ಸಾಧಕರಿಗೆ ನಮನ

ತಮಿಳುನಾಡಿನ ಸಾಮಾಜಿಕ ಕ್ರಾಂತಿಯ ಕಿಡಿ ಪೆರಿಯಾರ್ ರಾಮಸ್ವಾಮಿ

(ಚಿತ್ರ ಕೃಪೆ: ಏಷ್ಯನ್ ಏಜ್.ಕಾಂ)

ತಮಿಳುನಾಡಿನ ಇತಿಹಾಸದಲ್ಲಿ ಸಾಮಾಜಿಕ ಚಳವಳಿಗಳ ಮೂಲಕ ಜನಮಾನಸದಲ್ಲಿ ನೆಲೆಯಾದವರು ಪೆರಿಯಾರ್ ರಾಮಸ್ವಾಮಿ. ತಮಿಳಿನಲ್ಲಿ ಪೆರಿಯಾರ್ ಎಂದರೆ ದೊಡ್ಡ ಮನುಷ್ಯ ಎಂದರ್ಥ. ಹೆಸರಿನಲ್ಲಿ ಮಾತ್ರವಲ್ಲ ತನ್ನ ಕೆಲಸಗಳ ಮೂಲಕವೂ ದೊಡ್ಡ ಮನುಷ್ಯರಾದವರು ಪೆರಿಯಾರ್ ರಾಮಸ್ವಾಮಿ. ದೇಶದಲ್ಲಿದ್ದ ಜಾತಿ ವ್ಯವಸ್ಥೆ-ಅಸ್ಪೃಶ್ಯತೆ-ಸಾಮಾಜಿಕ ಅಸಮಾನತೆಯ ವಿರುದ್ಧ ನಿರಂತರ ಹೋರಾಟ ನಡೆಸಿದ ಇವರು ದ್ರಾವಿಡ ಮುನ್ನೇತ್ರ ಕಳಗಂನ (ಡಿಎಂಕೆ) ಸ್ಥಾಪನೆಗೂ ಪ್ರೇರಣೆಯಾಗಿದ್ದರು.

ತಮಿಳುನಾಡಿನ ಕೊಯಮತ್ತೂರಿನ ಈರೋಡಿನಲ್ಲಿ 1879ರಲ್ಲಿ ಜನಿಸಿದ ಅವರ ಮೂಲ ಹೆಸರು- ಈರೋಡ್ ವೆಂಕಟಪ್ಪ ರಾಮಸ್ವಾಮಿ. ಅವರು ಪ್ರಬಲ ಬಲಿಜ ಜಾತಿಗೆ ಸೇರಿದವರು. ಮಾತೃಭಾಷೆ ಕನ್ನಡವಾಗಿದ್ದ ರಾಮಸ್ವಾಮಿ 5 ವರ್ಷ ಮಾತ್ರ ಶಾಲೆಗೆ ಹೋಗುತ್ತಾರೆ. ನಂತರ ತಂದೆಯ ವ್ಯವಹಾರಕ್ಕೆ ಜೊತೆಯಾಗುವ ಇವರಿಗೆ 19 ವರ್ಷಕ್ಕೇ ಮದುವೆಯಾಗುತ್ತದೆ. ಧನಿಕ ತಂದೆ ಮನೆಯಲ್ಲೇ ಪುರಾಣ ಪ್ರವಚನಗಳನ್ನು ಏರ್ಪಡಿಸುತ್ತಿದ್ದರು. ಆಗಲೇ ವೈಚಾರಿಕ ಮನೋಭಾವ ಬೆಳೆಸಿಕೊಂಡಿದ್ದ ಬಾಲಕ ರಾಮಸ್ವಾಮಿ ತನಗೆ ಸರಿ ಅನಿಸದ್ದನ್ನು ಪ್ರವಚನಕಾರರಿಗೆ ನೇರವಾಗಿ ಪ್ರಶ್ನಿಸುತ್ತಿದ್ದರು.

ಒಮ್ಮೆ ತಂದೆಯ ಜೊತೆ ವ್ಯವಹಾರದ ವಿಷಯವಾಗಿ ಜಗಳವಾಡುವ ರಾಮಸ್ವಾಮಿ ಮನೆಯಿಂದ ಹೊರ ಹಾಕಲ್ಪಡುತ್ತಾರೆ. ತಿರುಗುತ್ತಾ ಸೀದಾ ಕಾಶಿ ವಿಶ್ವನಾಥನ ಸನ್ನಿಧಿ ವಾರಣಾಸಿಗೆ ಹೋಗುವ ರಾಮಸ್ವಾಮಿಗೆ ಅಲ್ಲಿನ ಜನ-ಜೀವನ ಜುಗುಪ್ಸೆ ತರಿಸುತ್ತದೆ. ಗಲೀಜು ನಗರ-ನೀರಿನಲ್ಲಿ ತೇಲುತ್ತಿದ್ದ ಅರೆ ಬೆಂದ ಹೆಣಗಳು ಇವರಲ್ಲಿ ಬೇಸರ ತರಿಸುತ್ತದೆ. ಇದೇ ಸಂದರ್ಭದಲ್ಲಿ ನಡೆದ ಒಂದು ಘಟನೆ ರಾಮಸ್ವಾಮಿ ಜೀವನದ ಬದಲಾವಣೆಗೆ ಕಾರಣವಾಗುತ್ತದೆ. ಆಗ ಕಾಶಿಯ ಛತ್ರಗಳಲ್ಲಿ ಬ್ರಾಹ್ಮಣರಿಗೆ ಮಾತ್ರ ಊಟ ನೀಡಲಾಗುತ್ತಿತ್ತು. ಒಮ್ಮೆ ಹಸಿವು ತಡೆಯಲಾಗದೆ ರಾಮಸ್ವಾಮಿ ಜನಿವಾರ ಧರಿಸಿ ಛತ್ರಕ್ಕೆ ನುಗ್ಗುತ್ತಾರೆ. ಆದರೆ ಮೀಸೆ ಇದ್ದುದರಿಂದ ಬ್ರಾಹ್ಮಣರಲ್ಲವೆಂದು ಗುರುತಿಸಿದ ಕಾವಲುಗಾರರು ಊಟ ನೀಡದೆ ಹೊರ ಹಾಕುತ್ತಾರೆ. ಹೊರ ಬಂದ ರಾಮಸ್ವಾಮಿಗೆ ಆ ಛತ್ರ ನಿರ್ಮಿಸಲು ಧನ ಸಹಾಯ ನೀಡಿದ್ದು ತಮಿಳುನಾಡಿನ ದ್ರಾವಿಡ ಜನಾಂಗದ ಶ್ರೀಮಂತ ಎಂದು ತಿಳಿಯುತ್ತದೆ. ತಮ್ಮದೇ ಜನಾಂಗದ ವ್ಯಕ್ತಿ ಕಟ್ಟಿಸಿದ ಛತ್ರದಲ್ಲಿ ತಮಗಾದ ಅವಮಾನದಿಂದ ಬೇಸರಗೊಂಡ ರಾಮಸ್ವಾಮಿ ಹಿಂದೂ ಧರ್ಮದ ಪ್ರಸಕ್ತ ಸ್ಥಿತಿಯ ಬಗ್ಗೆ ಚಿಂತಿಸಿದರು. ಆಸ್ತಿಕರಾಗಿದ್ದ ರಾಮಸ್ವಾಮಿ ನಾಸ್ತಿಕರಾಗಿ ಬದಲಾಗುತ್ತಾರೆ.

ಮತ್ತೆ ಮನೆಗೆ ಹಿಂದಿರುಗಿದ ರಾಮಸ್ವಾಮಿ ತಂದೆಯ ವ್ಯಾಪಾರವನ್ನು ಮುಂದುವರಿಸುತ್ತಾರೆ, ಜೊತೆಗೆ ಸಮಾಜ ಸೇವೆಗೂ ಇಳಿಯುತ್ತಾರೆ. ಪ್ಲೇಗ್ ರೋಗ ಈರೋಡಿಗಪ್ಪಳಿಸಿದ ಸಂದರ್ಭ ತಾವೇ ಮುಂದೆ ನಿಂತು ಸಾವಿರಾರು ಅನಾಥ ಶವಗಳ ಶವ ಸಂಸ್ಕಾರ ಮಾಡಿದರು. ಬಾಲ್ಯ ವಿವಾಹವಾಗಿದ್ದ ತಂಗಿಯ ಮಗಳಿಗೆ ಕುಟುಂಬದ ಪ್ರಬಲ ವಿರೋಧದ ನಡುವೆ ಮರು ಮದುವೆ ಮಾಡಿದರು. ಈರೋಡಿನ ನಗರ ಸಭೆಯ ಅಧ್ಯಕ್ಷರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ.

ಸಿ‌.ರಾಜಗೋಪಾಲಾಚಾರ್ಯರ ಸಂಪರ್ಕಕ್ಕೆ ಬರುವ ರಾಮಸ್ವಾಮಿ ನಗರಸಭೆಯ ಅಧ್ಯಕ್ಷ ಸ್ಥಾನ ತ್ಯಜಿಸಿ ಕಾಂಗ್ರೆಸ್ ಸೇರುತ್ತಾರೆ. ಗಾಂಧೀ ತತ್ವ ವನ್ನು ಅನುಸರಿಸಿ ತಾನಿದ್ದ 29 ಸಂಘ-ಸಂಸ್ಥೆಗಳ ಸ್ಥಾನಮಾನ ತ್ಯಜಿಸಿ ಅಸಹಕಾರ ಚಳವಳಿಯಲ್ಲಿ ಭಾಗಿಯಾದರು. ಕಾಂಗ್ರೆಸ್ ನ ತಮಿಳುನಾಡು ಘಟಕದ ಅಧ್ಯಕ್ಷರೂ ಆಗುತ್ತಾರೆ.

1925 ರಲ್ಲಿ ಕಂಚಿ ಕಾಂಗ್ರೆಸ್ ಸಮಾವೇಶದಲ್ಲಿ ದೇವಸ್ಥಾನ ಪ್ರವೇಶಿಸಿಲು ಅಸ್ಪೃಶ್ಯರಿಗೆ ಅವಕಾಶ ನೀಡಬೇಕೆಂದು ವಿಚಾರ ಮಂಡಿಸುತ್ತಾರೆ. ಆದರೆ ಕಾಂಗ್ರೆಸ್ ನ ಬ್ರಾಹ್ಮಣ ನಾಯಕರಿಂದ ವ್ಯಕ್ತವಾದ ವಿರೋಧದ ಕಾರಣ ಕ್ರೋಧಗೊಂಡ ರಾಮಸ್ವಾಮಿ ಕಾಂಗ್ರೆಸ್ಸನ್ನೇ ತ್ಯಜಿಸುತ್ತಾರೆ.

ಸಾಮಾಜಿಕ ಆಂದೋಲನಕ್ಕೆ ಪ್ರಬಲವಾಗಿ ಧುಮುಕುವ ರಾಮಸ್ವಾಮಿ “ಆತ್ಮ ಗೌರವ ಚಳವಳಿ” ಹುಟ್ಟು ಹಾಕಿ ತಮಿಳುನಾಡಿನ ಹಲವೆಡೆ ವೈದಿಕ ಸಂಪ್ರದಾಯದ ವಿರುದ್ಧ ಹೋರಾಟ ಮಾಡುತ್ತಾರೆ. ಪರಸ್ಪರ ಹಾರ ಬದಲಾಯಿಸುವ ಸರಳ ವಿವಾಹವನ್ನು ಪ್ರೋತ್ಸಾಹಿಸಿ ವೈದಿಕ ವಿವಾಹ ಪದ್ಧತಿಯನ್ನು ವಿರೋಧಿಸುತ್ತಾರೆ. ಅಂತರ್ಜಾತಿಯ ವಿವಾಹ, ವಿಧವಾ ವಿವಾಹ ಪರ ಆಂದೋಲನ ಮಾಡುತ್ತಾರೆ.ವಿದೇಶಗಳಿಗೆ ಹೋಗಿ ಅಲ್ಲಿನ ಸಾಮಾಜಿಕ ಸ್ಥಿತಿ ಅಧ್ಯಯನ ಮಾಡುತ್ತಾರೆ.ತಮಿಳುನಾಡು ಸರ್ಕಾರದ ಹಿಂದಿ ಕಡ್ಡಾಯ ಹೇರಿಕೆಯ ನಿರ್ಧಾರದ ವಿರುದ್ಧ ಹೋರಾಟ ಮಾಡುತ್ತಾರೆ. ಬಹುದೊಡ್ಡ ಸಾಮಾಜಿಕ ಕ್ರಾಂತಿ ಮಾಡಿ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಜಾತಿ ಪದ್ಧತಿಯ ವಿರುದ್ಧ ತೀವ್ರ ಹೋರಾಟ ನಡೆಸುತ್ತಾರೆ. ದೇವರು-ಧರ್ಮಗ್ರಂಥಗಳನ್ನು ಚರಂಡಿಗೆ ಎಸೆಯುತ್ತಾರೆ.

1939ರಲ್ಲಿ ದ್ರಾವಿಡ ನಾಡು ಸಮ್ಮೇಳನ ಸಂಘಟಿಸುವ ರಾಮಸ್ವಾಮಿ ತಮಿಳು-ತೆಲುಗು-ಕನ್ನಡ-ಮಲಯಾಳಿ ಭಾಷೆಗಳ ಜನರನ್ನು ಸೇರಿಸಿ ದ್ರಾವಿಡ ರಾಜ್ಯ ನಿರ್ಮಾಣದ ಆಶಯದೊಂದಿಗೆ ಹೋರಾಟ ನಡೆಸುತ್ತಾರೆ. 1916ರಲ್ಲಿ ಸ್ಥಾಪನೆಗೊಂಡಿದ್ದ ಜಸ್ಟಿಸ್ ವಾಯ್ಸ್ ನ್ನು 1944 ರವರೆಗೆ ಮುನ್ನಡೆಸುತ್ತಾರೆ. 1944ರಲ್ಲಿ ಇದು ದ್ರಾವಿಡ ಕಳಗಂ ಎಂದು ಬದಲಾಯಿತು. ನಗರವಾಸಿಗಳು ಮತ್ತು ಹಳ್ಳಿಗರು ಇವರ ಚಳವಳಿಗಳಿಂದ ಪ್ರೇರಿತಗೊಂಡರು. ರಾಮಸ್ವಾಮಿ ಬಹುದೊಡ್ಡ ನಾಯಕನಾಗಿ ಬಿಂಬಿತರಾಗುತ್ತಾರೆ. 1957 ರಲ್ಲಿ ತಮಿಳುನಾಡಿಗೆ ಸ್ವತಂತ್ರ ಸ್ಥಾನಮಾನ ನೀಡಬೇಕೆಂದು ಹೋರಾಟ ನಡೆಸುವ ಇವರು ತಮಿಳರಿಗೆ ಸಂವಿಧಾನ ಸುಡಲು ಪ್ರೇರೇಪಿಸಿದರೆಂದು 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. 1949ರಲ್ಲಿ ಇವರ ಶಿಷ್ಯ ಅಣ್ಣಾದೊರೈ ದ್ರಾವಿಡ ಮುನ್ನೇತ್ರ ಕಳಗಂ( ಡಿ.ಎಂ.ಕೆ) ಸ್ಥಾಪಿಸುತ್ತಾರೆ. ಆದರೆ ರಾಮಸ್ವಾಮಿ ಪಕ್ಷದಿಂದ ಹೊರತಾಗಿ ಚಳವಳಿಗಳನ್ನು ಸಂಘಟಿಸುತ್ತಾರೆ.

ತಾನು ಮೇಲ್ಜಾತಿಯವನಾದರೂ ಹಿಂದುಳಿದವರ ಪರವಾಗಿ ಹೋರಾಟ ನಡೆಸುತ್ತಲೇ ಬಂದ ಪೆರಿಯಾರ್ ರಾಮಸ್ವಾಮಿಯವರನ್ನು ಏಷ್ಯಾದ ಸಾಕ್ರೆಟಿಸ್-ಸಾಮಾಜಿಕ ಕ್ರಾಂತಿಯ ಹರಿಕಾರ ಎನ್ನಲಾಗುತ್ತದೆ. ಸುಮಾರು 55 ವರ್ಷಗಳಷ್ಟು ಕಾಲ ವೈಧಿಕಶಾಹಿಯ ವಿರುದ್ಧ, ಸಂಪ್ರದಾಯವಾದಿಗಳ ಹೋರಾಟ ಮಾಡಿದರು ಪೆರಿಯಾರ್ ರಾಮಸ್ವಾಮಿ.

ಇವರ ಸಾಮಾಜಿಕ ಹೋರಾಟವನ್ನು ಗೌರವಿಸಿದ ಯುನೆಸ್ಕೋ ಈ ರೀತಿ ರಾಮಸ್ವಾಮಿಯವರನ್ನು ಬಣ್ಣಿಸುತ್ತದೆ, “ಇವರು ನವಯುಗದ ಪ್ರವಾದಿ-ದಕ್ಷಿಣ ಏಷ್ಯಾದಲ್ಲಿನ ಸಾಕ್ರೆಟಿಸ್, ಕ್ರಾಂತಿಕಾರಕ ಬದಲಾವಣೆಗಳ ಪಿತಾಮಹರಾದ ಈತ ಎಲ್ಲಾ ರೀತಿಯ ಅಜ್ಞಾನ-ಮೂಢನಂಬಿಕೆ-ಕಟ್ಟುಪಾಡು, ಮನುಷ್ಯ-ಮನುಷ್ಯನ ನಡುವಿನ ಬೇಧಗಳಿಗೆ ಕಡು ವಿರೋಧಿಯಾಗಿದ್ದಾರೆ”.

ತನ್ನ ಜೀವಿತಾವಧಿಯಲ್ಲಿ ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಿದ ಇವರು ತಮಿಳರ ಸ್ವಾಭಿಮಾನದ ಸಂಕೇತವಾದರು. ಕೆಳವರ್ಗದ ಜನರ ತುಳಿತದ ವಿರುದ್ಧದ ಇವರ ಬಂಡಾಯ ಮೇಲ್ವರ್ಗದವರ ಕೆಂಗಣ್ಣಿಗೆ ತುತ್ತಾದರೂ ಹಿಂದಡಿಯಿಡಲಿಲ್ಲ. ದೊಡ್ಡ ಕೆಲಸಗಳ ಮೂಲಕ ಪೆರಿಯಾರ್ ಆದ ರಾಮಸ್ವಾಮಿ ಇಂದಿಗೂ ತಮಿಳರ ಪ್ರಾತಃಸ್ಮರಣೀಯರು.

-ತೇಜಸ್ವಿ ಕೆ, ಪೈಲಾರು, ಸುಳ್ಯ

ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಭಾರತದ ಹಾಕಿ ಸೆನ್ಸೇಶನ್‌ ಸಂದೀಪ್ ಸಿಂಗ್ ಭಿಂದರ್: ಸೋಲನ್ನು ಹಿಮ್ಮೆಟ್ಟಿಸಿದ ಸ್ಪೂರ್ತಿ ಸೆಲೆ

Upayuktha

ಇಂದಿನ ಐಕಾನ್- ಬೆಂಕಿಯಿಂದ ಎದ್ದು ಬಂದ ಕಪ್ಪು ವಜ್ರ ಒಪ್ರಾ ವಿನ್‌ಫ್ರೆ

Upayuktha

ಸವಿ ನೆನಪು: ಹಿರಿಯ ನಟ ಅದ್ವಿತೀಯ ಕಲಾವಿದ, ‘ಚಾಮಯ್ಯ ಮೇಷ್ಟ್ರು’ ಕೆಎಸ್ ಅಶ್ವಥ್ ಜನ್ಮದಿನ ಇಂದು

Upayuktha