ಚಂದನವನ- ಸ್ಯಾಂಡಲ್‌ವುಡ್ ಸಾಧಕರಿಗೆ ನಮನ

ಇಂದಿನ ಐಕಾನ್: ಕನ್ನಡ ಸಿನೆಮಾದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್

ಕನ್ನಡ ಸಿನಿಮಾರಂಗವನ್ನು 60-80ರ ದಶಕಗಳಲ್ಲಿ ವಸ್ತುಶಃ ಆಳಿದ, ಕನ್ನಡ ಚಿತ್ರರಂಗಕ್ಕೆ ಅಸಾಮಾನ್ಯ ಚಿತ್ರರತ್ನಗಳನ್ನು ನೀಡಿದ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ಎಷ್ಟು ಬರೆದರೂ ಮುಗಿದು ಹೋಗುವುದಿಲ್ಲ. ಅವರು ನಿರ್ದೇಶನ ಮಾಡಿದ ಇಪ್ಪತ್ತನಾಲ್ಕು ಸಿನಿಮಾಗಳೂ ಕನ್ನಡದ ಮಾಸ್ಟರ್ ಪೀಸ್ ಸಿನಿಮಾಗಳು.

ಬೆಳ್ಳಿಮೋಡ, ಶರಪಂಜರ, ಗೆಜ್ಜೆಪೂಜೆ, ರಂಗನಾಯಕಿ, ಮಾನಸ ಸರೋವರ, ಶುಭಮಂಗಳ, ಸಾಕ್ಷಾತ್ಕಾರ, ಎಡಕಲ್ಲು ಗುಡ್ಡದ ಮೇಲೆ, ಕಥಾ ಸಂಗಮ, ನಾಗರ ಹಾವು, ಅಮೃತ ಘಳಿಗೆ, ಋಣಮುಕ್ತಳು, ಮಸಣದ ಹೂವು, ಉಪಾ‌ಸನೆ, ಧರ್ಮ ಸೆರೆ, ಫಲಿತಾಂಶ, ಕಾಲೇಜು ರಂಗ, ಕಪ್ಪು ಬಿಳುಪು…….
ಇವೆಲ್ಲ ಸಿನಿಮಾಗಳನ್ನು ನಾನು ಹಲವು ಬಾರಿ ನೋಡಿದ್ದೇನೆ, ಮತ್ತೆ ಮತ್ತೆ ನೋಡುತ್ತಿದ್ದೇನೆ.

ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದ ಪುಟ್ಟಣ್ಣ ಶಾಲೆಯಲ್ಲಿ ಹೆಚ್ಚು ಓದಿದವರಲ್ಲ. ಹೊಟ್ಟೆಪಾಡಿಗಾಗಿ ಕ್ಲೀನರ್, ಸೇಲ್ಸಮ್ಯಾನ್, ಟೀಚರ್, ಡ್ರೈವರ್, ಪೋಸ್ಟರ್ ಬಾಯ್ ಮೊದಲಾದ ಹತ್ತಾರು ವೃತ್ತಿಗಳನ್ನು ಅವರು ಮಾಡಬೇಕಾಯಿತು. ಮುಂದೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಬಿ.ಆರ್. ಪಂತುಲು ಅವರ ಕಾರ್ ಡ್ರೈವರ್ ಆಗಿ, ನಂತರ ಅವರ ಸಹ ನಿರ್ದೇಶಕನಾಗಿ ಮೊದಲ ಹೆಜ್ಜೆಗಳನ್ನು ಕಲಿತರು. ಬೆಳ್ಳಿಮೋಡ ಅವರು ಕನ್ನಡದಲ್ಲಿ ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರ. ಮುಂದೆ ಇಪ್ಪತ್ತು ವರ್ಷಗಳ ಕಾಲ ಅವರಿಗೆ ಕನ್ನಡದಲ್ಲಿ ‌ಸ್ಪರ್ಧಿಗಳೇ ಇರಲಿಲ್ಲ. ಅವರು ನಿರ್ದೇಶನ ಮಾಡಿದ್ದರಲ್ಲಿ 90% ಕಾದಂಬರಿ ಆಧಾರಿತ ಚಿತ್ರಗಳು. ಎಲ್ಲವೂ ಸೂಪರ್ ಹಿಟ್! ಎಲ್ಲವೂ ಮಹಿಳಾ ಕೇಂದ್ರಿತ ಚಿತ್ರಗಳು. ಆ ಕಾಲಕ್ಕೆ ಕ್ರಾಂತಿಕಾರಕ ಕಥೆ ಹೊಂದಿದವುಗಳು.

ದೇವದಾಸಿ ಪದ್ಧತಿ (ಗೆಜ್ಜೆ ಪೂಜೆ), ಮನೋ ವೈಜ್ಞಾನಿಕ ಹಿನ್ನೆಲೆಯ ಕತೆ (ಮಾನಸ ಸರೋವರ ಮತ್ತು ಶರಪಂಜರ), ವಿವಾಹೇತರ ಅನೈತಿಕ ಸಂಬಂಧ (ಎಡಕಲ್ಲು ಗುಡ್ಡದ ಮೇಲೆ), ಮಗನೇ ತಾಯಿಯನ್ನು ಪ್ರೇಮಿಸುವ ಕತೆ (ರಂಗ ನಾಯಕಿ), ವೇಶ್ಯಾವಾಟಿಕೆಯ ಕಥೆ (ಮಸಣದ ಹೂವು) ಹೀಗೆ! ಹಾಡುಗಳ ಆಯ್ಕೆ, ಸಾಹಿತ್ಯ, ಚಿತ್ರೀಕರಣ ಎಲ್ಲದರಲ್ಲೂ ಪುಟ್ಟಣ್ಣ ಏಕಮೇವಾದ್ವಿತೀಯ! ಚಿತ್ರಕತೆ ಹೆಣೆಯುವ ಕಲೆಯಲ್ಲಿ ಅವರಿಗೆ ಅವರೇ ಸಮ. ಸಂಗೀತದಲ್ಲಿ ಅವರಿಗೆ ವಿಶೇಷ ಆಸಕ್ತಿ ಇದ್ದ ಕಾರಣ ಅವರ ಸಿನಿಮಾದ ಎಲ್ಲಾ ಹಾಡುಗಳೂ ಚಿರಂಜೀವಿ. ಸಿನೆಮಾದ ಸಣ್ಣ ಸಣ್ಣ ಪಾತ್ರಗಳ ಪೋಷಣೆಯಲ್ಲಿ ಅವರಿಗೆ ವಿಶೇಷ ಆಸಕ್ತಿ.

ವಿಷ್ಣುವರ್ಧನ್, ರಜನೀಕಾಂತ್, ಅಂಬರೀಶ್, ಶ್ರೀನಾಥ್, ಕಲ್ಪನಾ, ಆರತಿ, ಲೀಲಾವತಿ, ಶ್ರೀಧರ್, ಅಪರ್ಣಾ, ಪದ್ಮಾ ವಾಸಂತಿ, ರಾಮಕೃಷ್ಣ, ಜಯಂತಿ, ಚಂದ್ರಶೇಖರ್, ಜೈಜಗದೀಶ್….ಇವರನ್ನೆಲ್ಲಾ ತೆರೆಗೆ ದೊಡ್ಡದಾಗಿ ಪರಿಚಯಿಸಿದವರು ಇದೇ ಪುಟ್ಟಣ್ಣ. ಹಲವು ಕಥೆಗಳನ್ನು ಜೋಡಿಸಿ ಅವರು ಮಾಡಿದ ‘ಕಥಾಸಂಗಮ’ ಸಿನಿಮಾ ಕನ್ನಡಕ್ಕಂತೂ ಹೊಸತು. ಸ್ಲೋ ಮೋಶನ್ನಿನಲ್ಲಿ ಇಡೀ ಹಾಡು ಚಿತ್ರೀಕರಣ (ಬಾರೆ ಬಾರೆ- ನಾಗರ ಹಾವು) ಮಾಡಿದ್ದೂ ಅವರೇ.

ತಾನು ಪ್ರೀತಿ ಮಾಡಿದ ತನ್ನ ಹೆಚ್ಚಿನ ಚಿತ್ರಗಳ ನಾಯಕಿ ಆರತಿಯನ್ನು ಮೆಚ್ಚಿ ಮದುವೆ ಆದವರು ಪುಟ್ಟಣ್ಣ. ಪುಟ್ಟಣ್ಣ ಅವರಿಗೆ ಮೊದಲೇ ಮದುವೆ ಆಗಿ ಮಕ್ಕಳು ಇದ್ದರು. ಮುಂದೆ ಆರತಿ ಕೈ ಕೊಟ್ಟು ಹೋದಾಗ ನಿರಾಸೆಯ ಶಿಖರ ಮುಟ್ಟಿದ ಪುಟ್ಟಣ್ಣ ಸೇಡು ತೀರಿಸಿಕೊಳ್ಳಲು ಮಾನಸ ಸರೋವರ ಸಿನೆಮಾ ಮಾಡಿದರು. ತನ್ನ ಸಿನೆಮಾ ನಿರ್ದೇಶನಕ್ಕೆ 3 ರಾಷ್ಟ್ರ ಪ್ರಶಸ್ತಿ, 13 ರಾಜ್ಯ ಪ್ರಶಸ್ತಿ, 3 ಫಿಲಂ ಫೇರ್ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅವರ ದಾರಿಯಲ್ಲಿ ಟಿ. ಎನ್. ಸೀತಾರಾಂ, ವಿಶ್ವನಾಥ್, ರವಿ ಮೊದಲಾದ ಹತ್ತಾರು ನಿರ್ದೇಶಕರು ಕನ್ನಡ ಸಿನೆಮಾ ರಂಗವನ್ನು ಮುಂದೆ ಬೆಳಗಿದರು.

ಪುಟ್ಟಣ್ಣ ಅವರ ಸಿನಿಮಾಗಳು ಎಷ್ಟು ವೈಭವಪೂರ್ಣ ಆಗಿದ್ದವೋ ಅವರ ಖಾಸಗಿ ಬದುಕು ಅಷ್ಟೇ ದುರಂತವಾಗಿತ್ತು ಮತ್ತು ಭಾರೀ ವೈರುಧ್ಯಗಳಿಂದ ಕೂಡಿತ್ತು. ಕೊನೆಯ ಕೆಲವು ಸಿನೆಮಾಗಳ ಸೋಲು ಅವರನ್ನು ಅಲ್ಲಾಡಿಸಿ ಬಿಟ್ಟಿತು.

ಅವರು 1985ರಲ್ಲಿ ನಮ್ಮನ್ನು ಬಿಟ್ಟು ಹೋದರು. ಆದರೆ ಅವರ ಸಿನೆಮಾಗಳಿಗೆ ಎಂದಿಗೂ ಸಾವು ಇಲ್ಲ. ಪುಟ್ಟಣ್ಣ ಕಣಗಾಲ್ ಹೆಸರಿನಲ್ಲಿ ಕರ್ನಾಟಕ ಸರಕಾರವು ಪ್ರತೀ ವರ್ಷ ಓರ್ವ ಸಿನಿಮಾ ರಂಗದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

– ರಾಜೇಂದ್ರ ಭಟ್ ಕೆ.
ಜೇಸಿಐ ರಾಷ್ಟ್ರೀಯ ತರಬೇತುದಾರರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಅನಾಥಾಲಯದಲ್ಲಿ ಬೆಳೆದು ಯಶಸ್ವಿ ಉದ್ಯಮಿಯಾದ ಕ್ರಿಸ್ ಪಾಲ್ ಗಾರ್ಡ್ನರ್

Upayuktha

ಹಿರಿಯ ನಟಿ ಪ್ರತಿಮಾದೇವಿ ನಿಧನ

Harshitha Harish

ಮಲಯಾಳಂ ಚಿತ್ರರಂಗ ದ ಖ್ಯಾತ ಸಾಹಿತಿ ಮತ್ತು ಕವಿ ಅನಿಲ್ ಪಣಚೂರನ್ ನಿಧನ

Harshitha Harish