ಜಿಲ್ಲಾ ಸುದ್ದಿಗಳು ಪ್ರಮುಖ

ಪ್ರತೀ ಮನೆ ಮನಗಳಲ್ಲಿ ಶ್ರೀರಾಮ – ಹನುಮರ ಭಕ್ತಿ ನ್ಯಾಸವಾಗಲಿ: ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಕರೆ

ಅಯೋಧ್ಯೆ ರಾಮಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಉಡುಪಿ: ಜಗತ್ತಿನ‌ ಕೋಟ್ಯಂತರ ಸನಾತನ ಧರ್ಮೀಯರು ಮತ್ತು ಆಸ್ತಿಕ ಜನರ ಬಹುವರ್ಷಗಳ ಶ್ರದ್ಧಾಪೂರ್ವಕ ಕನಸು ಮತ್ತು ಶ್ರಮದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕಾರ್ಯಕ್ಕೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 5ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಧರ್ಮಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಧರ್ಮಶ್ರದ್ಧೆಯುಳ್ಳ ಮನೆ ಮನಸ್ಸುಗಳಲ್ಲಿ ಶ್ರೀ ರಾಮ- ಶ್ರೀ ಹನುಮರ ಭಕ್ತಿಗಳು ನ್ಯಾಸಗೊಳ್ಳಬೇಕು ಮತ್ತು ಇದು ಅಯೋಧ್ಯೆಯ ಭವ್ಯ ಮಂದಿರ ನಿರ್ಮಾಣಗೊಂಡು ಶ್ರೀ ಸೀತಾ-ರಾಮರ ಪ್ರತಿಷ್ಢೆಯ ಪರ್ಯಂತ ನಿತ್ಯವೂ ವಿಶೇಷ ಜಾಗೃತವಾಗಿರಬೇಕು ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ (ರಿ.) ಇದರ ವಿಶ್ವಸ್ಥಮಂಡಳಿ ಸದಸ್ಯರಾದ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.

ಆಗಸ್ಟ್ 5 ನೇ ದಿನಾಂಕ ಈ ದೇಶದ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ದಾಖಲಾಗಲಿದೆ. ಆದ್ದರಿಂದ ಅಯೋಧ್ಯೆಯಲ್ಲಿ ಅಂದು ನಡೆಯುವ ಶಿಲಾನ್ಯಾಸ ಸಮಾರಂಭವನ್ನು ಸಾಧ್ಯವಾದಷ್ಟು ಪ್ರತಿಯೊಬ್ಬರೂ ನೇರಪ್ರಸಾರದ ಮೂಲಕ ಕಣ್ತುಂಬಿಕೊಳ್ಳಬೇಕು. ಮನೆಗಳಲ್ಲಿ ಟಿವಿ ಇಲ್ಲದವರಿಗೆ ಬೇಕಾಗಿ ಪ್ರತಿಯೊಂದು ಹಳ್ಳಿ ನಗರಗಳಲ್ಲಿ ಸಾರ್ವಜನಿಕವಾಗಿ ಪ್ರಮುಖ ಸ್ಥಳಗಳಲ್ಲಿ ಬೃಹತ್ ಪರದೆಯನ್ನು ಅಳವಡಿಸಿ ವೀಕ್ಷಿಸಲು ವ್ಯವಸ್ಥೆ ಮಾಡಬೇಕು. ಆದರೆ ಈ ಸಂದರ್ಭದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು‌, ಮುಖಕ್ಕೆ ಮಾಸ್ಕ್ ಧರಿಸುವುದನ್ನು ಮರೆಯಬಾರದು.

ನಮ್ಮಲ್ಲಿ ಪ್ರಾಚೀನ ದೇವಳಗಳ ಜೀರ್ಣೋದ್ಧಾರ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಆ ಕಾರ್ಯದ ಆರಂಭದಿಂದ ಪೂರ್ಣವಾಗುವ ಪರ್ಯಂತ ನಿತ್ಯ ಭಜನೆ ಜಪ ಇತ್ಯಾದಿಗಳನ್ನು ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ಹಮ್ಮಿಕೊಂಡ ಕಾರ್ಯದ ಯಶಸ್ಸು ಮತ್ತು ಆ ಸಮಯದಲ್ಲಿ ನಮ್ಮೆಲ್ಲರಿಗೂ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಚೈತನ್ಯ ಲಭಿಸಲಿ ಎಂಬ ಆಶಯ ಇದರಲ್ಲಿದೆ . ಇದೀಗ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರ ಕೇವಲ ಅಯೋಧ್ಯೆಗೆ ಸೀಮಿತವಾದುದಲ್ಲ; ಅದು ಭಾರತ ಮಂದಿರ; ರಾಷ್ಟ್ರಮಂದಿರ ನಮ್ಮೆಲ್ಲರ ಆರಾಧ್ಯಮೂರ್ತಿಯ ಮಂದಿರವನ್ನು ನಿರ್ಮಿಸುವ ಯೋಗ ನಮಗೆಲ್ಲ ಒದಗಿರುವುದು ದೊಡ್ಡ ಪುಣ್ಯವೇ ಸರಿ. ಆದ್ದರಿಂದ ಈ ಮಹತ್ಕಾರ್ಯ ನಿರ್ವಿಘ್ನವಾಗಿ ನಡೆಯಬೇಕು. ಅದನ್ನು ನಿರ್ವಹಿಸುವ ಶಕ್ತಿ ಚೈತನ್ಯ ಸಮಸ್ತ ಭಾರತೀಯರಿಗೆ ಬೇಕೇ ಬೇಕು. ಅದಕ್ಕಾಗಿ ಆಗಸ್ಟ್ 5 ರಿಂದ ಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗುವವರೆಗೂ ದೇಶದ ನಮ್ಮೆಲ್ಲರ ಮನೆ ಮನೆಗಳಲ್ಲಿ ಮಂದಿರಗಳಲ್ಲಿ ಶ್ರೀ ರಾಮ ಶ್ರೀ ಹನುಮರ ವಿಶೇಷ ಸ್ಮರಣೆ ನಡೆಯಬೇಕು . ನಿತ್ಯ ಪ್ರಾರ್ಥನೆ ಭಜನೆ ಜಪ ಇತ್ಯಾದಿಗಳನ್ನು ನಡೆಸಬೇಕು. ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿಯೂ ಇವುಗಳನ್ನು ನಡೆಸಬೇಕು.

ಆಗಸ್ಟ್ 5 ರಂದು ಪ್ರತೀ ಮನೆ ಮಂದಿರ ದೇವಸ್ಥಾನ ಕಚೇರಿಗಳಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿಸಬೇಕು. ತಳಿರು ತೋರಣ, ದ್ವಾರಗಳಿಗೆ ಹೂವಿನ ಅಲಂಕಾರ, ಭಗಧ್ವಾಜಗಳನ್ನು ಅಳವಡಿಸುವುದು. ಅಂದು ಬೆಳಿಗ್ಗೆ 11:30 ರಿಂದ 12:30 ರ ವರೆಗೆ ಕಾರ್ಯಕ್ರಮ‌ ನಡೆಯುವುದರಿಂದ ಆ ಹೊತ್ತಿನಲ್ಲಿ ಮನೆ ಕಚೇರಿಗಳಲ್ಲಿ ಶ್ರೀರಾಮನಿಗಾಗಿ ತೈಲ ದೀಪಗಳನ್ನು ಬೆಳಗಬೇಕು. ಪ್ರತಿಯೊಬ್ಬರೂ ಅಂದಿನಿಂದ ಪ್ರತಿನಿತ್ಯ ಕನಿಷ್ಠ ಹತ್ತು ಬಾರಿಯಾದರೂ ” ಶ್ರೀರಾಮ ಜಯರಾಮ‌ ಜಯ ಜಯ ರಾಮ ” ಎಂದು ಜಪಿಸಬೇಕು. ಮಠ ಮಂದಿರ ದೇವಳಗಳಲ್ಲಿ ವಿಶೇಷ ಪೂಜೆ ನೆರವೇರಿಸಬೇಕು. ಸಮಸ್ತ ಲೋಕದ ಒಳಿತಿಗಾಗಿ ಪ್ರಾರ್ಥಸಬೇಕು ಎಂದು ಶ್ರೀಪಾದರು ಕರೆ ನೀಡಿದ್ದಾರೆ.

ಉಡುಪಿಗೂ ಶ್ರೀರಾಮ ಜನ್ಮಭೂಮಿ ಆಂದೋಲನಕ್ಕೂ ವಿಶೇಷ ನಂಟು:

ಕರ್ನಾಟಕ‌ ಶ್ರೀ ರಾಮ ಭಕ್ತ ಹನುಮನ ಅವತಾರ ಭೂಮಿ ಅದೇ ರೀತಿ ಉಡುಪಿಯವರಾದ ನಮ್ಮ‌ಗುರುಗಳಾದ ಶ್ರೀ ವಿಶ್ವೇಶತೀರ್ಥಶ್ರೀಪಾದರು ಈ ಆಂದೋಲನಕ್ಕೆ ದೇಶದ ಸಾಧುಸಂತರಿಗೆ ಕೋಟ್ಯಂತರ ರಾಮಭಕ್ತರಿಗೆ ಬಹಳ ಮಾರ್ಗದರ್ಶನ ಮಾಡಿದ್ದಾರೆ. ಉಡುಪಿಯ ಅನೇಕ ಮಠಾಧೀಶರೂ ಈ ಕಾರ್ಯದಲ್ಲಿ ಶ್ರಮಿಸಿದ್ದಾರೆ. ಆದ್ದರಿಂದ ಆಗಸ್ಟ್ 5 ರಿಂದ ಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗುವವರೆಗೂ ಉಡುಪಿಯೂ ಸೇರಿದಂತೆ ಇಡೀ ರಾಜ್ಯದಲ್ಲಿ ನಿತ್ಯ ನಿರಂತರ ರಾಮ ನಾಮ ಜಪ, ಭಜನೆ, ಪ್ರಾರ್ಥನೆಗಳು ನಡೆಯಬೇಕು ಎಲ್ಲ ಮಠಾಧೀಶರಿಗೂ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಶ್ರೀಪಾದರು ವಿಶೇಷವಾಗಿ ಬೊಟ್ಟು ಮಾಡಿ ತಿಳಿಸಿದ್ದಾರೆ.

ಪ್ರಾತಃ ಸ್ನಣೀಯರೂ ಶ್ರೀ ರಾಮನ ಉಪಾಸಕರೂ ಆಗಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆಯೂ ಆಗಸ್ಟ್ 5 ರಂದೇ ಆಗಿರುವುದು ವಿಶೇಷವಾಗಿದೆ.

ಲಕ್ಷ ತುಲಸಿ ಅರ್ಚನೆ:
ಆಗಸ್ಟ್ 5 ರಂದು‌ ಬೆಳಿಗ್ಗೆ ನೀಲಾವರ ಗೋಶಾಲೆಯಲ್ಲಿ ನಮ್ಮ ಆರಾಧ್ಯಮೂರ್ತಿ ಶ್ರೀ ರಾಮ – ಕೃಷ್ಣ- ವಿಠಲ ದೇವರಿಗೆ ಲಕ್ಷ ತುಲಸೀ ಅರ್ಚನೆ ನಡೆಸುವವರಿದ್ದೇವೆ. ಇದಕ್ಕಾಗಿ ಭಕ್ತರು ತುಲಸಿಯನ್ನು 4 ನೇ ತಾರೀಖು ಮಧ್ಯಾಹ್ನದ ಒಳಗೆ ಉಡುಪಿ ಪೇಜಾವರ ಮಠಕ್ಕೆ ಅಥವಾ ನೀಲಾವರ ಗೋಶಾಲೆಗೆ ತಂದೊಪ್ಪಿಸಬಹುದು. ಚಾತುರ್ಮಾಸ್ಯ ವ್ರತ ನಿಮಿತ್ತ ಅಯೋಧ್ಯೆಯ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಳ್ಳುತ್ತಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದೇವೆ.

-ಶ್ರೀ ಶ್ರೀ ವಿಶ್ಬಪ್ರಸನ್ನತೀರ್ಥ ಶ್ರೀಪಾದರು

ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ. ವಿಷ್ಣಮೂರ್ತಿ ಆಚಾರ್ಯ, ಬಜರಂಗದಳದ ಪ್ರಾಂತ ಸಹಸಂಚಾಲಕ ಸುನಿಲ್ ಕೆ.ಆರ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ನಾಲ್ಕನೇ ಬಲಿ; 58 ವರ್ಷದ ಬೋಳೂರಿನ ಮಹಿಳೆ ಸಾವು

Upayuktha

ಕೋವಿಡ್ 19 ಅಪ್‌ಡೇಟ್: ರಾಜ್ಯದಲ್ಲಿ 2313 ಮಂದಿಗೆ ಹೊಸದಾಗಿ ಸೋಂಕು, 57 ಸಾವು

Upayuktha

ಕರ್ನಾಟಕ ಉಪ ಚುನಾವಣೆ: ಶೇ 66.59 ಮತದಾನ ದಾಖಲು

Upayuktha
error: Copying Content is Prohibited !!