ಇತರ ಕ್ರೀಡೆಗಳು ಸಾಧಕರಿಗೆ ನಮನ

ಐದು ಸಾಗರಗಳಲ್ಲಿ ಈಜಿದ ಅಸಾಮಾನ್ಯ ಈಜುಗಾರ್ತಿ ಭಕ್ತಿ ಶರ್ಮಾ

ತಮ್ಮ ಅಸಾಮಾನ್ಯ ಸಾಧನೆಯ ಮೂಲಕ ಓಪನ್ ವಾಟರ್ ಸ್ವಿಮ್ಮಿಂಗ್ ನಲ್ಲಿ ದಾಖಲೆಗಳ ಸರಮಾಲೆಯನ್ನು ಸೃಷ್ಟಿಸಿದವರು ಭಕ್ತಿ ಶರ್ಮಾ. ಸಣ್ಣ ವಯಸ್ಸಿನಲ್ಲೇ ಈಜಿನ ಸೆಳೆತಕ್ಕೊಳಗಾಗಿ ತಾಯಿಯ ಬೆಂಬಲದ ನಡುವೆ ಸಾಧನೆ ಮಾಡಿ ಬೆಳಗಿದವರು. ವಿಶ್ವದ 5 ಸಾಗರಗಳಲ್ಲಿ ಈಜಿದ ಸಾಹಸಗಾರ್ತಿ ಇಂದಿನ ಸ್ಟಾರ್ ಭಕ್ತಿ ಶರ್ಮಾ.

Advertisement
Advertisement

ರಾಜಸ್ಥಾನದ ಅರಮನೆ ನಗರಿ ಉದಯಪುರದಲ್ಲಿ 1989ರಲ್ಲಿ ಜನಿಸಿದ ಭಕ್ತಿ ತಂದೆ ಬ್ಯುಸಿನೆಸ್‌ಮೆನ್, ತಾಯಿ ಬ್ಯಾಂಕ್ ಉದ್ಯೋಗಿ. ರಾಷ್ಟ್ರೀಯ ಈಜುಗಾರ್ತಿ ತಾಯಿಯ ಮಗಳು ಭಕ್ತಿಗೆ ಈಜು ರಕ್ತದಲ್ಲೇ ಬೆರೆತಿತ್ತು. ಮಗಳಿಗೆ 2.5 ವರ್ಷವಾಗುವಾಗಲೇ ತಾಯಿಯ ಈಜಿನ ಪಾಠ ಆರಂಭವಾಗುತ್ತದೆ. ಎಳೆ ಪ್ರಾಯದ ಮಗುವಿಗೆ ತಾಯಿಯ ಪಾಠವೇ ಸಾಧನೆಗೆ ಮೊದಲ ಪ್ರೇರಣೆಯಾಗುತ್ತದೆ.

ಈಜಿನ ಆರಂಭದ ದಿನಗಳಲ್ಲಿ ಈಜುಕೊಳದ ಕೊರತೆ ಭಕ್ತಿಗೆ ದೊಡ್ಡ ಸಮಸ್ಯೆಯಾಗುತ್ತದೆ. ವರುಷದ ನಂತರ ಶಾಲೆಯೊಂದು ಆರಂಭಿಸುವ ಈಜುಕೊಳ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಆಹೋರಾತ್ರಿ ಅಭ್ಯಾಸ ನಡೆಸುವ ಭಕ್ತಿ ಈಜಿನ ಎಲ್ಲ ಪಟ್ಟುಗಳನ್ನು ಕಲಿಯುತ್ತಾಳೆ. ಶಾಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಭಕ್ತಿಗೆ ಪ್ರತಿ ಬಾರಿ ಬಹುಮಾನ ಲಭಿಸುತ್ತದೆ.

14 ನೇ ವರ್ಷದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಭಕ್ತಿ ತನ್ನ ಶಾಲಾ ವ್ಯಾಪ್ತಿಯ CBSE ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ 2 ಬಾರಿ ಗೆಲ್ಲುತ್ತಾಳೆ.

ಬೇಸಗೆಯಲ್ಲಿ ಸುಡುವ ಬಿಸಿಲಿಗೆ ಕರಟಿ ಹೋಗುವ ವಾತಾವರಣದ ರಾಜಸ್ಥಾನ ಚಳಿಗಾಲದ ಚಳಿಗೆ ನಡುಗಿ ಹೋಗುತ್ತದೆ. ಇದು ಭಕ್ತಿಗೆ ಸಂಕಷ್ಟ ತರುತ್ತದೆ.  ಚಳಿಗೆ ಈಜುಕೊಳ ತೆರೆಯುತ್ತಿರಲಿಲ್ಲ. ಆದರೆ ಈಜುಕೊಳ ತೆರೆಸಿ ಕೊರೆವ ಚಳಿಯಲ್ಲಿ ಅಭ್ಯಾಸ ನಡೆಸಿ ತನ್ನ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾಳೆ ಭಕ್ತಿ. ಸಾಗರಗಳಲ್ಲಿ ಈಜಿ ಸಾಧನೆ ಮಾಡುವ ಹೆಬ್ಬಯಕೆ ಭಕ್ತಿಯದ್ದು. ಅದಕ್ಕನುಗುಣವಾಗಿ ಅವಳ ತರಬೇತಿ ಸಾಗುತ್ತದೆ. ಕೊರೆವ ಚಳಿಯಲ್ಲಿ ದಿನಕ್ಕೆ 3 ಗಂಟೆಗಳ ಅಭ್ಯಾಸ ನಡೆಸುತ್ತಾಳೆ.

ಕಠಿಣ ಅಭ್ಯಾಸದ ಬಳಿಕ ಪ್ರಥಮ ಬಾರಿಗೆ 2003ರಲ್ಲಿ ಅರಬ್ಬೀ ಸಮುದ್ರದಲ್ಲಿ ಉರಾನ್ ಕೋಟೆಯಿಂದ ಗೇಟ್ ವೇ ಆಫ್ ಇಂಡಿಯಾದವರೆಗೆ ಈಜುತ್ತಾಳೆ ಭಕ್ತಿ.

🏊‍♀️ ಪ್ರಥಮ ಯಶಸ್ಸು ನೀಡುವ ಸ್ಫೂರ್ತಿ ಬಹಳ ದೊಡ್ಡದು. ಭಕ್ತಿ ಸತತ 8 ವರ್ಷ ರಾಜಸ್ಥಾನ ರಾಜ್ಯ ಚಾಂಪಿಯನ್ ಆಗುತ್ತಾಳೆ.

🏊‍♀️ 2004ರಲ್ಲಿ ಹಿಂದೂ ಮಹಾ ಸಾಗರದಲ್ಲಿ 9 ಗಂಟೆ 36 ನಿಮಿಷದಲ್ಲಿ 36 ಕಿ.ಮೀ ಈಜುವ ಭಕ್ತಿ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸುತ್ತಾಳೆ.

🏊‍♀️ 2006ರಲ್ಲಿ ತಾಯಿಯ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ನಡುವೆ 16 ವರ್ಷ ಪ್ರಾಯದ ಭಕ್ತಿ ಇಂಗ್ಲಿಷ್ ಕಡಲ್ಗಾಲುವೆ ಈಜುತ್ತಾಳೆ. 13 ಗಂಟೆ 53 ನಿಮಿಷದಲ್ಲಿ ಷೇಕ್ಸ್ ಪಿಯರ್ ಡ್ರೋವರ್ ನಿಂದ ಫ್ರಾನ್ಸ್ ನ ಕ್ಯಾಲಾಸಿಸ್ ವರೆಗೆ ಈಜಿ ಮತ್ತೊಂದು ದಾಖಲೆ ಸೃಷ್ಟಿಸುತ್ತಾಳೆ.

🏊‍♀️ 2007 ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಕೀ ವೆಸ್ಟ್ ಲ್ಯಾಂಡ್ ಮ್ಯಾರಥಾನ್ ಈಜು ಸ್ಪರ್ಧೆಯಲ್ಲಿ ಗೆಲ್ಲುವುದರೊಂದಿಗೆ ಅಮೆರಿಕಾದ 3 ಅತಿ ದೊಡ್ಡ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ರಥಮ ಏಷ್ಯನ್ ಈಜುಗಾರ್ತಿಯೆನಿಸಿಕೊಳ್ಳುತ್ತಾಳೆ.

🏊‍♀️ ಪ್ರಪಂಚದ ಅತಿ ಉದ್ದದ ಈಜು ಸ್ಪರ್ಧೆ ಲೇಕ್ ಜ್ಯೂರಿಚ್ ಈಜು ಸ್ಪರ್ಧೆಯಲ್ಲಿ ವಿಜಯ ಸಾಧಿಸುತ್ತಾಳೆ.

🏊‍♀️ ಮೆಡಿಟರೇನಿಯನ್ ಸಮುದ್ರದ ಸ್ಟ್ರೇಟ್ ಗಿಬ್ರಾಲ್ಟರ್ ಜಲಸಂಧಿಯನ್ನು 5 ಗಂಟೆ 13 ನಿಮಿಷದಲ್ಲಿ ಈಜುತ್ತಾಳೆ.

🏊‍♀️ 2010 ರಲ್ಲಿ ಆರ್ಕ್ಟಿಕ್ ಸಾಗರದಲ್ಲಿ ಈಜುವುದರೊಂದಿಗೆ 4 ಸಾಗರಗಳಲ್ಲಿ ಈಜಿದ ಅತಿ ಕಿರಿಯ ಈಜುಗಾರ್ತಿಯೆಂಬ ಗೌರವ ಭಕ್ತಿ ಪಾಲಾಗುತ್ತದೆ.

🏊‍♀️ ಭಕ್ತಿ ಶರ್ಮಾ ಜೀವನದ ಮಹತ್ತರ ‌ಸಾಧನೆ 2015ರಲ್ಲಿ ದಾಖಲಾಗುತ್ತದೆ. ಅಂಟಾರ್ಟಿಕಾ ಸಾಗರದಲ್ಲಿ 41.14 ನಿಮಿಷಗಳಲ್ಲಿ 2.3 ಕಿ.ಮೀ ಈಜಿ ಅಮೆರಿಕಾದ ಲಿನ್ ಕಾಕ್ಸ್ ಮತ್ತು ಬ್ರಿಟನ್ ನ ಲೂಯಿಸ್ ಪ್ಹಾ ದಾಖಲೆ ಮುರಿದು ಈ ಸಾಧನೆ ಮಾಡಿದ ಪ್ರಥಮ ಏಷ್ಯನ್ ಮತ್ತು ಪ್ರಪಂಚದ ಅತಿ ಕಿರಿಯ ಈಜುಗಾರ್ತಿಯೆನಿಸಿಕೊಳ್ಳುತ್ತಾಳೆ. ಇದರೊಂದಿಗೆ 5 ಪ್ರಮುಖ ಸಾಗರಗಳಲ್ಲಿ ಈಜಿದ ಸಾಧನೆ ಭಕ್ತಿ ಶರ್ಮಾಳದು.

ಭಕ್ತಿ ಶರ್ಮಾ ಸಾಧನೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿ ಗೌರವಿಸುತ್ತಾರೆ.

ಬಿಡುವಿರದ ಈಜಿನ ನಡುವೆಯೂ ಮಾಸ್ಟರ್ಸ್ ಡಿಗ್ರಿ ಪೂರ್ತಿಗೊಳಿಸುವ ಭಕ್ತಿ ಈಗ ಮೋಟಿವೇಷನ್ ಭಾಷಣಗಳನ್ನು ನೀಡುತ್ತಾಳೆ. ಎಲ್ಲ ಅಡೆ-ತಡೆಗಳ ನಡುವೆ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡುತ್ತಾಳೆ. ಭಕ್ತಿ ಶರ್ಮಾ ಸಾಧನೆಗೆ ಅವಳ ಅಮ್ಮನ ಬೆಂಬಲವೇ ಪ್ರಮುಖ ಕಾರಣವಾಗುತ್ತದೆ. ಪ್ರಯತ್ನ ಪಟ್ಟರೆ ತಡವಾದರೂ ಯಶಸ್ಸು ಖಂಡಿತ ಎನ್ನುವ ಭಕ್ತಿ ಟೋಕಿಯೋ ಒಲಿಂಪಿಕ್ಸ್ ಗೆ ತಯಾರಿ ನಡೆಸುತ್ತಿದ್ದು,ದೇಶಕ್ಕೆ ಈಜಿನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಅವಳಿಗೆ ಆಲ್ ದ ಬೆಸ್ಟ್.

-ತೇಜಸ್ವಿ ಕೆ, ಪೈಲಾರು, ಸುಳ್ಯ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Advertisement
Advertisement

Related posts

ಪ್ರೊಫೈಲ್‌: ಭಾರತೀಯ ಕ್ರಿಕೆಟ್‌ನ ದಂತಕಥೆ ಕಪಿಲ್ ದೇವ್

Upayuktha

ವೇಟ್‍ಲಿಫ್ಟಿಂಗ್ ಸ್ಪರ್ಧೆ: ಎಸ್.ಡಿ.ಎಂ, ಆಳ್ವಾಸ್ ಕಾಲೇಜುಗಳಿಗೆ ಸಮಗ್ರ ಪ್ರಶಸ್ತಿ

Upayuktha

ಸಾಧನೆಗೆ ಪ್ರೇರಣೆ: ಭಾರತೀಯ ವಾಯುಪಡೆ ಪೈಲಟ್ ಆಂಚಲ್ ಗಂಗ್ವಾಲ್

Upayuktha
error: Copying Content is Prohibited !!