ಓದುಗರ ವೇದಿಕೆ

ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಚಿಂತನೆಗಳೇಕೆ…?

ಇಂದು ಜಾಲತಾಣಗಳ ಯುಗ. ಮನುಷ್ಯ ಜೀವಿಗಳು ಒಂದು ಕಡೆ ಸಂಬಂಧಗಳಿಂದ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ತಮಗರಿವಿಗೆ ಬಾರದೆ ಮೊಬೈಲ್ ಎನ್ನುವ ಒಂದು ಉಪಕರಣ ಹಿಡಿದು ಅಂತರ್ಜಾಲದ ಮೂಲಕ ಜಾಲತಾಣಗಳಲ್ಲಿ ತಮ್ಮದೇ ಲೋಕವನ್ನು ಸೃಷ್ಟಿಸಿಕೊಂಡಿದ್ದಾರೆ. ಹಾಗಂತ ಈ ಜಾಲತಾಣಗಳು ನೂರಾರು ವರ್ಷಗಳಿಂದೇನೂ ಬಳಕೆಯಲ್ಲಿರಲಿಲ್ಲ.

ಕೇವಲ ಒಂದು ದಶಕದ ಈಚೆಗೆ ತಿವ್ರಗತಿಯಲ್ಲಿ ಬೆಳವಣಿಗೆ ಕಂಡಂತ ಮಾಧ್ಯಮವಿದು ಆದರೆ ಮನುಷ್ಯ ಜೀವಿಯನ್ನು ಇದು ಆವರಿಸಿಕೊಂಡಿರುವ ಪರಿ ಮಾತ್ರ ಯಾರು ಊಹಿಸಲು ಅಸಾಧ್ಯವಾದದ್ದು. ಮಕ್ಕಳಿಂದ ಮುದುಕರ ವರೆಗೂ ಎಲ್ಲರೂ ಈ ಜಾಲತಾಣಗಳ ದಾಸರಾಗುತ್ತಿದ್ದಾರೆ. ಯಾವುದೇ ಹೊಸ ವಸ್ತುವಾಗಲಿ ಅಥವಾ ಸಂಶೋಧನೆಯಾಗಲಿ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದೇ ಇರುತ್ತದೆ. ಎಲ್ಲದರಲ್ಲೂ ಒಳಿತು ಕೆಡುಕು ಯೋಚಿಸುವ ನಾವು ಇವುಗಳ ಬಗೆಗೆ ಚಿಂತನೆ ನಡೆಸಬೇಕಾದ ಅಗತ್ಯ ನಮ್ಮೆದುರು ಇಂದು ಇದೆ.

ಈ ಜಾಲತಾಣಗಳ ಅತಿಯಾದ ಉಪಯೋಗದಿಂದ ಸಮಯ ವ್ಯರ್ಥ ಒಂದು ಕಡೆಯಾದರೆ, ಹಲವಾರು ಬಾರಿ ಅವುಗಳಲ್ಲಿ ದೊರೆಯುವ ವಿಚಾರಗಳು ಸತ್ಯಕ್ಕೆ ದೂರವಿರುತ್ತವೆ. ಸಾಮಾಜಿಕ ಜಾಲತಾಣಗಳಿಂದ ಬಹಳಷ್ಟು ಸಾರಿ ಉಪಯೋಗ ಆಗಿರುವ ಉದಾಹರಣೆಗಳು ಇವೆ. ಈ ಜಾಲತಾಣಗಳನ್ನು ಬಹುತೇಕ ಮಂದಿ ಆರೊಗ್ಯಕರ ಚರ್ಚೆ ಅಥವಾ ಸಮಾಜದ ತೊಡಕುಗಳನ್ನು ನಿವಾರಿಸುವ ಕಡೆಗೆ ವಿಚಾರಧಾರೆಗಳನ್ನು ಮಂಡಿಸುವ ಬದಲು ಬೇರೆಯವರನ್ನು ಟೀಕಿಸುವುದರಲ್ಲೆ ಕಾಲ ಕಳೆಯುತ್ತಾರೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತಪ್ಪು ದಾರಿಯಲ್ಲಿ ನಡೆದಾಗ ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ನಾವು ಜಾಲತಾಣಗಳಲ್ಲಿ ಪ್ರತಿಕ್ರಿಯೆಸುವಾಗ ಉಪಯೋಗಿಸುವ ಪದಗಳು ಒಬ್ಬ ವ್ಯಕ್ತಿಯ ವೈಯಕ್ತಿಕ ಬದುಕಿಗೆ ಕೆಡುಕು ಉಂಟು ಮಾಡಬಾರದೆಂಬ ಪ್ರಜ್ಞೆ ನಮ್ಮಲ್ಲಿರಬೇಕು.

ಕೆಲವೊಮ್ಮೆ ಯಾವ ತಪ್ಪನ್ನು ಮಾಡದೆ ಇದ್ದರು ಕೂಡ ಸಾಮಾಜಿಕ ಜೀವನದಲ್ಲಿ ಇದ್ದಾರೆ ಎನ್ನುವ ಒಂದೇ ಕಾರಣಕ್ಕೆ ಟೀಕೆಗೆ ಒಳಗಾಗುತ್ತಾರೆ. ಇಂತಹ ಚಿಕ್ಕ ಚಿಕ್ಕ ಬೆಳವಣಿಗೆಗಳು ಭವಿಷ್ಯದಲ್ಲಿ ಮಾರಕವಾಗುವ ಕಾಲ ಬಂದರು ಬರಬಹುದು. ನಾವು ಮೊಬೈಲ್‌ ಉಪಕರಣ ಹಿಡಿದು ಮನಸ್ಸಿಗೆ ಮೂಡುವಂತಹ ಕೀಳು ಮಟ್ಟದ ಅಭಿರುಚಿಯ ಬರಹಗಳನ್ನು ಮತ್ತೊಬ್ಬರ ಕಡೆಗೆ ಎಸೆಯುವ ವ್ಯಕ್ತಿಗಳು, ಎಂದಾದರೂ ಅದನ್ನು ಸ್ವೀಕರಿಸುವ ವ್ಯಕ್ತಿ ಮತ್ತು ಅವನ ಮನಸ್ಸಿಗೆ ಎಷ್ಟು ಘಾಸಿ ಉಂಟು ಮಾಡಬಹುದೆಂಬ ಆಲೋಚನೆ ಮಾಡುತ್ತಾರೆಯೆ?.

ಒಬ್ಬ ಸಿನಿಮಾ ನಟ, ನಟಿ ಮತ್ತು ರಾಜಕೀಯ ವ್ಯಕ್ತಿಗಳು ಹಾಗೂ ಬೇರೆ ಯಾವುದೇ ಸಾರ್ವಜನಿಕ ಕ್ಷೇತ್ರದಲ್ಲಿರುವ ಸಾಧಕರು ಅವರ ಬದುಕು ಮತ್ತು ವೃತ್ತಿಯಲ್ಲಿ ಯಾವುದೋ ಕೆಟ್ಟ ನಿರ್ಧಾರದಿಂದ ಎಡವಿದಾಗ ಅವರು ಮತ್ತೆ ಎದ್ದು ನಿಲ್ಲದ ಹಾಗೆ ಮನಸ್ಸನ್ನು ಕುಗ್ಗಿಸುವ ಹಾಗೆ ಇಂದು ಹಲವಾರು ವಿಕೃತ ಮನಸ್ಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾ ಶೀಲಾವಾಗಿವೆ. ಇಂತಹ ಮನಸ್ಥಿತಿಯನ್ನು ನಾವು ಮೊಳಕೆಯಲ್ಲಿರುವಾಗಲೆ ಚಿವುಟಿ ಸಾಯಿಸದಿದ್ದಲ್ಲಿ ಮುಂದೊಂದು ದಿನ ಹೆಮ್ಮರವಾಗಿ ಬೆಳೆದು ಇಡಿ ಮಾನವ ಕುಲವನ್ನೇ ಸುತ್ತುವರೆದರೂ ಆಶ್ಚರ್ಯವಿಲ್ಲ.

✍ ಪ್ರದೀಪ ಶೆಟ್ಟಿ ಬೇಳೂರು

 

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಅಭಿಮತ: ಮಾನವೀಯತೆ ಎಲ್ಲಿದೆ?

Upayuktha

ಸಾಮರಸ್ಯದ ಸಂಕೇತ ಮೊಹರಂ

Upayuktha

ಕೃಷಿ ಮಸೂದೆ: ಪರ-ವಿರೋಧದ ನಡುವೆ ಕೃಷಿಕರೊಬ್ಬರ ಅನುಭವವನ್ನು ಓದಿ…

Upayuktha