ದೇವ ನಿನ್ನ ಮಹಿಮೆ ಎಂದು
ನೋವನೆಲ್ಲ ನುಂಗಿಕೊಂಡೆ
ಕವಿದ ಇರುಳ ದೂರ ಸರಿಸಿ
ಬೆಳಕ ತೋರೆಯಾ
ಭವದ ಬಂಧ ಕಳೆವ ನಿನ್ನ
ಸೇವೆ ಮಾಡುವಂತೆ ಮನಕೆ
ಭಾವ ಸತತ ಇರುವಂತೆಯೆ
ಜ್ಞಾನ ನೀಡೆಯಾ
ಯಾವ ಗುರಿಯ ಸೇರಲೆಂದು
ನಾವೆ ಶರಧಿಯೊಳಗಿಳಿವುದೊ
ಯಾವ ಸುಳಿಯ ಅರಿವು ಇರದೆ
ಸಾಗುತಿರುವುದು.
ನೋವು ನಲಿವು ಇರುವಂತೆಯೆ
ಸಾವು ಹುಟ್ಟು ತಾಳಿಕೊಂಡು
ಧಾವಿಸುತ್ತ ಇರುವ ನೌಕೆ
ನಿಲ್ಲಲಾರದು.
ಶರಧಿ ಒಳಗೆ ಧರೆಯು ನಡುಗಿ
ತೆರೆಯು ಮೇಲೆ ಬರಲುಬಹದು
ಬಿರುಸಿನಿಂದ ಬೀಸೊ ಗಾಳಿ
ದಯೆಯ ತೋರದು.
ಹರಿವ ನೀರು ಪಥ ಬದಲಿಸಿ
ಗುರಿಯ ದೂರ ಮಾಡಬಹುದು
ಹರಿಯೆ ನಿನ್ನ ಚಿತ್ತವನ್ನು
ಯಾರುಬಲ್ಲರು
ಒಡಲ ಬುತ್ತಿ ಕಟ್ಟಿಕೊಟ್ಟು
ಕಡಲ ಒಳಗೆ ನೂಕಿದವನೆ
ಸಡಿಲವಾಗದಂತೆ ಬಂಧ
ಬಿಗಿಯ ಮಾಡಿಕೋ
ಚಡಪಡಿಕೆಯೆ ಇಲ್ಲದಂತೆ
ಅಡಿಗಡಿಗೂ ಬೇಡುತಿಹೆನು
ನಡೆವ ಗುರಿಯು ತಪ್ಪದಂತೆ
ನನ್ನ ನೋಡಿಕೋ
ಕಷ್ಟ ಸುಖವ ಕೊಡುವೆ ನೀನು
ಇಷ್ಟವಿರಲಿ ಇಲ್ಲದಿರಲಿ
ನಿಷ್ಠೆಯಿಂದ ಇರುವಂತೆಯೆ
ದಾರಿ ತೋರಿಸೋ
ಭ್ರಷ್ಟನಾಗದಂತೆ ಎಂದು
ತುಷ್ಟ ಭಾವ ಬರುವಂತೆಯೆ
ಶಿಷ್ಯನಾಗಿ ಇರಲು ಹರಿಯೆ
ಬುದ್ಧಿ ಕರುಣಿಸೋ
********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.