ಇತರ ಕ್ರೀಡೆಗಳು ಸಾಧಕರಿಗೆ ನಮನ

ಯಶಸ್ಸಿನೆಡೆಗೆ ಓಟ: ಗೋವಿಂದನ್ ಲಕ್ಷ್ಮಣನ್

“ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ವಿಫಲತೆಯ ನಿವಾರಣೆಗಿರುವ ಅತ್ಯುತ್ತಮ ಔಷಧ. ಇವು ನಮ್ಮನ್ನು ಯಶಸ್ವಿ ವ್ಯಕ್ತಿಯಾಗಿ ರೂಪಿಸುತ್ತವೆ” ಇವು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನುಡಿಗಳು. ಈ ಮಾತುಗಳನ್ನೇ ಮಾದರಿಯಾಗಿಸಿಕೊಂಡು ದೂರ ವೇಗದ ಓಟಗಾರನಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಅಥ್ಲೆಟ್ ಗೋವಿಂದನ್ ಲಕ್ಷ್ಮಣನ್. ತನ್ನ ಸಾಧನೆಯಿಂದ ದೇಶವೇ ಹೆಮ್ಮೆ ಪಡುವಂತೆ ಮಾಡಿದ ಲಕ್ಷ್ಮಣನ್ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 5 ಸಾವಿರ ಮತ್ತು 10 ಸಾವಿರ ಮೀಟರ್ ಎರಡೂ ವಿಭಾಗದಲ್ಲಿ ಚಿನ್ನ ಗೆದ್ದ ಪ್ರಥಮ ಭಾರತೀಯ.

Advertisement
Advertisement

ತಮಿಳುನಾಡಿನ ಪುದುಕೋಟ್ಟೈ ಸಮೀಪದ ಕವಿನಾಡಿನಲ್ಲಿ 1990 ರಲ್ಲಿ ಜನಿಸಿದ ಲಕ್ಷ್ಮಣನ್ ತಂದೆ ಸಾಮಾನ್ಯ ರೈತನಾದರೆ ತಾಯಿ ದಿನಗೂಲಿ ನೌಕರಿ ಮಾಡಿ ಜೀವನ ಸಾಗುತ್ತಿತ್ತು. ಆದರೆ 6 ಹರೆಯದಲ್ಲೇ ಅಪಘಾತದಲ್ಲಿ ತಂದೆಯ ಆಕಸ್ಮಿಕ ಸಾವು ಕುಟುಂಬವನ್ನು ಕಂಗಾಲಾಗಿಸುತ್ತದೆ. ಆದರೆ ಈ ಘಟನೆಯೇ ಲಕ್ಷ್ಮಣನ್ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಏನನ್ನಾದರೂ ಸಾಧಿಸಬೇಕೆಂಬ ಬಯಕೆ ಲಕ್ಷ್ಮಣನ್ ಹೈಸ್ಕೂಲ್ ನಲ್ಲಿ ಅಥ್ಲೆಟಿಕ್ಸ್ ರಂಗಕ್ಕಿಳಿಯಲು ಪ್ರೇರೇಪಿಸುತ್ತದೆ.

ಮಗನ ಕ್ರೀಡಾ ಜೀವನದ ಪ್ರತಿ ಹಂತದಲ್ಲಿ ಪ್ರೋತ್ಸಾಹಿಸಿದ ತಾಯಿ ನಿಜವಾದ ಗಾಡ್ ಪಾದರ್ ಆಗುತ್ತಾರೆ. 3 ಮಕ್ಕಳ ಸಾಕುವ ಜವಾಬ್ದಾರಿ ಹೊತ್ತ ಲಕ್ಷ್ಮಣನ್ ತಾಯಿ ದಿನಗೂಲಿ ಮಾಡಿ ಸಂಪಾದಿಸಿ ಕುಟುಂಬ ಹೊರೆಯುವುದರ ಜೊತೆಗೆ ಮಗನ ಕ್ರೀಡಾ ಪಯಣ ನಿರಾತಂಕವಾಗಿ ಸಾಗಲು ಬೆನ್ನೆಲುಬಾದರು.

16 ರ ಹರೆಯದಲ್ಲಿ ಕ್ರೀಡೆಯಲ್ಲಿ ಮುಂದುವರಿಯಲು ನಿರ್ಧರಿಸಿದ ಲಕ್ಷ್ಮಣನ್ ಪುದುಕೋಟೆಯಲ್ಲಿ ಯೂತ್ ಸ್ಫೋರ್ಟ್ಸ್ ಕ್ಲಬ್ ನಡೆಸುತ್ತಿದ್ದ ಲೋಗನಾಥನ್ ರನ್ನು ಭೇಟಿಯಾಗುತ್ತಾರೆ. ಲೋಗನಾಥನ್ ಲಕ್ಷ್ಮಣನ್ ಕೋಚ್ ಆಗುತ್ತಾರೆ. ಪುದುಕೋಟೆಯ ರಸ್ತೆಗಳಲ್ಲಿ ಬೆಳ್ಳಂಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ಲೋಗನಾಥನ್ ಮಗಳು ಅಥ್ಲೆಟ್ ಸೂರ್ಯ ಜೊತೆ ಬರಿಗಾಲಲ್ಲಿ ಓಡುತ್ತಿದ್ದ ಲಕ್ಷ್ಮಣನ್ ದೈಹಿಕ ಕ್ಷಮತೆ ಹೆಚ್ಚುತ್ತಲೇ ಹೋಯಿತು.

ಜೀವನ ಇರುವುದು ತನ್ನನ್ನು ರೂಪಿಸಿಕೊಳ್ಳಲಿಕ್ಕೆ ಎಂದು ಭಾವಿಸಿ ತನಗೆ ಸಿಕ್ಕಿದ ಪ್ರತಿ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಲಕ್ಷ್ಮಣನ್ ಭಾಗವಹಿಸಿದ ಪ್ರತಿ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಳ್ಳುತ್ತಾ ಸಾಗಿದರು. 5 ಸಾವಿರ, 10 ಸಾವಿರ, ಹಾಫ್ ಮ್ಯಾರಥಾನ್ ಹೀಗೆ ದೂರ ವೇಗದ ಓಟದಲ್ಲಿ ಅಧಿಪತ್ಯ ಸಾಧಿಸಿದರು.

2015ರಲ್ಲಿ ಚೈನಾದಲ್ಲಿ ನಡೆದ ಕಾಂಟಿನೆಂಟಲ್ ಕ್ರೀಡಾಕೂಟದಲ್ಲಿ 5000 ಮೀ ಓಟದಲ್ಲಿ 13:35:69 ವೈಯಕ್ತಿಕ ಅತ್ಯುತ್ತಮ ಸಮಯ ದಾಖಲಿಸಿದ ಲಕ್ಷ್ಮಣನ್ ನಂತರ ಹಿಂದಿರುಗಿ ನೋಡದೆ ಭಾಗವಹಿಸಿದ ಪ್ರತಿ ಕ್ರೀಡಾಕೂಟದಲ್ಲಿ ದೇಶ ಹೆಮ್ಮೆಯಿಂದ ಬೀಗುವಂತೆ ಮಾಡಿದರು.

2015 ರ ವುಹಾನ್ ಏಷ್ಯನ್ ಅತ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 5,000 ಮೀಟರ್ ನಲ್ಲಿ ಕಂಚು ಮತ್ತು 10,000 ಮೀಟರ್‌ನಲ್ಲಿ ಬೆಳ್ಳಿ ಲಕ್ಷ್ಮಣನ್ ಪಾಲಾಗುತ್ತದೆ.

2017ರಲ್ಲಿ ಭುವನೇಶ್ವರದಲ್ಲಿ ನಡೆದ ಏಷ್ಯನ್ ಅತ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ 5,000 ಮೀ ಓಟದಲ್ಲಿ ಚಿನ್ನ ಗೆದ್ದ ಲಕ್ಷ್ಮಣನ್ ಆ ಸಾಧನೆ ಮಾಡಿದ 3ನೇ ಭಾರತೀಯ ಮತ್ತು 1993ರ ನಂತರ ಚಿನ್ನ ಗೆದ್ದ ಮೊದಲಿಗರೆನಿಸಿದರು.

2017ರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನ 5,000 ಮತ್ತು 10,000 ಮೀಟರ್ ಎರಡೂ ವಿಭಾಗದಲ್ಲಿ ಚಿನ್ನ ಗೆದ್ದ ಲಕ್ಷ್ಮಣನ್ ಆ ಸಾಧನೆ ಮಾಡಿದ ಪ್ರಥಮ ಭಾರತೀಯನೆಂಬ ಹಿರಿಮೆಗೆ ಪಾತ್ರರಾದರು.

ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣನ್ ಭಾರತೀಯ ಆರ್ಮಿ ಟ್ರೈನಿಂಗ್ ಸೆಂಟರ್‌ನ ಕೋಚ್ ಸುರೀಂದರ್ ಸಿಂಗ್‌ರ ದಶಕಗಳ ಹಿಂದಿನ 10,000 ಮೀಟರ್ ಓಟದ ದಾಖಲೆ ಮುರಿಯಲು ಈಗ ಪ್ರಯತ್ನಿಸುತ್ತಿದ್ದಾರೆ.

ಭುವನೇಶ್ವರ್ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನ ಸಾಧನೆ ನೋಡಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಲಾ 20 ಲಕ್ಷ ರೂ.ಗಳ ನಗದು ಬಹುಮಾನ ನೀಡಿ ಗೌರವಿಸುತ್ತಾರೆ.

ಯಶಸ್ಸು ನಮ್ಮ ಪ್ರಯತ್ನದ ಮೇಲೆ ಅವಲಂಬಿತವಾಗಿದೆ ಎನ್ನುವುದಕ್ಕೆ ಗೋವಿಂದನ್ ಲಕ್ಷ್ಮಣನ್ ಉತ್ತಮ ಉದಾಹರಣೆ. ತಂದೆ ಆಕಸ್ಮಿಕವಾಗಿ ಅಗಲಿದಾಗ ಧೃತಿಗೆಡದ ತಾಯಿಯ ಪ್ರೋತ್ಸಾಹ ಮತ್ತು ಪ್ರೇರಣೆ ಇಂದು ಅವರನ್ನು ದೇಶವೇ ಹೆಮ್ಮೆಪಡುವಂತೆ ಮಾಡಿದೆ. ಪುದುಕೋಟ್ಟೈಯ ರಸ್ತೆಗಳಲ್ಲಿ ಬರಿಗಾಲಲ್ಲಿ ಓಡಿ ಅಭ್ಯಸಿಸಿದ ಶ್ರಮದ ಫಲ ಲಕ್ಷ್ಮಣನ್ ಗೆ ಲಭಿಸಿದೆ. ಮುಂದಿನ ಒಲಿಂಪಿಕ್ಸ್ ನಲ್ಲಿ ಪದಕದ ಭರವಸೆಯೊಂದಿಗೆ ಮುನ್ನುಗ್ಗುತ್ತಿರುವ ಲಕ್ಷ್ಮಣನ್ ಮತ್ತೊಮ್ಮೆ ದೇಶ ಸಂಭ್ರಮಿಸುವಂತೆ ಮಾಡುವರೆಂಬ ಆಶಾವಾದ ಎಲ್ಲರದು.

– ತೇಜಸ್ವಿ. ಕೆ, ಪೈಲಾರು, ಸುಳ್ಯ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Advertisement
Advertisement

Related posts

ವೀರರಾಣಿ ಅಬ್ಬಕ್ಕ ಉತ್ಸವ ಕ್ರೀಡಾ ಪಂದ್ಯಾಟ ಫೆ.23ಕ್ಕೆ

Upayuktha

ಇಂದಿನ ಐಕಾನ್- ರಕ್ಷಾ ಬಂಧನದ ಗೌರವ ಕಾಪಾಡಿದ ಮೊಗಲ್ ದೊರೆ ಹುಮಾಯೂನ್

Upayuktha

ಅಮೆರಿಕದಲ್ಲಿ ಮಿಂಚುತ್ತಿರುವ ಯುವ ಕನ್ನಡಿಗ ವೈದ್ಯ ದಂಪತಿಗಳು

Upayuktha
error: Copying Content is Prohibited !!