ಕಲೆ ಸಂಸ್ಕೃತಿ ಲೇಖನಗಳು

ಬಡಗು ತಿಟ್ಟಿನ ಮೇರು ಕಲಾವಿದ ಆಜ್ರಿ ಗೋಪಾಲ ಗಾಣಿಗರ ಮುಡಿಗೆ ಸಾಲಿಗ್ರಾಮ ಮೇಳದ ಕಲಾ ಬಾಂಧವ್ಯ ಪ್ರಶಸ್ತಿ

ಸಾಲಿಗ್ರಾಮ ಮೇಳದಲ್ಲಿ ದೀರ್ಘಕಾಲ ಕಲಾಸೇವೆಗೈದು ಭೀಷ್ಮ ವಿಜಯದ ಪರಶುರಾಮನಾಗಿ ರಂಗ ಸ್ಥಳದಲ್ಲೇ ದೈವಾಧೀನರಾದ ಕಲಾ ತಪಸ್ವಿ ಶಿರಿಯಾರ ಮಂಜು ನಾಯ್ಕರ ನೆನಪಿಗಾಗಿ ಶ್ರೀ ಸಾಲಿಗ್ರಾಮ ಮೇಳದ ವ್ಯವಸ್ಥಾಪಕರು ಪ್ರತೀ ವರ್ಷ ನೀಡುವ ಕಲಾವಿದರ ಮತ್ತು ಯಜಮಾನರ ಬಾಂಧವ್ಯದ ನೆಲೆಯಲ್ಲಿ ನೀಡುವ ಕಲಾ ಬಾಂಧವ್ಯ ಪ್ರಶಸ್ತಿಯನ್ನು ಈ ಬಾರಿ ಶ್ರೀ ಮಂದಾರ್ತಿ ಮೇಳದ ಹಿರಿಯ ಎರಡನೇ ವೇಷಧಾರಿ ಆಜ್ರಿ ಗೋಪಾಲ ಗಾಣಿಗರಿಗೆ ನೀಡಲಾಗುತ್ತದೆ.

ಪ್ರಶಸ್ತಿ ಪ್ರದಾನ ನ.15 ಶುಕ್ರವಾರ ಶಿರಿಯಾರದಲ್ಲಿ ನಡೆಯುವ ಮೇಳದ ಪ್ರಥಮ ಡೇರೆ ಆಟದಂದು ನೆರವೇರಲಿದೆ. ಬಳಿಕ ಈ ಸಾಲಿನ ಹೊಸ ಪ್ರಸಂಗ ಚಂದ್ರಮುಖಿ-ಪ್ರಾಣಸಖಿ ಎನ್ನುವ ಆಖ್ಯಾನದ ಪ್ರದರ್ಶನ ನೆರವೇರಲಿದೆ. ಬಡಗುತಿಟ್ಟಿನ ಒಂದು ಪ್ರಭೇದವಾದ ಹಾರಾಡಿ ತಿಟ್ಟಿನ ಪ್ರಾತಿನಿಧಿಕ ಕಲಾವಿದರಾದ ಆಜ್ರಿ ಗೋಪಾಲ ಗಾಣಿಗರು ಯಕ್ಷಗಾನದ ದಂತಕಥೆ, ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮ ಗಾಣಿಗರ ಮೊಮ್ಮಗ. ರಾಮ ಗಾಣಿಗರ ಹಾಗೆ ಕೇವಲ ಮಂದಾರ್ತಿಮೇಳವೊಂದರಲ್ಲೇ ಸುದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವವರು. ಮಂದಾರ್ತಿ ಒಂದು ಮೇಳವಿರುವಾಗಲೇ ಎರಡನೇ ವೇಷದ ಪಟ್ಟವೇರಿದ ಇವರು ಇಂದು ಐದು ಮೇಳವಿರುವಾಗಲೂ ಒಂದು ಮೇಳದ ಪ್ರಧಾನ ಕಲಾವಿದರಾಗಿದ್ದಾರೆ. ಎರಡನೇ ವೇಷ ಪುರುಷ ವೇಷವೆರಡನ್ನೂ ಮಾಡಬಲ್ಲ ಇವರ ಕರ್ಣಾರ್ಜುನದ ಅರ್ಜುನ, ಪುಷ್ಖಳ, ಸುಧನ್ವ ಮುಂತಾದ ಪುರುಷವೇಷಗಳು ಹಾರಾಡಿ ಕುಷ್ಟ ಗಾಣಿಗರ ಪಡಿಯಚ್ಚು.

ಯಕ್ಷಗಾನ ಭೂಪಟದಲ್ಲಿ ಆಜ್ರಿ ಎಂಬ ಹೆಸರನ್ನು ಗುರುತಿಸಲು ಕಾರಣರಾದ ಗಾಣಿಗರು ಕುಂದಾಪುರ ತಾಲೂಕು ಆಜ್ರಿ ಗ್ರಾಮದಲ್ಲಿ 1957ರಲ್ಲಿ ಮಂಜಯ್ಯ ಗಾಣಿಗ ಮತ್ತು ಮುತ್ತಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು ಏಳನೇ ತರಗತಿ ಅಭ್ಯಾಸ ಮಾಡಿ ಆರ್ಗೋಡು ಗೋವಿಂದರಾಯ ಶೆಣೈ ಮತ್ತು ನರಸಿಂಹ ಶೆಣೈಯವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಸ್ವತಃ ಅರ್ಥಧಾರಿಯಾಗಿದ್ದ ತಂದೆಯವರಿಂದ ಮಾತುಗಾರಿಕೆ ಕಲಿತ ಇವರು ಹೆಚ್ಚಿನ ಕಲಿಕೆಗಾಗಿ 1975ರಲ್ಲಿ ದಶಾವತಾರಿ ಗುರು ವೀರಭದ್ರ ನಾಯ್ಕರು ಶಿಕ್ಷಕರಾಗಿದ್ದ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿ ಹೆರಂಜಾಲು ವೆಂಕಟರಮಣ, ನೀಲಾವರ ರಾಮ ಕೃಷ್ಣಯ್ಯ, ಹಿರಿಯಡಕ ಗೋಪಾಲ ರಾಯರಂತಹ ಘಟಾನುಘಟಿಗಳ ವಿದ್ಯಾರ್ಥಿಯಾಗಿ ಯಕ್ಷಗಾನದ ವಿವಿದ ಅಂಗಗಳಲ್ಲಿ ಪರಿಪೂರ್ಣತೆ ಸಾಧಿಸಿದರು.

ಬಾಲ ಗೋಪಾಲ, ಸಖಿ, ಸ್ತ್ರೀವೇಷ ಮುಂತಾದ ಪಾತ್ರಗಳನ್ನು ಕಮಲಶಿಲೆ, ಸೌಕೂರು ರಂಜದಕಟ್ಟೆ, ಪೆರ್ಡೂರು ಮೇಳಗಳಲ್ಲಿ ನೆರವೇರಿಸಿ ಇಡಗುಂಜಿ, ಮತ್ತು ಮೂಲ್ಕಿ ಡೇರೆ ಮೇಳಗಳಲ್ಲಿ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು. 1980ರಿಂದ ಸತತ 36 ವರ್ಷ ಮಂದಾರ್ತಿ ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. ವಂಡಾರು ಬಸವ ನಾಯರಿ, ಮೊಳಹಳ್ಳಿ ಹೆರಿಯ, ಎಂ.ಎ ನಾಯ್ಕ್,ಅರಾಟೆ ಮಂಜುನಾಥ ಕೆರಮನೆ ಶಂಭು ಹೆಗಡೆ ಮೋಹನದಾಸ ಶೆಣೈ ಮುಂತಾದವರ ಒಡನಾಡಿಯಾದ ಇವರ ಬೀಷ್ಮ, ಪರಶುರಾಮ, ರಾವಣ, ಹಿರಣ್ಯ ಕಶ್ಯಪು, ರುತುಪರ್ಣ, ಕಮಲಭೂಪ ಭೀಮ ಮುಂತಾದ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ ಮತ್ತು ರಾಮ ಗಾಣಿಗರ ಛಾಪನ್ನು ಗುರುತಿಸಬಹುದು.

ಅತಿಕಾಯ, ಶಂತನು, ಭೀಷ್ಮನ ಪಾತ್ರಗಳಲ್ಲಿ ವೀರಭದ್ರ ನಾಯ್ಕರನ್ನೂ, ಕರ್ಣ ಜಾಂಬವ ಹಿರಣ್ಯಕಶ್ಯಪುವಿನ ಪಾತ್ರದಲ್ಲಿ ರಾಮ ಗಾಣಿಗರ ವೇಷವನ್ನು ನೆನಪಿಸಬಹುದಾಗಿದೆ. ನಾಡಿನಾದ್ಯಂತ ಹಲವಾರು ಸನ್ಮಾನ ಪಡೆದ ಇವರು ಪತ್ನಿ ಹಾರಾಡಿ ರಾಮ ಗಾಣಿಗರ ಮೊಮ್ಮಗಳು ರೋಹಿಣಿ ಮೂವರು ಪುತ್ರಿಯರೊಂದಿಗೆ ಆಜ್ರಿಯಲ್ಲಿ ವಾಸವಾಗಿದ್ದಾರೆ.

-ಪ್ರೊ. ಎಸ್.ವಿ. ಉದಯ ಕುಮಾರ ಶೆಟ್ಟಿ, ಮಣಿಪಾಲ

Related posts

ಸೀಬೆ ಹಣ್ಣು ಬಡವರ ಸೇಬು; ಔಷಧೀಯ ಗುಣ, ವಿಟಮಿನ್‌ಗಳ ಕಣಜ

Upayuktha

ವಿಶ್ವ ಆನೆಗಳ ದಿನ- ಆಗಸ್ಟ್ 12: ‘ಬಂಡೂಲ’ ಒಂದಾನೆಯ ಕತೆ

Upayuktha

ಏನಿದು ರೂಪಾಂತರಿ ಕೊರೋನಾ? ಇದು ಮೊದಲಿನದಕ್ಕಿಂತಲೂ ಉಗ್ರವೇ…?

Upayuktha