ಮಲಗು ಮಲಗೆನ್ನ ಮುದ್ದಿನ ಕೂಸೆ
ಲಾಲಿಯ ಹಾಡುವೆನು
ನಲಿದು ಒಲಿದು ನಿದ್ದೆಯು ಬರಲಿ
ಜೋಗುಳ ಹೇಳುವೆನು ||
ಪದಗಳ ಪುಂಜವ ಹೆಣೆಯುವೆ ಚಂದದಿ
ಕವನದ ಸಾಲಿನಲಿ
ಮುದಗಳ ತರಿಸುವೆ ಎರೆಯುತ ಅಂದದ
ಕನಸಿನ ತೇರಿನಲಿ ||
ಸ್ವರ್ಗದ ಲೋಕವು ಕಾಣಲಿ ಮಗುವೆ
ನಿದಿರೆಯ ಕಣ್ಗಳಿಗೆ
ಹಗ್ಗವ ಜಗ್ಗುತ ತೊಟ್ಟಿಲ ತೂಗುವೆ
ಕೆಲಸವು ಕೈಗಳಿಗೆ ||
ನಿದಿರಾ ದೇವಿಯು ಮೆಲ್ಲನೆ ಕಾಡಲಿ
ಮುದ್ದಿನ ಮಗುವಿನಲಿ
ಬೆದರುವ ಕನಸದು ನಿಲ್ಲದೆ ಓಡಲಿ
ಸದ್ದಿಗೆ ಹೆದರುತಲಿ ||
ಚಂದಮಾಮನ ಕಥೆಯನು ಹೇಳುವೆ
ತೊಟ್ಟಿಲ ಜೀಕುತಲಿ
ಹಠವನು ಮಾಡದೆ ದಿಟದಲಿ ಮಲಗು
ಕಥೆಯನು ಕೇಳುತಲಿ ||
ನಾಳೆಯ ಬೆಳಕು ನೀನಾಗು ಮಗುವೆ
ಅಮ್ಮನ ಬಾಳಿನಲಿ
ಧ್ಯೇಯದಿ ಸಲಹುವೆ ಒಳಿತಾಗು ಜಗಕೆ
ನ್ಯಾಯದ ಮಾರ್ಗದಲಿ ||
-ರೂಪಾಪ್ರಸಾದ ಕೋಡಿಂಬಳ