ಇತರ ಕ್ರೀಡೆಗಳು ಸಾಧಕರಿಗೆ ನಮನ

ರಾಜೀವ್ ಖೇಲ್ ರತ್ನ ಮರಿಯಪ್ಪನ್ ತಂಗವೇಲು

ದೇಶದ ಪ್ಯಾರಾ ಕ್ರೀಡಾ ಕ್ಷೇತ್ರದಲ್ಲಿ ಈಗ ಮಿನುಗುತ್ತಿರುವ ಪ್ರತಿಭೆ ಮರಿಯಪ್ಪನ್ ತಂಗವೇಲು. ಕಡು ಬಡ ಕುಟುಂಬದಲ್ಲಿ ಹುಟ್ಟಿ ಆಕಸ್ಮಿಕ ಅವಘಡಕ್ಕೆ ತುತ್ತಾಗಿ ತಂತರ ಚೇತರಿಸಿಕೊಂಡು ಅಥ್ಲೆಟಿಕ್ಸ್ ನೆಡೆಗೆ ಆಕರ್ಷಿತನಾಗಿ ದೇಶವೇ ಹೆಮ್ಮೆಪಡುವಂತ ಸಾಧನೆ ಮಾಡಿದ ಮರಿಯಪ್ಪನ್ ತಂಗವೇಲು ಈ ವರ್ಷದ ಕ್ರೀಡಾಕ್ಷೇತ್ರದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಅಥ್ಲೆಟ್.

ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯವಾಡಗಂಪಟ್ಟಿಯಲ್ಲಿ ಜನಿಸಿದ ಮರಿಯಪ್ಪನ್ ಕುಟುಂಬ ಬಡತನದಲ್ಲಿ ನರಳುತ್ತಿತ್ತು. 6 ಜನ ಮಕ್ಕಳಲ್ಲಿ ಒಬ್ಬರಾದ ಮರಿಯಪ್ಪನ್ ತಂದೆ ಇವರು ಹುಟ್ಟಿದ ಕೂಡಲೇ ಕಾಣೆಯಾಗಿದ್ದರು. ಸಂಸಾರ ನಿರ್ವಹಣೆಯ ಜವಾಬ್ದಾರಿ ಪೂರ್ತಿ ತಾಯಿಯ ಹೆಗಲೇರಿತು. ಇಟ್ಟಿಗೆ ಹೊರುವ ಕೆಲಸ ಮಾಡುತ್ತಿದ್ದ ತಾಯಿಗೆ ದೊರಕುತ್ತಿದ್ದ 100 ರೂ ದಿನಗೂಲಿಯಲ್ಲೆ ಜೀವನ ಸಾಗುತ್ತಿತ್ತು. ನಂತರ ಸಣ್ಣ ತರಕಾರಿ ಅಂಗಡಿ ಹಾಕಿದ ಮೇಲೆ ಜೀವನ ಸ್ವಲ್ಪ ಸುಧಾರಿಸಿತು.

ವರ್ಷ 5 ಆದಂತೆ ಮನೆ ಸಮೀಪದ ಶಾಲೆಗೆ ಸೇರುತ್ತಾನೆ ಮರಿಯಪ್ಪನ್. ಕಲಿತು ತನ್ನ ಮನೆಯ ಪರಿಸ್ಥಿತಿ ಸುಧಾರಿಸುವ ಆಸೆ ಆತನದು. ಆದರೆ ಕನಸುಗಳೆಲ್ಲ ನುಚ್ಚು ನೂರಾಗುತ್ತದೆ. ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಒಂದು ದಿನ ಕುಡುಕ ಡ್ರೈವರ್ ಒಬ್ಬ ಚಲಾಯಿಸುತ್ತಿದ್ದ ಬಸ್ಸು ಮರಿಯಪ್ಪನ್ ಕಾಲ ಮೇಲೆ ಚಲಿಸುತ್ತದೆ. ಬಲ ಕಾಲು ಮುರಿತಕ್ಕೊಳಗಾದ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ.

ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದ ನಂತರ ಮತ್ತೆ ಮನೆಗೆ ಬರುತ್ತಾನೆ ಮರಿಯಪ್ಪನ್, ನಡೆಯಲು ಅಭ್ಯಾಸವಾದಂತೆ ಮತ್ತೆ ಶಾಲೆಗೆ ಹೋಗತೊಡಗುತ್ತಾನೆ. ಕಂಡ ಕನಸುಗಳೆಲ್ಲವೂ ಭಗ್ನಗೊಂಡಿರುತ್ತವೆ. ಆದರೆ ಆಶಾವಾದದೊಂದಿಗೆ ಮರಿಯಪ್ಪನ್ ಕಲಿಕೆ ಸಾಗುತ್ತದೆ.

ಬಲಗಾಲು ಮುರಿತಕ್ಕೊಳಗಾಗಿದ್ದರೂ ತನ್ನಿಷ್ಟದ ವಾಲಿಬಾಲ್ ಆಡಲು ಪ್ರಾರಂಭಿಸುತ್ತಾನೆ. ಸ್ಮಾಶ್ ಮಾಡಲು ಜಂಪ್ ಬೇಡುವ ವಾಲಿಬಾಲ್ ನಲ್ಲಿ ಪರಿಣತನಾಗುತ್ತಾನೆ. ಇದೇ ವೇಳೆ ಮರಿಯಪ್ಪನ್ ಆಟ ಗಮನಿಸಿದ ಶಾಲೆಯ ದೈಹಿಕ ಶಿಕ್ಷಕರು ಹೈಜಂಪ್ ಅಭ್ಯಸಿಸುವಂತೆ ಸಲಹೆ ನೀಡುತ್ತಾರೆ. ಶಿಕ್ಷಕರ ಸಲಹೆ ಗಂಭೀರವಾಗಿ ತೆಗೆದುಕೊಂಡ ಮರಿಯಪ್ಪನ್ ಹೈಜಂಪ್ ಅಭ್ಯಾಸ ನಡೆಸುತ್ತಾನೆ. ತನ್ನ 14ನೇ ವಯಸ್ಸಲ್ಲಿ ದೈಹಿಕವಾಗಿ ಪರಿಪೂರ್ಣ ಸ್ಪರ್ಧಿಗಳೊಂದಿಗೆ ಪ್ರಥಮ ಬಾರಿಗೆ ಸ್ಫರ್ಧಿಸಿದ ಮರಿಯಪ್ಪನ್ 2ನೇ ಸ್ಥಾನ ಗಳಿಸುತ್ತಾನೆ. ಮರಿಯಪ್ಪನ್ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ಲಭಿಸುತ್ತದೆ ಮತ್ತು ಸಹಪಾಠಿಗಳು, ಗೆಳೆಯರು ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹಿಸುತ್ತಾರೆ

ಇದೇ ವೇಳೆ 2013ರಲ್ಲಿ ರಾಷ್ಟ್ರೀಯ ವಿಕಲಚೇತನ ಕ್ರೀಡಾಪಟುಗಳ ತರಬೇತಿ ಕೇಂದ್ರದ ಕೋಚ್ ಸತ್ಯನಾರಾಯಣ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮರಿಯಪ್ಪನ್ ಸಾಧನೆ ಗಮನಿಸುತ್ತಾರೆ. ಆತನನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸಿ ಬೆಂಗಳೂರಿಗೆ ಕರೆ ತರುತ್ತಾರೆ. ಮುಂದಿನದ್ದು ಇತಿಹಾಸ. ಸತ್ಯನಾರಾಯಣ ಗರಡಿಯಲ್ಲಿ ಪಳಗಿದ ಮರಿಯಪ್ಪನ್ ಹೈಜಂಪ್ ನ ಎಲ್ಲ ಟೆಕ್ನಿಕ್ ಗಳನ್ನು ತಿಳಿಯುತ್ತಾನೆ. ಪರಿಪೂರ್ಣ ಅಥ್ಲೆಟ್ ಆಗಿ ಮರಿಯಪ್ಪನ್ ಬೆಳೆಯುತ್ತಾನೆ.

ಟ್ಯುನೇಷಿಯಾದಲ್ಲಿ ನಡೆದ IPC ಗ್ರಾಂಡ್ ಪ್ರಿಕ್ಸ್ ನ ಪುರುಷರ T-42 ಹೈಜಂಪ್ ನಲ್ಲಿ 1.78 ಎತ್ತರ ಜಿಗಿದ ಮರಿಯಪ್ಪನ್ ರಿಯೋ ಡಿ ಜನೆರೋ ಒಲಿಂಪಿಕ್ಸ್ ಗೆ ಪ್ರವೇಶ ಪಡೆಯುತ್ತಾನೆ.

ರಿಯೋದಲ್ಲಿ ನಡೆದ ಪುರುಷರ T-42 ಹೈಜಂಪ್ ನಲ್ಲಿ 1.89 ಮೀಟರ್ ಎತ್ತರ ಜಿಗಿದ ಮರಿಯಪ್ಪನ್ ತಂಗವೇಲು ಚಿನ್ನ ಗೆದ್ಧು ನೂತನ ದಾಖಲೆ ನಿರ್ಮಿಸುತ್ತಾನೆ. 2004ರ ನಂತರ ಮತ್ತೆ ಈ ವಿಭಾಗದಲ್ಲಿ ಭಾರತಕ್ಕೆ ಚಿನ್ನ ದೊರಕಿರುತ್ತದೆ. ಪ್ಯಾರಾ ಕ್ರೀಡಾ ಕ್ಷೇತ್ರದ ಅಗ್ರಮಾನ್ಯ ಕ್ರಿಡಾಪಟುವಾಗಿ ಮರಿಯಪ್ಪನ್ ಗುರುತಿಸಿಕೊಳ್ಳುತ್ತಾನೆ.

ಕಳೆದ ವರ್ಷ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮತ್ತೊಂದು ಕಂಚಿನ ಪದಕ ಮರಿಯಪ್ಪನ್ ಪಾಲಾಗುತ್ತದೆ.

ಮರಿಯಪ್ಪನ್ ಸಾಧನೆಗೆ ತಮಿಳುನಾಡು ಸರಕಾರ 2 ಕೋಟಿ, ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ 75 ಲಕ್ಷ, ಮಧ್ಯಪ್ರದೇಶ ಸರ್ಕಾರ 30 ಲಕ್ಷ, ಸಾಮಾಜಿಕ ನ್ಯಾಯ ಸಚಿವಾಲಯ 30 ಲಕ್ಷ ನಗದು ಬಹುಮಾನ ನೀಡಿ ಗೌರವಿಸುತ್ತವೆ.

ಕಡು ಬಡತನದ ನಡುವೆಯೂ ತನ್ನನ್ನು ಸಾಕಿ ತನ್ನ ಪ್ರತಿಭೆ ಬೆಳಗಿಸಿದ ತಾಯಿಯ ಶ್ರಮ ಮರೆಯದ ಮರಿಯಪ್ಪನ್ ಭತ್ತದ ಗದ್ದೆಯೊಂದನ್ನು ಖರೀದಿಸಿ ತಾಯಿಗೆ ಉಡುಗೊರೆ ನೀಡುತ್ತಾನೆ. ಮನೆ ಕಟ್ಟಿ ಸಹೋದರರ ಬದುಕಿಗೆ ಆಸರೆಯಾಗುತ್ತಾನೆ. ತನ್ನ ಅಥ್ಲೆಟಿಕ್ ಕೆರಿಯರ್ ಮುಂದುವರಿಸುತ್ತಾನೆ, ಓದು ಮುಂದುವರಿಸಿ 2015ರಲ್ಲಿ ಪದವಿ ಪಡೆಯುತ್ತಾನೆ.

ಮರಿಯಪ್ಪನ್ ಅಸಾಮಾನ್ಯ ಸಾಧನೆಗೆ ಅರ್ಜುನ ಅವಾರ್ಡ್ ಲಭಿಸುತ್ತವೆ ಮತ್ತು ಕೇಂದ್ರ ಸರಕಾರ ಪದ್ಮಶ್ರೀ ನೀಡಿ ಗೌರವಿಸುತ್ತದೆ. ಈ ವರ್ಷ ದೇಶದ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತದೆ.

ಕಾಲು ಮುರಿತಕ್ಕೊಳಗಾದರೂ ಆಶಾವಾದ ಕಳಕೊಳ್ಳದ ಮರಿಯಪ್ಪನ್ ಸಾಧನೆ ಅಸಾಮಾನ್ಯ. ತಾಯಿಯ ತ್ಯಾಗ ಮತ್ತು ಸಹಪಾಠಿಗಳ ಪ್ರೋತ್ಸಾಹ ಮರಿಯಪ್ಪನ್ ಸಾಧನೆಗೆ ಮೂಲ ಕಾರಣ. ಬದ್ಧತೆ ಮತ್ತು ದೃಢಸಂಕಲ್ಪದೊಂದಿಗೆ ಕನಸುಗಳನ್ನು ಬೆಂಬತ್ತಿದ ಮರಿಯಪ್ಪನ್ ರಿಂದ ದೇಶ ಇನ್ನಷ್ಟು ಸಾಧನೆ ನಿರೀಕ್ಷಿಸುತ್ತಿದೆ.

-ತೇಜಸ್ವಿ. ಕೆ, ಪೈಲಾರು, ಸುಳ್ಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಫೆ.22 ರಿಂದ 25 ರವರೆಗೆ ಕರ್ನಾಟಕ ಕುಸ್ತಿ ಹಬ್ಬ

Upayuktha

ರಾಷ್ಟ್ರ ಮಟ್ಟದ ಫುಟ್‍ಬಾಲ್ ಪಂದ್ಯಾಟ: ಸಂತ ಫಿಲೋಮಿನಾ ಕಾಲೇಜಿಗೆ ಚಾಂಪಿಯನ್ ಪಟ್ಟ

Upayuktha

ಇಂದಿನ ಐಕಾನ್: ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)

Upayuktha

Leave a Comment

error: Copying Content is Prohibited !!