ಬಾಲಿವುಡ್ ಸಾಧಕರಿಗೆ ನಮನ

ಬಾಲಿವುಡ್ ಸಾರ್ವಕಾಲಿಕ ಗಾಯಕ ಪಂಕಜ್ ಕುಮಾರ್ ಮಲ್ಲಿಕ್

 

1922- ತರುಣನೊಬ್ಬ ಖ್ಯಾತ ಕವಿ ರವೀಂದ್ರನಾಥ್ ಠಾಗೋರ್ ರನ್ನು ಭೇಟಿಯಾಗಲು ಬಂದ. ಠಾಗೋರರ ಕವನವೊಂದಕ್ಕೆ ಸಂಗೀತ ಅಳವಡಿಸಿದ್ದ ಆತನಿಗೆ ಅವರ ಎದುರೇ ಅದನ್ನು ಹಾಡಿ ಮೆಚ್ಚುಗೆ ಗಳಿಸುವ ಇಚ್ಛೆಯಿತ್ತು. ಆತ ಹಾಡಲು ಆರಂಭಿಸಿದಂತೆ ಸ್ವಭಾವತ ಭಾವಜೀವಿಯಾದ ಠಾಗೋರರು ನಿಧಾನವಾಗಿ ಭಾವಪರವಶರಾಗಿ ಅಲ್ಲೇ ಪವಡಿಸುತ್ತಾರೆ. ಕಂಗಾಲಾದ ತರುಣ ನನ್ನ ಕವನ ಠಾಗೋರ್ ಪ್ರಜ್ಞೆ ತಪ್ಪುವಷ್ಟು ಕೆಟ್ಟದಾಗಿದೆ ಎಂದು ಭಾವಿಸಿ ಹೆದರುತ್ತಲೇ ಅಲ್ಲಿಂದ ಹೋದ.

20 ವರ್ಷಗಳ ನಂತರ ಮತ್ತೊಮ್ಮೆ ಅದೇ ತರುಣ ಠಾಗೋರ್ ರನ್ನು ಭೇಟಿಯಾಗುತ್ತಾನೆ. ಅಂದು ಹಾಡಿದ ಆತ ಈಗ ಪ್ರಸಿದ್ಧ ಸಂಗೀತ ಸಂಯೋಜಕ-ಗಾಯಕ-ನಟನಾಗಿ ಪ್ರಸಿದ್ಧನಾಗಿರುತ್ತಾನೆ. ಅಂದಿನ ಘಟನೆಯನ್ನು ಮತ್ತೆ ಆತ ನೆನಪಿಸಿದಾಗ ಚೆನ್ನಾಗಿ ಹಾಡುತ್ತಿದ್ದವನು ಅರ್ಧದಲ್ಲೇಕೆ ಹೋದೆ? ಎಂದು ಪ್ರಶ್ನಿಸಿ ಅದೇ ಹಾಡನ್ನು ಆತನ ಚಿತ್ರದಲ್ಲಿ ಬಳಸಲು ಠಾಗೋರ್ ಅನುಮತಿ ನೀಡುತ್ತಾರೆ. “ಮುಕ್ತಿ” ಎಂಬ ಬಂಗಾಳಿ ಚಿತ್ರದಲ್ಲಿ ಬಳಸಿಕೊಂಡ “ಶೇಷ್ ಖಯಾ” ಎಂಬ ಆ ಹಾಡು ಅಪಾರ ಜನಪ್ರಿಯತೆ ಗಳಿಸಿತು. ರವೀಂದ್ರನಾಥ್ ಠಾಗೋರ್ ರ ಹಾಡುಗಳನ್ನು ಹಾಡಿ “ರವೀಂದ್ರ ಸಂಗೀತ” ವನ್ನು ಬಹಳ ಜನಪ್ರಿಯಗೊಳಿಸಿದ ಆತನೇ ಬಾಲಿವುಡ್ ನ ಸಾರ್ವಕಾಲಿಕ ಗಾಯಕರಲ್ಲಿ ಒಬ್ಬರೆನಿಸಿಕೊಂಡ ಪಂಕಜ್ ಕುಮಾರ್ ಮಲ್ಲಿಕ್.

ಹಿಂದಿ-ಬಂಗಾಳಿ ಚಲನಚಿತ್ರ ರಂಗದಲ್ಲಿ ತನ್ನ ಸಂಗೀತ ನಿರ್ದೇಶನ-ಗಾಯನ-ನಟನೆಯ ಮೂಲಕ ಬಹಳ ಪ್ರಸಿದ್ಧರಾದ ಪಂಕಜ್ ಕುಮಾರ್ ಪಶ್ಚಿಮ ಬಂಗಾಳದವರು. 1905ರಲ್ಲಿ ಜನಿಸಿದ ಅವರ ತಂದೆಗೆ ಬಂಗಾಳಿ ಸಂಗೀತದಲ್ಲಿ ಅಪಾರ ಆಸಕ್ತಿ. ಇದೇ ಸಂಗೀತದೆಡೆಗೆ ಪಂಕಜ್ ಗೆ ಆಸಕ್ತಿ ಬೆಳೆಯಲು ಕಾರಣವಾಯಿತು. ಬಾಲ್ಯದಲ್ಲೆ ಖ್ಯಾತ ಸಂಗೀತಗಾರ ದುರ್ಗಾದಾಸ್ ಬಂದೋಪಾಧ್ಯಾಯ ಬಳಿ ಸಂಗೀತ ಕಲಿಯುತ್ತಾರೆ ಪಂಕಜ್.

ಕೊಲ್ಕೊತ್ತಾ ಯುನಿವರ್ಸಿಟಿಯ ಸ್ಕಾಟಿಷ್ ಚರ್ಚ್ ಕಾಲೇಜಲ್ಲಿ ಕಲಿಕೆ ಮುಗಿದಂತೆ ದೀನೇಂದ್ರನಾಥ್ ಠಾಗೋರ್ ಸಂಪರ್ಕಕ್ಕೆ ಬರುತ್ತಾರೆ ಪಂಕಜ್. ರವೀಂದ್ರನಾಥ್ ಠಾಗೋರ್ ರ ಹತ್ತಿರದ ಸಂಬಂಧಿಯ ಸಂಪರ್ಕ ಪಂಕಜ್ ಗೆ “ರವೀಂದ್ರ ಸಂಗೀತ”ದೆಡೆಗೆ ಆಸಕ್ತಿ ಬೆಳೆಯಲು ನೆರವಾಯಿತು. ಕೆಲವೇ ಸಮಯದಲ್ಲಿ ರವೀಂದ್ರನಾಥ್ ಠಾಗೋರ್ ರ ಹಾಡುಗಳನ್ನು ಹಾಡುವ ಮೂಲಕ ಬಹಳ ಪ್ರಸಿದ್ಧರಾಗುತ್ತಾರೆ ಪಂಕಜ್ ಮಲ್ಲಿಕ್.

1927ರಲ್ಲಿ ಆಲ್ ಇಂಡಿಯಾ ರೇಡಿಯೋದ ಸಹಸಂಸ್ಥೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ ನಲ್ಲಿ ಹಾಡುವುದರ ಮೂಲಕ ವೃತ್ತಿಜೀವನ ಆರಂಭಿಸುತ್ತಾರೆ ಅವರು. ಇದು ಸಿನಿಮಾ ಜಗತ್ತಿಗೆ ಪಂಕಜ್ ಹೆಸರನ್ನು ಪರಿಚಯಿಸುತ್ತದೆ. ತನ್ನ 21ನೇ ವಯಸ್ಸಲ್ಲಿ “ನೆಮೊಚ್ಚಿ ಆಜ್ ಪ್ರೊಥಮ್ ಬಾದಲ್” ಹಾಡಿನೊಂದಿಗೆ ತನ್ನ ಪ್ರಥಮ ರೆಕಾರ್ಡ್ ನ್ನು ಪಂಕಜ್ ಹೊರತರುತ್ತಾರೆ. ಕೊಲ್ಕೊತ್ತಾ ಮೂಲದ ಗ್ರಾಮಾಫೋನ್ ಕಂಪೆನಿಯೊಂದು ಈ ರೆಕಾರ್ಡ್ ನ್ನು ಬಿಡುಗಡೆ ಮಾಡಿತು. ಈ ಹಾಡಿನೊಂದಿಗೆ ಬೆಂಗಾಳಿಗಳ ಮನೆ-ಮಾತಾಗುತ್ತಾರೆ ಪಂಕಜ್.

ತನ್ನ ಸಂಗೀತಯಾನದ ಆರಂಭದ ದಿನಗಳಲ್ಲಿ ಸಂಗೀತ ಸಂಯೋಜಕ ಬಿ.ಸಿ.ಬೋರಲ್ ಜೊತೆ ಸುಮಾರು 5 ವರ್ಷ ಕೆಲಸ ಮಾಡುತ್ತಾರೆ ಪಂಕಜ್. ಇದು ಅವರ ಮುಂದಿನ ಬೆಳವಣಿಗೆಗೆ ನೆರವಾಯಿತು. ಚಿತ್ರಗಳಿಗೆ ಸಂಗೀತ ಸಂಯೋಜನೆಯಲ್ಲದೆ ಅನೇಕ ನೃತ್ಯ ರೂಪಕಗಳಿಗೂ ಪಂಕಜ್ ಸಂಗೀತ ಸಂಯೋಜಿಸುತ್ತಾರೆ ಅದರಲ್ಲಿ “ಮಹಿಷಾಸುರ ಮರ್ಧಿನಿ” ಬಹಳ ಜನಪ್ರಿಯವಾಯಿತು. ಈ ರೂಪಕದ ಹಾಡುಗಳನ್ನು ಆಲ್ ಇಂಡಿಯಾ ರೇಡಿಯೋ ಈಗಲೂ ಪ್ರತಿವರ್ಷ ಮಹಾಲಯದ ದಿನದಂದು ಬೆಳಗ್ಗೆ 4 ಗಂಟೆಗೆ ಪ್ರಸಾರ ಮಾಡುತ್ತಿದೆ.

1931 ರಿಂದ 38 ವರ್ಷಗಳ ಕಾಲ ಬಂಗಾಳಿ-ಹಿಂದಿ-ಉರ್ದು-ತಮಿಳು ಭಾಷೆಗಳಲ್ಲಿ ಕೆ.ಎಲ್.ಸೈಗಲ್, ಎಸ್.ಡಿ.ಬರ್ಮನ್, ಹೇಮನಾಥ್ ಮುಖರ್ಜಿ, ಗೀತಾ ದತ್, ಆಶಾ ಭೋಂಸ್ಲೆ ಜೊತೆ ಪಂಕಜ್ ಕೆಲಸ ಮಾಡುತ್ತಾರೆ. ಅಭಿನಯ ರಂಗಕ್ಕೂ ಇಳಿಯುವ ಅವರು ಕೆ.ಎಲ್.ಸೈಗಲ್, ಪಿ.ಸಿ.ಬುರಾ, ಕಾನನ್ ದೇವಿ ಜೊತೆ ಅಭಿನಯಿಸುತ್ತಾರೆ. ನಿತಿನ್ ಬೋಸ್ ಮತ್ತು ಸಹೋದರ ಧ್ವನಿ ತಂತ್ರಜ್ಞ ಮುಖುಲ್ ಬೋಸ್ ಜೊತೆಗೂಡಿ ಹಿನ್ನೆಲೆ ಗಾಯನವನ್ನು ಭಾರತೀಯ ಸಿನಿಮಾ ಜಗತ್ತಿಗೆ ಪರಿಚಯಿಸಿದ ಕೀರ್ತಿ ಪಂಕಜ್ ಗೆ ಸಲ್ಲುತ್ತದೆ.

ದೇಶದ ಪ್ರಥಮ ಫಿಲ್ಮ್ ಸ್ಟುಡಿಯೋಗಳಲ್ಲಿ ಒಂದಾದ ನ್ಯೂ ಥಿಯೇಟರ್ ಕಲ್ಕತ್ತಾ ಜೊತೆ 25 ವರ್ಷ ಕೆಲಸ ಮಾಡುತ್ತಾರೆ ಪಂಕಜ್.ದೇವದಾಸ್, ಮಂಜಿಲ್, ಮಾಯಾ, ದೀದಿ, ಅಭಾಗಿನ್, ದುಶ್ಮನ್, ಬಡೇ ದೀದಿ, ಕಾಶಿನಾಥ್, ಮೇರಿ ಬಹೆನ್, ಮಂಜೂರ್, ಯಾತ್ರಿಕ್ ಚಿತ್ರಗಳ ಮೂಲಕ ಭಾರತೀಯ ಸಿನಿರಸಿಕರ ಮನದಲ್ಲಿ ಪಂಕಜ್ ಕುಮಾರ್ ಅಚ್ಚಳಿಯದೆ ನಿಂತಿದ್ದಾರೆ. 1959ರಲ್ಲಿ ದೂರದರ್ಶನ ದೇಶದಲ್ಲಿ ಆರಂಭವಾದಾಗ ಭರತನಾಟ್ಯ ನರ್ತಕಿ ವೈಜಯಂತಿಮಾಲ ಜೊತೆಗೂಡಿ ವಿಶೇಷ ಕಾರ್ಯಕ್ರಮ ನೀಡಿದವರು ಪಂಕಜ್ ಕುಮಾರ್.

2006ರಲ್ಲಿ ಪಂಕಜ್ ಕುಮಾರ್ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅಂಚೆ ಇಲಾಖೆ ಇವರ ಸ್ಮರಣಾರ್ಥ ವಿಶೇಷ ಅಂಚೆಚೀಟಿಯನ್ನು ಬಿಡುಗಡೆ ಮಾಡಿರುತ್ತದೆ. ದೂರದರ್ಶನ ಇವರ ಸಾಧನೆ ಬಿಂಬಿಸುವ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತದೆ.

ಭಾರತ ಸರ್ಕಾರ 1970 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಜೀವಮಾನದ ಸಾಧನೆಗಾಗಿ ಭಾರತೀಯ ಚಲನಚಿತ್ರ ರಂಗದ ಅತ್ಯುನ್ನತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು 1972 ರಲ್ಲಿ ನೀಡಿ ಗೌರವಿಸಲಾಗುತ್ತದೆ.

ತನ್ನ ಅಮೋಘ ಸಂಗೀತ ಸಂಯೋಜನೆಗಳ ಮೂಲಕ ದೇಶದ ಸಂಗೀತ ಪ್ರಿಯರ ಮನದಲ್ಲಿ ಹಸಿರಾಗಿರುವ ಪಂಕಜ್ ಕುಮಾರ್ ಮಲ್ಲಿಕ್ ದೇಶ ಕಂಡ ಸಾರ್ವಕಾಲಿಕ ಶ್ರೇಷ್ಠ ಗಾಯಕರಲ್ಲಿ ಒಬ್ಬರು.

– ತೇಜಸ್ವಿ ಕೆ, ಪೈಲಾರು, ಸುಳ್ಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಹುಟ್ಟುಹಬ್ಬದ ಸಂಭ್ರಮ ದಲ್ಲಿ ಅಮಿತಾಭ್ ಬಚ್ಚನ್

Harshitha Harish

ನುಡಿ ನಮನ: ಮೂರು ತಲೆಮಾರುಗಳ ಬೆರಗು ಸರೋಜ್ ಖಾನ್- ನೂಪುರಕ್ಕೆ ನೃತ್ಯ ಕಲಿಸಿದ ಚೇತನ

Upayuktha

ಇಂದಿನ ಐಕಾನ್ – ಧೀಮಂತ ಪತ್ರಕರ್ತ ಮನೋಹರ್ ಪ್ರಸಾದ್

Upayuktha