ಕಲೆ ಸಂಸ್ಕೃತಿ ದೇಶ-ವಿದೇಶ

ಪುರಿ ಕಡಲತೀರದಲ್ಲಿ ಕೈಚಳಕ ದಿಂದ ಅರಳಿದ ಶ್ರೀರಾಮ ಮಂದಿರ

ಅಯೋಧ್ಯೆಯಲ್ಲಿ ಇವತ್ತು ಸಂಭ್ರಮವೋ ಸಂಭ್ರಮ. ಯಾಕೆಂದರೆ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಅಯೋಧ್ಯೆ ಸಾಕ್ಷಿಯಾಗುತ್ತಿದೆ. 500ವರ್ಷಗಳ ಕನಸನ್ನು ನನಸು ಮಾಡುವ ಕ್ಷಣ. ಈ ಖುಷಿಯ ಕ್ಷಣಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ದೇಶದ ಬಹುಭಾಗಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ, ಒಡಿಶಾದ ಪುರಿ ಕಡಲತೀರದಲ್ಲಿ ಶ್ರೀರಾಮ ಮಂದಿರದ ಮರಳಿನ ಕಲಾಕೃತಿ ಗಮನ ಸೆಳೆಯುತ್ತಿದೆ.


ಭಾರತದ ಪ್ರಖ್ಯಾತ ಮರಳುಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ಕೈಯಲ್ಲರಳಿದ ಮಂದಿರದ ಕಲಾಕೃತಿಯಿದು. ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಶುಭ ಹಾರೈಸಿ ಸುದರ್ಶನ್ ಪಟ್ನಾಯಕ್ ಅವರು ಮರಳಿನಲ್ಲಿಯೇ ಶ್ರೀರಾಮ ಮತ್ತು ಮಂದಿರದ ಶಿಲ್ಪವನ್ನು ರಚಿಸಿದ್ದಾರೆ. ಈ ಮರಳು ಶಿಲ್ಪ ಈಗ ಪುರಿ ಕಡಲತೀರದ ಪ್ರಮುಖ ಜನ ಮನ ಸೆಳೆಯುತ್ತದೆ.

ಪಟ್ನಾಯಕ್ ಅವರು ಭೂಮಿ ಪೂಜೆಯ ಸಮಯದಲ್ಲಿ ಅಯೋಧ್ಯೆಯಲ್ಲಿಯೇ ದೇವಾಲಯದ ಮರಳು ಶಿಲ್ಪವನ್ನು ರಚಿಸಲು ಉತ್ಸುಕರಾಗಿದ್ದರು. ಆದರೆ, ಕೋವಿಡ್ -19 ಕಾರಣದಿಂದ ಇವರು ಈ ಮರಳು ಶಿಲ್ಪವನ್ನು ಪುರಿ ಬೀಚ್‌ನಲ್ಲಿ ನಿರ್ಮಿಸಿದ್ದಾರೆ. `ವಾಸ್ತವವಾಗಿ, ನಾನು ಕಳೆದ ವರ್ಷ ಅಯೋಧ್ಯೆಗೆ ಭೇಟಿ ನೀಡಿದ್ದೆ ಮತ್ತು ಈ ಉದ್ದೇಶಕ್ಕಾಗಿ ಒಂದು ಅಧ್ಯಯನ ಕೂಡಾ ನಡೆಸಿದ್ದೆ. ಆದರೆ, ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ನಾನು ನನ್ನ ಯೋಜನೆಗಳನ್ನು ಬದಲಾಯಿಸಬೇಕಾಯಿತು’ ಎಂದು ಪಟ್ನಾಯಕ್ ಹೇಳಿದ್ದಾರೆ.

ಪಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ರಾಮ ಮಂದಿರದ ಐದು ಅಡಿ ಎತ್ತರದ ಪ್ರತಿಕೃತಿ ರಚಿಸಿದ್ದಾರೆ. ಇದಕ್ಕಾಗಿ ಇವರು ಸುಮಾರು ನಾಲ್ಕು ಟನ್ ಮರಳನ್ನು ಬಳಸಿದ್ದಾರೆ. ಈ ಮರಳು ಶಿಲ್ಪ ನಿರ್ಮಾಣಕ್ಕೆ ಸುಮಾರು ಐದು ಗಂಟೆಗಳ ಕಾಲ ಹಿಡಿದಿತ್ತು. ಸದ್ಯಕ್ಕೆ ಇವರ ಕನಸು ನನಸಾಯಿತು. ಸದ್ಯ ಪಟ್ನಾಯಕ್ ಅವರ ಈ ಮರಳು ಶಿಲ್ಪದ ಫೋಟೋ, ವಿಡಿಯೋ ಹಲವು ಮಂದಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

Related posts

ಬಣ್ಣದ ಮಹಾಲಿಂಗರು ಏಳು ದಶಕಗಳ ಯಕ್ಷಗಾನ ಸ್ಥಿತ್ಯಂತರದ ಕಥಾನಾಯಕ: ಡಾ. ಚಂದ್ರಶೇಖರ ದಾಮ್ಲೆ

Upayuktha

ಪೆರ್ಲ: 14ನೇ ವರ್ಷದ ‘ಪಡ್ರೆ ಯಕ್ಷೋತ್ಸವ’ಕ್ಕೆ ಕ್ಷಣಗಣನೆ

Upayuktha

ಹಿಂದೂ ಮಹಾಸಾಗರದಲ್ಲಿ ಚೀನೀ ನೌಕೆಗಳ ಗಸ್ತು

Upayuktha

Leave a Comment

error: Copying Content is Prohibited !!