ ಬೆಳೆಸಿಕೊಂಡು
ಭಿನ್ನವಾಗಿ ಬದುಕಬಹುದು ಎಂದು ಯೋಚಿಸಿ
ಚಿನ್ನ ಗಳಿಸಬಹುದು ಎಂದು
ತನ್ನತನವ ಕಳೆದುಕೊಂಡು
ತಿನ್ನುವಂಥ ಅನ್ನ ಇಂದು ಅನ್ಯ ಭಿಕ್ಷೆಯು

ಅದಿರ ಗಣಿಗಳನ್ನು ಕೊರೆದು
ಮದಗ ಕೆರೆಗಳನ್ನು ಮುಚ್ಚಿ
ಪೆದ್ದುತನದ ಜಾಣನಾಗಿ ಮನುಜನಿದ್ದನು
ಹದ್ದು ಮೀರಿದಾಗ ಮಾತ್ರ
ತಿದ್ದುವಂಥ ಭೂಮಿ ತಾಯಿ
ಎದ್ದು ಮೈಯ ಕೊಡವಿಕೊಂಡು ಸುಮ್ಮನಾದಳು

ಮುನಿಸ ತೋರದಿಹಳೆ ವಸುಧೆ
ಎನಿತು ದಯೆಯ ತೋರದಿರುವ
ಮನುಜ ನಿನ್ನ ಅಹಂಕಾರ ಅಲ್ಪವಲ್ಲವೇ
ಮುನ್ನ ಕೊಂಚ ಪಾಠ ಕಲಿಸಿ
ಮನ್ನಿಸುವುದು ತಾಯಿ ಗುಣವು
ಚೆನ್ನದಿಂದ ಸಹಜವಾಗಿ ಬದುಕಬೇಕಿದೆ.
************
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಹವ್ಯಕ ಕವನ: ನಿಂಗಳ ಪೈಕಿಲಿ ಇದ್ದವಾ?

Upayuktha

“ಜೈ ಭಾರತಾಂಬೆ ” ದೇಶಭಕ್ತಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆ

Harshitha Harish

ಗುರುಗಳಿಗೆ ನಮನ

Harshitha Harish

Leave a Comment

error: Copying Content is Prohibited !!