ಬಾಲಿವುಡ್ ಸಾಧಕರಿಗೆ ನಮನ

ಇಂದಿನ ಐಕಾನ್- ಭಾರತೀಯ ಸಿನಿಮಾರಂಗದ ಸಿಂಡ್ರೆಲಾ ಮೀನಾ ಕುಮಾರಿ

ಪ್ರತಿಯೊಬ್ಬರ ಬದುಕಿನಿಂದ ಕೂಡ ಬೇಕಾದಷ್ಟು ಸಂದೇಶಗಳನ್ನು ಪಡೆಯಲು ಸಾಧ್ಯ ಇದೆ. ಹಿಂದಿ ಸಿನೆಮಾ ರಂಗವನ್ನು 33 ವರ್ಷಗಳ ಕಾಲ ಅನಭಿಷಿಕ್ತ ರಾಣಿಯಾಗಿ ಆಳಿದ, 92 ಹಿಟ್ ಸಿನೆಮಾಗಳನ್ನು ಸಾಲಾಗಿ ಬಾಲಿವುಡ್ಡಿಗೆ ನೀಡಿದ, 12 ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಕರಣಗೊಂಡ, ನಾಲ್ಕು ಬಾರಿ ಪ್ರಶಸ್ತಿ ಪಡೆದ, ಭಾರತದಲ್ಲೇ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿಗೆ ನಾಮಕರಣ ಆದ ಸಿನೆಮಾದಲ್ಲಿ ಅಭಿನಯಿಸಿದ, ಸಿನಿಮಾದ ಪ್ರೇಕ್ಷಕರಿಂದ ‘ಟ್ರಾಜಿಡಿ ಕ್ವೀನ್’ ಎಂದು ಕರೆಸಿಕೊಂಡ ಮೀನಾ ಕುಮಾರಿಯ ಬದುಕು ಯಾಕೆ ದುರಂತವಾಯಿತು? ಅದರಿಂದ ನಾವು ಕಲಿಯುವುದು ಬಹಳಷ್ಟು ಇದೆ!

1972ರಲ್ಲಿ ಅವಳ ಕೊನೆಯ ಸಿನೆಮಾ “ಪಾಕೀಜಾ” ವನ್ನು ಮುಂಬೈಯ ‘ಮರಾಠಾ ಮಂದಿರ’ ಥಿಯೇಟರಲ್ಲಿ ಕುಳಿತು ನೋಡಿದಾಗ ನನಗೆ 6 ವರ್ಷ! ಏನೇನೂ ಅರ್ಥವಾಗದ ವಯಸ್ಸು. ಆದರೆ ಆಕೆಯ ಅಭಿನಯ ಸಾಮರ್ಥ್ಯಗಳು, ಭಾವುಕತೆ, ನೃತ್ಯಗಳು ಎಲ್ಲವೂ ಅದ್ಭುತವೆ ಆಗಿದ್ದವು! ಅದಾಗಿ ಕೆಲವೇ ದಿನಗಳ ಒಳಗೆ ‘ಮೀನಾ ಕುಮಾರಿ ಇನ್ನಿಲ್ಲ!’ ಎಂಬ ಶೀರ್ಷಿಕೆಯನ್ನು ಹೊತ್ತ ಪತ್ರಿಕೆ ಓದಿದಾಗ ನನಗೆ ಅರಿವಿಲ್ಲದಂತೆ ಕಣ್ಣೀರು ಗಲ್ಲ ತೋಯಿಸಿತ್ತು! ಆಗ ಆಕೆಗೆ ಕೇವಲ 38 ವರ್ಷ!

ಆಕೆಯ ಮೊದಲ ಹೆಸರು ಮಹಜಾಬೀನ್ ಬಾನೋ. ತಂದೆ ‘ಆಲಿ ಬಕ್ಷ’ ರಂಗ ಕಲಾವಿದ. ತಾಯಿ ‘ಕಾಮಿನಿ’ ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ್ ಅವರ ವಂಶದವಳು. ಮನೆಯಲ್ಲಿ ತೀರಾ ಬಡತನದ ಕಾರಣ ಅವಳು ತನ್ನ ಐದನೇ ವರ್ಷಕ್ಕೆ ಸಿನೆಮಾದಲ್ಲಿ ಬಾಲನಟಿ ಆಗಿ ಅಭಿನಯ ಮಾಡಬೇಕಾಯಿತು. ಆಕೆ ಮಹಾಪ್ರತಿಭಾವಂತೆ. ಕವಿ, ಗಾಯಕಿ, ನೃತ್ಯಪಟು ಎಲ್ಲವೂ ಆಗಿದ್ದಳು. ಎಲ್ಲವನ್ನೂ ಯಾವುದೇ ಗುರುವಿಲ್ಲದೆ ಕಲಿತವಳು. ಒಬ್ಬಳು ಅದ್ಭುತ ಪ್ರತಿಭೆಯ, ಪರಿಪೂರ್ಣ ನಟಿ. ಅವಳಿಗೆ ಅಳುವುದಕ್ಕೆ ಗ್ಲಿಸರಿನ್ ಬೇಕಾಗಿರಲಿಲ್ಲ. ಭಾವ ಪೂರ್ಣವಾದ ಕಣ್ಣುಗಳು, ಆರ್ದ್ರವಾದ ಧ್ವನಿ, ನಡುಗುವ ತುಟಿಗಳು, ಉದ್ದವಾದ ತೋಳುಗಳು, ನೃತ್ಯಕ್ಕೆ ಹೇಳಿ ಮಾಡಿಸಿದ ತೆಳು ಬಳ್ಳಿಯ ಹಾಗಿದ್ದ ಮೈಕಟ್ಟು, ಗುಂಗುರು ಕೂದಲು ಆಕೆಯನ್ನು ಮಹಾ ತಾರೆಯಾಗಿ ಮಾಡಿದವು.

ಆರಂಭದ ಕೆಲವು ದಿನಗಳಲ್ಲಿ ಹಿನ್ನೆಲೆ ಗಾಯಕಿ ಆಗಿ ಗುರುತಿಸಿಕೊಂಡ ಮೀನಾ ಕುಮಾರಿ ಮುಂದೆ “ಬೈಜು ಬಾವ್ರಾ” ಸಿನಿಮಾದ ಮೂಲಕ ಇಡೀ ಫಿಲ್ಮಿ ಜಗತ್ತಿಗೆ ಪರಿಚಯ ಆದಳು. ಆಗ ಅವಳಿಗೆ ಕೇವಲ 13 ವರ್ಷ! ನಂತರ ಸಾಲು ಸಾಲಾಗಿ ಸೂಪರ್ ಹಿಟ್ ಚಿತ್ರಗಳು. ಮೇರೆ ಅಪ್ನೆ, ಆರತಿ, ಪರಿಣೀತಾ, ಸಾಹಿಬ್ ಬೀಬಿ ಔರ್ ಗುಲಾಮ್, ದಿಲ್ ಏಕ್ ಮಂದಿರ್, ದಿಲ್ ಆಪ್ನಾ ಪ್ರೀತ್ ಪರಾಯಾ, ಕಾಜಲ್, ಚಾಂದ್, ದೋ ಬಿಘಾ ಜಮೀನ್, ಚಾಂದನಿ ಚೌಕ್, ಇಲ್ಜಾಮ್, ಫೂಲ್ ಔರ್ ಪತ್ತರ್, ಆಜಾದ್, ಶಾರದಾ, ಬಂದಿಶ್, ಏಕ್ ಹೀ ರಾಸ್ತಾ, ಮೆಮ್ ಸಾಬ್, ನಯಾ ಅಂದಾಜ್….ಎಲ್ಲವೂ ಕ್ಲಾಸಿಕ್ ಸಿನೆಮಾಗಳು.

ಯಾವ ಸಿನಿಮಾವು ಕೂಡ ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆ ಇಲ್ಲ! ಸಾಹೀಬ್ ಬೀಬಿ ಔರ್ ಗುಲಾಮ್ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಕರಣ ಆದ ಮೊದಲ ಸಿನೆಮಾ! ದೋ ಬೀಘಾ ಜಮೀನ್ ಅಂತಾರಾಷ್ಟ್ರೀಯ ಫಿಲ್ಮ್ ಉತ್ಸವಕ್ಕೆ ಆಯ್ಕೆ ಆದ ಮೊದಲ ಸಿನೆಮಾ! ಬೈಜೂ ಬಾವ್ರಾ ಸಿನೆಮಾಕ್ಕೆ ಫಿಲ್ಮ್ ಫೇರ್ ಸಂಸ್ಥೆಯ ಚೊಚ್ಚಲ ಪ್ರಶಸ್ತಿಯ ಕಿರೀಟ ಆಕೆಗೆ ದೊರೆತಿತ್ತು! 1963ರ ಫಿಲ್ಮ್ ಫೇರ್ ‘ಅತ್ಯುತ್ತಮ ನಟಿ’ ಪ್ರಶಸ್ತಿಗೆ ಆಕೆಯದ್ದೆ ಮೂರು ಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು! ಫೂಲ್ ಔರ್ ಪತ್ತರ್ ಹತ್ತಾರು ಸಿನೆಮಾ ಮಂದಿರಗಳಲ್ಲಿ ಗೋಲ್ಡನ್ ಜುಬಿಲಿ ಆಚರಣೆ ಮಾಡಿತ್ತು! ಆಕೆಯ 18 ಸಿನೆಮಾಗಳು ಆ ಕಾಲಕ್ಕೆ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಟ್ ಮಾಡಿದ್ದವು!

ಆಗಿನ ಮಹಾ ನಟರಾದ ದೇವ್ ಆನಂದ್, ರಾಜ ಕಪೂರ್, ದಿಲೀಪ್ ಕುಮಾರ್, ರಾಜಕುಮಾರ್, ಅಶೋಕ್ ಕುಮಾರ್, ಸುನೀಲ್ ದತ್ತ, ಗುರುದತ್ತ, ಧರ್ಮೇಂದ್ರ, ಶಮ್ಮಿ ಕಪೂರ್ ಇವರೆಲ್ಲ ನಟರೂ ಆಕೆಯೊಂದಿಗೆ ಅಭಿನಯಿಸಲು ತುದೀಗಾಲಿನಲ್ಲಿ ನಿಂತಿದ್ದರು. ದೊಡ್ಡ ದೊಡ್ಡ ನಿರ್ಮಾಪಕರು ಅವಳ ಡೇಟ್ಸ್ ಹೊಂದಾಣಿಕೆ ಮಾಡಲು ವರ್ಷಗಟ್ಟಲೆ ಕಾಯಲು ಸಿದ್ಧರಾಗಿದ್ದರು! She was the most celebrated and iconic actress of Hindi films during those years!

ಅಂತಹ ಮೀನಾ ಕುಮಾರಿ ತನ್ನ ಜೀವನದಲ್ಲಿ ಒಂದು ತಪ್ಪು ಮಾಡಿದಳು. ಕಮಲ್ ಆಮ್ರೋಹಿ ಎಂಬ ಪ್ರಸಿದ್ಧ ಸಿನೆಮಾ ನಿರ್ದೇಶಕನನ್ನು ಪ್ರೀತಿಸಿ ಮದುವೆ ಆದಳು. ಆಗ ಅವನಿಗೆ 34 ವರ್ಷವಾಗಿತ್ತು. ಮೊದಲೇ ಮದುವೆ ಆಗಿ ಮೂರು ಮಕ್ಕಳು ಇದ್ದರು. ಅವಳಿಗೆ ಕೇವಲ 18 ವರ್ಷ! ಅವರು ತಮ್ಮ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆದರೆ ಒಂದು ದಿನ ಅವಳ ಅಪ್ಪನಿಗೆ ವಿಷಯವು ಗೊತ್ತಾದಾಗ ಮನೆಯಲ್ಲಿ ಕುರುಕ್ಷೇತ್ರವೆ ನಡೆದು ಹೋಯಿತು! ಅವನ ಚಿತ್ರಗಳಲ್ಲಿ ನಟಿಸುವುದು ಬೇಡ, ಡೈವೋರ್ಸ್ ಕೊಡು ಎಂದು ಅಪ್ಪ ಹೇಳಿದಾಗ ಅವಳು ಒಪ್ಪಲಿಲ್ಲ. ಅಪ್ಪ ಅವಳನ್ನು ಮನೆಯಿಂದ ಹೊರ ಹಾಕಿದರು!

ಗಂಡ ಕಮಲ್ ಆಮ್ರೊಹಿ ಮೊದಲು ಪ್ರೀತಿಯ ನಾಟಕ ಮಾಡಿದ. ನಂತರ ಅವನ ಇಗೋ ಮತ್ತು ದುರಹಂಕಾರ ಮಾತಾಡಲು ತೊಡಗಿದವು. ಅವಳಿಗೆ ನೂರಾರು ಶರ್ತಗಳನ್ನು ಹೊರಿಸಿದ. ಬೇರೆಯವರಿಂದ ಪತ್ತೆದಾರಿಕೆ ಮಾಡಿಸಿದ. ಸಾರ್ವಜನಿಕ ವೇದಿಕೆಯಲ್ಲಿ ಅಪಮಾನ ಮಾಡಿದ! ದೈಹಿಕ ಹಿಂಸೆ ಕೊಡಲು ಆರಂಭಿಸಿದ.

ತಾನು ತುಂಬಾ ಪ್ರೀತಿ ಮಾಡಿದ ಗಂಡ ಈ ರೀತಿ ಹಿಂಸೆ ಕೊಡಲು ತೊಡಗಿದಾಗ ಮೀನಾ ಕುಮಾರಿ ಭರವಸೆಯನ್ನು ಕಳೆದುಕೊಂಡಳು. ಕುಡಿತ, ನಿದ್ದೆ ಮಾತ್ರೆ ಅಭ್ಯಾಸ ಆಯಿತು. ಕ್ರಾನಿಕ್ ಇನ್ಸೋಮ್ನಿಯಾ ಎಂಬ ಕಾಯಿಲೆ ಕೇವಲ 38ನೆಯ ವಯಸ್ಸಿಗೆ ಅವಳ ಉಸಿರನ್ನು ನಿಲ್ಲಿಸಿಬಿಟ್ಟಿತು! ಹೀಗೆ ಮೀನಾ ಕುಮಾರಿ ಎಂಬ ಮಹಾನ್ ತಾರೆಯ ಅಂತ್ಯವು ಕಣ್ಣೀರ ಕಥೆಯಾಗಿ ಹೋಯಿತು.

ಮೀನಾ ಕುಮಾರಿಯ ಸಮಾಧಿಯ ಮೇಲೆ ಕೆತ್ತಲ್ಪಟ್ಟ ಎರಡೇ ಎರಡು ವಾಕ್ಯಗಳು ನಮ್ಮ ಹೃದಯವನ್ನು ಕರಗಿಸಿ ಬಿಡುತ್ತವೆ.

“ಅವಳು ತನ್ನ ಜೀವನವನ್ನು ಮುರಿದ ಪಿಟೀಲು, ಅಪೂರ್ಣ ಹಾಡು ಮತ್ತು ಒಡೆದ ಹೃದಯದೊಂದಿಗೆ ಮುಗಿಸಿದಳು! ಆದರೆ ಒಂದೇ ಒಂದು ವಿಷಾದವೂ ಇಲ್ಲ! ”

ಅಂದಹಾಗೆ ಇಂದು ಅವಳ ಜನ್ಮ ದಿನ. ಅವಳಿಗೆ ಒಂದು ಹನಿ ಕಣ್ಣೀರನ್ನು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

-ರಾಜೇಂದ್ರ ಭಟ್ ಕೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ನೆನಪು: ಕನ್ನಡದ ‘ನಟ ಭಯಂಕರ’ ದಿವಂಗತ ವಜ್ರಮುನಿಗೆ ಇಂದು 76ನೇ ಜನುಮದಿನ

Upayuktha

ಡಾ. ಶಾಂತಾರಾಮ್ ಪ್ರಶಸ್ತಿ ಪುರಸ್ಕೃತ ಉದಯೋನ್ಮುಖ ಕಲಾವಿದ ಕೋಟ ಸುರೇಶ ಬಂಗೇರ

Upayuktha

ಟೀ ಸ್ಟಾಲ್‌ ನಡೆಸುತ್ತಲೇ ಶಾಲೆ ಕಟ್ಟಿಸಿದ ದೇವರಪಳ್ಳಿ ಪ್ರಕಾಶ್ ರಾವ್

Upayuktha
error: Copying Content is Prohibited !!