ಅಡುಗೆ-ಆಹಾರ

ಸವಿರುಚಿ: ಅರ್ಕ ಮತ್ತು ಬಾಳೆಹಣ್ಣಿನ ಕಡುಬು

ಅರ್ಕ (kodo millet) ಮತ್ತು ಬಾಳೆಹಣ್ಣಿನಿಂದ ತಯಾರಿಸುವ ಈ ಕಡುಬು ವಿಭಿನ್ನ ಮತ್ತು ವಿಶಿಷ್ಟವಾದ ತಿಂಡಿಯಾಗಿದೆ. ರಾಗಿಯ ಹಲವು ಪ್ರಭೇದಗಳು ಈಗ ಸಾಕಷ್ಟು ಜನಪ್ರಿಯವಾಗಿವೆ. ಅವುಗಳ ಪೈಕಿ ಅರ್ಕ ರಾಗಿ ಕೂಡ ಒಂದು. ಇದು ಬಹಳ ಪೌಷ್ಟಿಕಾಂಶಗಳನ್ನು ಹೊಂದಿದೆ. ಬಾಳೆಹಣ್ಣಿನೊಂದಿಗೆ ಅರ್ಕ ರಾಗಿಯನ್ನು ಸೇರಿಸಿ ತಿಂಡಿ ತಯಾರಿಸುವುದು ಒಂದು ಸುಂದರ ಕಾಂಬಿನೇಷನ್ ಆಗಿದೆ. ಅಕ್ಕಿಗೆ ಬದಲಾಗಿ ನಾನು ಅರ್ಕ- ರಾಗಿಯನ್ನು ಬಳಸಿದ್ದೇನೆ. ಅದು ನಮ್ಮ ದೇಹಕ್ಕೆ ತುಂಬಾ ಆರೋಗ್ಯಕರವಾಗಿದೆ.

ಅರ್ಕ ರಾಗಿ, ಬಾಳೆಹಣ್ಣು, ಬೆಲ್ಲ, ಮತ್ತು ತೆಂಗಿನಕಾಯಿಯನ್ನು ಬಳಸಿ ಈ ಕಡುಬು ತಯಾರಿಸಲಾಗುತ್ತದೆ. ಮೊದಲು ಅರ್ಕ ರಾಗಿಯನ್ನು 4- 6 ಗಂಟೆಗಳ ಕಾಲ ನೆನೆ ಹಾಕಬೇಕು. ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಈ ಕಡುಬುವಿನಲ್ಲಿ ಸೇರಿಸಬಹುದು. ಸ್ವತಃ ಬಾಳೆಹಣ್ಣೇ ಸಿಹಿಯಾಗಿರುವುದರಿಂದ ನಿಮ್ಮ ರುಚಿಗೆ ತಕ್ಕಂತೆ ಬೆಲ್ಲವನ್ನು ಸೇರಿಸಿಕೊಳ್ಳಿ. ತೆಂಗಿನಕಾಯಿ ಸೇರಿಸಿದರೆ ಕಡುಬಿನ ಸವಿ ಇನ್ನಷ್ಟು ಹೆಚ್ಚುತ್ತದೆ. ಇವೆಲ್ಲವನ್ನೂ ರುಬ್ಬಿ ಸ್ವಲ್ಪ ದಪ್ಪವಾದ ಕಡುಬಿನ ಹಿಟ್ಟು ತಯಾರಿಸಿಕೊಳ್ಳಿ. ಹಿಟ್ಟು ನೀರಾಗಿದ್ದರೆ ಬಾಳೆ ಎಲೆಗೆ ಸುರಿದಾಗ ಅದು ಓಡಲು ಪ್ರಾರಂಭಿಸುತ್ತದೆ.

ಅರ್ಕ ರಾಗಿ- ಬಾಳೆಹಣ್ಣಿನ ಕಡುಬು ತಯಾರಿಸಲು ನಾನು ಬಾಳೆ ಎಲೆಗಳನ್ನು ಬಳಸಿದ್ದೇನೆ. ಬಾಳೆ ಎಲೆಗಳನ್ನು ಬಳಸುವ ಮೊದಲು ಅದನ್ನು ಬಾಡಿಸಬೇಕು. ಎಲೆಗಳನ್ನು ಬಾಡಿಸುವುದರಿಂದ ಮಡಿಸಲು ಸುಲಭವಾಗುತ್ತದೆ ಮತ್ತು ಅದು ಬೇಗನೆ ಹರಿದು ಹೋಗುವುದಿಲ್ಲ. ಬಾಳೆ ಎಲೆಗಳನ್ನು ನೆಲದ ಮೇಲೆ ಇಟ್ಟು ಎಲೆಗಳ ಮಧ್ಯದಲ್ಲಿ ಹಿಟ್ಟನ್ನು ಹಾಕಿ ಬಾಳೆ ಎಲೆಗಳನ್ನು ಎಲ್ಲಾ ಕಡೆಯಿಂದ ಮಡಿಸಬೇಕು.

ಸ್ಟವ್‌ನಲ್ಲಿ ಇರಿಸಿದ ಪಾತ್ರೆಯಲ್ಲಿ ಚೆನ್ನಾಗಿ ಹಬೆ ಬಂದ ನಂತರ ಅದರಲ್ಲಿ ಮಡಿಸಿದ ಬಾಳೆ ಎಲೆಗಳನ್ನು ಜೋಡಿಸಿ. ನಂತರ ಮಧ್ಯಮ ಉರಿಯಲ್ಲಿ 40- 45 ನಿಮಿಷಗಳ ಕಾಲ ಬೇಯಿಸಿ. ನಂತರ, ಬಿಸಿ ಬಿಸಿಯಾಗಿ ಅಥವಾ ಸಂಪೂರ್ಣವಾಗಿ ತಣ್ಣಗಾದ ನಂತರ ತಿನ್ನಿರಿ. ಕಡುಬಿನ ಮೇಲೆ ತುಪ್ಪ ಅಥವಾ ಎಣ್ಣೆಯನ್ನು ಹಚ್ಚಿ ಮತ್ತು ಚಟ್ನಿ, ಉಪ್ಪಿನಕಾಯಿ ಜತೆಗೆ ಅಥವಾ ಏನನ್ನೂ ಸೇರಿಸದೆಯೂ ತಿನ್ನಬಹುದು.

ಬೇಕಾಗುವ ಸಾಮಗ್ರಿಗಳು:

ಅರ್ಕ 1ವರೆ ಕಪ್
ಬಾಳೆಹಣ್ಣು 2 ಕಪ್
ಬೆಲ್ಲ ಕಾಲು ಕಪ್
ತೆಂಗಿನತುರಿ ಕಾಲು ಕಪ್
ಅವಲಕ್ಕಿ ಕಾಲು ಕಪ್
ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:
ಹಾರಕವನ್ನು 6 ಗಂಟೆಗಳ ಕಾಲ ನೆನೆಸಿ, ಚೆನ್ನಾಗಿ ತೊಳೆಯಬೇಕು. ಒಂದು ಮಿಕ್ಸಿ ಜಾರಿನಲ್ಲಿ ತೊಳೆದ ಹಾರಕ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
ಮತ್ತೆ ಅದಕ್ಕೆ ಬಾಳೆಹಣ್ಣು, ಬೆಲ್ಲ, ತೆಂಗಿನತುರಿ, ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
ರುಬ್ಬಿಕೊಂಡ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ಅವಲಕ್ಕಿ ಸೇರಿಸಿ ಚೆನ್ನಾಗಿ ಕಲಸಿ ಬದಿಗಿಡಿ.

ಬಾಳೆಎಲೆಯನ್ನು ಬಾಡಿಸಿ ಸ್ವಚ್ಚ ಮಾಡಿ. ನಂತರ ಆ ಬಾಳೆಎಲೆ ಮಧ್ಯಕ್ಕೆ ಸ್ವಲ್ಪ ಕಡುಬು ಹಿಟ್ಟನ್ನು ಹಾಕಿ ಎಲ್ಲ ಬದಿಯನ್ನು ಮಡಿಚಿಡಿ. ಒಂದು ಪಾತ್ರೆಯಲ್ಲಿ 40 ಅಥವಾ 45 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.
ರುಚಿಯಾದ ಮತ್ತು ಆರೋಗ್ಯವಾದ ಹಾರಕ ಮತ್ತು ಬಾಳೆಹಣ್ಣಿನ ಕಡುಬು ಸಿದ್ಧವಾಗುತ್ತದೆ.

ಈ ಸವಿಯಾದ ರೆಸಿಪಿಯನ್ನು ನೀವೂ ಪ್ರಯತ್ನಿಸಿ, ಅನುಭವವನ್ನು ಹಂಚಿಕೊಳ್ಳಿ. ದಯವಿಟ್ಟು ನನ್ನ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಅನುಸರಿಸಿ ಮತ್ತು ನನ್ನ YouTube ಚಾನಲ್‌ಗೆ ಚಂದಾದಾರರಾಗಿ.

-ಸ್ತುತಿ ಕೃಷ್ಣರಾಜ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಸವಿರುಚಿ: ಬಸಳೆ ಸೊಪ್ಪಿನ ತಂಬುಳಿ

Upayuktha

ಸವಿರುಚಿ: ತೆಂಗಿನ ಕಾಯಿ ಪೌಡರ್ ಮತ್ತು ಕಾಯಿ ಹಾಲು

Upayuktha

ಸವಿರುಚಿ: ಏನಿದು ಗೆರಟೆ ಚಹಾ / ಚಿಪ್ಪಿ ಚಾ? ನೀವೂ ಮಾಡಿ ನೋಡಿ…

Upayuktha