ಕಲೆ ಸಂಸ್ಕೃತಿ ಸಾಧಕರಿಗೆ ನಮನ

ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ

ಮುಂಬಯಿ ಮಹಾನಗರದ ಹವ್ಯಾಸಿ ಯಕ್ಷಗಾನ ರಂಗದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಹೆಸರು ಮನೆಮಾತಾಗಿದೆ. ಯಕ್ಷಗಾನ ಕಲಾವಿದರಾಗಿ, ನೃತ್ಯ ಗುರುವಾಗಿ, ನಿರ್ದೇಶಕರಾಗಿ ಮತ್ತು ಅಸಾಧಾರಣ ಸಂಘಟಕರಾಗಿ ಅವರು ಪ್ರಸಿದ್ಧರು.

ಅಜೆಕಾರು ಕಲ್ಕುಡಮಾರ್ ದಿ. ಸಂಪ ಶೆಟ್ಟಿ ಮತ್ತು ಸುಬ್ಬಯ್ಯ ಶೆಟ್ಟಿ ದಂಪತಿಗೆ 1970 ಜನವರಿ 17 ರಂದು ಜನಿಸಿದ ಬಾಲಕೃಷ್ಣ ಶೆಟ್ಟಿ ಅವರು ಹುಟ್ಟೂರಿನಲ್ಲಿ ಕಲಿತದ್ದು ಕೇವಲ 6ನೇ ತರಗತಿ. ಆಮೇಲೆ ಅದೃಷ್ಟದ ಬೆನ್ನು ಹತ್ತಿ ಮುಂಬೈ ಮಹಾನಗರವನ್ನು ಸೇರಿದ ಅವರು ಅಲ್ಲಿನ ಕ್ಯಾಂಟೀನ್ ಒಂದರಲ್ಲಿ ಕೆಲಸಕ್ಕೆ ಸೇರಿದರು. ಓದು ಮುಂದುವರಿಸುವ ತುಡಿತದಿಂದ ವರ್ಲಿ ನಿತ್ಯಾನಂದ ನೈಟ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿ ಹತ್ತನೇ ತರಗತಿಯನ್ನು ಪೂರೈಸಿದರು.

ತಾಯಿನಾಡಿನ ಪ್ರಮುಖ ಕಲೆಯಾದ ಯಕ್ಷಗಾನದಲ್ಲಿ ತೀವ್ರ ಆಸಕ್ತಿ ಹೊಂದಿದ ಅವರು 1980ರಲ್ಲಿ ಗುರುಗಳಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ಯಕ್ಷಗಾನ ನಾಟ್ಯಾಭ್ಯಾಸಮಾಡಿದರು. ಬಳಿಕ ಊರಿಗೆ ಮರಳಿ ಸಾವಿರದ 1987 ರಲ್ಲಿ ಶ್ರೀ ಸುಬ್ರಮಣ್ಯ ಮೇಳಕ್ಕೆ ಸೇರ್ಪಡೆಗೊಂಡು ತಿರುಗಾಟದ ಅನುಭವ ಪಡೆದರು. ಅದು ಬೇಸರವೆನಿಸಿದಾಗ ಮತ್ತೆ ಮುಂಬೈ ಸೇರಿ ಸ್ವಂತ ಉದ್ಯಮದಲ್ಲಿ ತೊಡಗಿಕೊಂಡರು. 2002ರಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಎಂಬ ಸಾಂಸ್ಕೃತಿಕ ಸಂಘಟನೆಯನ್ನು ಸ್ಥಾಪಿಸಿ ಯಕ್ಷಗಾನಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿ ಯಕ್ಷಗಾನ ಕಲಾಭಿಮಾನಿಗಳನ್ನು ರಂಜಿಸಿದರು.

ಊರಿಂದ ಪ್ರಸಿದ್ಧ ಅರ್ಥಧಾರಿಗಳನ್ನು ಕರೆಸಿ ಮಹಾನಗರದ ವಿವಿಧೆಡೆ ವರ್ಷಂಪ್ರತಿ ಸರಣಿ ತಾಳಮದ್ದಳೆಗಳನ್ನು ನಡೆಸಿದರು. ಅಲ್ಲದೆ ಆಯ್ದ ಕಲಾವಿದರು ಮತ್ತು ಮಹಿಳಾ ತಂಡಗಳಿಂದ ಯಕ್ಷಗಾನ ಪ್ರದರ್ಶನಗಳನ್ನು ನಡೆಸಿದರು. ಇದರೊಂದಿಗೆ ಯಕ್ಷಗಾನದಲ್ಲಿ ಆಸಕ್ತಿಯಿರುವ ಹಲವಾರು ಯುವಕ-ಯುವತಿಯರಿಗೆ ನೃತ್ಯ ತರಬೇತಿ ನೀಡಿ ಅವರನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಿದರು. ಇದುವರೆಗೆ ಮುಂಬೈನ 21 ಸಂಘ-ಸಂಸ್ಥೆಗಳು ಅವರ ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನ ನೀಡಿರುವುದು ಒಂದು ದಾಖಲೆಯಾಗಿದೆ.

ಕಳೆದ ಎರಡು ದಶಕಗಳಿಂದ ಹೆಸರಾಂತ ಕಲಾವಿದರನ್ನು ಕಲೆಹಾಕಿ ಯಕ್ಷಗಾನ ಪ್ರದರ್ಶನ ಮತ್ತು ಪ್ರಬುದ್ಧರ ತಾಳಮದ್ದಳೆ ಕೂಟಗಳನ್ನು ಸಂಯೋಜಿಸುತ್ತಿರುವ ಅಜೆಕಾರು ಬಾಲಕೃಷ್ಣ ಶೆಟ್ಟರು ತಮ್ಮ ಸಂಸ್ಥೆಯ ವತಿಯಿಂದ ಆಯ್ದ ಕಲಾತಂಡಗಳ ಯಕ್ಷಗಾನ ಪ್ರದರ್ಶನ,ಕಲಾವಿದರ ಸನ್ಮಾನ, ಪ್ರಶಸ್ತಿ ಪ್ರದಾನ ಮತ್ತು ಅಶಕ್ತ ಕಲಾವಿದರಿಗೆ ಸಹಾಯನಿಧಿ ವಿತರಿಸುವ ಮೂಲಕ ನಿರಂತರ ಕಲಾಸೇವೆ ಮಾಡುತ್ತಿದ್ದಾರೆ. ಇದಕ್ಕಾಗಿ ಇದುವರೆಗೆ ಸುಮಾರು 16 ಲಕ್ಷಕ್ಕಿಂತಲೂ ಮಿಕ್ಕಿ ಹಣವನ್ನು ವ್ಯಯಿಸಿರುವುದು ಅಜೆಕಾರು ಕಲಾಭಿಮಾನಿ ಬಳಗದ ಹೆಗ್ಗಳಿಕೆ. ವರ್ಷಂಪ್ರತಿ ಯಕ್ಷಗಾನದ ಶ್ರೇಷ್ಠ ಕಲಾವಿದರಿಗೆ ಹಾಗೂ ಕಲಾ ಪೋಷಕರಿಗೆ ನೀಡುತ್ತಿರುವ ‘ಯಕ್ಷ ರಕ್ಷಾ ಪ್ರಶಸ್ತಿ’ ಕಲೆ ಮತ್ತು ಕಲಾವಿದರ ಬಗ್ಗೆ ಅವರಿಗಿರುವ ಉತ್ಕಟ ಅಭಿಮಾನವನ್ನು ಸೂಚಿಸುತ್ತದೆ.

ಇದೇ 2019 ಆಗಸ್ಟ್ 10 ರಿಂದ 25 ರ ವರೆಗೆ ಮುಂಬೈನ ವಿವಿಧ ಸ್ಥಳಗಳಲ್ಲಿ ಅವರು ನಡೆಸಿದ 18 ನೇ ವರ್ಷದ ತಾಳಮದ್ದಳೆ ಸರಣಿಯಲ್ಲಿ ಎಡೆಬಿಡದೆ 16 ಯಶಸ್ವೀ ತಾಳಮದ್ದಳೆ ಕೂಟಗಳನ್ನು ಸಂಯೋಜಿಸಿದುದು ದೊಡ್ಡ ದಾಖಲೆಯೆನಿಸಿತು. ಯಕ್ಷಗಾನ ಸಂಬಂಧೀ ಗ್ರಂಥ ಪ್ರಕಟಣೆಯಲ್ಲೂ ಕೈಯಾಡಿಸಿರುವ ಅಜೆಕಾರು ಕಲಾಭಿಮಾನಿ ಬಳಗ ಭಾಗವತ ಪೊಳ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರ ಅಭಿನಂದನಾ ಗ್ರಂಥ ‘ನಾದಲೋಲ’, ಬಳಗದ ದಶಮಾನೋತ್ಸವ ಸಂಚಿಕೆ ‘ಯಕ್ಷರಕ್ಷಾ’, ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಸಂಸ್ಮರಣಾ ಕೃತಿ ‘ಯಕ್ಷರ ಚೆನ್ನ’, ಸದಾಶಿವ ಆಳ್ವರ ‘ಭಾರತೀಯ ಸಂಸ್ಕೃತಿ ಚಿಂತನ’, ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ‘ಮಾ ನಿಷಾದ’, ‘ಪಾಂಚಜನ್ಯ ಮತ್ತು ಗುರು ದಕ್ಷಿಣೆ’ ಅರ್ಥ ಸಹಿತ ಪ್ರಸಂಗಗಳನ್ನು ಬೆಳಕಿಗೆ ತಂದಿರುವುದು ಉಲ್ಲೇಖನೀಯ.

ಮುಂಬಯಿ ಯಕ್ಷರಂಗದ ಸಾಧನೆಗಾಗಿ ಹಲವು ಸನ್ಮಾನ – ಗೌರವಗಳನ್ನು ಪಡೆದಿರುವ ಬಾಲಕೃಷ್ಣ ಶೆಟ್ಟರು ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ನಾಡೋಜ ಪ್ರೊ.ಬರಗೂರು ಪ್ರತಿಷ್ಠಾನದ ಪ್ರಶಸ್ತಿಗೂ ಭಾಜನ ರಾಗಿದ್ದಾರೆ.

ಮಾತೆಯ ಸಂಸ್ಮರಣೆ- ತಾಳಮದ್ದಳೆ:

ತಮ್ಮ ಮಾತೃ ಶ್ರೀ ಸಂಪಾ ಎಸ್.ಶೆಟ್ಟಿ ಅವರು ಗತಿಸಿದ ಬಳಿಕ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪ್ರತಿವರ್ಷ ಹುಟ್ಟೂರಿನಲ್ಲಿ ಅವರ ಸಂಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸುತ್ತಿದ್ದಾರೆ. ಅದರಂತೆ ಇದೇ 2020 ಸೆಪ್ಟೆಂಬರ್ 20ರಂದು ಆದಿತ್ಯವಾರ ಅಪರಾಹ್ನ ಗಂ.2.00 ರಿಂದ‌ ಕಾರ್ಕಳ ತಾಲೂಕಿನ ಅಜೆಕಾರು ಪೇಟೆಯಲ್ಲಿನ ರಾಮ ಮಂದಿರದಲ್ಲಿ 3ನೇ ವರ್ಷದ ಕಾರ್ಯಕ್ರಮವಾಗಿ ‘ಶಲ್ಯ ಸಾರಥ್ಯ- ಕರ್ಣಾರ್ಜುನ’ ತಾಳಮದ್ದಳೆಯನ್ನು ಹಮ್ಮಿಕೊಂಡಿದ್ದಾರೆ.

ಜಿಲ್ಲೆಯ ಪ್ರಸಿದ್ದ ಕಲಾವಿದರಾದ ಶಂಭು ಶರ್ಮ ವಿಟ್ಲ, ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬೊಳಂತಿಮೊಗರು, ಸದಾಶಿವ ಆಳ್ವ ತಲಪಾಡಿ ಮತ್ತು ಗಣೇಶ್ ಕುಂಜತ್ತೂರು ಅರ್ಥಧಾರಿಗಳಾಗಿರುವರು. ದೇವಿಪ್ರಸಾದ್ ಆಳ್ವ ತಲಪಾಡಿ, ಧೀರಜ್ ರೈ ಸಂಪಾಜೆ, ಪ್ರಶಾಂತ್ ಶೆಟ್ಟಿ ವಗನಾಡು, ಮಯೂರ್ ನಾಯಗ ಮಾಡೂರು ಮತ್ತು ರಮೇಶ್ ಕಜೆ ಹಿಮ್ಮೇಳದಲ್ಲಿ ಭಾಗವಹಿಸುವರು. ಕೋವಿಡ್ ಮುನ್ನೆಚ್ಚರಿಕಾ ನಿಯಮಾನುಸಾರ ಸೀಮಿತ ಪ್ರೇಕ್ಷಕರಿಗಾಗಿ ಸಕಲ ಸುರಕ್ಷಿತಾ ಕ್ರಮಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಅಜೆಕಾರು ಬಾಲಕೃಷ್ಣ ಶೆಟ್ಟಿ ಕಲ್ಕುಡಮಾರ್ ಮತ್ತು ವಿಜಯ ಶೆಟ್ಟಿ ಅಜೆಕಾರು ಪ್ರಕಟಿಸಿದ್ದಾರೆ.

-ಭಾಸ್ಕರ ರೈ ಕುಕ್ಕುವಳ್ಳಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಯಕ್ಷ ನಾಟ್ಯ ಗುರು, ವೇಷಧಾರಿ ದಿವಾಣ ಶಿವಶಂಕರ ಭಟ್

Upayuktha

ಫಿಲೋಮಿನಾದಲ್ಲಿ ಪ್ರದರ್ಶನಗೊಂಡ ‘ಅಗ್ರಪೂಜೆ’ ಯಕ್ಷರೂಪಕ

Upayuktha

ಸೌಂದರ್ಯ ಚಿಕಿತ್ಸೆಯ ಮುಂಚೂಣಿ ಸಾಧಕಿ ವಂದನಾ ಲುತ್ರಾ

Upayuktha