ದೇಶ-ವಿದೇಶ ಪ್ರಮುಖ

ಅಸೆಂಬ್ಲಿ ಫಲಿತಾಂಶ: ಮೂರು ರಾಜ್ಯಗಳಲ್ಲಿ ಆಡಳಿತ ಪಕ್ಷಗಳಿಗೇ ಮತ್ತೆ ಮಣೆ; ತ.ನಾ, ಪುದುಚೇರಿಯಲ್ಲಿ ವಿಪಕ್ಷಗಳಿಗೆ ಮನ್ನಣೆ

ಅಸ್ಸಾಂ ಬಿಜೆಪಿಗೆ, ಕೇರಳ ಸಿಪಿಐಎಂಗೆ, ಪ.ಬಂಗಾಳ ತೃಣಮೂಲಕ್ಕೆ
ತಮಿಳುನಾಡಿನಲ್ಲಿ ಡಿಎಂಕೆ, ಪುದುಚೇರಿಯಲ್ಲಿ ಎನ್‌ಡಿಎ ಆಡಳಿತ

ಹೊಸದಿಲ್ಲಿ: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶಗಳು ಪ್ರಕಟವಾಗಿದ್ದು, ಅಸ್ಸಾಂ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷಗಳು ಅಧಿಕಾರಕ್ಕೆ ಮರಳಿವೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿರೋಧ ಪಕ್ಷಗಳು ಅಧಿಕಾರ ಪಡೆದುಕೊಂಡಿವೆ.

ಚುನಾವಣೆ ಆಯೋಗದಿಂದ ಲಭ್ಯವಾದ ತಾಜಾ ಮಾಹಿತಿಗಳ ಪ್ರಕಾರ, ಅಸ್ಸಾಂನಲ್ಲಿ ಒಟ್ಟು 125 ಸ್ಥಾನಗಳ ಪೈಕಿ 123 ಸೀಟುಗಳ ಫಲಿತಾಂಶದ ಟ್ರೆಂಡ್ ಲಬ್ಯವಿದೆ. ಅಲ್ಲಿ ಬಿಜೆಪಿ 75 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಶೂನ್ಯಕ್ಕಿಳಿದಿದ್ದು, ಮಹಾಜಾಠ್ ಪಕ್ಷ 49 ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು 2 ಸ್ಥಾನಗಳನ್ನು ಗೆದ್ದಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ನೇತೃತ್ವದ ಬಿಜೆಪಿ ಸರಕಾರ ಮರಳಿ ಅಧಿಕಾರಕ್ಕೆ ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 292 ಸ್ಥಾನಗಳ ಪೈಕಿ 215 ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ 77 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿವೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಶೂನ್ಯಸಾಧನೆ ಮಾಡಿವೆ. ಇದರೊಂದಿಗೆ ತೃಣಮೂಲ ಕಾಂಗ್ರೆಸ್‌ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ.

ಬಂಗಾಳದ ಜನತೆ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಜಕೀಯ ಹಿಂಸಾಚಾರ ಮರುಕಳಿಸಿದ್ದು, ಬಿಜೆಪಿ ಕಚೇರಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಹಲವೆಡೆ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿಗಳು ನಡೆದ ವರದಿಯಾಗಿದೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ 85 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದ್ದು, ಎಂ.ಕೆ ಸ್ಟಾಲಿನ್ ನೇತೃತ್ವದ ಪ್ರತಿಪಕ್ಷ ಡಿಎಂಕೆ 150 ಸ್ಥಾನಗಳನ್ನು ಗಳಿಸಿದೆ.

ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗ 97 ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರಕ್ಕೆ ಮರಳಿದೆ. ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ ಒಳಗೊಂಡ ಯುಡಿಎಫ್‌ 43 ಸ್ಥಾನಗಳನ್ನು ಗೆದ್ದಿವೆ. ಪ್ರತಿ ಚುನಾವಣೆಯಲ್ಲಿ ಪರ್ಯಾಯವಾಗಿ ಅಧಿಕಾರ ಹಿಡಿಯುತ್ತಿದ್ದ ಕೇರಳದಲ್ಲಿ ಈ ಬಾರಿ ಫಲಿತಾಂಶ ಭಿನ್ನವಾಗಿದ್ದು, ಆಡಳಿತಾರೂಢ ಎಡರಂಗವೇ ಮತ್ತೆ ಗೆದ್ದಿರುವುದು ವಿಶೇಷ.

ಎರಡೂ ರಂಗಗಳಿಗೆ ಎಲ್ಲ ಕಡೆ ಭಾರೀ ಪ್ರತಿಸ್ಪರ್ಧೆ ಒಡ್ಡಿದ್ದ ಬಿಜೆಪಿ ಬಹಳ ನಿರೀಕ್ಷೆಗಳನ್ನು ಮೂಡಿಸಿದ್ದರೂ ಈ ಬಾರಿ ಒಂದೂ ಸ್ಥಾನವನ್ನು ಗೆದ್ದಿಲ್ಲ. ಆದರೆ ಹಲವು ಕ್ಷೇತ್ರಗಳಲ್ಲಿ ದ್ವಿತೀಯ ಸ್ಥಾನಿಯಾಗಿ ಬೆಳೆದು ಬಂದಿದೆ. ಕಳೆದ ಚುನಾವಣೆಯಲ್ಲಿ ಕೇವಲ 1 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಅದನ್ನೂ ಕಳೆದುಕೊಂಡಿದೆ. ಆದರೆ ಒಟ್ಟಾರೆಯಾಗಿ ತನ್ನ ಮತಗಳಿಕೆ ಪ್ರಮಾಣವನ್ನು ಶೇ 37ಕ್ಕೆ ಹೆಚ್ಚಿಸಿಕೊಂಡಿದೆ.

ಪುದುಚೇರಿಯಲ್ಲಿ 30 ಸ್ಥಾನಗಳ ಪೈಕಿ 25 ಕ್ಷೇತ್ರಗಳ ಟ್ರೆಂಡ್ ಲಭ್ಯವಿದ್ದು, ಎನ್‌ಡಿಎ 14, ಎಸ್‌ಡಿಪಿಐ 6 ಹಾಗೂ ಪಕ್ಷೇತರರು 5 ಸ್ಥಾನಗಳಲ್ಲಿ ಗೆಲುವಿನ ಹಾದಿಯಲ್ಲಿದ್ದಾರೆ.

ಕರ್ನಾಟಕದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಗೆಲುವು ಸಾಧಿಸಿದ್ದಾರೆ.

ಬೆಳಗ್ಗೆ 8 ಗಂಟೆಗೆ ಎಲ್ಲ ರಾಜ್ಯಗಳಲ್ಲಿ ಮತಗಳ ಎಣಿಕೆ ಆರಂಭವಾಗಿತ್ತು. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಸಿ ಬಳಿಕ ಇವಿಎಂಗಳ ಮತಗಳನ್ನು ಹಲವು ಸುತ್ತುಗಳಲ್ಲಿ ಎಣಿಸಲಾಯಿತು.

ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶವಾದ ಪುದುಚೇರಿಯಲ್ಲಿ ಮಾರ್ಚ್‌ 27ರಿಂದ ಏಪ್ರಿಲ್ 29ರ ನಡುವೆ ಚುನಾವಣೆಗಳು ನಡೆದಿದ್ದವು.

ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಗೆಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಮತಗಳ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. ಕೋವಿಡ್ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆಗೆ ಚುನಾವಣೆ ಆಯೋಗ ಕ್ರಮ ಕೈಗೊಂಡಿತ್ತು.

ಎಣಿಕೆ ಕೇಂದ್ರಗಳ ಒಳಕ್ಕೆ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡದ ಯಾವುದೇ ಅಭ್ಯರ್ಥಿಗಳು ಅಥವಾ ಅವರ ಏಜೆಂಟರನ್ನು ಬಿಟ್ಟಿರಲಿಲ್ಲ. ಆದರೆ ಎರಡೂ ಡೋಸ್‌ ಲಸಿಕೆಗಳನ್ನು ಪಡೆದವರನ್ನು ಒಳಗೆ ಬಿಡಲಾಗಿತ್ತು. ಎಣಿಕೆ ಕೇಂದ್ರಗಳ ಹೊರಗೆ ಜನರು ಗುಂಪುಗೂಡುವುದನ್ನು ಆಯೋಗ ನಿಷೇಧಿಸಿತ್ತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ

Harshitha Harish

ದೇಶಾದ್ಯಂತ ಎನ್‌ಆರ್‌ಸಿ ಜಾರಿ ಅನಿವಾರ್ಯ: ರಾಜನಾಥ್ ಸಿಂಗ್‌

Upayuktha

ಕೇರಳ ಬಿಜೆಪಿಯ ವಿಜಯ ಯಾತ್ರೆಗೆ ಇಂದು ಕಾಸರಗೋಡಿನಲ್ಲಿ ಯೋಗಿ ಆದಿತ್ಯನಾಥ್‌ ಚಾಲನೆ

Upayuktha