ಸಾಧಕರಿಗೆ ನಮನ

16,000 ಅಡಿ ಎತ್ತರದಿಂದ ಬಿದ್ದರೂ ಬದುಕಿ ಗೆದ್ದ ಸಾಹಸಿ ಎಡ್ವರ್ಡ್ ಮೈಕಲ್ ಗ್ರಿಲ್ಸ್ (ಬೇರ್ ಗ್ರಿಲ್ಸ್)

ಬಿಯರ್ ಗ್ರಿಲ್ಸ್ ಈ ಹೆಸರು ಕೇಳದ ವನ್ಯಜೀವಿ ಪ್ರಿಯರಿರರಿಕ್ಕಿಲ್ಲ. ಡಿಸ್ಕವರಿ ಚಾನಲ್ ವೀಕ್ಷಕರಿಗೆ ಈತ ಚಿರಪರಿಚಿತ. ದಟ್ಟ ಕಾಡಿನ ನಡುವೆ, ಕ್ರೂರ ಮೃಗಗಳ ನಡುವೆ ನಡೆಸುವ ಸಾಹಸಗಳು, ಚಾರಣಗಳು, ಚಿತ್ರ-ವಿಚಿತ್ರ ಆಟಗಳೊಂದಿಗೆ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ಗ್ರಿಲ್ಸ್ ಜನಪ್ರಿಯ ಟಿವಿ ಸೀರಿಯಲ್ ನಿರೂಪಕ. ಈತನ ಶೋಗಳು ಅದ್ಭುತ ಯಶಸ್ಸನ್ನು ಸಂಪಾದಿಸಿವೆ.ಜನ ಈತನ ಶೋ ನೋಡಲು ಕಾದು ಕುಳಿತುಕೊಳ್ಳುತ್ತಾರೆ.

ಇಂಗ್ಲೆಂಡ್ ನಲ್ಲಿ ಹುಟ್ಟಿದ ಈತನ ಅಜ್ಜ-ಮುತ್ತಜ್ಜ ಇಬ್ಬರೂ ಪ್ರಸಿದ್ಧ ಕ್ರಿಕೆಟ್ ಆಟಗಾರರು. ಆದರೆ ಟ್ರಕ್ಕಿಂಗ್ ಈತನ ಹವ್ಯಾಸವಾಯಿತು. ಹುಟ್ಟಿ 1 ವಾರದಲ್ಲೆ ಅಕ್ಕ ಪ್ರೀತಿಯಿಂದ ಕರೆದ “ಬಿಯರ್” ನಿಕ್ ನೇಮ್ ಮುಂದೆ ಖಾಯಂ ಆಯಿತು. ಬಾಲ್ಯದಿಂದಲೇ ಸ್ಕೈಡೈವ್ ಅಭ್ಯಾಸ ಮಾಡುವ ಬಿಯರ್ ಕರಾಟೆ ಬ್ಲ್ಯಾಕ್ ಬೆಲ್ಟ್ ಹೋಲ್ಡರ್. ಇಂಗ್ಲಿಷ್-ಸ್ಪಾನಿಷ್-ಫ್ರೆಂಚ್ ಭಾಷೆ ಕರಗತ ಮಾಡಿಕೊಂಡ ಬಿಯರ್ ಗ್ರಿಲ್ಸ್ ನನ್ನ ಸಾಧನೆಗೆ ನನ್ನ ಮೇಲೆ ನನಗಿರುವ ನಂಬಿಕೆಯೇ ಬೆನ್ನೆಲುಬು ಎನ್ನುತ್ತಾನೆ.

🏄‍♀️ ಎಟನ್ ಕಾಲೇಜಲ್ಲಿ ಓದುತ್ತಿರುವಾಗಲೇ ಕಾಲೇಜಲ್ಲಿ ಮೌಂಟನೇರಿಂಗ್ ಕ್ಲಬ್ ಆರಂಭಿಸಿದ ಗ್ರಿಲ್ಸ್ ಕಾಲೇಜು ಮುಗಿದೊಡನೆ ಸಿಕ್ಕಿಂ ಮತ್ತು ಪ.ಬಂಗಾಲಕ್ಕೆ ಬಂದು ಹಿಮಾಲಯ ಚಾರಣ ಮಾಡುತ್ತಾನೆ. ನಂತರ 3 ವರ್ಷ ಬ್ರಿಟಿಷ್ ಸೇನೆಯ ಸೇವೆ ಮರುಭೂಮಿ-ಚಳಿಗಾಲದ ಯುದ್ಧ, ಚಾರಣ, ಫ್ಯಾರಾಚೂಟ್ ಹಾರಾಟ, ಸ್ಫೋಟಕಗಳ ಉಪಯೋಗ ಎಲ್ಲವನ್ನೂ ಕಲಿಸುತ್ತದೆ. ಸರ್ವೈವಲ್ ಇನ್ಸ್ಟ್ರಕ್ಟರ್ ಆಗಿ 2 ಬಾರಿ ಉತ್ತರ ಆಫ್ರಿಕಾದಲ್ಲಿ ನೇಮಕವಾಗುತ್ತಾನೆ.

🏄‍♀️ 1996 ರಲ್ಲಿ ಜಾಂಬಿಯಾದಲ್ಲಿ ಪ್ಯಾರಾಚೂಟ್ ಹಾರಾಟ ಮಾಡುತ್ತಿರುವಾಗ ಪ್ಯಾರಾಚೂಟ್ ಸರಿಯಾಗಿ ತೆರೆದುಕೊಳ್ಳದೆ 16,000 ft ಎತ್ತರದಿಂದ ಬೀಳುವ ಗ್ರಿಲ್ಸ್ ನ ಬೆನ್ನುಹುರಿಯ 3 ಮೂಳೆಗಳು ಮುರಿಯುತ್ತವೆ. ಜೀವಮಾನವಿಡೀ ಹಾಸಿಗೆಯಲ್ಲಿ ಕಳೆಯುವುದರಿಂದ ಸ್ವಲ್ಪದರಿಂದ ಪಾರಾದ ಗ್ರಿಲ್ಸ್ 12 ತಿಂಗಳು ಮಿಲಿಟರಿ ಕ್ಯಾಂಪ್ ನಲ್ಲಿ ಚಿಕಿತ್ಸೆ ಪಡೆಯುತ್ತಾನೆ. ಎಲ್ಲರೂ ಅಚ್ಚರಿಪಡುವಂತೆ ಚೇತರಿಸಿಕೊಂಡ ಗ್ರಿಲ್ಸ್ ಬಿದ್ದು 18 ತಿಂಗಳಲ್ಲೇ 16 ಮೇ 1998 ರಂದು ಮೌಂಟ್ ಎವರೆಸ್ಟ್ ಏರಿ ಇತಿಹಾಸ ನಿರ್ಮಿಸುತ್ತಾನೆ. ಬಿದ್ದ ಏಟಿಗೆ ಸರಿಯಾಗಿ ನಡೆಯುವುದೇ ಕಷ್ಟವೆಂದು ಭಾವಿಸಿದ್ದ ಮನುಷ್ಯ ಪ್ರಪಂಚದ ಅತಿ ಎತ್ತರದ ಶಿಖರ ಏರಿ ಬಾಲ್ಯದ ಕನಸು ನನಸು ಮಾಡಿಕೊಳ್ಳುತ್ತಾನೆ.

🏄‍♀️ ಚಾರಣ ಸಂದರ್ಭ ಬಿದ್ದು ಕಾಲು ಮುರಿದುಕೊಂಡ ಗೆಳೆಯನ ಚಿಕಿತ್ಸೆಗೆ ಧನ ಸಹಾಯ ಮಾಡುವ ಉದ್ದೇಶದಿಂದ ಥೇಮ್ಸ್ ನದಿಯಲ್ಲಿ ತಾನೇ ಮನೆಯಲ್ಲಿ ತಯಾರಿಸಿದ ಬಾತ್ ಟಬ್ ವಿನ್ಯಾಸದ ದೋಣಿಯಲ್ಲಿ ನಗ್ನನಾಗಿ ಹೋಗುತ್ತಾನೆ. ಧನ ಸಂಗ್ರಹಿಸಿ ಗೆಳೆಯನಿಗೆ ನೆರವಾಗುತ್ತಾನೆ.

🏄‍♀️ 2003 ರಲ್ಲಿ ಗೆಳೆಯ ಮಿಕ್ ಕ್ರಾಸ್ ವೈತ್ ಒಳಗೊಂಡ 5 ಜನರ ತಂಡದ ನಾಯಕನಾಗಿ ತೆರೆದ ದೋಣಿಯಲ್ಲಿ ಉತ್ತರ ಅಟ್ಲಾಂಟಿಕ್ ಸಾಗರವನ್ನು ಕ್ರಮಿಸಿ ದಾಖಲೆ ನಿರ್ಮಿಸುತ್ತಾನೆ.

🏄‍♀️ 11ಮೀಟರ್ ಉದ್ದದ ದೋಣಿಯಲ್ಲಿ ಎದೆ ನಡುಗಿಸುವ ಚಂಡಮಾರುತ ಮತ್ತು ಹಿಮಗುಡ್ಡಗಳ ನಡುವೆ ಹೆಲಿಪ್ಯಾಕ್ಸ್ ನೋವಾ ಸ್ಕೋಟಿಯಾದಿಂದ ಸ್ಕಾಟ್ಲೆಂಡ್ ವರೆಗೆ ಕ್ರಮಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸುತ್ತಾರೆ.

🏄‍♀️ 2005ರಲ್ಲಿ ತನ್ನ ಬಲೂನ್ ಯಾತ್ರಿಕ ಮತ್ತು ಚಾರಣದ ಗೆಳೆಯರ ಜೊತೆಗೂಡಿ ನೆಲದಿಂದ 7,600 ಮೀಟರ್ ಎತ್ತರದಲ್ಲಿ ಬಲೂನ್ ನಲ್ಲಿ ಓಪನ್ ಏರ್ ಪಾರ್ಟಿ ಮಾಡುವ ವಿಶ್ವದಾಖಲೆ ನಿರ್ಮಾಣ. ಇದಕ್ಕಾಗಿ ಅಭ್ಯಸಿಸಲು ಗ್ರಿಲ್ಸ್ 200 ಬಾರಿ ಫ್ಯಾರಾಚೂಟ್ ನಿಂದ ಜಿಗಿದಿದ್ದರು.

🏄‍♀️ 2007ರಲ್ಲಿ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಮೌಂಟ್ ಎವರೆಸ್ಟ್ ಸಮೀಪ ಪಾರಾಜೆಟ್ ಫ್ಯಾರಾಮೋಟಾರ್ ನಿಂದ 4,000 ಮೀ. ಎತ್ತರದಿಂದ 9,000 ಮೀ. ಎತ್ತರದವರೆಗೆ ಹಾರಾಟ ಮಾಡಿ ಇನ್ನೊಂದು ದಾಖಲೆ ನಿರ್ಮಾಣ.ಡಿಸ್ಕವರಿ ಚಾನಲ್ ಗಾಗಿ ಇದನ್ನು ಚಿತ್ರೀಕರಿಸಲಾಯಿತು.

🏄‍♀️ 2010 ರಲ್ಲಿ ಜಾಗತಿಕ ಹವಾಮಾನ ಬದಲಾವಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಉತ್ತರ ದ್ರುವದ ಹಿಮರಾಶಿಯ ನಡುವೆ 10,000 ಕಿ.ಮೀ ಬೋಟಿಂಗ್ ಮಾಡಿದ 5 ಜನರ ತಂಡದ ನೇತೃತ್ವ ವಹಿಸಿದ್ದರು.

🏄‍♀️ ತನ್ನ ಮೌಂಟ್ ಎವರೆಸ್ಟ್ ಚಾರಣದ ಬಗೆಗಿನ “ನ್ಯೂರ್ ಡಿಯೋಡರಂಟ್” ನ ಜಾಹೀರಾತಿನಲ್ಲಿ ನಟಿಸುವ ಮೂಲಕ ಟಿವಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಬಿಯರ್ ಗ್ರಿಲ್ಸ್ ನಂತರ ಟೆಲಿವಿಷನ್ ನ ಸ್ಟಾರ್ ಆಗುತ್ತಾರೆ.

🏄‍♀️ ಬ್ರಿಟಿಷ್ ಸೈನ್ಯದ ಡ್ರಗ್ಸ್ ವಿರೋಧಿ ಕ್ಯಾಂಪೇನ್ ನಲ್ಲಿ ಭಾಗವಹಿಸುವ ಗ್ರಿಲ್ಸ್ Friday Nyt With Jonathan Ros,The Oprah Winfrey Show,Late Nyt With Conan O’Brien,Jimmy Kimmel Live ಶೋಗಳಮೂಲಕ ಪ್ರಪಂಚದ ಮೂಲೆ ಮೂಲೆಗೂ ಪರಿಚಿತಗೊಳ್ಳುತ್ತಾರೆ.

🏄‍♀️ ವನ್ಯಜೀವನದ ಕುರಿತಾದ ಸೀರಿಯಲ್ ಗಳ ನಿರೂಪಕನಾಗಿ ಕೆಲಸ ಮಾಡಿದ ಬಿಯರ್ ಗ್ರಿಲ್ಸ್ ಬ್ರಿಟಿಷ್ ಚಾನಲ್ 4 ಗಾಗಿ ನಿರ್ಮಿಸಿದ ಶೋ Man v/s Wild ಆಗಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ಅಮೆರಿಕ, ಭಾರತಗಳಲ್ಲಿ, Ultimate Survival ಆಗಿ ಡಿಸ್ಕವರಿ ಚಾನಲ್ ನಲ್ಲಿ ಯುರೋಪ್ ಮತ್ತು ಆಫ್ರಿಕಾಗಳಲ್ಲಿ ಪ್ರಸಾರವಾಗುತ್ತದೆ. ದಟ್ಟ ಕಾಡಿನ ನಡುವೆ ಜೀವನಕ್ಕಾಗಿ ಹೋರಾಟ ಬಿಂಬಿಸುವ Man v/s Wild 2006 ರಿಂದ 2011 ರವರೆಗೆ ಸತತ 7 ವರ್ಷ ಪ್ರಸಾರವಾಗಿ ಬಿಯರ್ ಗ್ರಿಲ್ಸ್ ನನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸುತ್ತದೆ.

🏄‍♀️ ಕಡಿದಾದ ಬಂಡೆ ಏರುವ, ಹೆಲಿಕಾಪ್ಟರ್ ನಿಂದ ಫ್ಯಾರಾಚೂಟ್ ನಲ್ಲಿ ಹಾರುವುದು, ಬಲೂನ್, ವಿಮಾನದ ಮೂಲಕ ಪ್ಯಾರಾ ಗ್ಲೈಡಿಂಗ್ ಮಾಡುವ,ಹಿಮ ಪರ್ವತ ಏರುವ, ಕಾಡ್ಗಿಚ್ಚಿನ ನಡುವೆ ಬರುವ, ಹಾವು, ಮೀನು ಮುಂತಾದ ಪ್ರಾಣಿಗಳನ್ನು ಸ್ಥಳದಲ್ಲಿಯೇ ಬೇಯಿಸಿ ತಿನ್ನುವ ಬಿಯರ್ ಗ್ರಿಲ್ಸ್ ಸಾಹಸಗಳು ವೀಕ್ಷಕರನ್ನು ರೋಮಾಂಚನಗೊಳಿಸುತ್ತವೆ.

🏄‍♀️ 2019 ರ ಆಗಸ್ಟ್ ನಲ್ಲಿ ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಬಿಯರ್ ಗ್ರಿಲ್ಸ್ ವಿಶೇಷ ಶೋ ನಡೆಸಿದ್ದರು.180 ದೇಶಗಳಲ್ಲಿ ಈ ಶೋ ಪ್ರಸಾರವಾಯಿತು.

🏄‍♀️ Escape From Hell-ಸಾಮಾನ್ಯ ಮನುಷ್ಯ ಅಸಾಮಾನ್ಯ ಸನ್ನಿವೇಶಗಳಲ್ಲಿ ಸಿಲುಕಿ ಅಲ್ಲಿಂದ ತಪ್ಪಿಸಿಕೊಳ್ಳುವ ದೃಶ್ಯಗಳ ಇವರ ಶೋಗಳು ಡಿಸ್ಕವರಿ ಚಾನಲ್ ನಲ್ಲಿ ಇಂಗ್ಲೆಂಡಿನಲ್ಲಿ ಪ್ರಸಾರವಾಗಿ ಬಹಳ ಜನಪ್ರಿಯಗೊಂಡವು.

ತನ್ನ ಜನಪ್ರಿಯ ಶೋಗಳ ಜೊತೆಗೆ ಮೋಟಿವೇಷನಲ್ ಸ್ಪೀಕರ್ ಆಗಿ ಕೂಡ ಕಾಣಿಸಿಕೊಳ್ಳುವ ಬಿಯರ್ ಗ್ರಿಲ್ಸ್ ಕಾರ್ಪೊರೇಟ್ ಕಂಪೆನಿಗಳಲ್ಲಿ, ಚರ್ಚ್ ಗಳಲ್ಲಿ,ಶಾಲೆಗಳಲ್ಲಿ ಉಪನ್ಯಾಸ ನೀಡುತ್ತಾರೆ. ಬ್ರಿಟನ್ ನ “ಪ್ರಿನ್ಸೆಸ್ ಟ್ರಸ್ಟ್” ನ ಅಂಬಾಸಡರ್ ಆಗಿ ಯುವಜನತೆಗೆ ತರಬೇತಿ ನೀಡುತ್ತಾರೆ.

ಆಗಸದಿಂದ ಬಿದ್ದು ಪವಾಡವೆಂಬಂತೆ ಬದುಕಿದ ಬಿಯರ್ ಗ್ರಿಲ್ಸ್ ಅಸಾಮಾನ್ಯ ಸಾಧನೆ ಮಾಡುತ್ತಾರೆ. ತಾನು ಸಾಧಿಸುವುದರ ಜೊತೆಗೆ ಇತರರಿಗೂ ಸ್ಫೂರ್ತಿ ತುಂಬುತ್ತಾರೆ. ಹಾರ್ಡ್ ವರ್ಕ್ ನೆವರ್ ಫೈಲ್ ಎಂಬುದಕ್ಕೆ ಗ್ರಿಲ್ಸ್ ಜೀವನ ಸಾಕ್ಷಿ.

– ತೇಜಸ್ವಿ. ಕೆ, ಪೈಲಾರು, ಸುಳ್ಯ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಡಾ|| ಮುರಲೀ ಮೋಹನ್ ಚೂಂತಾರು-ವ್ಯಕ್ತಿ ಪರಿಚಯ

Upayuktha

ಇಂದಿನ ಐಕಾನ್- ‘ಥಟ್ ಅಂತ ಹೇಳಿ’ ಕೀರ್ತಿ ಪಡೆದ ಡಾಕ್ಟರ್ ನಾ. ಸೋಮೇಶ್ವರ

Upayuktha

ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತನಗಳನ್ನು ತಂದ ಶಂಕರ್ ನಾಗ್

Upayuktha