ಕತೆ-ಕವನಗಳು

ಕವನ: “ತಾನೊಂದು ಹೆಣ್ಣಾದಳು…”

ಅಣುವೊಂದು ಕಣವಾಗಿ
ಕಣವೊಂದು ತೃಣವಾಗಿ
ತೃಣವೊಂದು ಬೆಳೆಯಾಗಿ
ಬೆಳೆಯೊಂದು ಗಿಡವಾಗಿ
ಗಿಡವೊಂದು ನೆರಳಾಗಿ
ನೆರಳೇ ಜೀವನಾಡಿಯಾಗಿ ಮಿಡಿದಳು..

ಕ್ಷಣವೊಂದು ಯುಗವಾಗಿ
ಯುಗವೊಂದು ಕಲ್ಪವಾಗಿ
ಕಲ್ಪವೊಂದು ಮೇಧವಾಗಿ
ಮೇಧವೊಂದು ಮೇಘವಾಗಿ
ಮೇಘವೊಂದು ಧಾರೆಯಾಗಿ
ಧಾರೆಯೇ ಜೀವಸಂಕುಲಕ್ಕೆ ಜೀವವಾದಳು..

ಬೆಳಕೊಂದು ದೀಪವಾಗಿ
ದೀಪವೊಂದು ದಾರಿಯಾಗಿ
ದಾರಿಯೊಂದು ತೀರವಾಗಿ
ತೀರವೊಂದು ಅಚಲವಾಗಿ
ಅಚಲವೊಂದು ವಾಯುವಾಗಿ
ವಾಯುವೇ ಪ್ರಾಣದಲ್ಲಿ ಸೇರಿಹೋದಳು…

ಹಸಿರಲ್ಲಿ ಉಸಿರಿಟ್ಟು
ಉಸಿರಲ್ಲಿ ಪ್ರಾಣವಿಟ್ಟು
ಪ್ರಾಣದಲ್ಲಿ ಜೀವವಿಟ್ಟು
ಜೀವದಲ್ಲಿ ಬದುಕನಿಟ್ಟು
ಬದುಕಲ್ಲಿ ಆಸೆಯಿಟ್ಟು
ಆಸೆಯೇ ಆಸರೆಯಾಗಿ ಆತ್ಮವಾದಳು…

ಬಿಸಿಲಲ್ಲಿ ಉರಿ ಮಾಯೆಯಾಗಿ
ಬೆಳೆಯಲ್ಲಿ ಕಳೆ ಮಾಯೆಯಾಗಿ
ಮುಗಿಲಲ್ಲಿ ಕರಿಛಾಯೆಯಾಗಿ
ಮಿಂಚಲ್ಲಿ ಸುಳಿಮಾಯೆಯಾಗಿ
ಸಿಡಿಲಲ್ಲಿ ಸಿಡಿದೆದ್ದು
ಗಗನಕ್ಕೆ ತೂತಿಟ್ಟು ಜೀವಸೆಲೆಯಾದಳು..

ಭಾವದಲ್ಲಿ ಮಿಳಿತವಾಗಿ
ಸಂಚಾರದಲ್ಲಿ ಸೆಳೆತವಾಗಿ
ಅತಳ ವಿತಳ ಪಾತಾಳವಾಗಿ
ಹೊನ್ನಲ್ಲಿ ಹೊಳಪಾಗಿ
ಮಣ್ಣಲ್ಲಿ ಬೆರೆತು
ಕಾಯವಾಗಿ ಕೊಳೆತು
ಜೀವಕ್ಕೆ ಜೀವವಾದಳು….

ಒಡಲಲ್ಲಿ ಬೀಜದ ಮೊಳಕೆಯಿಟ್ಟು
ಬಸಿರಲ್ಲಿ ಹಸಿರುಟ್ಟು
ನಸುಗೆಂಪ ಊರಿನಲ್ಲಿ
ನಲಿದಾಡಿ ಹೆಜ್ಜೆಯಿಟ್ಟು
ಸದ್ದಾಗಿ ಹೊರಬಂದು
ಮುದ್ದಾದ ಭೂಮಿ
ತಾನೊಂದು ಹೆಣ್ಣಾದಳು…

“ಎಲ್ಲಾ ಮಹಿಳೆಯರಿಗೂ ನಮ್ಮ ದಿನದ ಶುಭಾಶಯಗಳು”
✍️ಆತ್ಮಸಖಿ

(ಗೀತಾ ರಾಘವೇಂದ್ರ,)
ಬೆಂಗಳೂರು – 61

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ತುಳು ಭಾಷೆ : ಪನಿ ಬರ್ಸೊ.

Harshitha Harish

ಕವನ: ಚತುರ್ವರ್ಣ

Upayuktha

*ಕಾತ್ಯಾಯನಿ*

Harshitha Harish