~~~~
ಧೀರತನದಲಿ ಮಾಡು ಯುದ್ಧವ
ಮಾರ ಸುಂದರ ಕುವರ ಲಕ್ಷ್ಮಣ
ಭಾರ ಹೊತ್ತವನಾದಿ ಶೇಷನು ನೀನು
ಸುಕುಮಾರ |
ಶೂರನಾಗಿಹ ರಾಮದೇವರ
ವೀರ ಸೋದರನಾದ ನಿನ್ನಲಿ
ಹೋರಲಾಗದೆ ಹೆದರಿಯೋಡಲು ದನುಜ
ಸಂತತಿಯು|| || ೧ ||
ಕ್ರೂರಕರ್ಮಿಗಳವರು ರಣದಲಿ
ಭಾರಿ ಕಾಳಗ ಮಾಡಲಾರರು
ಏರಿ ಹೋಗಲು ಧೈರ್ಯ ಸಾಲದೆ ಮೋಸ
ಮಾಡುವರು |
ಭೀರು ದಾನವ ದೈತ್ಯ ರಾವಣ
ನೀರೆ ಸೀತೆಯ ಕದ್ದ ವಂಚಕ
ನೇರ ಕಾಳಗ ಕೊಡಲು ಹೆದರುವ ವಿಕಟ
ಪಂಡಿತನು || || ೨ ||
ರಾಮ ಲಕ್ಷ್ಮಣ ಜೊತೆಗೆ ಕಪಿಗಳು
ಭೂಮಿಸುತೆಯನು ಹುಡುಕಲೋಸುಗ
ರಾಮಣೀಯಕವಾದ ಲಂಕೆಗೆ ಹೊರಟು
ನಿಂತಿರಲು |
ಕ್ಷೇಮ ಸುವಿಚಾರವನು ತಿಳಿಯಲು
ಆ ಮಹಾ ರಘುಕುಲಜ ದೇವನು
ಭೂಮ ರುಕ್ಷನ ಜಾಂಬವಂತನ ಬರಲು
ಹೇಳಿದನು || || ೩ ||
ಬಂದ ಜಾಂಬವ ರಾಮನೆದುರಲಿ
ನಿಂದು ನಮಿಸುತ ನುಡಿಯತೊಡಗಿದ
ಕುಂದು ಬಾರದ ರೀತಿ ಕಪಿಗಳು ಶರಧಿ
ದಾಟುವರು |
ಸಂದುಗೊಂದಿನ ದನುಜರೆಲ್ಲರ
ಕೊಂದು ಕೆಡಹುತ ವೀರ ಕಪಿಗಳು
ಮುಂದೆ ಸಾಗುತ ದುಷ್ಟ ಶಕ್ತಿಯ ನಾಶ
ಮಾಡಿದರು || || ೪ ||
ಲಂಕೆ ಸುಟ್ಟಿಹ ಪವನಪುತ್ರನು
ಅಂಕೆಯಿಲ್ಲದ ವೀರಯೋಧನು
ಶಂಕೆಗಾಸ್ಪದ ಕೊಡದೆ ಹೋರುವ ನಿಪುಣ-
ಸರದಾರ |
ಶಂಕರಾಂಶಜ ವೀರ ಹನುಮನು
ಮಂಕುಬೂದಿಯನೆರಚಿ ದನುಜರ
ಬಿಂಕದಿಂದಲಿ ಕೊಂದು ರಾಮನ ಸೇವೆ
ಗೈಯ್ಯುವನು || || ೫ ||
ಬನ್ನಿಯೆಲ್ಲರು ಭಜಿಸೆ ರಾಮನ
ತನ್ನಿ ಹೂಗಳ ಹಲವು ಜಾತಿಯ
ಮುನ್ನ ಪೂಜೆಯ ಮಾಡಿ ನಮಿಸುವ ದೇವ-
ದೇವನಿಗೆ |
ಸನ್ನುತಾಂಗನು ರಘುಕುಲೋತ್ತಮ
ಚೆನ್ನ ರೂಪಿನ ಲೋಕದೊಡೆಯಗೆ
ಕನ್ನಡದ ಭಾಮಿನಿಯ ಕುಸುಮವ ಪಾದ-
ಕರ್ಪಿಸುವೆ || || ೬ ||
ಛಂದಸ್ಸು:- ಭಾಮಿನಿ ಷಟ್ಪದಿ
ಆಶುಕವನ ರಚನೆ:- ವಿ.ಬಿ.ಕುಳಮರ್ವ, ಕುಂಬ್ಳೆ
ರಾಗ ಸಂಯೋಜನೆ, ಗಾಯನ ಕಲಾಶ್ರೀ ವಿದ್ಯಾಶಂಕರ್.ಮಂಡ್ಯ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ