ಕ್ರಿಕೆಟ್ ಸಾಧಕರಿಗೆ ನಮನ

ಪ್ರೊಫೈಲ್‌: ಭಾರತೀಯ ಕ್ರಿಕೆಟ್‌ನ ದಂತಕಥೆ ಕಪಿಲ್ ದೇವ್

ಭಾರತೀಯ ಕ್ರಿಕೆಟ್ ಜಗತ್ತಿನ ಆಗಸದಲ್ಲಿ ಧ್ರುವತಾರೆಯಂತೆ ಮಿನುಗುತ್ತಿರುವ ಹೆಸರು ಇದು. ಹರ್ಯಾಣದ ಮರದ ವ್ಯಾಪಾರಿಯ ಮಗ ಭಾರತೀಯ ಕ್ರಿಕೆಟ್ ಜಗತ್ತಿನ ಲೆಜೆಂಡ್ ಆಗಿ ಮೆರೆದದ್ದು ಈಗ ದಂತಕಥೆ. ವಿಶ್ವ ಕಂಡ ಶ್ರೇಷ್ಟ ಆಲ್ ರೌಂಡರ್ ಎನಿಸಿಕೊಂಡ ಈ ಕ್ರಿಕೆಟ್ ಮಾಂತ್ರಿಕನ ಯಶೋಗಾಥೆ ಮತ್ತೆ-ಮತ್ತೆ ಓದುವಂತದ್ದು.

18 ಜೂನ್ 1983 ಇಂಗ್ಲೆಂಡಿನ ಟರ್ನ್ ಬ್ರಿಡ್ಜ್ ವೆಲ್ಸ್ ಕ್ರೀಡಾಂಗಣದ ಪೆವಿಲಿಯನ್ ನಲ್ಲಿ ಅಸಹನೀಯ ಮೌನ ಸೃಷ್ಟಿಯಾಗಿತ್ತು.ವಿಶ್ವಕಪ್ ಪಂದ್ಯಾವಳಿಯ ಅಂದಿನ ಕ್ವಾರ್ಟರ್ ಪೈನಲ್ ಪಂದ್ಯ ಇದ್ದುದು ಭಾರತ ಮತ್ತು ಜಿಂಬಾಬ್ವೆ ನಡುವೆ. ಪಂದ್ಯ ಆರಂಭವಾಗಿ ಅರ್ಧ ಗಂಟೆಯಾಗಿತ್ತಷ್ಟೆ ಜಿಂಬಾಬ್ವೆ ದಾಳಿಗೆ ತತ್ತರಿಸಿದ ಭಾರತದ ಟಾಪ್ 5 ಗಾವಸ್ಕರ್, ಶ್ರೀಕಾಂತ್, ಮೋಹಿಂದರ್ ಅಮರನಾಥ್, ಸಂದೀಪ್ ಪಾಟೀಲ್, ಯಶ್ಪಾಲ್ ಶರ್ಮಾ ಕೇವಲ 17ರನ್ ಗಳಿಗೆ ಮರಳಿ ಗೂಡು ಸೇರಿದ್ದರು. ಕೋಟ್ಯಾಂತರ ಅಭಿಮಾನಿಗಳಲ್ಲಿ ಭರವಸೆಯ ಬೆಳಕು ಮೂಡಿಸಿದ್ದ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಯಿತೇನೋ ಎಂಬ ದುಗುಡ ಎಲ್ಲರಲ್ಲೂ. ಪವಾಡ ಎಂದರೆ ಹಾಗೆಯೇ. ಯಾವಾಗ ಸಂಭವಿಸುತ್ತದೆಂದು ಹೇಳ ಬರುವುದಿಲ್ಲ. ಬ್ಯಾಟ್ ಹಿಡಿದು ಆಗ ಮೈದಾನಕ್ಕಿಳಿದವರು ಕಪ್ತಾನ ಕಪಿಲ್ ದೇವ್. ಅಂದು ಬ್ಯಾಟ್ ಹಿಡಿದು ಕಪಿಲ್ ಹಾಕಿದ ಒಂದೊಂದು ಹೆಜ್ಜೆಯೂ ದೇಶದ ಕ್ರಿಕೆಟ್ ಇತಿಹಾಸವನ್ನೇ ಬದಲಿಸಿತೆನ್ನಬಹುದು. ನಾಯಕನ ಜವಾಬ್ದಾರಿ ಅರಿತು ಆಡಿದ ಕಪಿಲ್ ಇತಿಹಾಸವನ್ನೇ ಸೃಷ್ಟಿಸಿದರು. ಮೈದಾನದ ಮೂಲೆ- ಮೂಲೆಗೆ ಬಿರುಗಾಳಿಯಂತೆ ಬ್ಯಾಟ್ ಬೀಸಿದ ಕಪಿಲ್ ಪಂದ್ಯದ ದಿಕ್ಕನ್ನೇ ಬದಲಿಸಿದರು. 138 ಎಸೆತ ಎದುರಿಸಿ 175 ರನ್ ಬಾರಿಸಿ ಅಜೇಯರಾಗುಳಿದ ಕಪಿಲ್ ಅಂದು 16 ಬೌಂಡರಿ,6 ಸಿಕ್ಸರ್ ಬಾರಿಸಿದ್ದರು. ಕಿರ್ಮಾನಿ ಜೊತೆ 9ನೇ ವಿಕೆಟ್ ಗೆ 126 ರನ್ ಸೇರಿಸಿ ದಾಖಲೆಯೇ ನಿರ್ಮಾಣವಾಯಿತು.

ಫೈನಲ್ ಪ್ರವೇಶಿಸಿದ ಭಾರತ ವಿಂಡೀಸನ್ನು ಮಣಿಸಿ ವಿಶ್ವಕಪ್ ಎತ್ತಿತ್ತು.ಮತ್ತದೇ ಕಪಿಲ್ 20 ಗಜಗಳಷ್ಟು ಹಿಂದಕ್ಕೆ ಓಡಿ ಹಿಡಿದ ರಿಚರ್ಡ್ಸ್ ಕ್ಯಾಚ್ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಕ್ರಿಕೆಟ್ ಇತಿಹಾಸ ಅಚ್ಚರಿಯ ವಿಜಯವೆಂದು ಪರಿಗಣಿತವಾದ ವಿಶ್ವಕಪ್ಪನ್ನು ಕಪಿಲ್ ಲಾರ್ಡ್ಸ್‌ನಲ್ಲಿ ಎತ್ತಿ ಹಿಡಿದರು. ಕ್ರಿಕೆಟ್ ಜಗತ್ತು ನಿಬ್ಬೆರಗಾಯಿತು. ಇಡೀ ದೇಶ ಸಂತಸದ ಅಲೆಯಲ್ಲಿ ತೇಲಿತು. ಭಾರತದ ಕ್ರಿಕೆಟ್ ಜಗತ್ತೇ ಬದಲಾಗಲು ಕಪಿಲ್ ನೇರ ಕಾರಣರಾದರು. ಶ್ರೇಷ್ಟ ನಾಯಕರ ಸಾಲಿಗೆ ಕಪಿಲ್ ಸೇರಿದರು. ನನ್ನಂತ ಅದೆಷ್ಟೋ ಜನರ ಕ್ರಿಕೆಟ್ ಆಡುವ ಸ್ಫೂರ್ತಿ ಗೆ ಕಪಿಲ್ ಕಾರಣರಾದರು. ಇಂದು ಭಾರತದಲ್ಲಿ ಕ್ರಿಕೆಟ್ ಇಷ್ಟು ಜನಪ್ರಿಯವಾಗಲು ಅಂದು ಕಪಿಲ್ ಸಾಧಿಸಿದ ವಿಜಯವೇ ಕಾರಣವಾಯಿತು.

ಹರ್ಯಾಣದ ಚಂಡೀಗಡದಲ್ಲಿ 6 ಜನವರಿ 1959ರಂದು ಜನಿಸುವ ಕಪಿಲ್ ತಂದೆ ರಾಮಲಾಲ್ ನಿಕಂಜ್ ಬಿಲ್ಡಿಂಗ್ ಮತ್ತು ಟಿಂಬರ್ ಕಂಟ್ರಾಕ್ಟರ್. D.A.V ಸ್ಕೂಲ್ ನ ವಿದ್ಯಾರ್ಥಿ ಕಪಿಲ್ 1975ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುತ್ತಾರೆ, ಪ್ರಥಮ ಪಂದ್ಯದಲ್ಲೇ 63 ರನ್ ಮತ್ತು 6 ವಿಕೆಟ್ ಪಡೆಯುತ್ತಾರೆ.

🥎 17 ವರ್ಷ ಹರ್ಯಾಣ ರಾಜ್ಯ ಪರ ಆಡುವ ಕಪಿಲ್ 1978ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್ ಗೆ ಅಡಿಯಿಡುತ್ತಾರೆ.ತಮ್ಮ ಟೆಸ್ಟ್ ಜೀವನದ 184 ಇನ್ನಿಂಗ್ಸ್ ಗಳಲ್ಲಿ ಒಮ್ಮೆಕೂಡ ಕಪಿಲ್ ರನ್ ಔಟ್ ಆಗುವುದಿಲ್ಲ.

🥎 100 ವಿಕೆಟ್ ಹಾಗೂ 1,000 ರನ್ ಬಾರಿಸಿದ ಪ್ರಥಮ ಆಟಗಾರ ಕಪಿಲ್ ದೇವ್ ಟೆಸ್ಟ್ ನಲ್ಲಿ 434 ವಿಕೆಟ್ ಪಡೆದು ನ್ಯೂಜಿಲೆಂಡ್ ನ ರಿಚರ್ಡ್ ಹ್ಯಾಡ್ಲಿ ಹೆಸರಲ್ಲಿದ್ದ ವಿಶ್ವದಾಖಲೆ ಮುರಿದು ಮುಂದಿನ 8 ವರ್ಷಗಳ ಕಾಲ ತನ್ನ ಹೆಸರಲ್ಲಿ ದಾಖಲೆಯಿರಿಸಿದ್ದರು. ಒಂದು ದಿನಗಳ ಪಂದ್ಯಗಳಲ್ಲೂ 6 ವರ್ಷಗಳ ಕಾಲ ಹೆಚ್ಚು ವಿಕೆಟ್ ಪಡೆದ ದಾಖಲೆ ಇವರ ಹೆಸರಲ್ಲಿತ್ತು.

🥎 131 ಟೆಸ್ಟ್ ಗಳ ಕ್ರಿಕೆಟ್ ಜೀವನದಲ್ಲಿ ಒಮ್ಮೆ ಕೂಡ ಫಿಟ್ನೆಸ್ ತೊಂದರೆಯ ಕಾರಣಕ್ಕೆ ಕಪಿಲ್ ಪಂದ್ಯ ತಪ್ಪಿಸಿಕೊಳ್ಳುವುದಿಲ್ಲ.

🥎 2002ರಲ್ಲಿ ಸುನಿಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ರನ್ನು ಹಿಂದಿಕ್ಕುವ ಕಪಿಲ್ ದೇವ್ ಅತಿ ಹೆಚ್ಚಿನ ಓಟ್ ಪಡೆದು ಶತಮಾನದ ಭಾರತೀಯ ಕ್ರಿಕೆಟ್ ಆಟಗಾರನೆಂಬ ಗೌರವಕ್ಕೆ ಪಾತ್ರರಾಗುತ್ತಾರೆ.

🥎 1990ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಎಡ್ಡಿಸ್ ಬೌಲಿಂಗ್ ಗೆ ಸತತ 4 ಸಿಕ್ಸರ್ ಬಾರಿಸಿದ ಕಪಿಲ್ ಭಾರತವನ್ನು ಫಾಲೋ ಆನ್ ನಿಂದ ಪಾರು ಮಾಡಿದ್ದರು.

🥎 131 ಟೆಸ್ಟ್ ಗಳಲ್ಲಿ ಬಾರಿಸಿದ 5248 ರನ್ 434 ವಿಕೆಟ್, ಒಂದು ದಿನದ 225 ಪಂದ್ಯಗಳ 3783 ರನ್ ಮತ್ತು253 ವಿಕೆಟ್ ಗಳು ಕಪಿಲ್ ದೇವ್ ಗೆ ವಿಶ್ವದ ಶ್ರೇಷ್ಠ ಆಲ್ ರೌಂಡರ್ ಪಟ್ಟ ಕಟ್ಟಿದವು.

🥎 ಕಪ್ತಾನನಾಗಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚಿನ ವಿಕೆಟ್ ಪಡೆದ ದಾಖಲೆ ಮಾಡಿದ ಕಪಿಲ್ 400 ವಿಕೆಟ್ ಪಡೆದು 5000 ರನ್ ಬಾರಿಸಿದ ವಿಶ್ವದ ಏಕೈಕ ಆಟಗಾರ.

🥎 NDTV ಯಿಂದ 2013ರಲ್ಲಿ ಭಾರತದ 25 ಜೀವಂತ ದಂತಕಥೆಗಳು ಎಂದು ಗುರುತಿಸಿಕೊಂಡ ಕಪಿಲ್ ಗೆ 2017 ರಲ್ಲಿ ಸಿ.ಕೆ. ನಾಯ್ಡು ಜೀವಮಾನ ಸಾಧನೆಯ ಪ್ರಶಸ್ತಿ ದೊರೆಯುತ್ತದೆ.

🥎 2010 ರಲ್ಲಿ ಐಸಿಸಿಯ ಹಾಲ್ ಆಫ್ ಫೇಮ್ ಗೆ ಪ್ರವೇಶ ಪಡೆಯುವ ಕಪಿಲ್ ಗೆ ಭಾರತ ಸರ್ಕಾರ ಅರ್ಜುನ ಅವಾರ್ಡ್, ಪದ್ಮಶ್ರೀ, ಮತ್ತು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸುತ್ತದೆ.

🥎 ಕಪಿಲ್ ಗಾಡ್ಸ್ ಡಿಕ್ರಿ, ಕ್ರಿಕೆಟ್ ಮೈ ಸ್ಟೈಲ್ ಮತ್ತು ಸ್ಟ್ರೈಟ್ ಫ್ರಮ್ ಹಾರ್ಟ್ ಎಂಬ 3 ಜೀವನ ಚರಿತ್ರೆಗಳನ್ನು ಬರೆಯುತ್ತಾರೆ.

ತನ್ನ ಔಟ್ ಸ್ವಿಂಗ್ ಯಾರ್ಕರ್ ಗಳ ಮೂಲಕ ಬ್ಯಾಟ್ಸ್ ಮನ್ ಗಳನ್ನು ಕಂಗೆಡಿಸಿದ ಕಪಿಲ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕೋಟ್ಯಾಂತರ ಜನ-ಮನ ಗೆದ್ದರು. ಸ್ಪಿನ್ ಬೌಲಿಂಗ್ ಪ್ರಧಾನ ದೇಶದಲ್ಲಿ ವೇಗದ ಬೌಲರ್ ಆಗಿ ಮೆರೆದರು. ಕಪ್ತಾನನಾಗಿ ಮರೆಯಲಾಗದ ಸಾಧನೆ ಮಾಡಿದ ಕಪಿಲ್ 1983 ರ ವಿಶ್ವ ಕಪ್ ಫೈನಲ್ ನಲ್ಲಿ ತನ್ನ ಸ್ಫೂರ್ತಿಯುತ ಮಾತುಗಳ ಮೂಲಕವೇ ಸಹ ಆಟಗಾರರಲ್ಲಿ ಹೋರಾಟದ ಕಿಚ್ಚು ಹಚ್ಚಿಸಿ ಕಪ್ ಗೆದ್ದರು. 1994ರಲ್ಲಿ ನಿವೃತ್ತರಾದ ನಂತರ ಭಾರತ ತಂಡದ ಕೋಚ್ ಆಗಿ ಕೂಡ ಸೇವೆ ಸಲ್ಲಿಸಿದರು.

ವಿಶ್ವಕಪ್ ವಿಜಯದ ಮೂಲಕ ಒಂದಿಡೀ ದೇಶದ ಕ್ರಿಕೆಟ್ ಲೋಕವನ್ನೇ ಬದಲಿಸಿದ ಹಿರಿಮೆ ಕಪಿಲ್ ಗೆ ಸಲ್ಲುತ್ತದೆ. 1983ರ ವಿಶ್ವಕಪ್ ನಂತರ ಭಾರತೀಯರಿಗೆ ಕ್ರಿಕೆಟ್ಟೇ ಜೀವನವಾಯಿತು. ಆಕ್ರಮಣಕಾರಿ ಆಟಗಾರ “ಹರ್ಯಾಣ ಹರಿಕೇನ್” ದೇಶದ ಮನೆ-ಮಾತಾದರು.

ಅಂದ ಹಾಗೇ ಭಾರತ 1983 ರಲ್ಲಿ ತನ್ನ ಮೊದಲ ವಿಶ್ವಕಪ್ ಎತ್ತಿ ನಿನ್ನೆಗೆ 37 ವರ್ಷ. ಸರಿ ಸುಮಾರು 4 ದಶಕಗಳ ಹಿಂದಿನ ದಿನದ ಸವಿನೆನಪು ನಮ್ಮಲ್ಲಿ ರೋಮಾಂಚನ ತರಿಸುತ್ತಿದೆ. ಭಾರತದ ಕ್ರಿಕೆಟ್ ಇತಿಹಾಸವನ್ನೇ ಬದಲಿಸಿದ ಮಹಾನ್ ಸಾಧಕನಿಗೊಂದು ಬಿಗ್ ಸೆಲ್ಯೂಟ್.

– ತೇಜಸ್ವಿ. ಕೆ, ಪೈಲಾರು

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಐಪಿಎಲ್ 2020: ಶ್ರೇಯರ್, ನಾರ್ಜೆ ಅಮೋಘ ಪ್ರದರ್ಶನ, ಕೋಲ್ಕತಾ ವಿರುದ್ಧ ಡೆಲ್ಲಿ ಜಯಭೇರಿ

Upayuktha News Network

ಇಂದಿನ ಐಕಾನ್- ವಿಠ್ಠಲ ಬೇಲಾಡಿ ಎಂಬ ಮಹಾಗುರು

Upayuktha

ಸಾಧಕರಿಗೆ ನಮನ: ಭಾರತದ ಮಿಲ್ಕ್‌ ಮ್ಯಾನ್ ಡಾ. ವರ್ಗಿಸ್ ಕುರಿಯನ್

Upayuktha