ನಗರ ಸ್ಥಳೀಯ

‘ಗತಿಸಿದ ಹಿರಿಯರ ಅಪೇಕ್ಷೆ ಈಡೇರಿಸುವುದೂ ಶ್ರಾದ್ಧಕ್ಕೆ ಸಮನಾದ ಗೌರವ’

ಹಿರಿಯರ ನೆನಪು-ಸಂಸ್ಕೃತಿ ಸಂಭ್ರಮ- 2021ರಲ್ಲಿ ಪುತ್ತಿಗೆ ಶ್ರೀ ಸಂದೇಶ

ಉಡುಪಿ: ನಮ್ಮ ಪೂರ್ವಜರನ್ನು ಸ್ಮರಿಸಿ ಅವರ ಅನುಗ್ರಹ ಪಡೆಯಲು ಶ್ರಾದ್ಧಾದಿ ಶಾಸ್ತ್ರೀಯ ಕರ್ತವ್ಯಗಳನ್ನು ನಡೆಸುತ್ತೇವೆ.‌ ಅದೇ ರೀತಿ ಅವರ ಸಾತ್ವಿಕ ಅಪೇಕ್ಷೆಗಳನ್ನು ಈಡೇರಿಸುವುದು ಅಥವಾ ಅವರ ಆಶಯದಂತೆ ನಡೆದುಕೊಳ್ಳುವುದೂ ಶ್ರಾದ್ಧ ಕಾರ್ಯಕ್ಕೆ ಸಮ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂದೇಶ ನೀಡಿದರು.

ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರಿಂದ ಸ್ಥಾಪಿತವಾದ ಈಶಾವಾಸ್ಯ ಪ್ರತಿಷ್ಠಾನ ಉಡುಪಿ- ಬೆಂಗಳೂರು ಇದರ ವತಿಯಿಂದ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ಶನಿವಾರ ಸಂಜೆ ನಡೆದ ಹಿರಿಯರ ನೆನಪು 2021 ಸಂಸ್ಕೃತಿ ಸಂಭ್ರಮ‌ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಬನ್ನಂಜೆಯವರಂತಹ ಧೀಮಂತರು ನಡೆಸಿದ ವಾಙ್ಮಯ ಸೇವೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಮತ್ತು ಅವರು ನಡೆಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕರ್ತವ್ಯಗಳನ್ನು ಮುನ್ನಡೆಸುವುದು ಅತೀ ಅವಶ್ಯವಾಗಿದೆ.‌ ಅಕ್ಷರಶಃ ಜ್ಞಾನದೂತನಂತೆಯೇ ಬದುಕಿ ಮಧ್ವಶಾಸ್ತ್ರ ಪ್ರಸಾರ, ಭಗವಂತನ ಭಕ್ತಿ ಸಂದೇಶದ ಪ್ರಸಾರ ಕಾರ್ಯಗಳನ್ನು ತಪಸ್ಸಿನಂತೆ ಆಚರಿಸಿದ ಅವರ ಅಪೂರ್ವ ನಡೆಗಳಲ್ಲಿ ಹೆಜ್ಜೆ ಇಡುವುದೂ ಶ್ರೇಷ್ಠ ಕಾರ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.

ಬನ್ನಂಜೆಯವರು ಅವರ ಹಿರಿಯರ ನೆನಪಿನಲ್ಲಿ ಸಮಾಜದ ಸಾಧಕರನ್ನು ಗೌರವಿಸುವ ಸಂಪ್ರದಾಯವನ್ನು ಮುನ್ನಡೆಸುವ ಆಶಯದಂತೆ ಉಡುಪಿಯ ಪ್ರಸಿದ್ಧ ವಿದ್ವಾಂಸ, ಡಾ ರಾಮನಾಥ ಆಚಾರ್ಯ ಮತ್ತು ಬೆಂಗಳೂರಿನ ಪ್ರಸಿದ್ಧ ಹೋಮಿಯೋಪತಿ ವೈದ್ಯ ಡಾ ಎಚ್ ಎಸ್ ವೇಂಕಟೇಶ್ ಅವರಿಗೆ ಜ್ಞಾನ ದೇಗುಲ ಪ್ರಶಸ್ತಿ ನೀಡಿ ಸಂಮಾನಿಸಲಾಯಿತು.‌

ಪ್ರತಿಷ್ಠಾನದ ವತಿಯಿಂದ ಪುನರ್ ಪ್ರಕಟಿಸಲಾದ ಬನ್ನಂಜೆಯವರ ಪುರಂದರೋಪನಿಷತ್ತು ಮತ್ತು ತಲವಕಾರೋಪನಿಷತ್ತು‌ (ಬನ್ನಂಜೆ ಭಾಷ್ಯ ಸಹಿತ) ಕೃತಿಗಳನ್ನು ಪುತ್ತಿಗೆ ಶ್ರೀಗಳು ಲೋಕಾರ್ಪಣೆಗೊಳಿಸಿದರು.

ಹಿರಿಯ ಚಿಂತಕ, ಸಾಹಿತಿ ಅಂಬಾತನಯ ಮುದ್ರಾಡಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು ಬನ್ನಂಜೆಯವರಂಥಹ ಮಹಾಜ್ಞಾನಿಗಳ ಅಲ್ಪ ಒಡನಾಟವೂ ಪೂರ್ವರ್ಜನ್ಮದ ಸುಕೃತವೇ ಆಗಿದೆ.‌ ಅವರ ಸಾಹಿತ್ಯದ ಕೊಡುಗೆಗಳು ಅನುಗಾಲ ಸ್ಮರಣೀಯ ಎಂದರು.‌ ಶ್ರೀ ಕ್ಷೇತ್ರ ಅಂಬಲಪಾಡಿಯ ಆಡಳಿತ ಧರ್ಮದರ್ಶಿ ಡಾ ನಿ ಬೀ ವಿಜಯ ಬಲ್ಲಾಳ ಉಪಸ್ಥಿತರಿದ್ದರು.

ಡಾ ರಾಮನಾಥ ಆಚಾರ್ಯರು ಸಂಮಾನಕ್ಕೆ ಕೃತಜ್ಞತೆ ಅರ್ಪಿಸಿ ಬನ್ನಂಜೆಯವರ ಶಿಷ್ಯರು ಅಭಿಮಾನಿಗಳು ಹಿತೈಷಿಗಳು ಎಲ್ಲರೂ ಸೇರಿ ಅವರ ಎಲ್ಲ ಸಾಹಿತ್ಯಿಕ ಕೃತಿಗಳನ್ನು ಜಿಜ್ಞಾಸುಗಳಿಗೆ ಯಥಾವತ್ ತಲುಪಿಸುವ ಕೆಲಸ ಮಾಡಬೇಕು ಎಂದರು.

ಪ್ರತಿಷ್ಠಾನದ ಅಧ್ವರ್ಯು ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ಪ್ರಸ್ತಾವನೆ ಸಹಿತ ಸ್ವಾಗತಿಸಿದರು.

ಬನ್ನಂಜೆಯವರ ಸುಪುತ್ರ ವಿನಯಭೂಷಣ ಆಚಾರ್ಯ ವಂದನಾರ್ಪಣೆಗೈದರು.

ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.‌ ಅಭಿರಾಮ್, ವಿಘ್ನೇಶ್, ಪ್ರಶಾಂತ್ ಶೆಟ್ಟಿ, ಸಹಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಮತ್ತು ಅವರ ಸುಪುತ್ರಿ ಯುವ ಗಾಯಕಿ ಗಾರ್ಗಿ ಸುದೀಪ್ ಅವರಿಂದ “ರಾಗಧಾರಾ” ಯಕ್ಷ- ಭಕ್ತಿ- ಸುಗಮ ಸಂಗೀತ ಯುಗಳ ಗಾಯನ ನಡೆಯಿತು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕೆಲಸ ಫಲ ಕೊಡಬೇಕಾದರೆ ಶ್ರದ್ಧೆ ಮುಖ್ಯ: ಅರವಿಂದ ಕುಡ್ಲ

Upayuktha

ಪೆರ್ಲ: ನಿವೃತ್ತರಾದ ಶಿಕ್ಷಕರಿಗೆ ವಿದಾಯ ಕೂಟ

Upayuktha

ನಾಳೆ ಗೋಕುಲ್ ಸ್ಟುಡಿಯೋ & ಇವೆಂಟ್ಸ್ ಶುಭಾರಂಭ

Harshitha Harish