ಆರೋಗ್ಯ ಪ್ರಮುಖ ಯೋಗ- ವ್ಯಾಯಾಮ ರಾಜ್ಯ ಲೈಫ್‌ ಸ್ಟೈಲ್- ಆರೋಗ್ಯ

ಯೋಗಾಭ್ಯಾಸಕ್ಕೆ ಒಲವು ತೋರುತ್ತಿರುವ ಗ್ರಾಮೀಣ ಮಹಿಳೆಯರು

ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಯೋಗ ಶಿಕ್ಷಣ ಯಶಸ್ಸು

ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತಿರುವ ಉಚಿತ ಯೋಗ ತರಬೇತಿ ಶಿಬಿರಕ್ಕೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಒಲವು ತೋರುತ್ತಿರುವುದು ಕಂಡುಬಂದಿದೆ. ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಈ ಯೋಗ ಶಿಕ್ಷಣ ಶಿಬಿರದಲ್ಲಿ ಭಾಗವಹಿಸುತ್ತಿರುವವರಲ್ಲಿ ಮಹಿಳೆಯರದ್ದೇ ಸಿಂಹಪಾಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಉಚಿತ ಯೋಗ ಶಿಕ್ಷಣವನ್ನು ಒದಗಿಸುವ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ 78 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಯೋಗ ಶಿಕ್ಷಣವನ್ನು ನೀಡಲಾಗುತ್ತಿದೆ. ಈಗಗಾಲೇ 2,000ಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಶಿಕ್ಷಣಾರ್ಥಿಗಳಾಗಿ ಭಾಗವಹಿಸುತ್ತಿರುವವರಲ್ಲಿ ಶೇ.80ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ ಎಂಬುದು ಗಮನಾರ್ಹ.

ಗ್ರಾಮೀಣ ಭಾಗಗಳಲ್ಲಿ ಯೋಗ ಶಿಕ್ಷಣಕ್ಕೆ ಹೆಚ್ಚಿನ ಸ್ಪಂದನೆ ಇದೆ. ಆಸಕ್ತಿಯಿಂದ ಜನರು ಭಾಗವಹಿಸುತ್ತಿದ್ದಾರೆ ಎಂಬುದು ಯೋಗ ಶಿಕ್ಷಕರ ಅಭಿಪ್ರಾಯವಾಗಿದೆ.

ಏನಿದು ಯೋಜನೆ?
ಪ್ರಧಾನಮಂತ್ರಿಗಳ ಫಿಟ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಉಚಿತವಾಗಿ ಯೋಗಾಸನ, ಪ್ರಾಣಾಯಮವನ್ನು ಕಲಿಸುವ ಕಾರ್ಯಕ್ರಮ ಇದಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರು ದೈಹಿಕ, ಮಾನಸಿಕ ಸದೃಢತೆ ಸಾಧಿಸಿಕೊಳ್ಳುವುದು ಅತ್ಯಗತ್ಯವಾಗಿರುವುದರಿಂದ ಯೋಗ ಶಿಕ್ಷಣ ಯೋಜನೆ ಜಾರಿಗೆ ಮುತುವರ್ಜಿ ವಹಿಸಲಾಯಿತು.
ಯೋಗ ವಿಜ್ಞಾನದಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದ ಯೋಗಪಟುಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 40 ಯೋಗ ಶಿಕ್ಷಕರನ್ನು ಸೂಕ್ತ ಗೌರವಧನದೊಂದಿಗೆ ಸರ್ಕಾರ ನಿಯುಕ್ತಿಗೊಳಿಸಿದೆ. ಜಿಲ್ಲೆಯ 66 ಗ್ರಾಮೀಣ ಹಾಗೂ 12 ನಗರ ಸೇರಿದಂತೆ ಒಟ್ಟು 78 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ.

ಒಬ್ಬ ಯೋಗ ಶಿಕ್ಷಕ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅದರ ಉಪಕೇಂದ್ರ ಸೇರಿದಂತೆ 4 ಸ್ಥಳಗಳಲ್ಲಿ ಯೋಗ ತರಬೇತಿ ನೀಡಬೇಕಾಗುತ್ತದೆ. ಸ್ಥಳೀಯ ಅಂಗನವಾಡಿ, ಶಾಲೆ ಅಥವಾ ಪಂಚಾಯ್ತಿ ಕಟ್ಟಡಗಳಲ್ಲಿ ಯೋಗ ತರಬೇತಿ ನಡೆಯುತ್ತದೆ.

ಯೋಗ ತರಗತಿಯಲ್ಲಿ ಏನೇನಿದೆ?
ಒಬ್ಬ ವ್ಯಕ್ತಿಗೆ ತಲಾ 1 ಗಂಟೆಯ 20 ತರಗತಿಗಳಲ್ಲಿ ಯೋಗ ಕಲಿಸಲಾಗುತ್ತದೆ. ಆರೋಗ್ಯ ಕಾಪಾಡಲು ಉಪಯೋಗವಾಗುವಂತಹ, ಎಲ್ಲಾ ವಯೋಮಾನದವರು ಸುಲಭವಾಗಿ ಮಾಡಬಹುದಾದಂತಹ ಆಸನಗಳು, ಸೂರ್ಯನಮಸ್ಕಾರ, ಪ್ರಾಣಾಯಾಮ ಧ್ಯಾನವನ್ನು ಹೇಳಿಕೊಡಲಾಗುತ್ತದೆ. ಇಂದಿನ ಆಧುನಿಕ ಪ್ರಪಂಚದಲ್ಲಿ ಜನರು ಸಾಮಾನ್ಯವಾಗಿ ಅನುಭವಿಸುವಂತಹ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ, ಪಾರ್ಶ್ವವಾಯುವಿನಂತಹ ಆರೋಗ್ಯ ಸಮಸ್ಯೆಗೆ ಯೋಗ ಸಹಕಾರಿ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು. 6 ವರ್ಷ ಮೇಲ್ಪಟ್ಟ ಬಾಲಕ ಬಾಲಕಿಯಿಂದ ತೊಡಗಿ ವೃದ್ಧರ ತನಕ ಎಲ್ಲರೂ ಈ ಯೋಗ ಶಿಕ್ಷಣ ಪಡೆಯಬಹುದಾಗಿದೆ.

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಶ್ವಾಸೋಚ್ಛ್ವಾಸವನ್ನು ಸುಲಲಿತಗೊಳಿಸುವ ಪ್ರಾಣಾಯಾಮಕ್ಕೆ ಒತ್ತು ನೀಡಲಾಗುತ್ತಿದೆ. 20 ತರಗತಿಗಳ ಬಳಿಕ ಶಿಕ್ಷಣಾರ್ಥಿಗಳು ಮನೆಯಲ್ಲೇ ಸ್ವತಃ ಅಭ್ಯಾಸ ಮಾಡಿಕೊಳ್ಳಲು ಶಕ್ತರಾಗುತ್ತಾರೆ ಎಂದು ಯೋಗ ಶಿಕ್ಷಕರಲ್ಲೊಬ್ಬರಾಗಿರುವ ಹರೀಶ್ ಭಟ್ ಕೇವಳ ಹೇಳುತ್ತಾರೆ.

ಪ್ರಾಯೋಗಿಕ ಯೋಜನೆಯ ಯಶಸ್ಸಿನ ಆಧಾರದಲ್ಲಿ ಪ್ರತಿ ಆರೋಗ್ಯ ಕೇಂದ್ರಗಳಿಗೂ ಹಂತ ಹಂತವಾಗಿ ಯೋಗ ಶಿಕ್ಷಣವನ್ನು ವಿಸ್ತರಿಸುವ ಗುರಿ ರಾಜ್ಯ ಸರ್ಕಾರದ್ದಾಗಿದೆ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಡಾ. ಚೂಂತಾರು ಅವರ 11ನೇ ಕೃತಿ ‘ಸಂಕಲ್ಪ 2020’ ಜೂನ್ ಮೊದಲ ವಾರ ಬಿಡುಗಡೆ

Upayuktha

ಕೊರೊನಾ ಸಂಕಟ: ಮುಂದಿನ ಐದು ತಿಂಗಳ ಕಾಲ ಕೇರಳ ಸರಕಾರಿ ನೌಕರರ ಮಾಸಿಕ ವೇತನದಲ್ಲಿ 6 ದಿನಗಳ ಸಂಬಳ ಕಡಿತ

Upayuktha

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಎಸ್‌ಪಿಜಿ ಭದ್ರತೆ ಇನ್ನಿಲ್ಲ

Upayuktha