ಆರೋಗ್ಯ ಲೇಖನಗಳು

ಕ್ವಾರಂಟೈನ್ (ದಿಗ್ಭಂಧನ): ಯಾಕೆ, ಏನು, ಹೇಗೆ?

ಮನುಷ್ಯ ಇತರ ಪ್ರಾಣಿಗಳಿಗಿಂತ ಭಿನ್ನ ಜೀವಿ ಆತ ಯಾವತ್ತೂ ಒಬ್ಬಂಟಿಯಾಗಿ ಜೀವಿಸಲಾರ. ಆತ ಎಂದಿಗೂ ಸಂಘಜೀವಿಯಾಗಿರಲು ಇಚ್ಛಿಸುತ್ತಾನೆ. ತನ್ನ ಸುತ್ತಮುತ್ತ ಸ್ನೇಹಿತರು, ಕುಟುಂಬದವರು, ಆತ್ಮೀಯರು ಹೀಗೆ ಎಲ್ಲರ ಜೊತೆ ಬದುಕುವ ಕಲೆ ಕರಗತ ಮಾಡಿಕೊಂಡಿದ್ದಾನೆ. ಆದರೆ ಇತ್ತೀಚೆಗೆ ಮನುಕುಲಕ್ಕೆ ಬರಸಿಡಿಲಿನಂತೆ ಅಚಾನಕ್ ಆಗಿ ಬಂದೆರಗಿದ ಕೊರೋನಾ ವೈರಾಣು ಮಹಾಮಾರಿ ರೋಗ ಮನುಕುಲವನ್ನು ಧೃತಿಗೆಡಿಸಿದೆ. ಇದೊಂದು ಸಾಂಕ್ರಮಿಕ ರೋಗವಾದ ಕಾರಣ ಮನುಷ್ಯನಿಂದ ಮನುಷ್ಯನಿಗೆ ಸ್ಪರ್ಶದ ಮುಖಾಂತರ ಸುಲಭವಾಗಿ ಹರಡುವ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಶಂಕಿತರನ್ನು ಮತ್ತು ಸೋಂಕಿತ ರೋಗಿಗಳನ್ನು ಗುರುತಿಸಿ ಇತರರ ಸಂಪರ್ಕದಿಂದ ದೂರವಿರಿಸಿ ಏಕಾಂಗಿಯಾಗಿ ಬದುಕುವಂತೆ ಮಾಡಲಾಗುತ್ತದೆ. ಆ ಮೂಲಕ ಶಂಕಿತ ಮತ್ತು ಸೋಂಕಿತರಿಂದ ವೈರಾಣು ಇತರರಿಗೆ ಪಸರಿಸದಂತೆ ಮಾಡಿ ವೈರಾಣುವಿನ ಜೀವನ ಚಕ್ರವನ್ನು ತುಂಡರಿಸಿ ರೋಗವನ್ನು ನಿಯಂತ್ರಿಸುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಜನರಿಗೆ ಹೊಸ ಹೊಸ ಪದಪುಂಜಗಳ ಅರಿವು ದಿನಕ್ಕೊಂದರಂತೆ ಹೊರ ಬೀಳುತ್ತಿದೆ. ಲಾಕ್‍ಡೌನ್, ಸೀಲ್‍ಡೌನ್, ಕ್ವಾರಂಟೈನ್, ಐಸೋಲೇಷನ್ ಹೀಗೆ ಹೊಸ ಹೊಸ ವಿಚಿತ್ರ ಪದಪುಂಜಗಳ ಸರಮಾಲೆ ಜನರನ್ನು ದಿಗ್ಬ್ರಮೆಗೊಳಿಸುತ್ತಿದೆ. ಸಾಂಕ್ರಾಮಿಕ ಅಥವಾ ಸೋಂಕು ರೋಗದ ಸಮಯದಲ್ಲಿ ಮಾತ್ರ ಈ ರೀತಿಯ ಜೀವನಕ್ರಮ ಅನುಸರಿಸಬೇಕು ಎಂದು ಹಿಂದಿನ ಚರಿತ್ರೆಯ ಘಟನೆಗಳಿಂದಲೂ ಸಾಬೀತಾಗಿದೆ.

ಏನಿದು ಕ್ವಾರಂಟೈನ್:
ಅಚ್ಚ ಕನ್ನಡದಲ್ಲಿ ಕ್ವಾರಂಟೈನ್ ಶಬ್ದಕ್ಕೆ ‘ದಿಗ್ಬಂಧನ’ ಎಂದು ಕರೆದಿರುತ್ತಾರೆ. ಬಹಳ ಹಿಂದೆ ಯೂರೋಪಿನಲ್ಲಿ ಮತ್ತು ಏಷ್ಯಾ ಖಂಡದಲ್ಲಿ ಪ್ಲೇಗ್ ಎಂಬ ಮಹಾಮಾರಿ ಬಂದಿತ್ತು. 1370 ರಲ್ಲಿ ಈ ಘಟನೆ ನಡೆದಿತ್ತು. ಯುರೋಪಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಇಟಲಿಯ ವೆನಿಸ್ ನಗರದ ಬಂದರಿನಲ್ಲಿ ಹೊರ ದೇಶಗಳಿಂದ ಬಂದ ವರ್ತಕರನ್ನು ರೋಗ ಹರಡಬಾರದೆಂಬ ದೃಷ್ಠಿಯಿಂದ ಸಮೀಪದ ದ್ವೀಪದಲ್ಲಿ 40 ದಿನಗಳ ಕಾಲ ಕೂಡಿ ಹಾಕಲಾಗುತ್ತಿತ್ತು. 40 ದಿನಗಳ ನಂತರ ಬದುಕುಳಿದವರನ್ನು ಮಾತ್ರ ವೆನಿಸ್ ನಗರಕ್ಕೆ ಬಂದರಿನ ಮುಖಾಂತರ ಸೇರಿಸಿಕೊಳ್ಳಲಾಗುತ್ತಿತ್ತು. 40 ದಿನಗಳ ಏಕಾಂತ ವಾಸವನ್ನು ಇಟಲಿಯ ಬಾಷೆಯಲ್ಲಿ ಕ್ವಾರಂಟಿನ್ ಎಂದು ಕರೆಯಲಾಗುತ್ತಿತ್ತು. ಮುಂದೆ ಇದೇ ಕ್ವಾರಂಟಿನ, ‘ಕ್ವಾರಂಟೈನ್’ ಎಂದು ರೂಡಿಗೆ ಬಂದಿತು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ನಿರ್ಧಿಷ್ಟ ಅವಧಿಗೆ ಶಂಕಿತ ವ್ಯಕ್ತಿಯನ್ನು ಅಥವಾ ಪ್ರಾಣಿಯನ್ನು ಬೇರೆಯವರ ಸಂಪರ್ಕಕ್ಕೆ ಬಾರದಂತೆ ಇಡುವ ಪ್ರಕ್ರಿಯೆನ್ನು ಕ್ವಾರಂಟಿನ್ ಅಥವಾ ದಿಗ್ಬಂಧನ ಎನ್ನಲಾಗುತ್ತದೆ. ಆರಂಭದಲ್ಲಿ ಈ ಅವಧಿ 40 ದಿನಗಳವರೆಗೆ ಇತ್ತು ಬಳಿಕ ಮೂವತ್ತು ದಿನಗಳಿಗೆ ತೆರವು ಮಾಡಲಾಗಿತ್ತು. ಬಳಿಕ ಸಾಂಕ್ರಾಮಿಕ ರೋಗದ ಕಿಟಕಿ ಅವಧಿ ಅಥವಾ ಮಾಗುವ ಸಮಯದ ಅಧಾರದ ಮೇಲೆ ಕ್ವಾರಂಟೈನ್ ಮಾಡಬೇಕಾದ ದಿನಗಳನ್ನು ನಿರ್ಧರಿಸಲಾಗುತ್ತಿತ್ತು. ಇಟಲಿ ಬಾಷೆಯಲ್ಲಿ 40 ದಿನಗಳಿಗೆ ‘ಕ್ವಾರಂಟಾ’ ಎನ್ನಲಾಗುತ್ತದೆ. ಇದೂ ಕೂಡಾ ಲ್ಯಾಟಿನ್ ಬಾಷೆಯಿಂದ ಎರವಲು ಪಡೆದ ಶಬ್ದವಾಗಿರುತ್ತದೆ. ಲ್ಯಾಟಿನ್‍ಬಲ್ಲಿ 40ನ್ನು ಕ್ವಾಡ್ರಿಜಿಂಟಾ ಎಂದು ಕರೆಯುತ್ತಾರೆ. ಮುಂದೆ ಕ್ವಾರಂಟಾ ಕ್ವಾರಂಟಿನಾ ಎಂಬುದಾಗಿ ಕರೆಯಲ್ಪಟ್ಟಿತ್ತು.

ಐಸೋಲೇಷನ್ ಎಂದರೇನು?
ಐಸೋಲೇಷನ್ ಎಂದರೆ ಪ್ರತ್ಯೇಕಿಸುವಿಕೆ ಎಂದು ಕನ್ನಡದಲ್ಲಿ ಹೇಳಲಾಗುತ್ತದೆ. ಇದೊಂದು ಸಮುದಾಯ ಆರೋಗ್ಯಕ್ಕೆ ಸಂಬಂಧಿಸಿದ ಪದಪುಂಜವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಜನರು ರೋಗಕ್ಕೆ ತೆರೆದುಕೊಳ್ಳಬಾರದೆಂಬ ದೃಷ್ಠಿಯಿಂದ, ರೋಗದಿಂದ ಬಳಲುತ್ತಿರುವ ವ್ಯಕ್ತಿ ಅಥವಾ ಶಂಕಿತ ರೋಗವಿರುವ ವ್ಯಕ್ತಿಯನ್ನು ಇತರೆ ಆರೋಗ್ಯವಂತ ವ್ಯಕ್ತಿಗಳಿಂದ ಬೇರೆಯಾಗಿಸುವಿಕೆಯನ್ನು’ಪ್ರತ್ಯೇಕಿಸುವಿಕೆ’ ಅಥವಾ ‘ಐಸೋಲೇಷನ್’ ಎನ್ನಲಾಗುತ್ತದೆ. ಐಸೋಲೇಷನ್ ಎಂಬ ಪದ ಲ್ಯಾಟಿನ್ ಪದ ಇನುಸುಲೇಷನ್ ಎಂಬ ಪದದ ಮೂಲದಿಂದ ಹುಟ್ಟಿದೆ. ಇನುಸುಲೇಷನ್ ಅಂದರೆ ದ್ವಿಫವಾಗಿಸುವಿಕೆ ಎಂದು ಲ್ಯಾಟಿನ್‍ನಲ್ಲಿ ಅರ್ಥವಿದೆ. ಇನುಸುಲಾ ಎಂದರೆ ದ್ವೀಪ, ಇನುಸುಲೇಷನ್ ಎಂದರೆ ದ್ವೀಪಗೊಳಿಸುವಿದೆ, ಇದೇ ಇನುಸುಲೇಷನ್ ಮುಂದೆ ‘ಐಸೋಲೇಷನ್’ ಆಗಿ ಮುಂದುವರೆಯಿತು.

ಇನ್ನು ಕ್ವಾರಂಟೈನ್ ವಿಚಾರದಲ್ಲಿ ಹೇಳುವುದಾದರೆ ಶಂಕಿತ ಅಥವಾ ಸಾಂಕ್ರಾಮಿಕ ರೋಗಕ್ಕೆ ತೆರೆದುಕೊಂಡ ವ್ಯಕ್ತಿಗಳನ್ನು ಇತರರಿಂದ ಬೇರ್ಪಡಿಸಿ ಅವರು ರೋಗಕ್ಕೆ ತುತ್ತಾಗುತ್ತಾರೆಯೇ ಎಂದು ಅವರನ್ನು ಗೌಪ್ಯವಾಗಿ ಗಮನಿಸುವ ಪ್ರಕ್ರಿಯೆಗೆ ‘ಕ್ವಾರಂಟೈನ್’ ಎನ್ನಲಾಗುತ್ತದೆ. ಇವರು ಶಂಕಿತ ರೋಗಕ್ಕೆ ತೆರೆದುಕೊಂಡಿರಬಹುದು ಅಥವಾ ಶಂಕಿತ ರೋಗಕ್ಕೆ ತೆರೆದುಕೊಂಡಿದ್ದಾರೆ ಎಂಬ ಸಂದೇಹ ಇರುವವರನ್ನು ಈ ರೀತಿ ದಿಗ್ಬಂದನಕ್ಕೆ ಒಳಪಡಿಸಲಾಗುತ್ತದೆ. ಅದೇ ರೀತಿ ಶಂಕಿತ ಸಾಂಕ್ರಾಮಿಕ ರೋಗಕ್ಕೆ ತೆರೆದುಕೊಂಡು, ರೋಗದ ಯಾವುದೇ ಲಕ್ಷಣಗಳು ತೋರಿಸದೇ ಇರಲೂಬಹುದು ಇಂತಹ ವ್ಯಕ್ತಿಗಳನ್ನು ರೋಗ ಪ್ರಕರಣಗೊಳ್ಳುವ ಅವಧಿಯವರೆಗೆ ಇತರರಿಂದ ಬೇರೆಯಾಗಿಸಿ ಇಡುವ ಪ್ರಕ್ರಿಯೆಗೆ ಕ್ವಾರಂಟೈನ್ ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಜನಸಾಮಾನ್ಯರು ಈ ದಿಗ್ಬಂಧನ ಮತ್ತು ಪ್ರತ್ಯೇಕಿಸುವಿಕೆಯನ್ನು ಒಂದೇ ಎಂದು ಭಾವಿಸುತ್ತಾರೆ. ಆದರೆ ಇವರೆಡೂ ಬೇರೆ ಬೇರೆ ಎಂಬುದನ್ನು ಇವರು ಅರಿತುಕೊಳ್ಳಬೇಕು. ಪ್ರತ್ಯೇಕಿಸುವಿಕೆ ಎನ್ನುವುದು ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ಇಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮಾಡಲು ಒಬ್ಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ಸಮುದಾಯದಿಂದ ಬೇರೆ ಮಾಡುವುದು, ಆತ ಇತರರಿಗೆ ರೋಗ ಹರಡಬಾರದು ಎಂಬ ಉದ್ದೇಶದಿಂದ ಆತನನ್ನು ಇತರ ಆರೋಗ್ಯವಂತ ವ್ಯಕ್ತಿಗಳಿಂದ ಮತ್ತು ಸಮುದಾಯದಿಂದ ಪ್ರತ್ಯೇಕಿಸಿ ಬೇರೆ ಕೋಣೆಯಲ್ಲಿ ಇಡಲಾಗುತ್ತದೆ. ಇನ್ನು ‘ಕ್ವಾರಂಟೈನ್’ ಅಥವಾ ದಿಗ್ಬಂಧನ ಎಂದರೆ ಅತ್ಯಂತ ಕಟ್ಟುನಿಟ್ಟಿನ ಪ್ರತ್ಯೇಕಿಸುವಿಕೆ ಎಂದರೂ ತಪ್ಪಾಗಲಾರದು, ಇಲ್ಲಿ ದಿಗ್ಬಂಧನಕ್ಕೆ ಒಳಗಾಗುವ ವ್ಯಕ್ತಿ ರೋಗದಿಂದ ಬಳಲುತ್ತಿರಬೇಕಿಲ್ಲ. ಆತ ಶಂಕಿತ ಸಾಂಕ್ರಾಮಿಕ ರೋಗ ಇರುವ ಪ್ರದೇಶಕ್ಕೆ ಪ್ರಯಾಣ ಮಾಡಿದ್ದಲ್ಲಿ, ಆತನಿಗೆ ರೋಗ ಬರುವ ಸಾಧ್ಯತೆ ಇದೆ ಎಂದು ತಿಳಿದು ಆತನನ್ನು ದಿಗ್ಬಂಧನಕ್ಕೆ ಒಳಗಾಗಿಸಲಾಗುತ್ತದೆ. ಆತ ಸಾಂಕ್ರಾಮಿಕ ರೋಗ ಪ್ರಕಟಗೊಳ್ಳುವ ಅವಧಿ ಮುಗಿಯುವ ವರೆಗೂ ದಿಗ್ಬಂಧನಕ್ಕೆ ಒಳಗಾಗಬೇಕಾಗುತ್ತದೆ.

ಕೆಲವೊಮ್ಮೆ ಆತನಿಗೆ ರೋಗ ಇಲ್ಲದೇ ಇರುವ ಸಾಧ್ಯತೆಯೂ ಇದೆ ಮತ್ತು ಆತನಿಗೆ ರೋಗ ಇರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಆತನಿಗೆ ರೋಗ ಪ್ರಕಟಗೊಳ್ಳದಿದ್ದರೂ, ರೋಗ ಬರುವ ಸಾಧ್ಯತೆ ಹೆಚ್ಚು ಇದೆ ಮತ್ತು ಇತರರಿಗೆ ಹಾಗೂ ಸಮುದಾಯಕ್ಕೆ ಆತನಿಂದ ಅಪಾಯವಿದೆ ಎಂಬ ದೃಷ್ಠಿಯಿಂದ ಆತನನ್ನು ದಿಗ್ಬಂಧನಕ್ಕೆ ಒಳಗಾಗಿಸಲಾಗುತ್ತದೆ.. ಸಾಮಾನ್ಯವಾಗಿ ‘ಪ್ರತ್ಯೇಕಿಸುವಿಕೆ’ ಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಮಾಡಲಾಗುತ್ತದೆ. ಆದರೆ ‘ದಿಗ್ಬಂಧನ’ ಹಲವಾರು ವ್ಯಕ್ತಿಗಳು ಏಕಕಾಲದಲ್ಲಿ ಮಾಡುವ ಸಾಧ್ಯತೆಯೂ ಇರುತ್ತದೆ. ಒಟ್ಟಿನಲ್ಲಿ ಸಮುದಾಯದ ಹಿತದೃಷ್ಠಿಯಿಂದ ಸಾಂಕ್ರಾಮಿಕ ರೋಗ ಹರಡದಂತೆ ಮಾಡುವ ಸಾಮಾಜಿಕ ಪ್ರಕ್ರಿಯೆ ಇದಾಗಿರುತ್ತದೆ.

ರಿವರ್ಸ್ ಕ್ವಾರಂಟೈನ್ ಎಂದರೇನು?
ಇದೊಂದು ವಿಶಿಷ್ಟ ಸಾಮಾಜಿಕ ಪ್ರಕ್ರಿಯೆಯಾಗಿದ್ದು, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಸಾಂಕ್ರಾಮಿಕ ರೋಗಕ್ಕೆ ಹೆಚ್ಚು ತುತ್ತಾಗುವ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಿ ಅವರ ಮೇಲೆ ನಿಗಾ ಇಡಲಾಗುತ್ತದೆ. ಹೆಚ್ಚು ಸೋಂಕು ಬರುವ ಸಾಧ್ಯತೆ ಇರುವ ಹಿರಿಯರು, ಅನಾರೋಗ್ಯ ಪೀಡಿತರು, ಮಧುಮೇಹಿಗಳು ಮತ್ತು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರನ್ನು ಇತರ ಸಾಮಾನ್ಯ ಜನರಿಂದ ದೂರವಾಗಿಸಿ, ಪ್ರತ್ಯೇಕವಾಗಿದಷ್ಟು, ಅವರ ಆರೋಗ್ಯದ ಮೇಲೆ ತೀವ್ರವಾದ ಗಮನ ಇಡುವ ಪ್ರಕ್ರಿಯೆ. ಇಲ್ಲಿ ಇತರ ಆರೋಗ್ಯವಂತರು ಸಹಜವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೊರೋನಾ ಸೋಂಕಿಗೆ ಹೆಚ್ಚಾಗಿ 50-60ರ ಹರೆಯದ ಮೇಲ್ಪಟ್ಟ ವ್ಯಕ್ತಿಗಳಾಗಿದ್ದು, ಇದನ್ನೇ ಮಾನದಂಡವಾಗಿರಿಸಿಕೊಂಡು, ಸೋಂಕಿಗೆ ಬೇಗ ತುತ್ತಾಗುವ ಸಾಧ್ಯತೆ ಇರುವ ಅಶಕ್ತ ರೋಗಿಗಳು, ಉಸಿರಾಟದ ಸಮಸ್ಯೆ ಇರುವವರು, ಅಧಿಕ ಹೃದಯದ ಒತ್ತಡ ಇರುವವರು, ಹೃದಯದ ಕಾಯಿಲೆ ಇರುವವರು, ಮಧುಮೇಹಿಗಳು, ಗರ್ಭಿಣಿಯರು ಮುಂತಾದವರನ್ನು ಇತರರಿಂದ ಪ್ರತ್ಯೇಕಿಸಿ ಇಡಲಾಗುತ್ತದೆ. ಅವರನ್ನು ಬೇರೆಯೇ ಕೋಣೆಯಲ್ಲಿರಿಸಿ ಅವರಿಗೆ ಅಲ್ಲಿಗೆ ಊಟ ಉಪಚಾರ, ಔಷಧಿ, ಚಿಕಿತ್ಸೆ ನೀಡಲಾಗುತ್ತದೆ. ಅವರಿಗೆ ಸೋಂಕು ತಗಲದಂತೆ ಮಾಡುವ ಈ ಪ್ರಕ್ರಿಯೆಗೆ ರಿವರ್ಸ್ ಕ್ವಾರಂಟೈನ್ ಎನ್ನಲಾಗುತ್ತದೆ.

ರಿವರ್ಸ್ ಕ್ವಾರಂಟೈನ್ ಮಾಡಿದ ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರು ಸಹಜ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಸದಸ್ಯರು ಹೊರಗೆ ರೋಗಿ ಬಂದ ಬಳಿಕ ಮನೆಗೆ ಮರಳಿದ ಮೇಲೆ, ವೃದ್ದರ ಸಂಪರ್ಕಕ್ಕೆ ರೋಗದಂತೆ ಅತೀವ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ರೀತಿ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುವ ಆರೋಗ್ಯವಂತ ವ್ಯಕ್ತಿಗಳನ್ನು, 40 ದಿನಗಳ ಕಾಲ ಪ್ರತ್ಯೇಕವಾಗಿರಿಸಿ, ಸಾಂಕ್ರಾಮಿಕ ರೋಗ ಬರದಂತೆ ಮಾಡುವ ಪ್ರಕ್ರಿಯೆಯನ್ನು ‘ರಿವರ್ಸ್ ಕ್ವಾರಂಟೈನ್’ ಎನ್ನಲಾಗುತ್ತದೆ.

ಈ ಕ್ರಮದಲ್ಲಿ 40 ದಿನಗಳವರೆಗೆ ನಿರಂತರವಾಗಿ ಅವರ ಆರೋಗ್ಯದ ಮೇಲೆ ನಿಗಾ ಇಟ್ಟು, ರೋಗದ ಲಕ್ಷಣಗಳ ಬಗ್ಗೆ ಗಮನ ನೀಡಬೇಕು. ಅವರಲ್ಲಿ ಏನಾದರೂ ರೋಗದ ಲಕ್ಷಣ ಕಾಣಿಸಿಕೊಂಡರೆ ತಕ್ಷಣವೇ ಅದಕ್ಕೇಂದೇ ನಿಗದಿಪಡಿಸಿದ ಕೋವಿಡ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿಸಿ ವರ್ಗಾವಣೆ ಮಾಡಬೇಕಾಗುತ್ತದೆ. ಹೀಗೆ ಮಾಡಿದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆಯ ಪ್ರಮಾಣ ತಗ್ಗುತ್ತದೆ ಮತ್ತು ಇತರ ಆರೋಗ್ಯವಂತ ದುಡಿಯುವ ವರ್ಗದ ಯುವಜನರು ಕೆಲಸ ಮಾಡುತ್ತಾ ಸಮುದಾಯದ ಸುರಕ್ಷೆ ಮಾಡಿದಂತಾಗುತ್ತದೆ ಎಂದೂ ಸಾಂಕ್ರಾಮಿಕ ರೋಗದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೊನೆ ಮಾತು:
ಕ್ವಾರಂಟೈನ್ ಎನ್ನುವ ವಿಚಾರ ಹೊಸದೇನೂ ಅಲ್ಲ, ಶತ ಶತಮಾನಗಳಿಂದಲೂ ಈ ಹೆಸರಿನ ಬಳಕೆ ಇದೆ. ಈಗ ಕೋರೋನಾ ಮಹಾಮಾರಿ ಎಂಬ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಗದೊಮ್ಮೆ ಈ ‘ಕ್ವಾರಂಟೈನ್’ ಶಬ್ದ ತಳುಕು ಹಾಕಿದೆ. 1370 ರಲ್ಲಿ ಕಾಡಿದ ಮಾಹಾಮಾರಿ ಪ್ಲೇಗ್ ಸಂದರ್ಭದಲ್ಲಿ ಹುಟ್ಟಿಕೊಂಡ ಶಬ್ದ ‘ಕ್ವಾರಂಟೈನ್’ ಕಾಲಕಾಲಕ್ಕೆ ಬಳಕೆಗೆ ಬರುತ್ತಲೇ ಇದೆ. ಇಟೆಲಿಯಲ್ಲಿ ಈ ಶಬ್ದ ಹುಟ್ಟಿಕೊಂಡ ಬಳಿಕ, 1793 ರಲ್ಲಿ ಪಿಲಿಡೆಲ್ಪಿಯಾದಲ್ಲಿ ಜಾಂಡೀಸ್ ಕಾಯಿಗೆ ಬಂದಾಗ 1892 ರಲ್ಲಿ ರಷ್ಯಾದಲ್ಲಿ ಟೈಫಸ್ ಜ್ವರ ಬಂದಾಗ 1900 ರಲ್ಲಿ ಸ್ಯಾನ್‍ಫ್ಯಾನ್ಸಿಸ್‍ಕೋದಲ್ಲಿ ಪ್ಲೇಗ್ ಬಂದಾಗ ಸಾವಿರಾರು ಮಂದಿಯನ್ನು ಕ್ವ್ವಾರಂಟೈನ್ ಮಡಲಾಗಿತ್ತು.

1907ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಟೈಫಾಯ್ಡ್ ರೋಗ ಬಂದಾಗ 1917-18ರಲ್ಲಿ ಜಾಗತಿಕವಾಗಿ ಇನ್‍ಫ್ಯುಯಂಜಾ ಫ್ಲೂ ಬಂದಾಗ ಈ ಕ್ವಾರಂಟೈನ್ ಮತ್ತಷ್ಟು ಪ್ರಸಿದ್ದಿಗೆ ಬಂದಿತ್ತು. 1980ರಲ್ಲೂ ಏಡ್ಸ್ ರೋಗ ಬಂದಾಗ, 2003 ರಲ್ಲಿ ಸಾರ್ಸ್ ರೋಗ, 2013 ರ ಮರ್ಸ್ ರೋಗ, 2014ರ ಎಬೋಲಾ ರೋಗ ಮತ್ತು ಈಗಿನ 2019ರ ಕೋರೋನಾ ರೋಗ ಮನುಕುಲವನ್ನು ಕಾಡುವಾಗ ಮಗದೊಮ್ಮೆ ‘ಕ್ವಾರಂಟೈನ್’ ಮಾಡಬೇಕಾದ ಅನಿವಾರ್ಯತೆಗೆ ನಾವು ಸಿಲುಕಿದ್ದೇವೆ. ಅದೇನೇ ಇರಲಿ ಸಧ್ಯದ ಪರಿಸ್ಥಿತಿಯಲ್ಲಿ ತೀವ್ರವಾಗಿ ಹರಡುತ್ತಿರುವ ಈ ಕೋರೋನಾ ಸಾಂಕ್ರಾಮಿಕ ಕಾಯಿಲೆಯಿಂದ ಮನುಕುಲ ಮುಕ್ತವಾಗಬೇಕಾದರೆ ನಾವೆಲ್ಲರೂ ಪರಿಣಾಮಕಾರಿಯಾಗಿ ಸ್ವಯಂ ದಿಗ್ಬಂಧನ ಹಾಕಿಕೊಂಡು, ವೈರಾಣುವಿನ ಜೀವ ಸಂಕೋಲೆಯನ್ನು ಮುರಿದರೆ ಮಾತ್ರ ರೋಗದಿಂದ ನಾವು ಮುಕ್ತಿ ಪಡೆಯಲು ಸಾಧ್ಯವಿದೆ. ಅದರಲ್ಲಿಯೇ ಮನುಕುಲದ ರೀತಿ ಅಡಗಿದೆ.

– ಡಾ: ಮುರಲೀ ಮೋಹನ್ ಚೂಂತಾರು

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕೊಡಗಿನ ಸಾವಿನ ಮನೆಯಲ್ಲಿ ಸುಂದರ ಕತೆ ಕಟ್ಟಿದ ನೀಚರು.‌..!

Upayuktha News Network

ಇಂದು (ಆ.13) ವಿಶ್ವ ಎಡಚರ ದಿನ- ಇವರಿಗೆಲ್ಲ ‘ಎಡವೇ ಬಲ’

Upayuktha

ನಾವು ಅಡುಗೆಯವರು… ತಾಯಿ ಅನ್ನಪೂರ್ಣೇಶ್ವರಿಯ ಸೇವಕರು…

Upayuktha