ಕಲೆ ಸಂಸ್ಕೃತಿ ಕಿರುತೆರೆ- ಟಿವಿ ಪ್ರತಿಭೆ-ಪರಿಚಯ

ಕನ್ನಡ ಕೋಗಿಲೆ ಖ್ಯಾತಿಯ ಗಣೇಶ್ ಕಾರಂತ್

 

ಸಂಗೀತ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಯುವ ಗಾಯಕರು ನಮಗೆ ನೋಡಲು ಸಿಗುತ್ತಾರೆ. ಅಂತಹ ಯುವ ಗಾಯಕರ ಸಾಲಿನಲ್ಲಿ ಮಿನುಗುತ್ತಿರುವ ಪ್ರತಿಭೆ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ “ಕನ್ನಡ ಕೋಗಿಲೆ”ಯ ಫೈನಲಿಸ್ಟ್ ಗಣೇಶ್ ಕಾರಂತ್.

ಕೆ ಗಣೇಶ್ ಕಾರಂತ್ ಇವರು ಮೂಲತಃ ಕುಂದಾಪುರದ ಖಂಬದಕೋಣೆಯವರು. ಇವರು ಹುಟ್ಟಿ ಬೆಳೆದದ್ದು ಉಡುಪಿ ಜಿಲ್ಲೆಯ ಬೈಲೂರಿನಲ್ಲಿ. ದಿನಾಂಕ 10.05.1992ರಂದು ಯಶೋಧಾ ಕಾರಂತ್ ಹಾಗೂ ಶಿವರಾಮ್ ಕಾರಂತ್ (ನಿವೃತ್ತ BSNL DGM) ಅವರ ಪ್ರೀತಿಯ ಸುಪುತ್ರನಾಗಿ ಜನನ. ಎಂಜಿನಿಯರಿಂಗ್ ಇವರ ವಿದ್ಯಾಭ್ಯಾಸ.

ಗಣೇಶ್ ಕಾರಂತ್ ಇವರು ಚಿಕ್ಕವರಾಗಿದ್ದಾಗ ಅವರ ತಂದೆ-ತಾಯಿಗೆ ಗೊತ್ತಾಗದ ಹಾಗೆ ಸಾರ್ವಜನಿಕ ವಿಟ್ಲಪಿಂಡಿ (ಮೊಸರು ಕುಡಿಕೆ) ಉತ್ಸವದಲ್ಲಿ ಏರ್ಪಡಿಸುವ ಭಕ್ತಿಗೀತೆ ಸ್ಪರ್ಧೆಯಲ್ಲಿ ಹಾಡಿ ಎರಡನೇ ಬಹುಮಾನವನ್ನು ಪಡೆದುಕೊಂಡಿದ್ದರಂತೆ. ಅವತ್ತು ಅವರಿಗೆ ಸಿಕ್ಕಿದ ಆ ಒಂದು ಬಹುಮಾನ ಇವರನ್ನು ಸಂಗೀತವನ್ನು ಕಲಿಯಲು ಪ್ರೇರೇಪಿಸಿತು. ದಿವಂಗತೆ ವಿದುಷಿ ಉಷಾ ಮೋಹನ್ ರಾವ್ ಇವರ ಸಂಗೀತದ ಗುರುಗಳು. ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆ ಮುಗಿಸಿರುವ ಇವರು ನಂತರದ ದಿನಗಳಲ್ಲಿ ಸಿನಿಮಾ ಸಂಗೀತದ ಕಡೆಗೆ ಬಹಳ ಆಕರ್ಷಿಸಿತರಾದರು. ಮಾಧುರ್ಯಭರಿತ ಸಿನಿಮಾ ಸಂಗೀತಗಳು ಅಂದ್ರೆ ಇವರಿಗೆ ಬಹಳ ಇಷ್ಟ.

“ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶ್ರೇಯಾ ಘೋಷಲ್, ಚಿತ್ರಾ, ಸೋನು ನಿಗಮ್” ಇವರ ನೆಚ್ಚಿನ ಗಾಯಕರು. ಕ್ರಿಕೆಟ್ ಹಾಗೂ ಸಿನಿಮಾ ನೋಡುವುದು ಇವರ ಹವ್ಯಾಸಗಳು.

“ಕನ್ನಡ ಕೋಗಿಲೆ ನನ್ನ ಜೀವನದಲ್ಲಿ ನನಗೆ ಸಿಕ್ಕ ಬಹುದೊಡ್ಡ ವೇದಿಕೆ. ಕನ್ನಡ ಕೋಗಿಲೆ ನಂತರ ಜನರು ನನ್ನನ್ನು ಗುರುತಿಸಲು ಪ್ರಾರಂಭಿಸಿದರು. ಸಾಕಷ್ಟು ವೇದಿಕೆಗಳಲ್ಲಿ ಹಾಡುವ ಅವಕಾಶ ದೊರಕಿತು. ಕತಾರ್ ಹಾಗೂ ಸಿಂಗಾಪುರ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಅವಕಾಶ ಸಿಕ್ಕಿತು. ಎಲ್ಲವೂ ಕನ್ನಡ ಕೋಗಿಲೆಯಿಂದಾಗಿಯೇ. ಕನ್ನಡ ಕೋಗಿಲೆಯಲ್ಲಿ ತಪ್ಪು ಮಾಡಿದರೆ ಮುಲಾಜಿಲ್ಲದೆ ನೀನು ಇಂತಹ ಕಡೆಗಳಲ್ಲಿ ತಪ್ಪು ಮಾಡಿದ್ದಿ ಎಂದು ಹೇಳಿ ತಿದ್ದುತ್ತಿದ್ದ 3 ಜನ ತೀರ್ಪುಗಾರರು, ಸದಾ ನನ್ನನ್ನು ಗೋಳು ಹೋಯ್ದುಕೊಳ್ಳುತ್ತಿದ್ದ ಹಸನ್ಮುಖಿ ಅನುಪಮಾಗೌಡ ಹಾಗೂ ನನ್ನ ಸಹ ಸ್ಪರ್ಧಿಗಳು ಇವರೆಲ್ಲರನ್ನೂ ಖಂಡಿತವಾಗಿಯೂ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. 22 ವಾರಗಳ ಕಾಲ ಪ್ರಸಾರವಾದ ಕನ್ನಡ ಕೋಗಿಲೆ ಸೀಸನ್ ಒಂದರ ಫೈನಲಿಸ್ಟ್ ಆಗಿರುವುದು ಒಂದು ದೊಡ್ಡ ಹೆಮ್ಮೆಯ ಸಂಗತಿ. ಮೊದಲೇ ತಿಳಿಸಿದ ಹಾಗೆ ಜನರು ಇವಾಗ ನನ್ನನ್ನು ಗುರುತಿಸುತ್ತಾರೆ ಎನ್ನುವುದು ಒಂದು ಖುಷಿಯ ವಿಚಾರ” ಎಂದು ಇವರು ಹೇಳುತ್ತಾರೆ.

ಈ ವರ್ಷದ ಸೂಪರ್ ಹಿಟ್ ಗೀತೆ “ಮಹಾಭಾರತ” ಧಾರಾವಾಹಿಯ ಶೀರ್ಷಿಕೆ ಗೀತೆ ಎಂದರೆ ತಪ್ಪಾಗಲಾರದು. ಮೂಲ ಹಾಡು ಹಿಂದಿಯದ್ದಾದರೂ ಕನ್ನಡದಲ್ಲೂ ಕೂಡ ಅಷ್ಟೇ ಬಹುಮನ್ನಣೆ ಗಳಿಸಿಕೊಂಡ ಹಾಡು ಇದು. ಅಜಯ್ ಅತುಲ್ ಅವರ ಮೂಲ ಸಂಗೀತ. ಒಟ್ಟು 10 ಗಾಯಕರು ಸೇರಿ ಹಾಡಿದ ಹಾಡು ಇದು. ಆ ಗಾಯಕರಲ್ಲಿ ಇವರು ಕೂಡ ಒಬ್ಬರು ಎನ್ನುವುದು  ಬಹಳ ಹೆಮ್ಮೆಯ ವಿಚಾರ.

ಇವರ ಸಂಗೀತದ ಸಾಧನೆಗಳ ಕೆಲವು ಮೈಲಿಗಲ್ಲುಗಳು:

● ಕಲರ್ಸ್ ಸೂಪರ್ ವಾಹಿನಿಯಲ್ಲಿ 22 ವಾರಗಳ ಕಾಲ ಪ್ರಸಾರವಾದ ಜನಪ್ರಿಯ ಸಂಗೀತ ರಿಯಾಲಿಟಿ ಶೋ “ಕನ್ನಡ ಕೋಗಿಲೆ” ಸೀಸನ್ 1ರ ಫೈನಲಿಸ್ಟ್.

● ರೇಡಿಯೋ ಸಿಟಿ ಸೂಪರ್ ಸಿಂಗರ್ ಸೀಸನ್ 8 ರ ವಿಜೇತರಾಗಿದ್ದಾರೆ.

● ಕಳೆದ 2 ತಿಂಗಳುಗಳಿಂದ Star Suvarna Channelನಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿಯ ಶೀರ್ಷಿಕೆ ಗೀತೆ ಹಾಡಿದ 10 ಜನ ಗಾಯಕರಲ್ಲಿ ಇವರು ಒಬ್ಬರು.

●ಇವರು ಹಾಡಿರುವ ಹುಲಿರಾಯ ಚಿತ್ರದ “ಹೇ ಹುಡುಗಿ” ಹಾಡಿಗೆ “Filmee Beat – Best Male Singer 2017” ಪ್ರಶಸ್ತಿ ಸಂದಿದೆ.

●ಇವರ “ಪ್ರತಿ ಬಾರಿ ಸೋತ ಹೃದಯ”, “ಊರು ಬಿಟ್ಟು ಬೆಂಗ್ಳೂರಿಗ್ ಬಂದು ಬದುಕೋಕಾಯ್ತದಾ” ಹಾಡುಗಳು social mediaಗಳಲ್ಲಿ ಬಹು ಮನ್ನಣೆಯನ್ನು ಪಡೆದಿವೆ.

● ಕತಾರ್ ಹಾಗೂ ಸಿಂಗಾಪುರ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ಕೊಟ್ಟ ಹಿರಿಮೆ ಇವರದ್ದು.

● ಈಗಾಗಲೇ 7 ಕನ್ನಡ ಹಾಗೂ 1 ತೆಲುಗು ಚಿತ್ರಗಳಿಗೆ ಹಾಡಿದ್ದಾರೆ.

● ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಅರ್ಜುನ್ ರಾಮು, ಅಜನೀಶ್ ಲೋಕನಾಥ್, ಅನೂಪ್ ಸೀಳಿನ್, ಚರಣ್ ರಾಜ್ ಅವರ ಬಳಿ ಕೆಲಸ ಮಾಡಿದ ಅನುಭವವನ್ನು ಹೊಂದಿರುತ್ತಾರೆ.

● ಕಳೆದ ಜನವರಿ 19ರಂದು ಮಂಗಳೂರಿನಲ್ಲಿ ನಡೆದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ Music concertನಲ್ಲಿ S.P.B ಅವರಿಗೆ ಸಹ ಗಾಯನದಲ್ಲಿ ಹಾಡುವಂತಹ ಅಪರೂಪದಲ್ಲಿ ಅಪರೂಪದ ಅವಕಾಶವನ್ನು ಗಣೇಶ್ ಕಾರಂತ್ ಅವರು ಪಡೆದಿರುತ್ತಾರೆ.

ಈಗ ಹಾಡುಗಾರರ ಸ್ಥಿತಿ ಹೇಗಿದೆ ಎಂದು ಕೇಳಿದಾಗ “ಕೊರೋನಾದಿಂದಾಗಿ ಬರೀ ಸಂಗೀತ ಕಾರ್ಯಕ್ರಮಗಳನ್ನೇ ನಂಬಿಕೊಂಡಿದ್ದ ಸಂಗೀತಗಾರರ ಸ್ಥಿತಿ ಡೋಲಾಯಮಾನವಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರಗೊಳ್ಳಲಿ. ಸಂಗೀತ ಕಾರ್ಯಕ್ರಮಗಳು ಮೊದಲಿನ ಹಾಗೆ ನಡೆಯುವಂತೆ ಆಗಲಿ” ಎಂದರು.

ಸಂಗೀತ ಕ್ಷೇತ್ರದಲ್ಲಿ ಒಬ್ಬ ದೊಡ್ಡ ಹಿನ್ನೆಲೆ ಗಾಯಕ ಆಗಬೇಕು ಎಂಬುವುದು ಮೊದಲಿಂದಲೂ ನನಗೆ ಇರುವಂತಹ ಆಸೆ. ಪ್ರಯತ್ನವಂತೂ ಜಾರಿಯಲ್ಲಿದೆ. ಇನ್ನು ಒಳ್ಳೆಯ ಅವಕಾಶಗಳು ಒದಗಿ ಬಂದರೆ ಖಂಡಿತವಾಗಿಯೂ ಒಳ್ಳೆಯ ರೀತಿಯಲ್ಲಿ ಆ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತೇನೆ ಎನ್ನುತ್ತಾರೆ.

ಇವರಿಗೆ ಕಲಾ ಸರಸ್ವತಿ ಹಾಗೂ ನಾವು ನಂಬಿರುವ ಕಲಾಮಾತೆ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.

– ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ನ.10ರಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಕೊಲೆಕಾಡಿ ಯಕ್ಷ ವೈಭವ-2019’

Upayuktha

ನಡಿಗೆಯಲ್ಲಿ ಸಾಧನೆಯ ದೀಕ್ಷೆ ತೊಟ್ಟ ದೀಕ್ಷಿತ್

Upayuktha

ಯಕ್ಷಗಾನ ಅಕಾಡೆಮಿ ಬಹುಮಾನ: ಲೇಖಕರು, ಪ್ರಕಾಶಕರಿಂದ ಅರ್ಜಿ ಆಹ್ವಾನ

Upayuktha

Leave a Comment