ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲು
ಭಿಲ್ವಾರಾ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಶಾಹ್ಪುರ್ ಪಟ್ಟಣದಲ್ಲಿ ದುಷ್ಕರ್ಮಿಗಳು ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಪ್ರತಿಮೆಯನ್ನು ಕೆಡವಿ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಸೋಮವಾರ ಕೇಸು ದಾಖಲಿಸಿಕೊಂಡಿದ್ದಾರೆ.
‘ಮುಖರ್ಜಿ ಅವರ ಪ್ರತಿಮೆಯನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ತಡರಾತ್ರಿ ಧ್ವಂಸಗೊಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ’ ಎಂದು ಶಾಹ್ಪುರ ಪೊಲೀಸ್ ಠಾಣೆ ಮುಖ್ಯಸ್ಥ ಭಜನ್ಲಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ರಾಜೇಂದ್ರ ಭಟ್, ಪೊಲೀಸ್ ಅಧಿಕಾರಿ ಹರೇಂದ್ರ ಮಗವಾರ್ ಮತ್ತು ಇತರ ಅಧಿಕಾರಿಗಳು ಆ ಪ್ರದೇಶದಲ್ಲಿ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಪ್ರತಿಮೆಯನ್ನು ಕೆಡವಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದರ ವಿರುದ್ಧ ಮೊದಲು ಪ್ರತಿಭಟನೆ, ಹೋರಾಟ ಆರಂಭಿಸಿದವರೇ ಶ್ಯಾಮ ಪ್ರಸಾದ ಮುಖರ್ಜಿ ಅವರು. ದುಷ್ಕರ್ಮಿಗಳು ಅವರ ಪ್ರತಿಮೆಯನ್ನು ಕೆಡವಲು ಇದೂ ಕಾರಣವಾಗಿರಬಹುದು’ ಎಂದು ಸ್ಥಳೀಯರೊಬ್ಬರು ತಿಳಿಸಿದರು.