ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂವಿಧಾನ ನಮ್ಮ ರಾಷ್ಟ್ರದ ತಳಪಾಯ: ಮಹೇಶ್ ಕಜೆ

ಬಪ್ಪಳಿಗೆಯ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

ಪುತ್ತೂರು: ಸಂವಿಧಾನ ನಮ್ಮ ರಾಷ್ಟ್ರದ ತಳಪಾಯ. ಇದರ ಆಧಾರದಲ್ಲಿ ದೇಶದ ವ್ಯವಸ್ಥೆ ಬೆಳೆದುಬಂದಿದೆ. ಈ ಉತ್ಕೃಷ್ಟ ಸಂವಿಧಾನವನ್ನು ಕಾಪಾಡಿಕೊಳ್ಳುವ ಹೊಣೆ ಭಾರತೀಯರೆಲ್ಲರ ಮೇಲಿದೆ. ದೇಶಸೇವೆಗೆ ಅವಕಾಶ ದೊರೆಯುವುದು ನಮ್ಮ ಪೂರ್ವಜನ್ಮದ ಸುಕೃತ ಎಂದುಕೊಳ್ಳಬೇಕು. ಈ ದೇಶಕ್ಕಾಗಿ ಕೃತಿಯ ಮೂಲಕ ತಾನೇನು ಮಾಡಬಹುದು ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕು ಎಂದು ಅಂಬಿಕಾ ಬಾಲವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ಹೇಳಿದರು.

ಅವರು ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯಲ್ಲಿನ ಅಂಬಿಕಾ ಬಾಲವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.

ಮತ್ತೋರ್ವ ಅತಿಥಿ ಪುತ್ತೂರಿನ ವೈದ್ಯ ಡಾ.ದೀಪಕ್ ರೈ ಮಾತನಾಡಿ ನಮ್ಮ ದೇಶಕ್ಕಾಗಿ ಅನೇಕ ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರುಗಳ ತ್ಯಾಗದ ಫಲವಾಗಿ ನಾವಿಂದು ಹೆಮ್ಮೆಯಿಂದ ಬದುಕುವುದಕ್ಕೆ ಸಾಧ್ಯವಾಗಿದೆ. ಮುಂದಿನ ಜನಾಂಗಕ್ಕೆ ಮತ್ತಷ್ಟು ದೇಶಸೇವೆಗೈಯುವ ಅವಕಾಶವಿದೆ. ಅದನ್ನು ಸದ್ಭಳಕೆ ಮಾಡಿಕೊಂಡು ಆತ್ಮನಿರ್ಭರ ಭಾರತವನ್ನು ಬೆಳೆಸಬೇಕಾಗಿದೆ. ಜಾತಿ ಧರ್ಮವನ್ನು ಮೀರಿ ನಾವು ಮುಂದುವರಿಯಬೇಕು ಎಂದು ಕರೆನೀಡಿದರು.

ತೀರಾ ಇತ್ತೀಚೆಗಿನವರೆಗೆ ಭಾರತೀಯರನ್ನು ದ್ವಿತೀಯ, ತೃತೀಯ ದರ್ಜೆ ನಾಗರಿಕರೆಂಬಂತೆ ಕಾಣಲಾಗುತ್ತಿತ್ತು. ಆದರೆ ಇದೀಗ ಚಿತ್ರಣ ಬದಲಾಗಿದೆ. ನಮ್ಮನ್ನು ಜಗತ್ತು ಗೌರವದಿಂದ ಕಾಣುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಿರುವಾಗ ನಾಗರಿಕರಾದ ನಾವು ದೇಶ ಮೊದಲು ಎಂಬ ಭಾವನೆಯಿಂದ ಕಾರ್ಯತತ್ಪರರಾಗಬೇಕು. ನಮ್ಮ ಮೇಲೆ ದೇಶದ ಗೌರವವನ್ನು ಎತ್ತಿಹಿಡಿಯುವ ಬಹುದೊಡ್ಡ ಜವಾಬ್ಧಾರಿ ಇದೆ ಎಂಬುದನ್ನು ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ, ಬಾಲವಿದ್ಯಾಲಯದ ಪ್ರಾಂಶುಪಾಲೆ ಸುಜನಿ ಬೋರ್ಕರ್ ಮತ್ತಿತರರು ಉಪಸ್ಥಿತರಿದ್ದರು. ಬಾಲವಿದ್ಯಾಲಯದ ಆರನೆಯ ತರಗತಿ ವಿದ್ಯಾರ್ಥಿ ಮನಸ್ವಿತ್ ಭಂಡಾರಿ ಪ್ರಜಾಪ್ರಭುತ್ವ ದಿನದ ಮಹತ್ವವನ್ನು ತಿಳಿಸಿದರು.

ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರು ವಂದೇ ಮಾತರಂ, ಝಂಡಾ ಊಂಚಾ ರಹೇ ಹಮಾರಾ ಹಾಗೂ ಜನಗಣಮನ ಗೀತೆಗಳನ್ನು ಪ್ರಸ್ತುತಪಡಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ ಭಟ್ ವಂದಿಸಿದರು. ಬಾಲವಿದ್ಯಾಲಯದ ಶಿಕ್ಷಕಿ ಸುಜಯಾ ಕಾರ್ಯಕ್ರಮ ನಿರ್ವಹಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮನಪಾ ಗದ್ದುಗೆ ಬಿಜೆಪಿಗೆ: ವಾರ್ಡ್‌ವಾರು ಫಲಿತಾಂಶದ ಪೂರ್ಣ ವಿವರ

Upayuktha

ಮಾಲ್‌ನಲ್ಲಿ ಹಲ್ಲೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಮೂವರು ವಿದ್ಯಾರ್ಥಿಗಳ ಬಂಧನ

Upayuktha

ಕನ್ನೆಪ್ಪಾಡಿ ಶ್ರೀಮಹಿಷಾಂದಯ ಕೊರಗಜ್ಜ ದೇವಸ್ಥಾನದಲ್ಲಿ ಪುದ್ವಾರ್ ಕಾರ್ಯಕ್ರಮ

Upayuktha