ಪ್ರತಿಭೆ-ಪರಿಚಯ

ಪರಿಚಯ: ಶ್ರೇಷ್ಠ ಭಿತ್ತಿಚಿತ್ರ ಕಲಾವಿದ ಹಿಳ್ಳೇಮನೆ ನಾರಾಯಣ ಭಟ್

ಕಾಸರಗೋಡು ಜಿಲ್ಲೆಯ ಸಾತ್ವಿಕ, ಸಜ್ಜನ, ಕವಿಗಳೂ, ಶ್ರೇಷ್ಠ ಚಿತ್ರ ಕಲಾವಿದರೂ ಆಗಿರುವ ಹಿಳ್ಳೇಮನೆ ಶ್ರೀ ನಾರಾಯಣ ಭಟ್ ಅವರ ಕಿರು ಪರಿಚಯ ಇಲ್ಲಿದೆ.

ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪದ ನಾರಾಯಣ ಮಂಗಲದ ಬಳಿಯಿರುವ ಹಿಳ್ಳೇಮನೆಯಲ್ಲಿ 1957ನೇ ಇಸವಿಯ ಜೂನ್ ತಿಂಗಳ 21ರಂದು ಶ್ರೀ ಶಂಕರನಾರಾಯಣ ಭಟ್ ಮತ್ತು ಶ್ರೀಮತಿ ಲೀಲಾವತಿ ಅಮ್ಮನವರಿಗೆ ಹಿರಿಯ ಮಗನಾಗಿ ಜನಿಸಿದ ಶ್ರೀ ನಾರಾಯಣ ಭಟ್ ತಂದೆ, ತಾಯಿಯವರ ಮುದ್ದಿನ ಕಣ್ಮಣಿ. ಮೂವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳ ತುಂಬು ಸಂಸಾರದಲ್ಲಿ ಹಿರಿ ಮಗನಾಗಿ ಜನಿಸಿದ ಶ್ರೀಯುತರಿಗೆ ಸಹಜವಾಗಿಯೇ ಸಾಂಪ್ರದಾಯಿಕ ಕೃಷಿ ಪದ್ಧತಿ ಒಲಿದು ಬಂದಿದೆ ಮತ್ತು ಒಬ್ಬ ಉತ್ತಮ ಕೃಷಿಕರೂ ಆಗಿ ಭಟ್ಟರು ಪರಿಚಿತರಾಗಿದ್ದಾರೆ.

ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಶ್ರೀಯುತರು ಕಲಿಕೆಯಲ್ಲಿ ಸಹಜವಾಗಿಯೇ ಜಾಣ. ಕಾಸರಗೋಡಿನ ವಿದ್ಯಾನಗರದ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ಚಿತ್ರಕಲೆಯಲ್ಲಿ ವಿಶೇಷ ಒಲವು ಇರಿಸಿದ್ದರು. ಕುಂಬಳೆ ಸಮೀಪದ ನಾರಾಯಣ ಮಂಗಲದ ಅನುದಾನಿತ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ನಾರಾಯಣ ಭಟ್ ಅವರು ಹೈಸ್ಕೂಲು ಶಿಕ್ಷಣವನ್ನು ಸರ್ಕಾರಿ ಹೈಸ್ಕೂಲ್, ಕುಂಬಳೆಯಲ್ಲಿ ಪೂರೈಸಿದ್ದರು.

ಪದವಿ ಶಿಕ್ಷಣ ಪಡೆದು ಬಳಿಕ 1977ರಲ್ಲಿ ಕುಂಬಳೆಯ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉದ್ಯೋಗ-ಸೇವೆ ಮಾಡುತ್ತಾ ಹತ್ತಾರು ವರ್ಷಗಳ ಬಳಿಕ ಖಾಸಗಿ ಕಂಪೆನಿಗಳಲ್ಲಿ ಸಮರ್ಥವಾಗಿ ಉದ್ಯೋಗ ನಿರ್ವಹಿಸಿ ಕಂಪೆನಿ ಮಾಲಿಕರಿಂದ ಶಹಬ್ಬಾಸ್ ಗಿರಿಯನ್ನು ಪಡೆದುಕೊಂಡು ಈಗಲೂ ಕಂಪೆನಿ ಮಾಲಿಕರ ವಿಶ್ವಾಸವನ್ನು ಹಾಗೇನೇ ಉಳಿಸಿಕೊಂಡಿದ್ದಾರೆ. ಕುಟುಂಬದ ಹಿರಿಯನಾಗಿ ತಂದೆಯವರ ಕಾಲಾನಂತರ ಸಾಂಪ್ರದಾಯಿಕ ಕೃಷಿಗೆ ಅನಿವಾರ್ಯವಾಗಿ ತಮ್ಮನ್ನೇ ತಾವು ತೊಡಗಿಸಿಕೊಳ್ಳಬೇಕಾಗಿ ಬಂತು. ಪ್ರಕೃತ ತಮ್ಮ ಹಿರಿಯರ ಸೊತ್ತುಗಳನ್ನು, ತೋಟವನ್ನು ಚೆನ್ನಾಗಿ ನೋಡಿಕೊಂಡು ಪ್ರದೇಶದಲ್ಲಿ ಆದರ್ಶ ಕೃಷಿಕರಾಗಿ ಹೆಸರು ಗಳಿಸಿದ್ದಾರೆ.

ತಮ್ಮ ಉದ್ಯೋಗ ಕಾಲದಲ್ಲಿಯೇ ಚಿತ್ರ ಕಲೆಯಲ್ಲಿ ಬಲು ಆಸಕ್ತರಾಗಿ ಹಲವು ದೇವಸ್ಥಾನಗಳಲ್ಲಿ ಭಿತ್ತಿಚಿತ್ರಗಳನ್ನು ಸೇವಾ ರೂಪದಲ್ಲಿ ಬಿಡಿಸಿದ್ದಾರೆ. ಮಧೂರು, ಕುಂಬಳೆ ಕಣಿಪುರೇಶನ ದೇಗುಲ, ಕೊಲ್ಲೂರು, ಕಟೀಲು, ಮಲ್ಲ ದೇಗುಲಗಳಲ್ಲಿ ಶ್ರೀಯುತರು ಬಿಡಿಸಿದ ಮನಮೋಹಕ ಭಿತ್ತಿ ಚಿತ್ರಗಳು ಭಕ್ತರ ಮನ ಸೂರೆಗೊಂಡಿವೆ. ಅಂತೆಯೇ ಹಲವಾರು ಪುಸ್ತಕಗಳಿಗೆ- ವರ್ಣ ಚಿತ್ರಗಳನ್ನು ರಚಿಸಿದ್ದಾರೆ. ಧರ್ಮ ಚಕ್ರ ಪುಸ್ತಕದ ಮುಖಪುಟದಲ್ಲಿ ಸುಂದರವಾದ ವಿನ್ಯಾಸದ ವರ್ಣ ಚಿತ್ರ ಪ್ರಕಟಗೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.

ಸಾಂಸಾರಿಕ ಜೀವನದಲ್ಲಿ ಶ್ರೀಮತಿ ಜಯಶ್ರೀಯವರನ್ನು ವಿವಾಹವಾಗಿದ್ದಾರೆ. ಚೈತನ್ಯ ಎಂಬ ಮಗಳು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಶ್ರೀ ಸಂದೇಶ್, (ಸಾಫ್ಟ್ ವೇರ್ ಇಂಜಿನಿಯರ್) ಎಂಬವರನ್ನು ವಿವಾಹವಾಗಿ ಬೆಂಗಳೂರಿನ ಗಿರಿನಗರದಲ್ಲಿ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.

ಶ್ರೀಯುತ ಹಿಳ್ಳೆಮನೆ ನಾರಾಯಣ ಭಟ್ ಅವರು ಒಬ್ಬ ಅತ್ಯುತ್ತಮ ಕವಿ ಮನದವರು, ಮೃದು ಹೃದಯಿಗಳು. ಇವರ ಅನೇಕ ಭಾವಗೀತೆಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶ್ರೀಯುತರು ಬರೆಯುವ ಭಕ್ತಿಗೀತೆಗಳು, ಮಕ್ಕಳ ಗೀತೆಗಳು, ನೃತ್ಯರೂಪಕ ಕವನಗಳು ತುಂಬಾ ಚೆನ್ನಾಗಿವೆ. ನಾಡಿನ ಅನೇಕ ಗಾಯಕರು ಇವರು ಬರೆದಿರುವ ನೂರಾರು ಗೀತೆಗಳನ್ನು ಹಾಡಿದ್ದಾರೆ, ಈಗಲೂ ಹಾಡುತ್ತಿದ್ದಾರೆ. ಮಾತ್ರೆ,ಛಂದಸ್ಸು, ಪ್ರಾಸಗಳಲ್ಲಿ ಅಪಾರ ಹಿಡಿತ ಸಾಧಿಸಿರುವ ಶ್ರೀಯುತರು ಕವನ, ಕಾವ್ಯ ಕಟ್ಟುವುದರಲ್ಲಿ ಎತ್ತಿದ ಕೈ.

ಇತ್ತೀಚೆಗೆ ಹಲವಾರು ಸ್ಪರ್ಧಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನೇ ಪಡೆಯೂತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ, ವಾಟ್ಸ್ ಆಪ್ ಬಳಗದಲ್ಲಿ ಸಕ್ರಿಯರಾಗಿ ಭಾಗವಹಿಸಿ ಇತರರಿಗೂ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದಾರೆ. ಸುಮಾರು 250ಕ್ಕೂ ಮಿಕ್ಕಿ ಭಾವಗೀತೆ, ಭಕ್ತಿಗೀತೆಗಳನ್ನು ಈಗಾಗಲೇ ಪ್ರಕಟಗೊಳಿಸಿದ್ದಾರೆ. ಸನಿಹದಲ್ಲಿಯೇ ಸಾಹಿತ್ಯ ಕೃತಿಗಳ ಪ್ರಕಟಣೆ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದರೂ ಇನ್ನಷ್ಟೇ ಸಮಾಜದಿಂದ, ಸಂಘ ಸಂಸ್ಥೆಗಳಿಂದ ಸನ್ಮಾನಗೊಳ್ಳಬೇಕಿದೆ. ಇದು ಅಗತ್ಯ ಕೂಡಾ. ಕಣಿಪುರದೊಡೆಯನ ಅನನ್ಯ ಭಕ್ತರಾದ ಶ್ರೀ ನಾರಾಯಣ ಭಟ್ ಅವರು ಓರ್ವ ಅಜಾತಶತ್ರು. ಎಲ್ಲರೊಂದಿಗೂ ಸ್ನೇಹವನ್ನೇ ಬಯಸಿ ಹಿತವನ್ನು ಬಯಸುವವರು.

ಎಲೆಮರೆಯ ಕಾಯಿಯಾಗಲು ಬಿಡದೆ ಸಮಾಜದಲ್ಲಿ ಯೋಗ್ಯ ಸ್ಥಾನಮಾನ, ಸನ್ಮಾನವನ್ನು ಸಹೃದಯೀ ಕಲಾಸಕ್ತರೂ, ಸಾಹಿತಿಗಳೂ ನೀಡಿ ಶ್ರೀಯುತರನ್ನು ಗುರುತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಮತ್ತು ಸಮಾಜದ ಮುಂದಾಳುಗಳು ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಹಾರೈಸುತ್ತೇನೆ.

ಶ್ರೀಯುತ ಹಿಳ್ಳೇಮನೆ ನಾರಾಯಣ ಭಟ್ ಅವರಿಗೆ ಕಣಿಪುರೇಶನು ಸಂಪೂರ್ಣ ಶ್ರೇಯವನ್ನೂ, ಆಯೂರಾರೋಗ್ಯ ಭಾಗ್ಯಗಳನ್ನು ನೀಡಿ ಸಲಹಲಿ, ರಕ್ಷಿಸಲಿ ಎಂದು ಪರಮಾತ್ಮನಲ್ಲಿ ಬೇಡಿಕೊಳ್ಳುತ್ತಾ ವಿರಮಿಸುವೆ.

-ಗೋಪಾಲ ಭಟ್.ಸಿ.ಯಚ್., ಕಾಸರಗೋಡು ಜಿಲ್ಲೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಜಯ ಜಯ ಮಹಾವೀರ… ಈ ವೈರಲ್ ಹಾಡನ್ನು ಹಾಡಿದ ಗಾಯಕಿ ಯಾರು ಗೊತ್ತಾ…?

Upayuktha

ಬಹುಮುಖ ಪ್ರತಿಭೆ, ತುಳು ನಾಟಕ, ಸಿನಿಮಾ ಕಲಾವಿದೆ ಜ್ಯೋತಿ ಕುಲಾಲ್ ಪುತ್ತೂರು

Upayuktha

ಪರಿಚಯ: ಯಕ್ಷಪಟು ಸುಷ್ಮಾ ಮೈರ್ಪಾಡಿ

Upayuktha

Leave a Comment