ಕತೆ-ಕವನಗಳು

ಶ್ರೀರಾಮ ಪಟ್ಟಾಭಿಷೇಕ..!!


ಶ್ರೀರಾಮಚಂದ್ರನಿಗೆ ಪಟ್ಟವಾಗುವುದೆಂದು
ಕ್ಷೀರಾಬ್ಧಿ ಶಯನನೂ ಸಂಭ್ರಮವ ತಾಳಿದನು
ನೂರಾರು ಯೋಜನಕು ಹರಡಿತ್ತು ಆ ಸುದ್ದಿ
ಶರವೇಗ ಮೀರುತ್ತಲಿ
ಬೇರಾವ ಯೋಚನೆಗು ಅವಕಾಶವಿರದಂತೆ
ಸೇರಿದ್ದ ಸಭೆಯಲ್ಲಿ ತನ್ನ ಮನದಾಳವನು
ಸಾರಿದ್ದ ದಶರಥನು ಶ್ರೀರಾಮಚಂದಿರನೆ
ಅಯೋಧ್ಯೆಯ ರಾಜನೆಂದು.

ದಶರಥನ ನುಡಿಕೇಳಿ ಮಂಥರೆಯು ಕೆರಳಿದಳು
ವಿಷಬೀಜ ಕೈಕೇಯಿ ಮನದಲ್ಲಿ ತುಂಬಿದಳು
ನಿಶಿ ಹಗಲು ರಾಮನ ಪ್ರೀತಿಸುವ ಕೈಕೇಯಿ
ಮಂಥರೆಗೆ ಶರಣಾದಳು.
ನಸುನಗುತ ದಶರಥನು ನಿನ್ನೆಡೆಗೆ ಬರುವಾಗ
ಬಿಸುಟು ಆಭರಣಗಳ ಧರಿಸು ಹಳೆ ಬಟ್ಟೆಗಳ
ಹೊಸಕಿ ಬಿಡು ಹೂವುಗಳ ಹುಸಿಕೋಪ ತಾಳುತ್ತ
ಸೇರಿಕೋ ಕೋಪಭವನ.

ಇತ್ತ ರಾಜನು ತನ್ನ ಖುಷಿಯ ಹಂಚಲು ಎಂದು
ಅತ್ಯಾಸೆಯಿಂದಲೇ ಕೈಕೇಯಿ ಇರುವಂಥ
ಅಂತಃಪುರದ ಕಡೆಗೆ ಶೀಘ್ರದಲಿ ನಡೆಯುವನು
ರಾಣಿಯನು ಕಾಣಲೆಂದು.
ಅತ್ತಿತ್ತ ನೋಡಿದರು ಕಾಣದೆ ಪ್ರಿಯತಮೆಯ
ಚಿತ್ತ ಚಂಚಲವಾಗಿ ದಾಸಿ ಮಾತನು ಕೇಳಿ
ಕತ್ತಲಲಿ ಕುಳಿತಿರುವ ಕೈಕೇಯಿ ಬಳಿಬಂದ
ಸಾಂತ್ವನವ ಹೇಳಲೆಂದು.

ಮನದೊಳಗೆ ಮಂಥರೆಯ ದುರ್ಬೋಧೆ ನೆನೆಯುತ್ತ
ಎನಿತು ಕನಿಕರವಿರದೆ ಕೈಕೇಯಿ ಕೇಳಿದಳು
ವನವಾಸ ರಾಮನಿಗೆ ರಾಜ್ಯವದು ಭರತನಿಗೆ ಅರಸ ನೀ ಕೊಡಬೇಕಿದೆ.
ಎನಗಂದು ನೀಡಿರುವ ಆ ಎರಡು ವರಗಳನು
ಮನಬಿಚ್ಚಿ ಕೇಳಿಹೆನು ಕೊಡಲಾರೆ ಎನ್ನದಿರು
ಇನಕುಲದ ದೊರೆ ನೀನು ಮಾತನ್ನೆ ತಪ್ಪದವ
ನಂಬಿಕೆಯು ಇದೆ ನಿನ್ನಲಿ.

ಕೈಕೇಯಿ ನುಡಿಗರಸ ಬರಸಿಡಿಲು ಬಡಿದಂತೆ
ಆಕಾಶ ನೋಡುತ್ತ ಧರೆಗುರುಳಿ ಬೀಳುತಿರೆ
ಸೊಕ್ಕಿನಲಿ ದಶರಥನ ಉಪೇಕ್ಷೆಯ ಮಾಡಿದಳು
ಚಕ್ರವರ್ತಿಯ ಅರಸಿಯು.
ಯಾಕಾಗಿ ರಾಮನಲಿ ಹಗೆಯ ತಾಳಿದೆ ನೀನು
ನಕ್ಕಾರು ಪುರಜನರು ನಿನ್ನ ಕ್ರೌರ್ಯವ ಕಂಡು
ಧಿಕ್ಕಾರ ನಿನ್ನೊಡಲ ವಿಷಭರಿತ ಮತ್ಸರಕೆ
ನನಗಿನ್ನು ಬದುಕು ಬೇಕೆ.

ಪರಿಪರಿಯ ವಿಧದಲ್ಲಿ ಓಲೈಸಿದರು ಸತಿಯ
ಉರಿಯುತಿಹ ಅಗ್ನಿಯಲಿ ತುಪ್ಪವನು ಸುರಿದಂತೆ
ಅರಸನಾಡಿದ ಮಾತು ಕೈಕೇಯಿ ಮನಸನ್ನು
ಶಮನಗೊಳಿಸದೆ ಹೋಯಿತು.
ಅರೆಗಳಿಗೆ ರಾಮನನು ಬಿಟ್ಟಿರದ ದಶರಥನು
ಮರದ ಕೊರಡಿನ ತೆರದಿ ಬರೆನೆಲದಿ ಬಿದ್ದಿರಲು
ಜರಿದಿತ್ತು ಒಡನೆಯೇ ಕನಸ ಗೋಪುರವೆಲ್ಲ
ನಾಮಾವಶೇಷವಾಗಿ.

ಆ ರಾತ್ರಿ ಕಳೆದಿತ್ತು ಮುಂಜಾನೆಯಾಗಿತ್ತು
ಶ್ರೀರಾಮಚಂದಿರನ ಪಟ್ಟಾಭಿಷೇಕಕ್ಕೆ
ನೂರಾರು ದೇಶಗಳ ರಾಜಾಧಿರಾಜರೂ
ಕಾಯುತ್ತ ಕುಳಿತಿದ್ದರು.
ಮೀರುತಿದೆ ಶುಭಗಳಿಗೆ ಜಾರುತಿದೆ ಸತ್ಕೀರ್ತಿ
ಕ್ರೂರ ನಿರ್ಧಾರವನು ಕೈಕೇಯಿ ಸಡಿಲಿಸದೆ
ಹೋರಾಟ ಮುಗಿಸುವಲಿ ಶಸ್ತ್ರ ಕೆಳಗಿಡುವಲ್ಲಿ ದಶರಥನ ಮಣಿಸಿದ್ದಳು.

ಮತಿಹೀನ ಮಂಥರೆಯ ದುರ್ಬೋಧೆಯಿಂದಾಗಿ
ಅತಿಯಾದ ದಶರಥನ ಸತಿ ಮೋಹದಿಂದಾಗಿ
ಶತಮಾನ ಸಾಧನೆಯ ಕೋಸಲವೆ ನಡುಗಿತ್ತು
ಭೂಕಂಪವಾಗುವಂತೆ.
ಸೀತೆ ಜತೆ ಶ್ರೀರಾಮ ಲಕ್ಷ್ಮಣನ ಜತೆಗೂಡಿ
ಪಿತೃ ವಾಕ್ಯ ಪಾಲಿಪ ಸಂಕಲ್ಪ ತಾಳುತ್ತ
ಅತಿ ಶೀಘ್ರದಲಿ ಪುರವ ಸುಮಂತ್ರನ ಜತೆ ತೊರೆದು
ಕಾನನಕೆ ಹೊರಟನಂದು.

ರಾಮಚಂದ್ರನ ವದನ ಕಳೆಯಗುಂದಲೆ ಇಲ್ಲ
ರಾಮನನುಜನ ಮೊಗವು ಶಾಂತವಾಗಲೆ ಇಲ್ಲ
ರಾಮ ಸತಿ ಸೀತೆಯೂ ರಾಮನನು ಬೆಂಬಿಡದೆ
ರಥವೇರಿ ಹೊರಟಳಲ್ಲ.
ರಾಮ ರಾಮಾ ಎಂದು ದಶರಥನು ರೋದಿಸಲು
ಶ್ಯಾಮಲಾಂಗನು ನಾರು ಮಡಿಯನ್ನು ಧರಿಸುತ್ತ
ಕಾಮಿತಾರ್ಥವ ಬಿಟ್ಟು ಹದಿನಾಲ್ಕು ವರುಷಗಳು
ಅಡವಿಗೇ ಹೊರಟನಲ್ಲ.
************
-ಬಾಲಕೃಷ್ಣ ಸಹಸ್ರಬುಧ್ಯೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ಹನಿಗವನ: ಸಂಗದೋಷ

Upayuktha

ಗೆಳೆಯಾ

Harshitha Harish

ಕವಿತೆ: ಯಾಕೆ ಬೇಸರ…

Upayuktha