ಕ್ರಿಕೆಟ್ ಸಾಧಕರಿಗೆ ನಮನ

ಮಧ್ಯಮ ವೇಗದ ಆಲ್‌ರೌಂಡರ್ ಕ್ರಿಕೆಟರ್ ಚೇತನ್ ಶರ್ಮಾ

ಭಾರತದ ಕ್ರಿಕೆಟ್ ಇತಿಹಾಸ ದಲ್ಲಿ ತನ್ನದೇ ಆದ ಸ್ಥಾನ ಗಳಿಸಿದವರು ಚೇತನ್ ಶರ್ಮಾ. ಮಧ್ಯಮ ವೇಗದ ಆಲ್ ರೌಂಡರ್ ತನ್ನ ಕೆಲವು ಇನ್ನಿಂಗ್ಸ್ ಗಳಿಗಾಗಿ ಸದಾ ನಮ್ಮ ನೆನಪಿನಲ್ಲಿ ಇರುತ್ತಾರೆ. ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಗರಡಿಯಲ್ಲಿ ಪಳಗಿದ ಶರ್ಮಾ ಸುಮಾರು 5 ವರ್ಷಗಳ ಕಾಲ ಕಪಿಲ್ ಜೊತೆ ಹೊಸ ಬಾಲ್ ಹಂಚಿಕೊಳ್ಳುತ್ತಿದ್ದರು.

1966ರಲ್ಲಿ ಹರ್ಯಾಣಾದಲ್ಲಿ ಜನಿಸಿದ ಚೇತನ್ ಬಾಲ್ಯದಲ್ಲೇ ಕ್ರಿಕೆಟ್ ನೆಡೆಗೆ ಆಸಕ್ತರಾದರು.ಕಪಿಲ್ ಆಟವೇ ಇವರ ಕ್ರಿಕೆಟ್ ಜೀವನಕ್ಕೆ ಸ್ಫೂರ್ತಿಯಾಗಿತ್ತು.ಕಪಿಲ್ ದೇವ್ ಅವರ ಕೋಚ್ ದೇಶ್ ಪ್ರೇಮ್ ಅಜಾದ್ ಅವರೇ ಚೇತನ್ ಶರ್ಮಾರಿಗೆ ತರಬೇತುದಾರರಾಗಿದ್ದರು. ಬೌಲಿಂಗ್ ಮೂಲಕ ತನ್ನ ಕ್ರಿಕೆಟ್ ಜೀವನ ಆರಂಭಿಸಿದ ಚೇತನ್ ಶರ್ಮಾ 16ರ ಹರೆಯದಲ್ಲಿ ಹರ್ಯಾಣಾ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.

17ನೇ ವರ್ಷದಲ್ಲಿ ಒಂದು ದಿನದ ಪಂದ್ಯಗಳಿಗೆ ಭಾರತ ಪರವಾಗಿ ಆಡಿದ ಚೇತನ್ ಗೆ ಸರಿಯಾಗಿ 1 ವರ್ಷಗಳ ನಂತರ ಟೆಸ್ಟ್ ಅವಕಾಶ ದೊರೆಯುತ್ತದೆ. ಪಾಕಿಸ್ತಾನ ವಿರುದ್ಧ ಪ್ರಥಮ ಪಂದ್ಯವಾಡುವ ಚೇತನ್ ಶರ್ಮಾ ವಿಶಿಷ್ಟ ದಾಖಲೆ ನಿರ್ಮಿಸುತ್ತಾರೆ.ತಾನೆಸೆದ ಪ್ರಥಮ ಓವರ್ ನ 5ನೇ ಎಸೆತದಲ್ಲೆ ಮೊಹ್ಸಿನ್ ಖಾನ್ ವಿಕೆಟ್ ಪಡೆದು ಆಡಿದ ಪ್ರಥಮ ಟೆಸ್ಟ್ ನ ಪ್ರಥಮ ಓವರ್ ನಲ್ಲಿ ವಿಕೆಟ್ ಪಡೆದ ದೇಶದ 3ನೇ ಬೌಲರ್ ಎನಿಸಿಕೊಳ್ಳುತ್ತಾರೆ.

ಎರಡು ಪಂದ್ಯಗಳಿಗಾಗಿ ಚೇತನ್ ಶರ್ಮಾ ಸದಾ ಕಾಲ ನಮ್ಮನ್ನು ಕಾಡುತ್ತಿರುತ್ತಾರೆ. ಒಂದು:1986 ರ ಆಸ್ಟ್ರಲ್-ಏಷ್ಯಾ ಕಪ್ ನ ಫೈನಲ್.ಆಗ ಕೊನೆಯ ಓವರ್ ಬೌಲ್ ಮಾಡುತ್ತಿದ್ದರು ಚೇತನ್ ಶರ್ಮಾ. ಬ್ಯಾಟಿಂಗ್ ನಲ್ಲಿ ಪಾಕ್ ದಿಗ್ಗಜ ಜಾವೇದ್ ಮಿಯಾಂದಾದ್. ಕೊನೆಯ ಬಾಲ್ ಬಾಕಿ ಇತ್ತು, ಪಾಕ್ ಗೆ ಗೆಲ್ಲಲು 4 ರನ್ ಬೇಕಿತ್ತು. ಕ್ಯಾಚ್ ಪಡೆಯುವ ಉದ್ದೇಶದಿಂದ ಲೋ ಫುಲ್ಟಾಸ್ ಹಾಕಿದ್ದರು ಚೇತನ್. ಆದರೆ ನೇರವಾಗಿ ಬಾರಿಸಿದ ಮಿಯಾಂದಾದ್ ಹೊಡೆತಕ್ಕೆ ಬಾಲ್ ಬೌಂಡರಿ ಲೈನ್ ನ ಹೊರಗೆ ಬಿದ್ದಿತ್ತು. ಪಾಕಿಸ್ತಾನ ವಿಜಯದ ನಗೆ ಬೀರಿತು. ಚೇತನ್ ಭಾರತದ ಅಭಿಮಾನಿಗಳ ಪಾಲಿಗೆ ಅಂದು ಖಳನಾಯಕ ನಾಗಿ ಗೋಚರಿಸಿದ್ದರು.

ಇನ್ನೊಂದು:1987ರ ವಿಶ್ವ ಕಪ್ ನ ನ್ಯೂಜಿಲೆಂಡ್ ವಿರುದ್ಧದ ಪಂದ್ಯ.ಪಾಕಿಸ್ತಾನದಲ್ಲಿ ಸೆಮಿಫೈನಲ್ ಆಡುವುದನ್ನು ತಪ್ಪಿಸಲು ಅಂದು ಭಾರತ ಪಂದ್ಯ ಗೆಲ್ಲಲೇಬೇಕಿತ್ತು. ಭಾರತ ನೀಡಿದ ಸವಾಲನ್ನು ನ್ಯೂಜಿಲೆಂಡ್ ಬೆನ್ನತ್ತುವ ಸೂಚನೆ ನೀಡಿತ್ತು. ನಿರ್ಣಾಯಕ ಹಂತದಲ್ಲಿ ನಾಯಕ ಕಪಿಲ್ ಚೇತನ್ ಗೆ ಬಾಲ್ ನೀಡುತ್ತಾರೆ. ಸತತ 3 ಎಸೆತಗಳಲ್ಲಿ ಕೆವಿನ್ ರುದರ್ ಫರ್ಡ್, ಇಯಾನ್ ಸ್ಮಿತ್, ಇವಾನ್ ಚಾಟ್ಫೀಲ್ಡ್ ವಿಕೆಟ್ ಉರುಳಿಸಿ ಹ್ಯಾಟ್ರಿಕ್ ಸಂಪಾದಿಸುತ್ತಾರೆ ಚೇತನ್. ವಿಶ್ವಕಪ್ ಇತಿಹಾಸದ ಪ್ರಥಮ ಹ್ಯಾಟ್ರಿಕ್ ಗಳಿಸಿದ ಹಿರಿಮೆ ಚೇತನ್ ಪಾಲಿಗೆ ಅಂದು.

1986ರ ಇಂಗ್ಲೆಂಡ್ ವಿರುದ್ಧದ 2-0 ಟೆಸ್ಟ್ ಸರಣಿ ಜಯದ ರೂವಾರಿ ಚೇತನ್ ಶರ್ಮಾ ಆ ಸರಣಿಯಲ್ಲಿ 16 ವಿಕೆಟ್ ಗಳಿಸಿ ಗೆಲುವಿನ ರೂವಾರಿಯಾಗಿದ್ದರು.1985ರ ಶ್ರೀಲಂಕಾ ವಿರುದ್ಧದ ಟೆಸ್ಟ್ ನಲ್ಲಿ 14 ವಿಕೆಟ್ ಗಳಿಸಿದ್ದು ಮತ್ತೊಂದು ದಾಖಲೆ.

ತನ್ನ ಕ್ರಿಕೆಟ್ ಜೀವನದಲ್ಲಿ 23 ಟೆಸ್ಟ್ ಆಡಿ 61 ವಿಕೆಟ್ ಮತ್ತು 65 ಒಂದು ದಿನದ ಪಂದ್ಯಗಳನ್ನಾಡಿ 87 ವಿಕೆಟ್ ಪಡೆದಿದ್ದರು ಹಾಗೂ 1 ಶತಕ ಸಹ ಬಾರಿಸಿದ್ದರು ಚೇತನ್ ಶರ್ಮಾ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 433 ವಿಕೆಟ್ ಗಳ ಸಾಧನೆ ಇವರದು.

1994ರವರೆಗೆ ಭಾರತ ಪರ ಆಡಿದ ಚೇತನ್ 1996/97 ರವರೆಗೆ ಬಂಗಾಲ ರಾಜ್ಯ ತಂಡದ ಪರ ಆಡಿದರು.

ನಿವೃತ್ತಿಯ ನಂತರ ಕಾಮೆಂಟೇಟರ್ ಆಗಿ ಅನೇಕ ವರ್ಷ ಕಾರ್ಯ ನಿರ್ವಹಿಸಿದ್ದಲ್ಲದೆ ಹರ್ಯಾಣದ ಪಂಚಕುಲದಲ್ಲಿ ವೇಗದ ಬೌಲಿಂಗ್ ಅಕಾಡೆಮಿ ನಡೆಸಿ ಯುವ ಬೌಲರ್ ಗಳಿಗೆ ತರಬೇತಿ ನೀಡಿದ್ದರು. ಬಿಎಸ್ಪಿ ಪರವಾಗಿ ಲೋಕಸಭೆ ಚುನಾವಣೆಗೆ ಸಹ ಸ್ಪರ್ಧಿಸಿದ್ದರು ಚೇತನ್ ಶರ್ಮಾ.

ಮಹಾನ್ ಆಟಗಾರನಾಗಿ ಕ್ರಿಕೆಟ್ ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ತನ್ನ ಅನೇಕ ಪಂದ್ಯಗಳ ರೋಚಕ ಕ್ಷಣಗಳ ಸಾಧನೆಗಾಗಿ ಚೇತನ್ ಶರ್ಮಾ ಭಾರತ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಕಪಿಲ್ ದೇವ್ ಜೊತೆಗೂಡಿ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳ ಮೇಲೆರುಗುತ್ತಿದ್ದ ಚೇತನ್ ಶರ್ಮಾ 5 ವರ್ಷ ಕಪಿಲ್ ಜೊತೆ ಹೊಸ ಬಾಲ್ ಬೌಲಿಂಗ್ ಮಾಡಿದ್ದರು. ಯುವ ಆಟಗಾರರಿಗೆ ಚೇತನ್ ಶರ್ಮಾ ಆಟ ಮಾದರಿಯಾಗಿರಲಿದೆ.

-ತೇಜಸ್ವಿ. ಕೆ,ಪೈಲಾರು, ಸುಳ್ಯ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಐಪಿಎಲ್ 2020: ಮೋರಿಸ್, ವಿಲಿಯರ್ಸ್ ಕಮಾಲ್, ಬೆಂಗಳೂರಿಗೆ ರಾಯಲ್ ಜಯ

Upayuktha News Network

‘ಕನ್ನಡ ಕುಲಪುರೋಹಿತ’ ಆಲೂರು ವೆಂಕಟರಾಯರ 141ನೇ ಜನ್ಮದಿನವಿಂದು

Upayuktha

ಇಂದಿನ ಐಕಾನ್- ಅಂತಾರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್

Upayuktha