ಸಾಧಕರಿಗೆ ನಮನ

ಪ್ರತಿಭೆ: ತಬಲಾ ಕ್ವೀನ್ ರಿಂಪಾ ಶಿವ

ಸಾಹಿತ್ಯ ರಂಗಕ್ಕೆ ಅಪ್ರತಿಮ ಕೊಡುಗೆಗಳನ್ನು ನೀಡಿದ ಪಶ್ಚಿಮ ಬಂಗಾಲ ಅನೇಕ ಅದ್ಭುತ ಸಂಗೀತ ಪ್ರತಿಭೆಗಳಿಗೆ ವೇದಿಕೆಯೊದಗಿಸಿದೆ. ಅನೇಕ ಯುವ ಪ್ರತಿಭೆಗಳು ತಮ್ಮ ಸಾಧನೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಚೈಲ್ಡ್ ಪ್ರಾಡಿಜಿ ಎಂದು ಹೆಸರಾಗಿರುವ ರಿಂಪಾ ಶಿವ ಅಂಥ ಒಬ್ಬ ಪ್ರತಿಭೆ.

1 ಜನವರಿ 1986ರಂದು ಜನಿಸಿದ ರಿಂಪಾಗೆ 3 ವರ್ಷ ತುಂಬುತ್ತಲೇ ತಬಲಾ ನಾದಕ್ಕೆ ಮರುಳಾಗಿದ್ದರು. ತಂದೆ ಸ್ವಪ್ನನ್ ಶಿವ ತಬಲಾ ವಾದಕರಾಗಿದ್ದು ರಿಂಪಾಗೆ ಸ್ಫೂರ್ತಿ ನೀಡಿತು. ತಂದೆ ತನ್ನ ಶಿಷ್ಯಂದಿರಿಗೆ ತಬಲಾ ತರಬೇತಿ ನೀಡುತ್ತಿದ್ದಂತೆ ತನಗೂ ತಬಲಾ ಕಲಿಸುವಂತೆ ರಿಂಪಾ ದುಂಬಾಲು ಬಿದ್ದಳು. ಮಹಿಳಾ ತಬಲಾ ವಾದಕರು ಆಗ ಇಲ್ಲದ್ದರಿಂದ ಸ್ವಪ್ನನ್ ಸಿತಾರ್ ಕಲಿಯುವಂತೆ ರಿಂಪಾಗೆ ಸಲಹೆ ನೀಡಿದರು. ಆದರೆ ಅವಳಿಗೆ ಸಿತಾರ್ ಒಗ್ಗಲೇ ಇಲ್ಲ. ಅವಳ ಕೈ. ಬೆರಳುಗಳು ತಬಲಾ ನಾದ ಹೊರ ಹೊಮ್ಮಿಸಲು ಕಾತರಿಸುತ್ತಿದ್ದವು. ಹೊಸ ತಬಲಾ ಸೆಟ್ ತಂದು ಕೊಟ್ಟ ತಂದೆಯೇ ಮಗಳಿಗೆ ಗುರುವಾದರು. ಅಲ್ಲಿಂದೀಚೆಗೆ ಹಿಂದಿರುಗಿ ನೋಡದ ರಿಂಪಾ ಸಮಕಾಲೀನ ಜಗತ್ತಿನ ಪ್ರಸಿದ್ಧ ತಬಲಾ ವಾದಕರಾಗಿ ಗುರುತಿಸಿಕೊಂಡಿದ್ದಾರೆ.

ತಬಲಾದೆಡೆಗಿನ ಆಸಕ್ತಿ ಬಹುಬೇಗನೇ ರಿಂಪಾ ತಬಲಾದ ಎಲ್ಲ ಸೂಕ್ಷ್ಮಗಳನ್ನು ಅರಿಯುವಂತೆ ಮಾಡಿತು. ಫರೂಕಾಬಾದ್ ಘರಾಣೆಯಲ್ಲಿ ಅಭ್ಯಾಸ ಮುಂದುವರಿಸಿದ ರಿಂಪಾ 7 ವರ್ಷವಾಗುವಾಗಲೇ ಪ್ರಸಿದ್ಧ ಗಾಯಕ ಅಜಯ್ ಚಕ್ರವರ್ತಿ ಗಾಯನಕ್ಕೆ ತಬಲಾ ಸಾತ್ ನೀಡಿದರು. ದೆಹಲಿ, ಜೈಪುರ, ಮುಂಬಯಿ, ಕೋಲ್ಕತ್ತಾಗಳಲ್ಲಿ ಕಚೇರಿ ನೀಡುತ್ತಾರೆ. ಅಹಮದಾಬಾದ್ ನಲ್ಲಿ ನಡೆದ “ಸಪ್ತಕ” ಸಂಗೀತೋತ್ಸವದಲ್ಲಿ ನೀಡಿದ ಕಚೇರಿ ಅವರ ಸಂಗೀತ ಬದುಕಿಗೆ ನೂತನ ಆಯಾಮ ನೀಡಿತು.

ರಿಂಪಾ ತಬಲಾ ಸೋಲೋ ಧ್ವನಿಮುದ್ರಣ ಆಲಿಸಿದ ಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಹಾಡಿ ಹೊಗಳಿದ್ದು ಅವರ ಜೀವನದ ಮರೆಯಲಾರದ ಘಟನೆಯಾಯಿತು. ರಿಂಪಾ “ಶಿವ ಸರಸ್ವತಿಯ ಪ್ರತಿರೂಪ” ಎಂದು ಜಾಕೀರ್ ಹುಸೇನ್ ಬಣ್ಣಿಸುತ್ತಾರೆ. ಪಂಡಿತ್ ಜಸ್ ರಾಜ್, ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಮುಂತಾದ ಅನೇಕ ದಿಗ್ಗಜರಿಗೆ ರಿಂಪಾ ತಬಲಾ ಸಾತ್ ನೀಡುತ್ತಾರೆ. ಫ್ರಾನ್ಸ್, ಜರ್ಮನಿ, ಟ್ಯುನೇಶಿಯ, ದಕ್ಷಿಣ ಆಫ್ರಿಕಾಗಳಲ್ಲಿ ಸೋಲೋ ಕಚೇರಿ ನೀಡಿದ ರಿಂಪಾ ವಿಶ್ವದ ಅಗ್ರಮಾನ್ಯ ತಬಲಾ ವಾದಕರಾಗಿ ಗುರುತಿಸಿಕೊಳ್ಳುತ್ತಾರೆ.

ಹಾಲೆಂಡ್ ನಲ್ಲಿ ನಡೆದ ವರ್ಲ್ಡ್ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ ರಿಂಪಾ ತಂದೆ ಜೊತೆ 1997ರಲ್ಲಿ ಒಂದೂವರೆ ತಿಂಗಳ ಕಾಲ ಅಮೆರಿಕಾದಲ್ಲಿ ಸೋಲೋ ತಬಲಾ ಕಚೇರಿ ನೀಡಿ ಅಮೆರಿಕನ್ನರ ಮನ ಗೆಲ್ಲುತ್ತಾರೆ. ವಿಶ್ವ ವಿಖ್ಯಾತ ಬ್ಯಾಂಡ್ ಗಳಾದ “ನಾರಿಶಕ್ತಿ ತಬಲಾ ಬ್ಯಾಂಡ್” ಹಾಗೂ “ರಿದಂ ಆಫ್ ಬಂದೀಶ್” ಸಂಗೀತ ಬ್ಯಾಂಡ್‌ಗಳಲ್ಲಿ ತಬಲಾ ನುಡಿಸುತ್ತಾರೆ.

ಫ್ರಾನ್ಸ್‌ನಲ್ಲಿ ರಿಂಪಾ ನುಡಿಸಿದ ತಬಲಾ ಸೋಲೋ ಆಲಿಸಿದ ಫ್ರಾನ್ಸ್ ಸರ್ಕಾರ ರಿಂಪಾ ಶಿವಾ ಪ್ರತಿಭೆ ಗೌರವಿಸಿ “ರಿಂಪಾ ಶಿವ-ಫ್ರಿನ್ಸೆಸ್ ಆಫ್ ತಬಲಾ” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವ ಸಂಗೀತ ಪುರಸ್ಕಾರಗಳು ರಿಂಪಾ ಮುಡಿಗೇರಿವೆ.

ಪುರುಷ ಪ್ರಾಬಲ್ಯದ ತಬಲಾ ವಾದನದಲ್ಲಿ ತನ್ನ ಪ್ರಭುತ್ವ ಸಾಧಿಸಿದ ರಿಂಪಾ ಶಿವ ವಿಶ್ವದ ಅಗ್ರಗಣ್ಯ ತಬಲಾ ವಾದಕರಲ್ಲಿ ಒಬ್ಬರೆನಿಸಿದ್ದಾರೆ. ಇನ್ನೂ 35ರ ಹರೆಯದ ಯುವತಿ ಸಾಧಿಸುವುದು ಬಹಳಷ್ಟು ಇದೆ. ವಿಶ್ವಕ್ಕೆ ಮಹಿಳಾ ಶಕ್ತಿಯ ಪರಿಚಯ ಮಾಡಬೇಕೆಂಬ ಮಹದಾಸೆ ಹೊಂದಿರುವ ರಿಂಪಾ ಸಾಧನೆ ಇನ್ನಷ್ಟು ಉನ್ನತ ಮಟ್ಟಕ್ಕೇರಲಿ ಎಂಬುದು ಭಾರತೀಯರೆಲ್ಲರ ಆಶಯ.

-ತೇಜಸ್ವಿ ಕೆ, ಪೈಲಾರು, ಸುಳ್ಯ

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ನೆನಪಿನಂಗಳದಲ್ಲಿ ಶುಭ್ರ ರಾಜಕೀಯದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ

Upayuktha

ಇಂದಿನ ಐಕಾನ್: ದೂರ ಓಟದ ಭರವಸೆ ಅಶ್ವಿನಿ ಗಣಪತಿ ಭಟ್

Upayuktha

ಹೆಸರಾಂತ ಬಾಣಸಿಗ, ಮೋತಿಮಹಲ್ ಹೋಟೆಲ್‌ಗಳ ಸಂಸ್ಥಾಪಕ ಕುಂದನ್ ಲಾಲ್ ಗುಜ್ರಾಲ್

Upayuktha