ಓದುಗರ ವೇದಿಕೆ

ಶ್ರೀ ಹೊಸ್ತೋಟ ಮಂಜುನಾಥ ಭಾಗವತರ ಚಿಕಿತ್ಸೆಗೆ ಬೇಕಾಗಿದೆ ನೆರವು

ಯಕ್ಷಪರಿವ್ರಾಜಕ, ಗುರು, ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ 80ರ ಇಳಿವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಶಿರಸಿ, ಮಣಿಪಾಲ, ಶಿವಮೊಗ್ಗ, ಮಂಗಳೂರು, ಮುಂತಾದ ಕಡೆಗಳಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮಾಡಿದ ಪ್ರಯತ್ನಗಳು ಫಲಕಾರಿಯಾಗುತ್ತಿಲ್ಲ. ಮಧುಮೇಹ, ರಕ್ತದೊತ್ತಡ, ಮೂತ್ರಕೋಶದ ಸಮಸ್ಯೆ, ಯಕೃತ್ತಿನ ತೊಂದರೆ, ಮುಂತಾದ ಬಹುವಿಧದ ಕಾಯಿಲೆಗಳು ಕಾಡುತ್ತಿವೆ. ಅವರ ಚಿಕಿತ್ಸೆಗೆ ಹಲವು ಅಭಿಮಾನಿಗಳು ಸ್ವಪ್ರೇರಣೆಯಿಂದ ಆರ್ಥಿಕ ನೆರವು ನೀಡಿ ಸಹಕರಿಸಿದ್ದಾರೆ. ಮೋತಿಗುಡ್ಡದ ಪರಮೇಶ್ವರ ಭಟ್ಟರು ಹಾಗೂ ಇತರ ಮಿತ್ರರು ಅವರು ಮೋತಿಗುಡ್ಡದ ಯಕ್ಷಾನುಗ್ರಹ ಕುಟೀರದಲ್ಲಿ ವಾಸ್ತವ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಚಿಕಿತ್ಸೆ ಮಾಡಿಸಲು ತಗಲಿದ ಖರ್ಚು-ವೆಚ್ಛಗಳನ್ನು ನಿಭಾಯಿಸಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ಶ್ರೀ ಮುರಳಿ ಕಡೆಕಾರ ಹಾಗೂ ಮಿತ್ರರು ಮಣಿಪಾಲದಲ್ಲಿ ತಗಲಿದ ಸಂಪೂರ್ಣ ವೆಚ್ಚವನ್ನು ನಿಭಾಯಿಸಿದ್ದಾರೆ.

ಶ್ರೀ ಅಚ್ಯುತ ಹೆಬ್ಬಾರ ಅವರು ಶಿವಮೊಗ್ಗದಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿಸಿದ್ದಾರೆ. ಕೆರೆಮನೆ ನರಸಿಂಹ ಹೆಗಡೆಯವರು ಮಂಗಳೂರಿನಲ್ಲಿ ಸಹಾಯ ಮಾಡಿದ್ದಾರೆ. ಕೆರೆಕೊಪ್ಪ ಸುಬ್ರಾಯ ಹೆಗಡೆ ಹಾಗೂ ಬಾಡಲಕೊಪ್ಪದ ಶ್ರೀಪಾದ ಜೋಶಿ ಇವರಿಬ್ಬರು ಹಾಗೂ ಅವರ ಕುಟುಂಬದ ಸದಸ್ಯರು ಭಾಗವತರ ಶುಶ್ರೂಷೆ ಮಾಡಿರುವ ರೀತಿ ಆದರ್ಶಮಯ ಹಾಗೂ ಅಭಿನಂದನೀಯ. ಸಾರ್ವಜನಿಕ ವಂತಿಗೆಯ ಸಹಾಯದಿಂದ ಜುಲೈ 2019ರಿಂದ ನವೆಂಬರ್ ಪ್ರಾರಂಭದವರೆಗೆ ತಗಲಿದ ಸುಮಾರು ರೂ.1.00 ಲಕ್ಷವನ್ನು ಭರಿಸಲಾಗಿತ್ತು.

ಆದರೆ ಶ್ರೀಯುತರನ್ನು ಮಂಗಳೂರಿಗೆ ಆಯುರ್ವೇದ ಚಿಕಿತ್ಸೆಗಾಗಿ ಕರೆದೊಯ್ದು ಅದು ಸಾಧ್ಯವಾಗದೇ ಅವರನ್ನು ಮಂಗಳೂರಿನ ಕ್ಷೇಮಾಕ್ಕೆ (ಕೆ.ಎಸ್.ಹೆಗಡೆ ಮೆಮೋರಿಯಲ್ ಆಸ್ಪತ್ರೆ) ಸೇರ್ಪಡೆ ಮಾಡಿ ಅವರು ಅಲ್ಲಿ ಮುಂದುವರಿಯಲು ಒಪ್ಪದೇ ಶಿರಸಿಗೆ ಹಿಂದಿರುಗಿದ ಹಂತದವರೆಗೆ ರೂ.1.25 ಲಕ್ಷಕ್ಕೂ ಅಧಿಕ ಮೊತ್ತ ವಿವಿಧ ವೈದ್ಯಕೀಯ ತಪಾಸಣೆ, ಆಸ್ಪತ್ರೆಯ ಶುಲ್ಕ, ಋಗ್ಣ ವಾಹನದ ಬಾಡಿಗೆ, ಮುಂತಾದವುಗಳಿಗೆ ವ್ಯಯವಾಯಿತು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ, ಅದರ ಸದಸ್ಯರಾಗಿರುವ ಕೆರೆಮನೆ ಶಿವಾನಂದ ಹೆಗಡೆಯವರ ಪ್ರಯತ್ನದಿಂದ, ಭಾಗವತರ ಚಿಕಿತ್ಸೆಗೆ ಅನುದಾನ ಮಂಜೂರು ಆಗಿದೆ ಎನ್ನುವ ವರ್ತಮಾನ ದೊರಕಿದೆ. ಆದರೆ ಅನುದಾನ ಬಿಡುಗಡೆಗೆ ವಿಳಂಬವಾಗುತ್ತಿದೆ.

ಪರಿವ್ರಾಜಕರಂತೆ ಬದುಕಿದ, ಯಾವುದೇ ನಿರ್ದಿಷ್ಟ ಆದಾಯಮೂಲ ಹೊಂದಿರದ ಇವರಂತಹ ನಿಸ್ಪೃಹ ವ್ಯಕ್ತಿಯ ಚಿಕಿತ್ಸೆಗೆ ಪ.ಪೂ.ಸ್ವರ್ಣವಲ್ಲೀ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು ಆರ್ಥಿಕ ನೆರವು ನೀಡಿದ್ದಾರೆ ಹಾಗೂ ಈಗಲೂ ನೆರವು ನೀಡುವ ಭರವಸೆ ನೀಡಿದ್ದಾರೆ. ಅದಲ್ಲದೇ, ಆರ್ಥಿಕವಾಗಿ ದುರ್ಬಲರಾದ ರೋಗಿಗಳ ಚಿಕಿತ್ಸೆಯ ನೆರವಿಗೆ ಬದ್ಧವಾದ ಡಾ.ಭಾಸ್ಕರ ಸ್ವಾದಿ ಚಾರಿಟೇಬಲ್ ಟ್ರಸ್ಟ್ ಕೂಡ ನೆರವು ನೀಡಲು ಮುಂದೆ ಬಂದಿದೆ. ಆದರೆ ಸಾರ್ವಜನಿಕರ ಸೇವೆಗೆ ನಿರಂತರವಾಗಿ ಶ್ರಮಿಸುತ್ತಿರುವ ಇಂತಹ ಸಂಸ್ಥೆಗಳ ಸಹಾಯ ಹಸ್ತ ಭಾಗವತರಂತಹ ಪ್ರಖ್ಯಾತಿ ಹಾಗೂ ವ್ಯಾಪ್ತಿ ಇರದ ಬಡವರಿಗೆ ದೊರಕಲಿ; ಶ್ರೀಯುತರ ಚಿಕಿತ್ಸೆ ಗೆ ಅವರ ಶಿಷ್ಯರು ಹಾಗೂ ಅಭಿಮಾನಿಗಳ ನೆರವು ಬಳಕೆಯಾಗಲಿ ಎನ್ನುವ ಅಪೇಕ್ಷೆ ನಮ್ಮದು. ಅದಲ್ಲದೇ ಸ್ವರ್ಣವಲ್ಲೀ ಮಠದಲ್ಲಿ ತಮಗೆ ದೊರಕಿದ ಸಾರ್ವಜನಿಕ ಸನ್ಮಾನದ ಮೊತ್ತದಿಂದ ಅವರು ಸ್ಥಾಪಿಸಿರುವ ಈ ಯಕ್ಷಶಾಲ್ಮಲ ಟ್ರಸ್ಟ್‌ ಕೂಡ ಸಾರ್ವಜನಿಕ ವಂತಿಗೆ, ಸರಕಾರದ ಅನುದಾನ ಹಾಗೂ ಪೂಜ್ಯ ಸ್ವರ್ಣವಲ್ಲೀ ಶ್ರಿಗಳವರ ನೆರವಿನಿಂದ ನಡೆಯುತ್ತಿರುವ ಸಂಘಟನೆ; ಇದು ಆರ್ಥಿಕವಾಗಿ ತುಂಬಾ ಬಲಿಷ್ಠವಾದ ಸಂಘಟನೆಯಲ್ಲ.

ಈ ಹಿನ್ನೆಲೆಯಲ್ಲಿ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರ ಎಲ್ಲ ಶಿಷ್ಯರು ಹಾಗೂ ಅಭಿಮಾನಿಗಳಲ್ಲಿ ಶ್ರೀಯುತರ ಚಿಕಿತ್ಸೆಯ ಸಲುವಾಗಿ ಯಥಾಶಕ್ತಿ ಆರ್ಥಿಕ ನೆರವು ನೀಡಲು ಕಳಕಳಿಯಿಂದ ಕೋರುತ್ತೇವೆ. ಅಜಾಡೆಮಿ ಹಾಗೂ ಇನ್ನಿತರ ಮೂಲಗಳಿಂದ ಆರ್ಥಿಕ ನೆರವು ಪ್ರಾಪ್ತವಾಗಿ ಚಿಕಿತ್ಸೆಯ ವೆಚ್ಚವನ್ನು ಮೀರಿ ಹಣ ಉಳಿದಲ್ಲಿ ಅದನ್ಮು ಶ್ರೀಯುತರ ಸೂಚಿಸುವ ಅಥವಾ ಸೂಚಿಸಿದ ಉದ್ದೇಶ ಸಾಧನೆಗಾಗಿ ಬಳಸಲಾಗುವುದು.

ತಮ್ಮ ನೆರವನ್ನು ನಗದು/ಚೆಕ್/ಅಂತರ್ಜಾಲ ವರ್ಗಾವಣೆ ಮೂಲಕ ನೀಡಬಹುದು. ಚೆಕ್/ಅಂತರ್ಜಾಲ ವರ್ಗಾವಣೆಗೆ ಖಾತೆಯ ವಿವರ ಹೀಗಿದೆ:
ಹೆಸರು: Yaksha Shalmala
ಖಾತೆ ಸಂಖ್ಯೆ: 0520101018969
ಬ್ಯಾಂಕ್: Canara Bank, C P Bazaar, Sirsi
IFSC: CNRB0000520

ವಿ.ಸೂ.: ಅಂತರ್ಜಾಲದ ಮೂಲಕ ನೆರವು ನೀಡಿದವರು ದಯವಿಟ್ಟು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ದೇಣಿಗೆಯ ಮೊತ್ತ, ವರ್ಗಾವಣೆಯ ವಿವರ (Transaction Id), ಮುಂತಾದವನ್ನು ನಾರಾಯಣ ಹೆಗಡೆ ಗಡಿಕೈ ಅವರ ವಾಟ್ಸಪ್ (9448425155) ಅಥವಾ ಅವರ ಈ ಮೇಲ್ (nmhgadikai@gmail.com) ಗೆ ತಿಳಿಸಬೇಕಾಗಿ ವಿನಂತಿ.

ಶ್ರೀ ಹೊಸ್ತೋಟ ಮಂಜುನಾಥ ಭಾಗವತರ ಶೇಷ ಜೀವನ ಸಾಧ್ಯವಾದಷ್ಟು ವೇದನಾರಹಿತವೂ, ನೆಮ್ಮದಿಮಯವೂ ಆಗಲಿ ಎನ್ನುವ ಸಂಕಲ್ಪಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸುತ್ತ, ನಮ್ಮ ಭಾಗದ ಈ ಅಪ್ರತಿಮ ಪ್ರತಿಭೆಯ ಚಿಕಿತ್ಸೆಗೆ ಮತ್ತೊಮ್ಮೆ ತಮ್ಮೆಲ್ಲರ ಸಹಕಾರ ಕೋರುವ,

ವಂದನೆಗಳೊಡನೆ, ತಮ್ಮ ವಿಶ್ವಾಸಿ,

ಆರ್.ಎಸ್.ಹೆಗಡೆ ಭೈರುಂಬೆ
ಅಧ್ಯಕ್ಷರು
ಯಕ್ಷ ಶಾಲ್ಮಲಾ
ಭೈರುಂಬೆ, ಶಿರಸಿ-581402

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಈ ಸೋದರಿಗೆ ನೆರವಾಗುವಿರಾ…?

Upayuktha

ರಾಜ್ಯೋತ್ಸವ ಪ್ರಶಸ್ತಿ ಯೋಗ್ಯರಿಗೆ ಸಿಗುವುದಾದರೆ ಇವರಿಗೂ ಸಿಗಬೇಕು

Upayuktha

ಲಾಕ್‌ಡೌನ್ ಪಾಲಿಸಿ, ಮನೆಯಲ್ಲೇ ಇದ್ದು ನೀವೂ ಉಳಿಯಿರಿ, ನಿಮ್ಮವರನ್ನೂ ಉಳಿಸಿ

Upayuktha