ಕತೆ-ಕವನಗಳು

ಕವನ: ಬ್ರಹ್ಮಾಂಡ

ಗೋಲಗಳ ರಾಶಿಯಂತಿಹುದು ಈ ಬ್ರಹ್ಮಾಂಡ ಕಾಲನದೆ ಹಾದಿಯಲಿ ತಿರುಗುತ್ತ ಹೊರಟಿಹುದು
ಗಾಲಿಗಳು ಉರುಳುತ್ತ ಸಾಗುತಿವೆ ತಡೆ ಇರದೆ
ಬೇಲಿಯೇ ಇರದಂತೆ ರಾಜ ಗಾಂಭೀರ್ಯದಲಿ

ಮಕ್ಕಳಾಡುವ ಬುಗುರಿ ತಿರುಗುತ್ತ ಸರಿದಂತೆ
ಪಕ್ಕಕ್ಕೆ ವಾಲಿದರು ತೋಲನದಿ ಇರುವಂತೆ
ಚಿಕ್ಕ ದೊಡ್ಡದು ಎಲ್ಲ ಗೋಲಗಳು ಎಂದೆಂದು
ಸೊಕ್ಕನ್ನು ತೋರದೆಯೆ ತಿರುಗುತಿವೆ ಅನವರತ

ರಥವ ಹೊತ್ತಿಹ ಗಾಲಿ ತಿರುಗುತಲೆ ಇದ್ದರೂ
ರಥ ನೇರವಿರುವಂತೆ ಬ್ರಹ್ಮಾಂಡ ಸ್ಥಿರವಿಹುದು
ರಥಿಕನಾಗಿಹ ಹರಿಯು ಅಚಲವಾಗಿರುವಂತೆ
ಪಥವನ್ನು ಬದಲಿಸದೆ ಎಲ್ಲವನು ಗಮನಿಸುತ

ಚಲನೆಯಲಿ ಇರುವಂಥ ಚರಾಚರ ಎಲ್ಲವೂ
ಕಾಲ ಸರಿದಂತೆಯೇ ಜೀರ್ಣವಾಗುವ ತೆರದಿ
ಮೆಲ್ಲ ಮೆಲ್ಲನೆ ಸಕಲ ಗೋಲಗಳು ಕ್ರಮವಾಗಿ
ಎಲ್ಲ ನಾಶವೆ ಆಗಿ ಪ್ರಳಯವೇ ಆಗುವುದು.

ಗಾಲಿಗಳು ಸವೆದಾಗ ಗಾಲಿ ಬದಲಿಸಿದಂತೆ
ಗೋಲಗಳು ಹೊಸತಾಗಿ ಸೃಷ್ಟಿಯಾಗುತಲಿಹವು
ಗಾಲಿ ಬದಲಾದರೂ ರಥವು ಸ್ಥಿರ ಇರುವಂತೆ
ಕಾಲಕ್ಕು ಮಿಗಿಲಾದ ಭಗವಂತ ಶಾಶ್ವತನು

ಸರಿದ ಭೂತದ ನೆನಪು ಮಾತ್ರವೇ ಇಹುದಿಲ್ಲಿ
ಬರುವ ಭವಿಷ್ಯದ ನಿರೀಕ್ಷೆಯು ಮತ್ತಲ್ಲಿ
ವರ್ತಮಾನವು ಮಾತ್ರ ಸತ್ಯವಾಗಿರುವಾಗ
ಅರ್ಥವಾಗಲು ಉಂಟೆ ಹಿಂದು ಮುಂದಿನ ದಾರಿ

ಏರಿಳಿತವು ಹಿನ್ನಡೆಯು ಇಲ್ಲದಿಹ ಸಂಚಾರ
ಯಾರ ಹಂಗಿಗು ಸಿಗದ ಇದು ಹರಿಯ ವ್ಯವಹಾರ
ಬಾರೆನೆಂದರು ಕೂಡ ಬರಸೆಳೆದು ಕೊಂಡೊಯ್ವ
ಹಿರಿಯ ತೇರಿನ ಒಡೆಯ ಹರಿ ನಿನಗೆ ಶರಣು.

ರವಿಯಾದಿ ತಾರೆಗಳ ಲೆಕ್ಕವಿಟ್ಟವರುಂಟೆ
ಭುವಿ ಕೂಡ ಇಹುದಿಲ್ಲಿ ಅತಿ ಕಿರಿಯ
ಅಣುವಂತೆ
ಯಾವ ಲೆಕ್ಕಕು ಸಿಗದ ಮಾನವನ ಅಹಮಿಕೆಯ
ಗರ್ವಕ್ಕೆ ಬೆಲೆಯುಂಟೆ ಅರಿಯಬೇಕಲ್ಲವೇ.

ಬೆಳಕನೂ ಬಿಡದಿರುವ ಕೃಷ್ಣರಂಧ್ರವು ಅಲ್ಲಿ ಖಳನಂತೆ ಕಾಯುತಿದೆ ಗೋಲಗಳ ಕಬಳಿಸಲು
ನಾಳೆಗಳು ನಮದಲ್ಲ ಇಳೆಯ ಖಾತರಿ ಇಲ್ಲ
ಬಾಳೋಣ ಸರ್ವವನು ಕೃಷ್ಣಾರ್ಪಣವ ಮಾಡಿ
***********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕವನ: ಪುಟ್ಟಗುಬ್ಬಿ (ಶಿಶುಪ್ರಾಸ)

Upayuktha

ಕವನ: ಇರಲಿ ತಾಳ್ಮೆ ಕಂದ ನಿನ್ನಲಿ

Upayuktha

ಕವನ: ಶರಣು ಕಾರ್ತಿಕೇಯ

Upayuktha