ನಗರ ಸ್ಥಳೀಯ

ರಾಮಸತ್ರ: ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಚರಿತ್ರೆ ನಿರ್ಮಾಣ

ಉಡುಪಿ: ಉಡುಪಿ ಜಿಲ್ಲೆಯ ಕಾಪು ಹೋಬಳಿಯಲ್ಲಿರುವ ಮಟ್ಟು ಗ್ರಾಮದಲ್ಲಿ ಈ ಬಾರಿ ರಾಮನವಮೀ ಪವಿತ್ರ ಸಂದರ್ಭದಲ್ಲಿ ಒಂದು ಚರಿತ್ರೆ ನಿರ್ಮಾಣವಾಗಿದೆ.

ಉಡುಪಿಯ ಯುಗಪುರುಷರೆಂದೇ ಪ್ರಸಿದ್ಧರೂ ಪ್ರಾತಃ ಸ್ಮರಣೀಯರೂ ಆಗಿರುವ ಶ್ರೀ ವಾದಿರಾಜ ಗುರುಸಾರ್ವಭೌಮರ ವಿಶೇಷ ಅನುಗ್ರಹಕ್ಕೆ (ಮಟ್ಟು‌ಗುಳ್ಳ) ಪಾತ್ರವಾಗಿರುವ ಈ ಹಳ್ಳಿಯ ಊರ ದೇವತೆ ಶ್ರೀ ವಿಷ್ಣುಮೂರ್ತಿಯ ಸನ್ನಿಧಿಯಲ್ಲಿ ಈ ಪ್ಲವ ಸಂವತ್ಸರದ ಚೈತ್ರ ಶುದ್ಧ ಪಾಡ್ಯದಿಂದ ನವಮೀ ಪರ್ಯಂತ ನಡೆದ ರಾಮಸತ್ರ ಶ್ರೀ ಕ್ಷೇತ್ರ ಮಾತ್ರವಲ್ಲ; ಪ್ರಾಯಃ ಇಡೀ ಗ್ರಾಮದಲ್ಲೇ ಅತ್ಯಪೂರ್ವವಾಗಿ ನೆರವೇರಿದೆ. ನೂರಾರು ವರ್ಷಗಳ ಪ್ರಾಚೀನತೆಯನ್ನು ಹೊಂದಿರುವ ಈ ದೇವಳದಲ್ಲಿ ಈ ತನಕ ಇಂತಹ ಉತ್ಸವ ನಡೆದಿರಲಿಕ್ಕಿಲ್ಲ.

ಉಡುಪಿಯ ಶ್ರೀ ಪಲಿಮಾರು ಮಠಾಧೀಶರೂ ಜಗದ್ಗುರು ಶ್ರೀ ಮಧ್ವಾಚಾರ್ಯ ಕರಾರ್ಚಿತ ಶ್ರೀ ಸೀತಾರಾಮಚಂದ್ರ ದೇವರ ಪಾದಪದ್ಮಾರಾಧಕರೂ ಆಗಿರುವ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ಪ್ರಿಯ ಶಿಷ್ಯ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರೊಡಗೂಡಿ ಶ್ರೀ ಕ್ಷೇತ್ರದಲ್ಲೇ ವಾಸ್ತವ್ಯ ಇದ್ದು ನಿತ್ಯ ಶ್ರೀಸೀತಾ ಲಕ್ಷ್ಮಣ ಸಹಿತ ಶ್ರೀರಾಮದೇವರ ಶ್ರೀ ಹನುಮದೇವರ ನಿತ್ಯ ಪೂಜಾದಿಗಳನ್ನು ವೈಭವದಿಂದ ನೆರವೇರಿಸಿ, ಭಿಕ್ಷೆ ಗುರುಪೂಜೆಗಳನ್ನು ಸ್ವೀಕರಿಸಿ, ನಿತ್ಯ ತಮ್ಮ ಪಾಠ ಪ್ರವಚನಗಳನ್ನೂ ನಡೆಸುವುದರ ಜೊತೆಗೆ ಪ್ರತಿದಿನ‌ ಶ್ರೀ ವಾಲ್ಮೀಕಿ ರಾಮಾಯಣದ ವಿದ್ವತ್ಪೂರ್ಣ ಉಪನ್ಯಾಸವನ್ನು ನಡೆಸಿಕೊಟ್ಟು, ಇಡೀ ಗ್ರಾಮಕ್ಕೆ ತಮ್ಮ ಅಪೂರ್ವ ಕಾರುಣ್ಯವನ್ನು ಅನುಗ್ರಹಿಸಿದರು.

ಉಡುಪಿಯ ಎಲ್ಲಾ ಅಷ್ಟ ಮಠಾಧೀಶರುಗಳೂ ಸೇರಿದಂತೆ ಅನೇಕ ಮಠಾಧೀಶರುಗಳೂ ಈ ಸತ್ರದ ಸಂದರ್ಭದಲ್ಲಿ ದೇವಳಕ್ಕೆ ಚಿತ್ತೈಸಿ ಗುರುವಂದನೆ ಸ್ವೀಕರಿಸಿ ಅನುಗ್ರಹಿಸಿರುವುದೂ ಅತ್ಯಂತ ಗಮನಾರ್ಹ.

ಇಡೀ ದೇವಳದ ಪರಿಸರವನ್ನು ಶ್ರೀ ರಾಮಾಯಣದ ಸನ್ನಿವೇಶವನ್ನು ಬಿಂಬಿಸುವ ರೀತಿಯಲ್ಲಿ ನಿರ್ಮಿಸುವಲ್ಲಿಂದ ಆರಂಭಿಸಿ ನಿತ್ಯ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಚತುರ್ವೇದ, ರಾಮಾಯಣಾದಿ ಗ್ರಂಥಗಳ ಪಾರಾಯಣ ಯಾಗ, ಹೋಮ ಹವನಾದಿಗಳು, ಸಾವಿರಾರು ಭಕ್ತರಿಗೆ ಅನ್ನಾರಾಧನೆ, ನಿತ್ಯ ಭಜನೆ- ಸಂಕೀರ್ತನೆ, ಮಾತೆಯರಿಂದ ಸಾಮೂಹಿಕ ಲಕ್ಷ್ಮೀಶೋಬಾನೆ ಗಾಯನ, ವಿಪ್ರರಿಂದ ಸಾಮೂಹಿಕ ಪಾರಾಯಣಗಳು, ವಿದ್ವಾಂಸರು ದೇವಳದ ಪರಿಚಾರಕರು, ಗಣ್ಯರೂ ಸೇರಿದಂತೆ ನೂರಾರು ಸಾಧಕ ಶ್ರೇಷ್ಠರಿಗೆ ಯೋಗ್ಯ ಸಂಮಾನ‌, ಶ್ರೇಷ್ಠ ವಿದ್ವಾಂಸರಿಂದ ಅಷ್ಟಾವಧಾನವೂ ಸೇರಿದಂತೆ ಸಾಂಸ್ಕೃತಿಕ ಸತ್ರಗಳು, ಶ್ರೀರಾಮನ ಕುರಿತಾಗಿನ ಮೌಲಿಕ ವಿಚಾರ ಸಂದೇಶಗಳನ್ನೊಳಗೊಂಡ ಸ್ಮರಣ ಸಂಚಿಕೆ ಸರಯೂ, ಮೊದಲಾಗಿ ಪ್ರತಿಯೊಂದೂ ಸುವ್ಯವಸ್ಥಿತವಾಗಿ ಮೂಡಿಬಂದಿರುವುದು ಉಲ್ಲೇಖನೀಯ.

ಇದೆಲ್ಲಕ್ಕೂ ಶಿಖರಪ್ರಾಯವೆಂಬಂತೆ ದೇವಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸುರಭಿ ಗೋಶಾಲೆಯಲ್ಲಿನ‌ ಹಸುವೂ ಶ್ರೀ ರಾಮನವಮಿಯ ಪರ್ವದಿನವೇ ಗಂಡು ಕರುವಿಗೆ ಜನ್ಮ ನೀಡಿದೆ. ಇಡೀ ಸತ್ರ ಶ್ರೀ ರಾಮದೇವರ ಮತ್ತು ಶ್ರೀ ವಿಷ್ಣುಮೂರ್ತಿ ಸ್ವಾಮಿಯ ಚಿತ್ತಕ್ಕೆ ಬಂದು ಸಂಪ್ರೀತರಾಗಿರುವುದರ ಸಂಕೇತ ಎಂದು ಭಾವಿಸಲಾಗಿದೆ.

ಕಳೆದ ಒಂದು ವರ್ಷದಿಂದಲೇ ಈ ಉತ್ಸವವನ್ನು ಸಂಕಲ್ಪಿಸಿ ಅದರ ಸಾಕಾರಕ್ಕಾಗಿ ಅತ್ಯಂತ ಪರಿಶ್ರಮಪಟ್ಟು ಶ್ರದ್ಧೆಯಿಂದ ದುಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ರಾವ್ ಅಭಿನಂದನಾರ್ಹರು. ತಮ್ಮ ಅಧಿಕಾರದ ಅವಧಿಯಲ್ಲಿ ಹತ್ತು ಹಲವಾರು ದಾಖಲರ್ಹ ಅಭಿವೃದ್ಧಿ ಕಾರ್ಯಗಳನ್ನು ಭಕ್ತರ ಸಹಕಾರದೊಂದಿಗೆ ಶ್ರೀ ವಿಷ್ಣುಮೂರ್ತಿ ದೇವರಿಗೆ ಅರ್ಪಿಸಿದ್ದಾರೆ.

ಅವರಿಗೆ ಹೆಗಲು ಕೊಟ್ಟು ಅಷ್ಟೇ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಮಾರ್ಗದರ್ಶನ ಮಾಡಿದ ದೇವಳದ ತಂತ್ರಿಗಳಾದ ತರುಣ ವಿದ್ವಾಂಸ ವಿದ್ವಾನ್ ಮಟ್ಟು ಪ್ರವೀಣ ತಂತ್ರಿಗಳೂ ವಿಶೇಷ ಅಭಿನಂದನೀಯರು. ಹಾಗೆಯೇ ಅನೇಕ ಮಂದಿ ಈ ಸತ್ರದ ಯಶಸ್ಸಿಗೆ ಅರ್ಪಣಾ ಭಾವದಿಂದ ಶ್ರಮಿಸಿದ್ದಾರೆ. ‌ಅವರೆಲ್ಲರ ಸೇವೆಗಳೂ ಶ್ಲಾಘನೀಯ.

ಈ ಉತ್ಸವದ ವಿನೂತನ ಪರಿಕಲ್ಪನೆಯ ಬಗ್ಗೆ ಒಂದಷ್ಟು ಸಲಹೆ, ಸಹಕಾರ ನೀಡುವ ಸದವಕಾಶವನ್ನು ಶ್ರೀ ಲಕ್ಷ್ಮೀನಾರಾಯಣ ರಾಯರು ನನಗೂ ನೀಡಿದ್ದರು. ಅದಕ್ಕಾಗಿ ನಾನೂ ಧನ್ಯನಾಗಿದ್ದೇನೆ.

-ಜಿ ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ

Upayuktha

ಅಳದಂಗಡಿ ಬಸದಿಗೆ ಭವ್ಯ ಮೆರವಣಿಗೆಯಲ್ಲಿ ದೇವರ ಮೂರ್ತಿಗಳು

Upayuktha

ಹೃದಯಸ್ತಂಭನ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ: ಪೌರ ರಕ್ಷಣಾ ಸಿಬ್ಬಂದಿಗೆ ತರಬೇತಿ

Upayuktha