ಕಲೆ ಸಂಸ್ಕೃತಿ ಸಾಧಕರಿಗೆ ನಮನ

ಯಕ್ಷ ಗುರು, ಸಂಘಟಕ, ಕಲಾ ಪೋಷಕ, ನಿರೂಪಕ ರವಿ ಅಲೆವೂರಾಯ ವರ್ಕಾಡಿ

ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಕಲಾವಿದರು ಕಾಣಲು ಸಿಗುತ್ತಾರೆ. ಆದರೆ ಯಕ್ಷ ಗುರು, ಸಂಘಟಕ, ಕಲಾ ಪೋಷಕ, ನಿರೂಪಕ, ಅರ್ಥಧಾರಿ, ವೇಷಧಾರಿ- ಹೀಗೆ ಯಕ್ಷಗಾನ ರಂಗದಲ್ಲಿ ಎಲ್ಲಾ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಕೆಲವು ಕಲಾವಿದರ ಸಾಲಿನಲ್ಲಿ ನಮಗೆ ಕಾಣ ಸಿಗುವ ಕಲಾವಿದರು ಶ್ರೀಯುತ ರವಿ ಅಲೆವೂರಾಯ ವರ್ಕಾಡಿ.

ದಿ.ಲಕ್ಷ್ಮೀನಾರಾಯಣ ಅಲೆವೂರಾಯ ವರ್ಕಾಡಿ ಹಾಗೂ ಶ್ರೀಮತಿ ಶ್ರೀದೇವಿ ಇವರ ಮಗನಾಗಿ 01.01.1964 ಇವರ ಜನನ. BSC ಇವರ ವಿದ್ಯಾಭ್ಯಾಸ. ತಂದೆ ಸ್ವತಃ ವೇಷಧಾರಿ ಹಾಗೂ ಅರ್ಥಧಾರಿ ಆದ ಕಾರಣ ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದ ಕಲೆ. ಯಕ್ಷಗಾನದ ಎಲ್ಲಾ ಪುರಾಣ ಪ್ರಸಂಗಗಳು & ಕೆಲವು ತುಳು ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ದೇವಿ, ಚಂದ್ರಮತಿ, ದಮಯಂತಿ, ಕೃಷ್ಣ, ವಿಷ್ಣು, ರಾಮ, ಸ್ತ್ರೀ ವೇಷ, ಪುರುಷ ವೇಷ ಹಾಗೂ ಪುಂಡು ವೇಷ ಹೀಗೆ ಎಲ್ಲಾ ವೇಷಗಳನ್ನು ಮಾಡುವ ಓರ್ವ ಸಮರ್ಥ ಕಲಾವಿದರು ಶ್ರೀಯುತ ರವಿ ಅಲೆವೂರಾಯ ವರ್ಕಾಡಿ.

ರಂಗಕ್ಕೆ ಹೋಗುವ ಮೊದಲು ಯಾವ ರೀತಿ ತಯಾರಿ ಮಾಡಿಕೊಳ್ತೀರಾ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ರಂಗಕ್ಕೆ ಹೋಗುವ ಮೊದಲು ವೇಷದಲ್ಲಿ ಅಚ್ಚುಕಟ್ಟುತನ, ಮುಖವರ್ಣಿಕೆ, ವೇಷಭೂಷಣ ಕಟ್ಟಿಕೊಳ್ಳುವಿಕೆ ಮತ್ತು ವೇಷ ಕಟ್ಟಿಕೊಳ್ಳುವ ವಸ್ತುಗಳನ್ನು ಅಚ್ಚುಕಟ್ಟುಗೊಳಿಸುವುದು ಹಾಗೂ ಆ ದಿನದ ಪ್ರಸಂಗದ ಎಲ್ಲಾ ಪಾತ್ರಗಳ ಬಗ್ಗೆ ಮಾಹಿತಿ, ಭಾಗವತರೊಂದಿಗೆ ಸಂವಾದ ಮಾಡಿಕೊಂಡು ತಯಾರಿ ಮಾಡಿಕೊಳ್ಳುತ್ತಾರೆ.

ಮಧೂರು ಮೇಳ, ಬಪ್ಪನಾಡು ಮೇಳ, ತಲಕಳ ಮೇಳ, ಸಸಿಹಿತ್ಲು ಮೇಳ, ಮಲ್ಲ ಮೇಳ ಪ್ರಸ್ತುತ ಶ್ರೀ ಕೊಲ್ಲಗಾನ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. 20 ವರ್ಷಗಳಿಂದ ತಮ್ಮದೇ ಮೇಳವಾದ ಸರಯೂ ಮಕ್ಕಳ ಮೇಳವನ್ನು ಮುನ್ನೆಡೆಸುತ್ತಿದ್ದಾರೆ. ಯಕ್ಷಗಾನ ಕಲೆಗಾಗಿಯೇ ಜೀವನ, ಕಾರ್ಯಕ್ರಮ ಸಂಯೋಜನೆ ಹಾಗೂ ಅದಕ್ಕಾಗಿ ವರ್ಷಾನುಗಟ್ಟಲೆ ಚಿಂತನೆ ಇದು ಇವರ ಹವ್ಯಾಸಗಳು.

“ಬಸವ ರತ್ನ ರಾಷ್ಟ್ರ ಪ್ರಶಸ್ತಿ”, “ಬಸವ ಜ್ಯೋತಿ ಕನ್ನಡ ರತ್ನ”ಅವಳಿ ರಾಜ್ಯ ಪ್ರಶಸ್ತಿಗಳು ಹಾಗೂ ಇನ್ನು ಅನೇಕ ಪ್ರಶಸ್ತಿಗಳು ಇವರಿಗೆ ಸಿಕ್ಕಿರುತ್ತದೆ. ವಿಶೇಷವಾಗಿ 2019 ಜನವರಿ 26 ರಂದು ಇವರ ಸರಯೂ ಬಾಲ ಯಕ್ಷ ವೃಂದ (ರಿ) ಮಕ್ಕಳ ಮೇಳಕ್ಕೆ”ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಬಂದಿದ್ದು ಇದು ಯಕ್ಷಗಾನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಂದು ಯಕ್ಷಗಾನ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು. ಕನ್ನಡ, ಹಿಂದಿ, ಸಂಸ್ಕೃತ, ತುಳು, ಮಲಯಾಳಂ, ಕೊಂಕಣಿ, ಇಂಗ್ಲಿಷ್, ಬಂಗಾಲಿ ಭಾಷೆಗಳಲ್ಲಿ ಯಕ್ಷಗಾನ ಕಾರ್ಯಕ್ರಮ ನೀಡಿದ ಏಕೈಕ ಕಲಾವಿದ ಶ್ರೀಯುತ ರವಿ ಅಲೆವೂರಾಯ ವರ್ಕಾಡಿ. ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲಿಷ್ ಮತ್ತು ತುಳು ಹೀಗೆ ಐದು ಭಾಷೆಗಳಲ್ಲಿ ಯಕ್ಷಗಾನ ನೀಡುತ್ತಿರುವ ಏಕೈಕ ತಂಡ ಇವರ ಸರಯೂ ಯಕ್ಷ ವೃಂದ (ರಿ) ಮಕ್ಕಳ ಮೇಳ.ಈ ಬಾರಿಯ ಸಪ್ತಾಹ ತುಳುವಿನಲ್ಲೇ “ತುಳುವೆರೆ ಏಳಾಟೊ” ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯಲ್ಲಿ ನಡೆಯಿತು.ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕುಂಭ ಮೇಳದಲ್ಲಿ ಯಕ್ಷಗಾನ ನೀಡಿದ ಹೆಮ್ಮೆ ನಮ್ಮ ಈ ತಂಡಕ್ಕೆ ಸಲ್ಲುತ್ತದೆ.

ಇವತ್ತಿನ ಯಕ್ಷಗಾನ ಕಲಾವಿದರು ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಈಗಿನ ಕಲಾವಿದರು ಪ್ರೇಕ್ಷಕರ ಬಗ್ಗೆ ಹೇಳಲಾರೆ. ಅಷ್ಟು ತಾಳ್ಮೆ ಇಬ್ಬರಲ್ಲೂ ಇಲ್ಲ. ಎಲ್ಲರೂ ಅವಸರದಲ್ಲಿದ್ದಾರೆ. ಅರ್ಥವಾಗುವುದಿಲ್ಲ.

ದಿನಾಂಕ 04.12.1992 ರಂದು ಶ್ರೀಮತಿ ಕುಸುಮ ಅವರನ್ನು ಮದುವೆ ಆದ ಶ್ರೀಯುತ ರವಿ ಅಲೆವೂರಾಯ ವರ್ಕಾಡಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಮಗಳು ಶ್ರೀಮತಿ ರಮ್ಯಾ ರಾಘವೇಂದ್ರ ಹೊರದೇಶದಲ್ಲಿದ್ದಾರೆ. ಊರಿಗೆ ಬಂದಾಗ ಯಕ್ಷಗಾನ ಪಾತ್ರ ಹಾಗೂ ಅರ್ಥದಲ್ಲಿ ಜೋಡಿಸಿಕೊಳ್ಳುತ್ತಾರೆ ಹಾಗೂ ಸರಯೂ ತಂಡದ ಸ್ಥಾಪಕ ಸದಸ್ಯೆ.

ಸರಯೂಗಾಗಿ ನಿರಂತರ ಯಕ್ಷಗಾನ ಕಲಿಕಾ ಕೇಂದ್ರ ಆರಂಭಿಸಲು ನಿವೇಶನಕ್ಕಾಗಿ ಸರ್ಕಾರದಿಂದ ನಿರಂತರ ಪ್ರಯತ್ನ ಆಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಸರಯೂ ತಂಡಕ್ಕೆ ಬರಲು ಪ್ರಯತ್ನ ನಡೆಸುತ್ತಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಾಯಬೇಕು.

ಉಲ್ಲೇಖನೀಯ ಅಂಶಗಳು:-
ಶ್ರೀಯುತರು ಕಲಿಯುವವರಿಗಾಗಿ ಬರೆದ ಅರ್ಥ ಸಹಿತ ಗ್ರಂಥಗಳು;
೧.ಯಕ್ಷ ಗುಚ್ಚ (6 ಪ್ರಸಂಗಗಳ ಗೊಂಚಲು= 5 ಪುರಾಣ +1 ತುಳು).
೨.ಯಕ್ಷ ಕುಸುಮ (10 ಪ್ರಸಂಗಗಳ ಗೊಂಚಲು).
೩.ಯಕ್ಷ ರಮ್ಯಾ (2 ಪ್ರಸಂಗಗಳ ಗೊಂಚಲು) ಸಾವಿರ ಪ್ರತಿಗಳು ಮಾರಾಟವಾಗಿ ಮೇಳಗಳ ಸಹಿತ ಅನೇಕ ಕಲಾವಿದರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಸಾಧನೆ:-
ತೆಂಕುತಿಟ್ಟು ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳಲ್ಲಿ 2 ಗಂಟೆಗಳಿಗೂ ಮಿಕ್ಕಿ ಏಕವ್ಯಕ್ತಿ ಸ್ತ್ರೀ ಪಾತ್ರಗಳ ಕಾರ್ಯಕ್ರಮ ನೀಡಿದ ಏಕೈಕ ಕಲಾವಿದ.ಇವರ ನಂತರ ಇವರ ಶಿಷ್ಯ ವೃಂದ ಹಾಗೂ ಅನೇಕರು ಮಾಡುತ್ತಿದ್ದಾರೆ.ಬೆಂಗಳೂರು ಸಹಿತ 150 ಕಡೆ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.ಏಕವ್ಯಕ್ತಿ ಪ್ರದರ್ಶನಕ್ಕೆ ಹೊರಟಾಗ ಟೀಕೆ ಟಿಪ್ಪಣಿಗಳನ್ನು ಎದುರಿಸಿ ಸಾಧಿಸಿದ್ದಾರೆ. ಶತಕದ ಕಾರ್ಯಕ್ರಮ ಅದ್ದೂರಿಯಿಂದ ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಸನ್ಮಾನ ಆಗಿ “ಯಕ್ಷ ಶತರವಿ” ಅಭಿನಂದನಾ ಗ್ರಂಥ ಬಿಡುಗಡೆ ಆಗಿತ್ತು. ದಿನಪೂರ್ತಿ ಕಾರ್ಯಕ್ರಮ ಕೀರ್ತಿಶೇಷ ಎಡನೀರು ಶ್ರೀಗಳ ನೇತೃತ್ವದಲ್ಲಿ ನಡೆಯಿತು.

ಆಗ ಎಂ.ಲ್.ಸಾಮಗರು ಯಕ್ಷಗಾನ ಅಕಾಡಮಿ ಅಧ್ಯಕ್ಷರು ದಿನ ಪೂರ್ತಿ ಕಾರ್ಯಕ್ರಮದಲ್ಲಿ ಇದ್ದರು. ಪಟ್ಲ ಮತ್ತು ನಿಡುವಜೆ ಪುರುಷೋತ್ತಮ ಭಟ್ಟರು ಶತಕದ  ಕಾರ್ಯಕ್ರಮದಲ್ಲಿ ಭಾಗವತರಾಗಿ ಭಾಗವಹಿಸಿ ನೆರೆದವರ ಸಂಭ್ರಮವನ್ನು ಚಿರಸ್ಥಾಯಿಗೊಳಿಸಿದ್ದಾರೆ.ಅಲ್ಲಿ ಸ್ವಂತ ನನ್ನದೇ ಏಕವ್ಯಕ್ತಿ ಪ್ರದರ್ಶನ ಇತ್ತು. ಕುಂಬಳೆ, ಜೋಷಿ, ಡಾ.ಕೋಳ್ಯೂರು, ಪ್ರೋ. ಎಂ.ಎಲ್ ಸಾಮಗರ ಏಕವ್ಯಕ್ತಿ ಯಕ್ಷಗಾನ ಪ್ರಸ್ತುತಿ ಇತ್ತು (40 ನಿಮಿಷ ಪ್ರತಿಯೊಬ್ಬರಿಗೆ) ಗಣಪಣ್ಣನ  ಹಾಡುಗಾರಿಕೆ ಇತ್ತು, 24 ಗಂಟೆ ನಿರಂತರ ಕಾರ್ಯಕ್ರಮ.

ನನ್ನ ತಮ್ಮ ಮಧುಸೂದನ ಅಲೆವೂರಾಯ ಇವರ ಯಕ್ಷಗಾನ ಭಾವಚಿತ್ರಗಳಿಗೆ ಸಂಬಂಧಿಸಿದ “ಮಧು ಛಾಯಾ” ಪ್ರಕಟ ವಾಗಿದೆ. ಸಂಸ್ಥೆಯಿಂದ ವರ್ಷದಲ್ಲಿ ಮಾಡುವ ನೂರಾರು ಸನ್ಮಾನಗಳ ಆಯಾಯ 100 ವ್ಯಕ್ತಿಗಳ ಸನ್ಮಾನದ ವಿವರಗಳನ್ನೊಳಗೊಂಡ “ಸನ್ಮಾನ ಶತ ಸರಣಿ” ಪುಸ್ತಕ ಈಗಿನ ಶ್ರೀ ಎಡನೀರು ಶ್ರೀಗಳಿಂದ ಡಿಸೆಂಬರ್ 26ರಂದು ಲೋಕಾರ್ಪಣೆಗೊಂಡಿತು.

ನನಗೆ ಸನ್ಮಾನ ಮಾಡವುದರಲ್ಲೇ ಇಷ್ಟ ಹೊರತು ಪಡೆಯುವುದರಲ್ಲಿ ಅಲ್ಲ. ಎಲ್ಲಾ ತರಹದ ಸಂಘಟಕರು, ಶಿಕ್ಷಣತಜ್ಞರು ಇದ್ದಾರೆ, ಹಿಮ್ಮೇಳ-ಮುಮ್ಮೇಳ ಕಲಾವಿದರು,ರಂಗ ಕರ್ಮಿಗಳು, ಚೌಕಿ ಸಹಾಯಕರು, ತೆರೆ ಮರೆಯ ಕಲಾವಿದರನ್ನು ಗೌರವಿಸುತ್ತೇವೆ. ನಮ್ಮ ತಂದೆಯವರ ಹೆಸರಿನಲ್ಲಿ “ಅಲೆವೂರಾಯ ಪ್ರತಿಷ್ಠಾನ” ಆರಂಭಿಸಿ 5,000 ಗೌರವ ನಿಧಿಯೊದಿಗೆ ಕಲಾವಿದರನ್ನು ಗೌರವಿಸಿಕೊಂಡು ಬರುತಿದ್ದೇವೆ.
ಆರಂಭದ ವರ್ಷದಲ್ಲಿ ರಂಗನಾಯಕ ಕುರಿಯರ ನೇತೃತ್ವದಲ್ಲಿ  ದೊಂದಿ ಬೆಳಕಿನ ಆಟ “ಪಂಚವಟಿ” ಯಕ್ಷಗಾನವನ್ನು ಶ್ರೀ ಕ್ಷೇತ್ರ ಕದ್ರಿಯಲ್ಲಿ ಆಡಿದ್ದೇವೆ.ಸರಯೂ ತಂಡ ಈಗಾಗಲೇ ಮೂರು ಜೋಡಾಟಗಳನ್ನು ಆಡಿದೆ
● ಪುರಭವನ:-ಶ್ರೀ ದೇವಿ ಕದಂಬ ಕೌಶಿಕೆ
● ಸಂಘ ನಿಕೇತನ:-ಜಾಂಬವತೀ ಕಲ್ಯಾಣ
● ತಲಪಾಡಿ ದೇವಸ್ಥಾನ:-ಹಿರಣ್ಯಾಕ್ಷ ವಧೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

– ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕ್ರಿಕೆಟ್ ಜಗತ್ತಿನ 360 ಡಿಗ್ರಿ ಆಟಗಾರ ಎ.ಬಿ ಡಿವಿಲಿಯರ್ಸ್‌ಗೆ ಇಂದು ಹ್ಯಾಪಿ ಬರ್ತ್‌ಡೇ

Upayuktha

ಟೀ ಸ್ಟಾಲ್‌ ನಡೆಸುತ್ತಲೇ ಶಾಲೆ ಕಟ್ಟಿಸಿದ ದೇವರಪಳ್ಳಿ ಪ್ರಕಾಶ್ ರಾವ್

Upayuktha

‘ಬಹುವಚನಂ’ ನಲ್ಲಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಂದ ಮನೋಜ್ಞ ‘ರಸ ನಿಷ್ಪತ್ತಿ’ಯ ಪ್ರಸ್ತುತಿ

Upayuktha