ಸಾಧಕರಿಗೆ ನಮನ

ಡಾ|| ಮುರಲೀ ಮೋಹನ್ ಚೂಂತಾರು-ವ್ಯಕ್ತಿ ಪರಿಚಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ‘ಚೂಂತಾರು’ ಎಂಬ ಹಳ್ಳಿಯಲ್ಲಿ 1973ನೇ ಜನವರಿ 18ರಂದು ಶ್ರೀಮತಿ ಸರೋಜಿನಿ ಭಟ್ ಮತ್ತು ಲಕ್ಷ್ಮೀನಾರಾಯಣ ಭಟ್ ದಂಪತಿಗಳ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆಗಳಾದ ಶೇಣಿ ಬೆಳ್ಳಾರೆಗಳಲ್ಲಿ ಮುಗಿಸಿ, ಪಿಯುಸಿ ಶಿಕ್ಷಣವನ್ನು ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪಡೆದರು. ಸರಕಾರಿ ಮೆರಿಟ್ ಕೋಟಾದಲ್ಲಿ ಸರಕಾರಿ ದಂತ ವೈದ್ಯಕೀಯ ಕಾಲೇಜು ಬೆಂಗಳೂರು ಇಲ್ಲಿ ಉಚಿತ ಅರ್ಹತೆ ಪಡೆದು ಬಿ.ಡಿ.ಎಸ್. ಪದವಿಯನ್ನು 1995ರಲ್ಲಿ ಪಡೆದರು. ಎಂ.ಡಿ.ಎಸ್. ಸೀಟನ್ನು ಕೂಡಾ ಸರಕಾರಿ ಕೋಟಾದಲ್ಲಿಯೇ ಅರ್ಹತೆ ಆಧಾರದ ಮೇಲೆ ಉಚಿತವಾಗಿ ಪಡೆದು ದಾವಣಗೆರೆಯಲ್ಲಿ 2000ನೇ ಇಸವಿಯಲ್ಲಿ ಎಂ.ಡಿ.ಎಸ್. ಪದವಿ ಪಡೆದರು.

ದಂತ ವೈದ್ಯಕೀಯ ಕ್ಷೇತ್ರದ ಬಾಯಿ, ಮುಖ, ದವಡೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಯುತರು ಖ್ಯಾತ ಶಸ್ತ್ರಚಿಕಿತ್ಸಕರೂ ಹೌದು. 2000ನೇ ಇಸವಿಯಲ್ಲಿ ಭಾರತೀಯ ರಾಷ್ಟ್ರೀಯ ಪರೀಕ್ಷಾ ಮಂಡಲಿ (National Board of Examination, New Delhi) ಇದರಿಂದ ದಂತ ವೈದ್ಯಕೀಯ ಶಾಸ್ತ್ರದಲ್ಲಿ ಡಿ.ಎನ್.ಬಿ. ಪದವಿಯನ್ನು ಪಡೆದರು. ಆ ಬಳಿಕ 2001ರಲ್ಲಿ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಎಡಿನ್ ಬರ್ಗ್ ಇಂಗ್ಲೆಂಡ್ ಇದರ MOSRCSEd ಪದವಿಯನ್ನು ಉನ್ನತ ಶ್ರೇಣಿಯನ್ನು ಪಡೆದರು. ಆಸ್ಪತ್ರೆಯ ನಿರ್ವಹಣೆ (Hospital Management)ವಿಷಯದಲ್ಲಿ ಅಲಗಪ್ಪ ವಿಶ್ವವಿದ್ಯಾಲಯದಿಂದ ಎಂ.ಬಿ.ಎ. ಪದವಿಯನ್ನು 2012ರಲ್ಲಿ ಪಡೆದರು. ಇದರ ಜೊತೆಗೆ 2013ರಲ್ಲಿ Fierre Fauchard Acadamy ಇದರ ಫೆಲೋಶಿಪ್‌ ಕೂಡ ಪಡೆದರು.

1997 ಜುಲೈ 3ರಂದು ಹೊಸಂಗಡಿ ಹೃದಯಭಾಗದಲ್ಲಿ ‘ಸುರಕ್ಷಾ ದಂತ ಚಿಕಿತ್ಸಾಲಯ’ವನ್ನು ತೆರೆದು ದಂತ ವೈದ್ಯಕೀಯ ಸೇವೆಯನ್ನು ಆರಂಭಿಸಿದರು. ಕಳೆದ 24 ವರ್ಷಗಳಿಂದ ತಮ್ಮ ಧರ್ಮಪತ್ನಿ ಡಾ|| ರಾಜಶ್ರೀ ಮೋಹನ್ ಇವರ ಜೊತೆಗೂಡಿ ಗಡಿನಾಡಿನ ಜನರ ದಂತ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬದ್ಧತೆ, ಕಳಕಳಿ, ಕಾಳಜಿ ಮತ್ತು ವೃತ್ತಿ ಧರ್ಮವನ್ನು ಚಾಚೂ ತಪ್ಪದೆ ಪಾಲಿಸುತ್ತಾ ಕಾಲಕಾಲಕ್ಕೆ ದಂತ ಚಿಕಿತ್ಸಾಲಯವನ್ನು ವಿಸ್ತರಿಸುತ್ತಾ ಒಂದು ದಂತ ಕುರ್ಚಿಯಿಂದ ಆರಂಬಿಸಿದ ಸುರಕ್ಷಾ ದಂತ ಚಿಕಿತ್ಸಾಲಯ, ಇಂದು 10 ದಂತ ಕುರ್ಚಿಗಳು 2 ದಂತ ಕ್ಷ-ಕಿರಣ ಯಂತ್ರಗಳು ಮತ್ತು ಸಕಲ ಅತ್ಯಾಧುನಿಕ ದಂತ ಪರಿಹಾರಗಳೊಂದಿಗೆ ಸುರಕ್ಷಾ ದಂತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ದಂತ ಚಿಕಿತ್ಸೆಗೆ ಸುರಕ್ಷಿತ ತಾಣ ಎಂದು ಮನೆಮಾತಾಗಿದೆ. ಡಾ|| ಮುರಲೀ ಮೋಹನ್ ಇವರು 2000ನೇ ಇಸವಿಯ ಆಗಸ್ಟ್ 1 ರಂದು ಮಂಗಳೂರಿನ ಖ್ಯಾತ ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನಲ್ಲಿ ವೃತ್ತಿಪರ ಅಧ್ಯಾಪಕರಾಗಿ ಸೇವೆ ಆರಂಭಿಸಿದರು. 16 ವರ್ಷಗಳ ಕಾಲ ಸತತವಾಗಿ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕಲಿಕಾ ಅನುಭವ ಹೊಂದಿರುವ ಶ್ರೀಯುತರು ಬಾಯಿ, ಮುಖ, ದವಡೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ದಂತ ವೈದ್ಯಕೀಯ ವಿಜ್ಞಾನದಲ್ಲಿ ಸಾಕಷ್ಟು ಉಪನ್ಯಾಸಗಳನ್ನು ನೀಡಿರುವ ಇವರು, ದಂತ ವೈದ್ಯಕೀಯ ಕ್ಷೇತ್ರದ ಜ್ಞಾನಾರ್ಜನೆಗಾಗಿ ಶ್ರೀಲಂಕಾ, ನೇಪಾಳ, ಥೈಲಾಂಡ್, ಮಲೇಷ್ಯಾ, ಸಿಂಗಪೂರ್, ಚೈನಾ, ಈಜಿಪ್ಟ್, ದುಬೈ, ಶಾರ್ಜಾ, ಹಾಂಕಾಂಗ್, ಮಕಾವ್, ರಷ್ಯಾ, ಮಾಲ್ಫೀವ್ಸ್ ಮುಂತಾದ ದೇಶಗಳಲ್ಲಿ ಮತ್ತು ದೇಶದೆಲ್ಲೆಡೆ ನಡೆದ ದಂತ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ ಮಾಡಿರುತ್ತಾರೆ. ದಂತ ವೈದ್ಯಕೀಯ ಶಾಸ್ತ್ರದ ನಿಯತಕಾಲಿಕಗಳಲ್ಲಿ ನೂರಕ್ಕೂ ಹೆಚ್ಚು ದಂತ ಆರೋಗ್ಯದ ಬಗೆಗಿನ ಲೇಖನಗಳನ್ನು ಆಂಗ್ಲ ಭಾಷೆಯಲ್ಲಿ ಬರೆದು ಪ್ರಕಟಿಸುತ್ತಾರೆ, ಶೈಕ್ಷಣಿಕ ಸಾಧನೆಯ ಜೊತೆಗೆ ಸಾಕಷ್ಟು ಸಾಮಾಜಿಕ ಕಳಕಳಿ ಹೊಂದಿರುವ ಶ್ರೀಯುತರು 150ಕ್ಕೂ ಹೆಚ್ಚು ಉಚಿತ ದಂತ ಚಿಕಿತ್ಸಾ ಶಿಬಿರ ನಡೆಸಿ ಸಾವಿರಾರು ಮಂದಿಗೆ ಉಚಿತ ದಂತ ಚಿಕಿತ್ಸೆ ನೀಡುವಲ್ಲಿ ಮುಖ್ಯ ಭೂಮಿಕೆ ವಹಿಸಿರುತ್ತಾರೆ. 50ಕ್ಕೂ ಹೆಚ್ಚು ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ, 25ಕ್ಕೂ ಹೆಚ್ಚು ಕಣ್ಣು ತಪಾಸಣಾ ಶಿಬಿರ, 25 ಕ್ಕೂ ಹೆಚ್ಚು ವೈದ್ಯಕೀಯ ಶಿಬಿರ ನಡೆಸಿ ಜನರಿಗೆ ಉಚಿತ ವೈದ್ಯಕೀಯ ಸೌಲಭ್ಯ ತಲುಪುವಲ್ಲಿ ಬಹಳ ಮುತುವರ್ಜಿ ವಹಿಸಿರುತ್ತಾರೆ, ನೂರಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಯುನಿಟ್ ರಕ್ತ ಸಂಗ್ರಹಿಸಿ ಮಂಗಳೂರಿನ ಸರಕಾರಿ ಬ್ಲಡ್ ಬ್ಯಾಂಕ್‍ಗಳಿಗೆ ರಕ್ತ ದೊರಕುವಂತೆ ಮಾಡಿ ರೋಗಿಗಳಿಗೆ ರಕ್ತದ ಕೊರತೆ ಆಗದಂತೆ ನೋಡಿಕೊಂಡಿರುತ್ತಾರೆ.

ರಕ್ತದಾನದ ಬಗ್ಗೆ ‘ರಕ್ತದಾನ ಜೀವದಾನ’ ಎಂಬ ಪುಸ್ತಕ ಬರೆದು 30000 ಪ್ರತಿಗಳನ್ನು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಾದ್ಯಂತ ಉಚಿತವಾಗಿ ಹಂಚಿ, ರಕ್ತದಾನದ ಬಗ್ಗೆ ಬಹುದೊಡ್ಡ ಜಾಗೃತಿಯನ್ನು ಮೂಡಿಸಿರುತ್ತಾರೆ. ಸ್ವತ: ಸಾಹಿತಿಯಾಗಿರುವ ಶ್ರೀಯುತರೂ ‘ಸುರಕ್ಷಾ ದಂತ ಆರೋಗ್ಯ’ ಮಾರ್ಗದರ್ಶಿ ಎಂಬ ದಂತ ಆರೋಗ್ಯದ ಬಗೆಗಿನ ಪುಸ್ತಕ ಮತ್ತು ಕಚಗುಳಿ ಎಂಬ ದಂತ ಹನಿಗವನದ ಪುಸ್ತಕವನ್ನು ಬರೆದು ಪ್ರಕಟಿಸಿರುತ್ತಾರೆ. ರಕ್ತದಾನ ಜೀವದಾನ ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ, ಕಚಗುಳಿ ದಂತ ಹನಿಗವನಗಳು, ಚಿತ್ರಾನ್ನ 32 ನೈಜ ದಂತಕತೆಗಳು, ಸಂಜೀವಿನಿ ಆರೋಗ್ಯ ಮಾರ್ಗದರ್ಶಿ, ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಭಾಗ-2, ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ, ಸಂಗಾತಿ ಜ್ವರ ಸಂಹಿತೆ, ಧನ್ವಂತರಿ ವೈದ್ಯಕೀಯ ಲೇಖನಗಳು, ಸುಮುಖ ದಂತ ಆರೋಗ್ಯ ಮಾರ್ಗದರ್ಶಿ ಮತ್ತು ಸಂಕಲ್ಪ-2020 ಕೋವಿಡ್ -19 ಆರೋಗ್ಯ ಮಾರ್ಗದರ್ಶಿ ಎಂಬ 11 ಪುಸ್ತಕಗಳನ್ನು ಈವರೆಗೆ ಬರೆದು ಪ್ರಕಟಿಸಿ ವೈದ್ಯಕೀಯ ಸಾಹಿತಿಯೆಂದು ರಾಜ್ಯಾದಂತ ಗುರುತಿಸಿಕೊಂಡಿರುತ್ತಾರೆ. ಇವರ 4ನೇ ಕೃತಿ ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಇದರ 2017ರ ಸಾಲಿನ ಪ್ರತಿಷ್ಠಿತ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಸಾಹಿತ್ಯ ಪ್ರಶಸ್ತಿ ದೊರಕಿದೆ.

ಇದರ 6ನೇ ಕೃತಿ ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಭಾಗ-2 ಪುಸ್ತಕಕ್ಕೆ 2018ನೇ ಸಾಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರಕಾರ ಇದರ ಪ್ರತಿಷ್ಠಿತ ವೈದ್ಯಕೀಯ ಸಾಹಿತ್ಯ ಕೃತಿ ಪ್ರಶಸ್ತಿ ಸಿಕ್ಕಿದೆ. ಇವರ 7ನೇ ಕೃತಿ ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಇದರ 2019ನೇ ಸಾಲಿನ ಉತ್ತಮ ವೈದ್ಯಕೀಯ ಸಾಹಿತ್ಯ ಕೃತಿ ಪ್ರಶಸ್ತಿ ಸಿಕ್ಕಿದೆ. ಹೀಗೆ, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಎಂಬ ಮೂರು ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಗಳ ಪ್ರಶಸ್ತಿ ಗಿಟ್ಟಿಸಿದ ಕೆಲವೇ ಕೆಲವು ವೈದ್ಯ ಸಾಹಿತಿಗಳ ಸಾಲಿಗೆ ಡಾ|| ಮುರಲೀ ಮೋಹನ್ ಚೂಂತಾರು ಸೇರಿರುತ್ತಾರೆ. ಇದರ ಜೊತೆಗೆ ಸಾವಿರಾರು ವೈದ್ಯಕೀಯ ಲೇಖನಗಳನ್ನು ಸರಳವಾಗಿ ಬರೆದು ದೈನಿಕ ಪತ್ರಿಕೆಗಳಾದ ಹೊಸದಿಗಂತ, ಪ್ರಜಾವಾಣಿ, ವಿಜಯವಾಣಿ, ಕನ್ನಡ ಪ್ರಭ, ಉದಯವಾಣಿ, ವಾರ್ತಾಭಾರತಿ, ಕಾರವಲ್, ಉತ್ತರಪ್ರದೇಶ, ಜಯಕಿರಣ ಮತ್ತು ಮಾಸಿಕಗಳಾದ ‘ಆರೋಗ್ಯ’, ‘ವೈದ್ಯಲೋಕ’, ಸುಧಾ, ತರಂಗ, ಸಂಜೀವಿನಿ ಮುಂತಾದ ಪತ್ರಿಕೆಗಳಲ್ಲಿ ಬರೆದು ಜನರಲ್ಲಿ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ, ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಬಹಳ ಕಷ್ಟವಾದ ವೈದ್ಯಕೀಯ ರೋಗಗಳನ್ನು ತುಂಬಾ ಸರಳವಾದ ಭಾಷೆಯಲ್ಲಿ ಬರೆಯುವ ಚಾಕಚಕ್ಯತೆಯನ್ನು ಶ್ರೀಯುತರು ಹೊಂದಿರುತ್ತಾರೆ. ಈವರೆಗೂ ಸುಮಾರು 5000 ಆರೋಗ್ಯ ಜಾಗೃತಿ ಲೇಖನಗಳನ್ನು ಬರೆದು ರಾಜ್ಯಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದಾರೆ.

ವೈದ್ಯಕೀಯ, ಶೈಕ್ಷಣಿಕ ಸೇವೆಯ ಜೊತೆಗೆ ಸಾಮಾಜಿಕ ಬದ್ಧತೆ ಮತ್ತು ಕಳಕಳಿಗಳಿಂದ ದುಡಿಯುವ ಶ್ರೀಯುತರು, ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಭಾರತೀಯ ದಂತ ವೈದ್ಯಕೀಯ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿರುತ್ತಾರೆ. ಭಾರತೀಯ ರೆಡ್‍ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆ ಇದರ ಸಭಾಪತಿಯಾಗಿಯೂ ಕೆಲಸ ನಿರ್ವಹಿಸಿರುತ್ತಾರೆ. ನಿಟ್ಟೆ ವಿಶ್ವವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಇವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ಮೆಚ್ಚಿ ಘನವೆತ್ತ ಕರ್ನಾಟಕ ಸರ್ಕಾರ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಮಾದೇಷ್ಟರಾಗಿ 2015ನೇ ಜನವರಿ 6ರಂದು ನೇಮಿಸಿದೆ. 5 ವರ್ಷಗಳ ಕಾಲಾವಧಿ ಇರುವ ಈ ಹುದ್ದೆಯಲ್ಲಿ ಅಧಿಕಾರ ವಹಿಸಿದ ಬಳಿಕ ಕ್ರಾಂತಿಕಾರಕ ಬದಲಾವಣೆ ತಂದು, ಗೃಹರಕ್ಷಕ ದಳಕ್ಕೆ ಹೊಸ ಚೈತನ್ಯವನ್ನು ತುಂಬಿರುತ್ತಾರೆ. 2020ರಲ್ಲಿ 2ನೇ ಬಾರಿಗೆ ಗೃಹರಕ್ಷಕ ದಳದ ಸಮಾದೇಷ್ಟರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ದಳದ ಚೀಫ್ ವಾರ್ಡನ್ ಆಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.

ತಮ್ಮ ತಾಯಿ ದಿವಂಗತ ಸರೋಜಿನಿ ಭಟ್ ಇವರ ಅಕಾಲಿಕ ಮರಣದ ನಂತರ ಅವರ ನೆನಪಿನಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಚುಕ್ಕಾಣಿಯನ್ನು ತಾವೇ ಹಿಡಿದು ಮುನ್ನಡೆಸುತ್ತಿದ್ದಾರೆ. ಆಶ್ರಯ, ಆಸರೆ, ಆರೋಗ್ಯ ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುವ ಈ ಸಂಸ್ಥೆ ಬಡವರಿಗೆ ಉಚಿತ ವಸತಿ, ಉದ್ಯೋಗ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸೌಲಭ್ಯ ನೀಡುವಲ್ಲಿ ಕಾರ್ಯತತ್ಪರವಾಗಿದೆ. ಈ ಪ್ರತಿಷ್ಠಾನದ ಮೂಲಕ ಸುಮಾರು 20 ಕ್ಕೂ ಹೆಚ್ಚು ಸರಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಸುಮಾರು 5000 ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ನೀಡಿರುತ್ತಾರೆ. ಈಗಾಗಲೇ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಡಾ|| ಮುರಲೀಯವರ ನೇತೃತ್ವದಲ್ಲಿ ಮತ್ತಷ್ಟು ಬೆಳಗುವುದರಲ್ಲಿ ಎರಡು ಮಾತಿಲ್ಲ. ಇವೆಲ್ಲದರ ಜತೆಗೆ ದೈವಭಕ್ತರಾದ ಶ್ರೀಯುತರು ಸಾಮಾಜಿಕ, ಧಾರ್ಮಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ|| ಮುರಲೀ ರವರು ಇಂದಿನ ಯುವಜನತೆಗೆ ಮಾದರಿ ವ್ಯಕ್ತಿತ್ವ ಎಂದರೂ ತಪ್ಪಲ್ಲ. ವಿವಾಹಿತರಾಗಿರುವ ಶ್ರೀಯುತರು ಪತ್ನಿ ಡಾ|| ರಾಜಶ್ರೀ ಮೋಹನ್, ಖ್ಯಾತ ದಂತ ವೈದ್ಯರು, ಮಗ ಸಮರ್ಥ ಮತ್ತು ಮಗಳು ಸಿರಿ ಮತ್ತು ತಂದೆ ಶ್ರೀ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಚೂಂತಾರು ಇವರೊಂದಿಗೆ ಮಂಗಳೂರಿನ ಬಿಜೈಯಲ್ಲಿ ತುಂಬು ಸಂಸಾರ ನಡೆಸುತ್ತಿದ್ದಾರೆ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬಾಲಿವುಡ್ ಸಾರ್ವಕಾಲಿಕ ಗಾಯಕ ಪಂಕಜ್ ಕುಮಾರ್ ಮಲ್ಲಿಕ್

Upayuktha

ಯಕ್ಷಗಾನ ಲೋಕದ ಸವ್ಯಸಾಚಿ- ಹೊಸ್ತೋಟ ಮಂಜುನಾಥ ಭಾಗವತರು

Upayuktha

ನುಡಿ ನಮನ: ಮೂರು ತಲೆಮಾರುಗಳ ಬೆರಗು ಸರೋಜ್ ಖಾನ್- ನೂಪುರಕ್ಕೆ ನೃತ್ಯ ಕಲಿಸಿದ ಚೇತನ

Upayuktha

Leave a Comment