ಕತೆ-ಕವನಗಳು

ಕವನ: ಅಂತರಂಗದ ಕ್ರಾಂತಿದೀಪ..

.

ತಿಮಿರಾಧಿಪತಿಯ ದೀರ್ಘ ಅನುಪಸ್ಥಿತಿಯಲ್ಲಿ
ಮನನೊಂದ ವಿರಹಿ ಪ್ರೇಮದೇವತೆ ನೈದಿಲೆಗೆ
ಹೊಳೆವ ತಾರೆಯರ ಸಾಂತ್ವನದ ಉಪದೇಶ..
ಭಾವ ಲಹರಿಯ ಝರಿಯಲ್ಲಿ ಕಳಕೊಂಡಿರುವ
ಒಲವಿನ ಪದಗಳನ್ನು ಹೆಕ್ಕಿ ಹರಿದ ಜೋಳಿಗೆಗೆ
ಮರಳಿ ತುಂಬಿಸುವಂತಹ ಸುಂದರ ಅವಕಾಶ..

ಕಣ್ಣು ಕೋರೈಸುವ ಮಹಾ ಮಿಂಚುಗಳಂತೆ
ಸುತ್ತ ಸುಳಿಯುತ್ತಿರುವ ಅಗಾಧ ಕಲ್ಪನೆಗಳು
ನೋಟಕ್ಕೆ ಸಿಗದೇ ಅಂತರಂಗವೇ ಕುರುಕ್ಷೇತ್ರ..
ಭಾವದ ಎದೆಯಾಳದಲ್ಲಿ ಸದಾ ಧುಮ್ಮಿಕ್ಕುವ
ನೆನಪಿನ ಮಹಾ ಜಲಪಾತಕ್ಕೆ ಅಡ್ಡ ಅಣೆಕಟ್ಟು
ಕಟ್ಟಲಾಗದೇ ಒದ್ದಾಡುವ ಒಣ ಕಾರ್ಯಕ್ಷೇತ್ರ..

ಅಗ್ನಿಶಿಖೆಯಂತೆ ಅರಳಿ ಕಂಗೊಳಿಸುತ್ತಿರುವ
ಕಾನನ ಕುಸುಮಗಳು ಸೇರಿ ನಡೆಸುತ್ತಿರುವ
ಸಡಗರದ ನವಸಂಭ್ರಮಗಳ ಸಮಾರಂಭ..
ಶಿಥಿಲಗೊಂಡ ಕನಸುಗಳಿಗೆ ರೆಕ್ಕೆಗಳು ಹುಟ್ಟಿ
ಮರಳಿ ತಾ ಹಾರಾಡಲು ತವಕದಲಿ ಗರಿಬಿಚ್ಚಿ
ಪ್ರಯತ್ನಿಸುತ್ತಿರುವ ಪುಳಕದ ಶುಭಾರಂಭ..

ಕಾನನದ ಕಪ್ಪುವರ್ಣದ ಗಟ್ಟಿ ಕಲ್ಲುಗಳಿಗೂ
ಹಸಿರು ವನಸಿರಿಯ ಅನುರಾಗ ಅತಿಯಾಗಿ
ಬೆಳೆಸಿಕೊಂಡಿವೆ ಮೈತುಂಬ ಪಚ್ಚೆಯ ಪಾಚಿ..
ಅನುಗ್ರಹದ ಅಪೇಕ್ಷೆಯಲ್ಲಿದ್ದ ಅಂತರಂಗದ
ಕ್ರಾಂತಿದೀಪವು ಉಪೇಕ್ಷೆಗೆ ಒಳಗಾಗಿ ಇಂದು
ಬಾನೆಡೆಗೆ ಮುಖಮಾಡಿದೆ ಕೈಗಳನ್ನು ಚಾಚಿ..

✍️ಆತ್ಮಸಖಿ
(✒️ಗೀತಾ ರಾಘವೇಂದ್ರ)

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕವನ: ಬದುಕಿನ ಬಂಡಿ

Upayuktha

ಕವನ: ಯುಗಾದಿ

Upayuktha

ಕವನ-ಗಾಯನ: ಮನದ ನೋವು

Upayuktha