ಜೀವನ-ದರ್ಶನ ಲೇಖನಗಳು

ಪ್ರಾರ್ಥನೆ: ಕರುಣಿಸು ದೇವಾ ಆರೋಗ್ಯ ಭಿಕ್ಷೆ

ನಾವು ಆಸ್ತಿಕರಾಗಿದ್ದರೆ ದೇವರಲ್ಲಿ ಸದಾ ಧನ, ಧಾನ್ಯ, ಸಂಪತ್ತು, ಆರೋಗ್ಯ, ಸಕಲ ಸೌಭಾಗ್ಯ ಕೊಡು ಎಂದು ಬೇಡುತ್ತಿರುತ್ತೇವೆ. ಸಹಜವೂ ಕೂಡ. ಆದರೆ ಸಕಲ ಸೌಭಾಗ್ಯಕ್ಕಿಂತ ಆರೋಗ್ಯ ಭಾಗ್ಯವೇ ಹಿರಿದು ಎಂಬುದು ಅನಾರೋಗ್ಯ ಬಂದಾಗ ಮಾತ್ರ ಅರಿವಾಗುವುದು ನಮ್ಮ ದೌರ್ಭಾಗ್ಯ. ಯಾವುದು ನಮ್ಮಲ್ಲಿದೆಯೋ ಅದರಲ್ಲಿ ಉಪೇಕ್ಷೆ. ಯಾವುದು ನಮ್ಮಲ್ಲಿಲ್ಲವೋ ಅದರಲ್ಲಿ ಅಪೇಕ್ಷೆ. ಇದು ಮಾನವನ ದೌರ್ಬಲ್ಯ. ನಾನು ಯುವಕನಾಗಿದ್ದಾಗ ಅಂದರೆ ಸಾಧಾರಣ ನಲ್ವತ್ತು ವರ್ಷಗಳ ಹಿಂದೆ ಐವತ್ತು ಕೆ. ಜಿ. ಹೊರೆಯನ್ನು ನಾಲ್ಕು ಕಿ. ಮಿ. ದೂರದಷ್ಟು ಎಲ್ಲೂ ಇಳಿಸದೆ ಹೊರುತ್ತಿದ್ದೆ. ಆಗ ಅದು ಸಹಜವಾಗಿತ್ತು. ಹಾಗೂ ನಮ್ಮೂರಲ್ಲಿ ಎಲ್ಲರೂ ಮಾಡುವ ಕಾಯಕವೇ ಆಗಿತ್ತು. ಅದರಲ್ಲಿ ನಾನು ಎಂಬ ಅಹಂಕಾರವೇ ಇಲ್ಲ. ಅಥವಾ ಆ ಹೊರೆಯು ನಮಗೆ ಹೊರೆಯಾಗಲೇ ಇಲ್ಲ.

ಶುದ್ಧ ಆಹಾರ, ಶುದ್ಧ ಹವಾಮಾನ, ನಿಷ್ಕಪಟ ಮನಸ್ಸು, ಅತಿಯಾದ ಆಕಾಂಕ್ಷೆ ಇಲ್ಲದೆ, ದುಶ್ಚಟವಿಲ್ಲದೆ, ನಮ್ಮ ಮಿತಿಯನ್ನು ಅರಿತು ಬಾಳು ನಡೆಸುತ್ತಿದ್ದುದೇ ಆ ಕಾಯ ಕಸುವಿನ ಗುಟ್ಟು. ಆಗ ಒಮ್ಮೊಮ್ಮೆ ನನಗೂ ಅನಿಸಿದ್ದುಂಟು ಒಂದು ಸೈಕಲ್ ಇರುತ್ತಿದ್ದರೆ ತುಂಬಾ ಅನುಕೂಲವಾಗುತ್ತಿತ್ತು ಎಂದು. ಯಾವುದೋ ಒಂದು ಕಾಲದಲ್ಲಿ ಸೈಕಲ್ ಖರೀದಿಸಿದಾಗ, ತಲೆ ಹೊರೆಯನ್ನು ಸೈಕಲ್ ಗೆ ವರ್ಗಾಯಿಸಿದಾಗ, ನಡೆಯುವುದಕ್ಕಿಂತ ವೇಗವಾಗಿ ಸೈಕಲ್ ನಲ್ಲಿ ಗುರಿ ತಲುಪಿದಾಗ ನಡೆಯುವ ಪ್ರಕ್ರಿಯೆ, ತಲೆಹೊರೆ ಕಷ್ಟವೆಂದು ಅನ್ನಿಸತೊಡಗಿತು. ಸೈಕಲ್ ನಿಂದ ಬೈಕಿಗೆ ಬದಲಾಯಿಸಿ ಕೊಂಡಾಗ ಸೈಕಲ್ ತುಳಿಯುವುದು ಕಷ್ಟವೆಂದೆನಿಸತೊಡಗಿತು. ಅಂದರೆ ಒಂದೊಂದೇ ಬದಲಾವಣೆ ಇಷ್ಟಿಷ್ಟೇ ಆರೋಗ್ಯವನ್ನು ಕಸಿಯತೊಡಗಿದ್ದು ಮಾತ್ರ ನಮಗೆ ಅರಿವಾಗುವುದೇ ಇಲ್ಲ. ಬೈಕಿಂದ ಕಾರಿಗೆ ಬದಲಾವಣೆಯಾದಾಗ ನಾವು ಸ್ವತಂತ್ರರೆಂದೆನಿಸಿದಾಗ ಆರೋಗ್ಯದ ಸ್ವಾತಂತ್ರ್ಯ ಹರಣವಾಗುತ್ತಿರುವುದು ಮಾತ್ರ ಅಷ್ಟೇ ಸತ್ಯ.

ದಿನದಿಂದ ದಿನಕ್ಕೆ ನಾವು ಆರ್ಥಿಕವಾಗಿ ಸುದೃಢವಾಗುತ್ತಿರಬೇಕಾದರೆ ಆರೋಗ್ಯವೆಂಬ ಸಂಪತ್ತನ್ನು ನಿರ್ಲಕ್ಷಿಸುವುದು ಅಥವಾ ಆರ್ಥಿಕತೆಯೇ ಸಂಪತ್ತು ಎಂದು ಪರಿಗಣಿಸಿದುದು ಮಾತ್ರ ಅನಾರೋಗ್ಯಕರ ಬೆಳವಣಿಗೆಯೇ. ಹಾಗಾದರೆ ಮಾನವನಿಗೆ ಸುಖವೆನ್ನುವುದು ಎಲ್ಲಿದೆ. ನಮ್ಮಲ್ಲಿ ಏನಿದೆಯೋ ಅದರ ಅರಿವಿಲ್ಲದೆ ಇಲ್ಲದುದರೆಡೆಗೆ ಆಕರ್ಷಿತರಾಗುವುದೇ ಸುಖವೇ.? ಗೊತ್ತಿಲ್ಲ. ಆದರೆ ಒಂದು ವಿಚಾರವೆಂದರೆ ನಾವೇನು ಸುಖವೆಂದುಕೊಳ್ಳುತ್ತೇವೊ ಅದು ಆರೋಗ್ಯಪೂರ್ಣವೂ ಆಗಿದ್ದರೆ ಅದು ಸಹ್ಯವಾದೀತು. ಇಲ್ಲದಿದ್ದರೆ ನಾವು ಪಡಕೊಂಡ ಸುಖವನ್ನು ಪೂರ್ತಿ ತ್ಯಾಗ ಮಾಡಿದರೂ ಆರೋಗ್ಯವೆನ್ನುವುದು ಮರೀಚಿಕೆಯೇ ಆದೀತು. ಓಡುವ ಬಂಡಿ ನಿಧಾನವೋ ವೇಗವೋ ಚಲನೆಯಲ್ಲಿದ್ದರೆ ಹೇಗಾದರೂ ಸಂಭಾಳಿಸಬಹುದು. ಆದರೆ ಒಂದು ಕಡೆ ನಿಂತರೆ ಮತ್ತೊಮ್ಮೆ ಹಳಿಗೆ ತರಬೇಕಾದರೆ ಹರಸಾಹಸವನ್ನೇ ಪಡಬೇಕಾದೀತು. ಅಥವಾ ಆಗದೆಯೂ ಇರಬಹುದು.

ಶರೀರದ ಯಾವುದೇ ಅಂಗಾಂಗಗಳು ದುರ್ಬಲವಾದಾಗ ಅದಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದಿದ್ದಾಗ ಅಥವಾ ಎಷ್ಟೇ ಖರ್ಚು ಮಾಡಿದರೂ ಸರಿಹೋಗದಿದ್ದಾಗ ಆರೋಗ್ಯವೆಂಬುದು ಎಷ್ಟು ದೊಡ್ಡ ಸಂಪತ್ತು ಎಂಬ ಅರಿವಾಗುತ್ತದೆ. ಮಾತು ಬಾರದಿದ್ದರೆ ಮಾತಿನ ಮಹತ್ವ, ಕಣ್ಣು ಕಾಣದಿದ್ದರೆ ನೋಟದ ಮಹತ್ವ, ಕಿವಿ ಕೇಳದಿದ್ದರೆ ಶಬ್ದದ ಮಹತ್ವ ತಿಳಿಯುವಂತೆ ಇವೆಲ್ಲ ಇಂದ್ರಿಯಗಳು ಕೆಲಸ ಮಾಡುತ್ತಿರುವಾಗ ನಮಗೆ ಅದರ ಬಗ್ಗೆ ನಿರ್ಲಕ್ಷವೇ ಜಾಸ್ತಿ. ಸಾಧಾರಣ ದಿನಕ್ಕೆ ಐದರಿಂದ ಆರು ಲೀಟರ್ ನೀರು ಕುಡಿಯುತ್ತಿದ್ದರೆ ಸಾಧಾರಣ ನೂರಕ್ಕೆ ಎಪ್ಪತ್ತೈದರಷ್ಟು ಖಾಯಿಲೆ ಬರದಂತೆ ತಡೆಯಬಹುದು. ಆದರೆ ಅದರ ಬಗ್ಗೆ ಉದಾಸೀನ ತಳೆದು ಪರಿಣಾಮವಾಗಿ ಬಂದ ಅನಾರೋಗ್ಯಕ್ಕೆ ನಾವು ಜೀವನ ಪೂರ್ತಿ ಮಾತ್ರೆಗಳನ್ನು ಕೊಳ್ಳಲು ತಯಾರಿರುತ್ತೇವೆ. ನೀರಿನಿಂದ ಗುಣವಾಗುವುದಕ್ಕೆ ನೀರಿನಂತೆ ಹಣ ಖರ್ಚು ಮಾಡುವುದು ತಪ್ಪಲ್ಲವೇ..

ನಾವು ಜಾಗ್ರತೆಯಿಂದ ಇದ್ದಾಗಲೂ ಅನಾರೋಗ್ಯ ಉಂಟಾದರೆ ಅದನ್ನು ಪ್ರಾರಬ್ಧ ಎನ್ನಬೇಕು. ಆದರೆ ನಮ್ಮ ಅಜಾಗ್ರತೆಯಿಂದ, ಅಸಡ್ಡೆಯಿಂದ ಎಡವಿದರೆ ಅದು ಸ್ವಯಂಕೃತಾಪರಾಧ. ಆಸ್ಪತ್ರೆಗಳಲ್ಲಿ ಎಲ್ಲ ಖಾಯಿಲೆಗಳಿಗೂ ಚಿಕಿತ್ಸೆ ಇದೆ, ಔಷಧಿ ಇದೆ, ಆಸ್ಪತ್ರೆ ಎಂದೇ ಗೊತ್ತಾಗದಷ್ಟು ಐಷಾರಾಮಿ ಬದುಕೂ ಇದೆ, ಹಣಕಾಸಿನ ಸಮಸ್ಯೆಗಳಿಗೆ ಆರೋಗ್ಯ ವಿಮೆಗಳೂ ಇವೆ. ಸಹೃದಯರ ಕೊಡುಗೆಯೂ ಬಹಳಷ್ಟಿರುತ್ತದೆ. ಆದರೆ ಯಾತನೆ ಅನುಭವಿಸುವ ವ್ಯವಸ್ಥೆ ಮಾತ್ರ ರೋಗಿಯಲ್ಲೇ ಇರುತ್ತದೆ. ಆರ್ಥಿಕವಾಗಿ ಎಷ್ಟು ಹಿಂದುಳಿದರೂ, ಎಷ್ಟೇ ಸಣ್ಣ ಮನೆಯಿದ್ದರೂ, ಸ್ಥಾನ ಮಾನಗಳು ಸಮಾಜದಲ್ಲಿ ಎಷ್ಟೇ ಕೆಳಸ್ತರದಲ್ಲಿದ್ದರೂ, ಉಣಲು ಉಡಲು ಕನಿಷ್ಟ ಪ್ರಮಾಣದಲ್ಲಿದ್ದರೂ, ಮಾನಸಿಕವಾಗಿ ತೃಪ್ತನಾಗಿದ್ದರೆ, ಶಾರೀರಿಕ ಆರೋಗ್ಯ ಒಂದಿದ್ದರೆ ಆತನಷ್ಟು ಶ್ರೀಮಂತನಾಗಲಿ, ಅದೃಷ್ಟವಂತನಾಗಲಿ, ಸೌಭಾಗ್ಯವಂತನಾಗಲಿ ಭೂಮಿ ಮೇಲೆ ಇನ್ನೊಬ್ಬನಿರಲು ಸಾಧ್ಯವೇ ಇಲ್ಲ ಹುಟ್ಟು ಸಾವು ನಮ್ಮಲ್ಲಿಲ್ಲ. ಆರೋಗ್ಯವೂ ದೇವರ ಕರುಣೆಯೇ. ಆದರೂ ಕೆಲವು ಆಯ್ಕೆಗಳನ್ನು ದೇವರು ನಮಗೆ ಕೊಟ್ಟಲ್ಲಿ ಸಂತೃಪ್ತಿ ಮತ್ತು ಆರೋಗ್ಯ ಮಾತ್ರ ದೇವರಲ್ಲಿ ಬೇಡೋಣ….
************
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹೊಟ್ಟೆ ಕರಗಿಸುವುದು ಹೇಗೆ? ಕರಗಿಸದಿದ್ದರೆ ಏನಾಗುತ್ತೆ ಗೊತ್ತಾ….?

Upayuktha

ಮಾದಕವಸ್ತು ಬಳಕೆಯ ಅಸ್ವಸ್ಥತೆ: ಲಕ್ಷಣಗಳು ಮತ್ತು ಚಿಕಿತ್ಸೆ

Upayuktha

ಮದ್ಯಪಾನ / ಆಲ್ಕೋಹಾಲ್ ಚಟದಿಂದ ದೂರವಿರಿ

Upayuktha

Leave a Comment