ದೇಶ-ವಿದೇಶ ಪ್ರಮುಖ

ವಿಸ್ತರಣಾವಾದಕ್ಕೆ ಗಲ್ವಾನ್ ಕಣಿವೆಯಲ್ಲಿ ಭಾರತದಿಂದ ತಕ್ಕ ಪ್ರತ್ಯುತ್ತರ: ರಾಷ್ಟ್ರಪತಿ ಕೋವಿಂದ್

ನವದೆಹಲಿ: ಗಡಿಯಲ್ಲಿ ವಿಸ್ತರಣಾವಾದದ ದುಸ್ಸಾಹಸಕ್ಕೆ ಪ್ರಯತ್ನಿಸಿದ ನೆರೆರಾಷ್ಟ್ರಕ್ಕೆ ಭಾರತ ತಕ್ಕ ಪ್ರತ್ಯುತ್ತ ನೀಡಿದೆ. ಸಮರದಲ್ಲಿನ ನಮ್ಮ ಯೋಧರು ತೋರಿದ ಕೆಚ್ಚೆದೆಯು ಭಾರತವು ಶಾಂತಿಯಲ್ಲಿ ನಂಬಿಕೆ ಹೊಂದಿರುವಂತೆಯೇ, ವಿಸ್ತರಣಾವಾದದ ಯಾವುದೇ ಪ್ರಯತ್ನವನ್ನು ನಿಗ್ರಹಿಸುವಲ್ಲಿಯೂ ಸಮರ್ಥವಾಗಿದೆ ಎಂಬುದನ್ನು ಸಾರಿ ಹೇಳಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದರು.

74ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಶುಕ್ರವಾರ ಸಂಜೆ ದೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಚೀನಾದ ಹೆಸರೆತ್ತದೆಯೇ ಪೂರ್ವ ಲಡಾಖ್‌ನಲ್ಲಿನ ವಾಸ್ತವಿಕ ಗಡಿರೇಖೆಯ ಬಳಿ ಅದು ನಡೆಸಿದ ಗಡಿ ತಂಟೆಯನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಗಲ್ವಾನ್ ಕಣಿವೆಯಲ್ಲಿ ವೀರ ಮರಣವನ್ನಪ್ಪಿದ ದೇಶದ ಹೆಮ್ಮೆಯ ಯೋಧರ ಸಾಹಸವನ್ನು ಶ್ಲಾಘಿಸಿದರು.

ಮಾನವ ಕುಲದ ಎದುರು ನಿಂತಿರುವ ಅತಿದೊಡ್ಡ ಸವಾಲಿನ (ಕೋವಿಡ್ 19) ವಿರುದ್ಧ ಒಟ್ಟಾಗಿ ವಿಶ್ವ ಸಮುದಾಯ ಹೋರಾಡಬೇಕಾದ ವೇಳೆಯಲ್ಲಿ ನಮ್ಮ ನೆರೆಹೊರೆಯ ಕೆಲವರು ವಿಸ್ತರಣಾವಾದದ ದುಸ್ಸಾಹಸಕ್ಕೆ ಪ್ರಯತ್ನಿಸಿದರು. ಭಾರತ ಮಾತೆಯ ಹೆಮ್ಮೆಯ ಪುತ್ರರತ್ನರು ದೇಶಕ್ಕಾಗಿ ಪ್ರಾಣ ಕೊಟ್ಟರು. ಇಡೀ ದೇಶ ಗಲ್ವಾನ್ ಕಣಿವೆಯ ಹುತಾತ್ಮ ಯೋಧರಿಗೆ ಗೌರವ ವಂದನೆ ಸಲ್ಲಿಸುತ್ತದೆ. ಪ್ರತಿಯೊಬ್ಬ ಭಾರತೀಯರೂ ಆ ಯೋಧರ ಕುಟುಂಬ ಸದಸ್ಯಕ್ಕೆ ಕೃತಜ್ಞರಾಗಿದ್ದಾರೆ. ಗಡಿಗಳನ್ನು ಕಾಯುತ್ತಾ, ನಮ್ಮ ಆಂತರಿಕ ಭದ್ರತೆಯನ್ನು ಖಾತ್ರಿಗೊಳಿಸುತ್ತಿರುವ ನಮ್ಮ ಸಶಸ್ತ್ರ ಪಡೆಗಳು, ಅರೆಮಿಲಿಟರಿ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಯ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ರಾಷ್ಟ್ರಪತಿ ಹೇಳಿದರು.

ಪ್ರಧಾನಿ ಮೋದಿ ಅವರು ಚಾಲನೆ ನೀಡಿರುವ ಆತ್ಮನಿರ್ಭರ ಉಪಕ್ರಮದ ಕುರಿತಂತೆ ಮಾತನಾಡಿದ ರಾಷ್ಟ್ರಪತಿ, ವಿದೇಶಿ ಹೂಡಿಕೆದಾರರು ಭಯಪಡಬೇಕಾದ ಅಗತ್ಯವಿಲ್ಲ. ಭಾರತದ ಸ್ವಾವವಂಬನೆಯೆಂದರೆ ಸ್ವಸಾಮರ್ಥ್ಯವನ್ನು ಗಳಿಸಿಕೊಳ್ಳುವುದೇ ಹೊರತು ವಿಶ್ವದಿಂದ ಪ್ರತ್ಯೇಕಗೊಳ್ಳುತ್ತಾ ಅಂತರ ಕಾಪಾಡಿಕೊಳ್ಳುವುದಿಲ್ಲ. ವಿಶ್ವದೊಂದಿಗಿನ ಸಂಬಂಧ ಮುಂದುವರಿಯಲಿದೆ ಎಂದು ಒತ್ತಿ ಹೇಳಿದರು.

ಆರೋಗ್ಯ ಯೋಧರಿಗೆ ದೇಶ ಋಣಿ
ತಮ್ಮ ಭಾಷಣದಲ್ಲಿ ಕೋರೋನಾ ಸಾಂಕ್ರಾಮಿಕವನ್ನು ಪ್ರಸ್ತಾಪಿದ ರಾಷ್ಟ್ರಪತಿಗಳು, ಇಡೀ ಜಾಗತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿರುವ ಈ ಸಾಂಕ್ರಾಮಿಕವು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಬಲಿ ಪಡೆದಿದೆ. ಇಂತಹ ಪಿಡುಗಿನ ವಿರುದ್ಧ ಮುನ್ನೆಲೆಯಲ್ಲಿ ಹೋರಾಡುತ್ತಿರುವ ವೈದ್ಯರು, ದಾದಿಯರು ಮತ್ತು ಇತರೆ ಆರೋಗ್ಯ ಕಾರ್ಯಕರ್ತರಿಗೆ ದೇಶ ಋಣಿಯಾಗಿದೆ ಎಂದು ಹೇಳಿದರು. ಜತೆಗೆ ಇಷ್ಟೊಂದು ದೊಡ್ಡ ಮತ್ತು ವೈವಿಧ್ಯಮಯ ಹಾಗೂ ಭಾರೀ ಜನಸಂಖ್ಯೆಯ ದೇಶದಲ್ಲಿ ಈ ಸವಾಲನ್ನು ಎದುರಿಸಲು ಅತಿ ಮಾನವ ಶ್ರಮ ಬೇಕಾಗುತ್ತದೆ. ಕೇಂದ್ರ ಸರ್ಕಾರವು ಕ್ಲಪ್ತ ಸಮಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿದರು.

ರಾಮಮಂದಿರ ದೇಶದ ಹೆಮ್ಮೆ
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ದೇಗುಲ ನಿರ್ಮಾಣವು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ದೇಶದ ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿರಿಸಿಕೊಂಡು ಸುದೀರ್ಘ ಸಮಯವನ್ನು ತಾಳ್ಮೆಯಿಂದ ಕಳೆದರು. ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ರಾಮ ಜನ್ಮಭೂಮಿ ವಿಚಾರವು ಇತ್ಯರ್ಥಗೊಂಡಿತು. ಎಲ್ಲಾ ಕಕ್ಷಿಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವದಿಂದ ಸ್ವೀಕರಿಸಿದ್ದು ವಿಶ್ವದ ಮುಂದೆ ಭಾರತೀಯರ ಶಾಂತಿ ಪ್ರೇಮ, ಅಹಿಂಸೆ, ಪ್ರೀತಿ, ಸೌಹಾರ್ದತೆಯ ಗುಣವು ಪ್ರದರ್ಶಿತಗೊಂಡಿದೆ ಎಂದು ರಾಷ್ಟ್ರಪತಿಯವರು ಮುಕ್ತಕಂಠದಿಂದ ಶ್ಲಾಘಿಸಿದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸತತ 10 ದಿನಗಳಿಂದ ಕೊರೊನಾ ನೆಗೆಟಿವ್: ಸೋಂಕು ಮುಕ್ತ ಆಗುವತ್ತ ದ.ಕ ಜಿಲ್ಲೆ

Upayuktha

ವೈಕುಂಠ ಏಕಾದಶಿ ಗೆ ತಿಮ್ಮಪ್ಪ ನ ಕ್ಷೇತ್ರದಲ್ಲಿ ವಿಶೇಷ ಸೌಕರ್ಯ

Harshitha Harish

ಐಪಿಎಲ್ 2020: ರಾಜಸ್ಥಾನದ ಸಂಜು ಸ್ಯಾಮ್ಸನ್ ಸಿಡಿಲಬ್ಬರಕ್ಕೆ ಬೆಚ್ಚಿದ ಚೆನ್ನೈ

Upayuktha News Network