ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಕಾವ್ಯವು ಹೃದಯದ ಭಾಷೆ : ಡಾ. ವಸಂತಕುಮಾರ ಪೆರ್ಲ

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಒಂದು ದಿನದ ಕಾವ್ಯ ಕಮ್ಮಟ

ಪುತ್ತೂರು: ಕಾವ್ಯ ಎಂಬುದು ಬುದ್ಧಿಗಿಂತಲೂ ಹೃದಯಕ್ಕೆ ಸಂಬಂಧಿಸಿದ್ದು. ಅದರದು ಹೃದಯದ ಭಾಷೆ. ಅದು ನೇರವಾಗಿ ನಮ್ಮ ಹೃದಯವನ್ನು ಪ್ರವೇಶಿಸಿ ರಸಾರ್ದ್ರಗೊಳಿಸುವಂತಿರಬೇಕು. ಒಳ್ಳೆಯ ವಸ್ತುವನ್ನು ಆಯ್ಕೆ ಮಾಡಿಕೊಂಡು, ಹೃದ್ಯವಾದ ಭಾಷೆಯಲ್ಲಿ, ಒಳ್ಳೆಯ ಶೈಲಿಯಲ್ಲಿ – ಸಾಂದ್ರವಾಗಿ, ಅಡಕವಾಗಿ, ಸಂಕೀರ್ಣವಾಗಿ, ಧ್ವನಿಪೂರ್ಣವಾಗಿ, ಅರ್ಥಗರ್ಭಿತವಾಗಿ ಬರೆದಾಗ ಒಳ್ಳೆಯ ಕಾವ್ಯ ನಿರ್ಮಾಣ ಆಗುತ್ತದೆ. ಅದಕ್ಕಾಗಿ ತುಂಬ ಓದಬೇಕು. ಜೀವನಾನುಭವ ಮತ್ತು ಲೋಕಾನುಭವಗಳನ್ನು ಹೆಚ್ಚಿಸಿಕೊಳ್ಳಬೇಕು. ಹಿಂದಿನವರ ಅನುಭವಗಳನ್ನು ದಕ್ಕಿಸಿಕೊಂಡು ನಮ್ಮದೇ ರೀತಿಯಲ್ಲಿ ವಿಭಿನ್ನವಾಗಿ ವಿಶಿಷ್ಟವಾಗಿ ಬರೆಯಬೇಕು ಎಂದು ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸಾಹಿತ್ಯ ಸಂಘ, ಕನ್ನಡ ಸಂಘ ಮತ್ತು ಕನ್ನಡ ವಿಭಾಗಗಳ ಜಂಟಿ ಆಶ್ರಯದಲ್ಲಿ ಜರಗಿದ ಒಂದು ದಿನದ ಕಾವ್ಯಕಮ್ಮಟದಲ್ಲಿ ನಿರ್ದೇಶಕರಾಗಿ ಅವರು ಕಮ್ಮಟವನ್ನು ನಡೆಸಿಕೊಟ್ಟರು.

ಹೇಗೆ ಬರೆದಿದ್ದಾರೆ, ಏನನ್ನು ಬರೆದಿದ್ದಾರೆ ಎಂಬುದಕ್ಕಾಗಿ ಹಿಂದಿನವರ ಕಾವ್ಯಗಳನ್ನು ನಾವು ಓದಬೇಕು. ಭಾಷೆ, ಶೈಲಿ, ರೂಪ, ವಿನ್ಯಾಸಗಳನ್ನು ಅರಿತುಕೊಳ್ಳುವುದಕ್ಕಾಗಿ ಓದಬೇಕು. ಆ ಎಲ್ಲ ಅನುಭವಗಳನ್ನು ದಕ್ಕಿಸಿಕೊಂಡು – ಬರೆಯುವಾಗ ನಾವು ನಮ್ಮ ಸ್ವಂತಿಕೆಯಿಂದಲೇ ಬರೆಯಬೇಕು. ಈಗಿನ ಅಗತ್ಯಕ್ಕೆ ತಕ್ಕಂತಹ ರೂಪ ವಿನ್ಯಾಸಗಳಲ್ಲಿ ಬರೆಯಬೇಕು ಎಂದು ಅವರು ಕಿವಿಮಾತು ಹೇಳಿದರು.

ಸೃಜನಶೀಲ ಅಭಿವ್ಯಕ್ತಿಯೆಂಬುದು ಹೊಚ್ಚ ಹೊಸತಾದುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ಹೋಗುತ್ತದೆ. ಅದನ್ನೇ ಸ್ವಂತಿಕೆ ಎಂದು ಕರೆಯಲಾಗಿದೆ. ನಮ್ಮ ಅನುಭವಕ್ಕೆ ದಕ್ಕಿದ ಸಂಗತಿಗಳನ್ನು ಪ್ರಾಮಾಣಿಕವಾಗಿ ಬರೆಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಸಂತ ಫಿಲೋಮಿನಾ ಸಂಸ್ಥೆಯ ಕ್ಯಾಂಪಸ್ ನಿರ್ದೇಶಕರಾದ ರೆ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಉದ್ಘಾಟಿಸಿ, ಕಾವ್ಯಕಮ್ಮಟದ ನಿರ್ದೇಶಕರಾಗಿ ಪ್ರಸಿದ್ಧ ಕವಿ ಹಾಗೂ ಚಿಂತಕ ಡಾ. ಪೆರ್ಲ ಅವರು ಆಗಮಿಸಿದ್ದು ನಮಗೆ ಸಂತೋಷ ಹಾಗೂ ಹೆಮ್ಮೆ ತಂದಿದೆ. ಕಾವ್ಯವು ನಮ್ಮ ಒತ್ತಡಗಳನ್ನು ದೂರ ಮಾಡಿ ಜೀವನವನ್ನು ಸಹನೀಯಗೊಳಿಸುವ ಮಾಧ್ಯಮವಾಗಿದೆ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಿಯೋ ನೊರೋನ್ಹಾ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ ಮೊಳೆಯಾರ ಅವರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.

ಕಾವ್ಯಕಮ್ಮಟದಲ್ಲಿ ಕಾಲೇಜಿನ ಬೇರೆ ಬೇರೆ ವಿಭಾಗಗಳ ಸುಮಾರು ಅರವತ್ತರಷ್ಟು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಮ್ಮಟದಲ್ಲಿ ವಿದ್ಯಾರ್ಥಿಗಳು ಕವನಗಳನ್ನು ರಚಸಿದ್ದಲ್ಲದೆ ಅವುಗಳನ್ನು ಮಂಡಿಸಿದ ಬಳಿಕ ವಿಮರ್ಶೆಗೊಳಪಡಿಸಲಾಯಿತು. ಉತ್ತಮ ಕವಿತೆಗಳು ಶಿಬಿರದಲ್ಲಿ ರಚನೆಗೊಂಡವು. ಶಿಬಿರದ ಕೊನೆಯಲ್ಲಿ ವಿದ್ಯಾರ್ಥಿಗಳು ಶಿಬಿರ ನಿರ್ದೇಶಕರ ವ್ಯಾಪಕವಾದ ಅನುಭವಗಳ ಕುರಿತು ಪ್ರಶ್ನೋತ್ತರ –ಸಂವಾದ ನಡೆಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಸಾಹಿತ್ಯ ಮತ್ತು ಕಲೆಯ ನಡುವಿನ ಸೇತುವೆ ಯಕ್ಷಗಾನ: ಯೋಗೀಶ್ ರಾವ್ ಚಿಗುರುಪಾದೆ

Upayuktha

ಬಜ್ಪೆ: ಶನೈಶ್ಚರ ದೇವಳದಲ್ಲಿ ಎಲ್ಲ ಸೇವೆ, ಸಾರ್ವಜನಿಕ ದರ್ಶನ ಸ್ಥಗಿತ

Upayuktha

‘ಸರಕಾರಿ ಕಾರ್ಯಕ್ರಮಗಳ ಜನರ ಬಳಿ ತಲುಪಿಸುವ ಮಹತ್ಕಾರ್ಯ ಗ್ರಾಮ ವಾಸ್ತವ್ಯ’

Upayuktha