ಪ್ರಮುಖ ರಾಜ್ಯ ಸಮುದಾಯ ಸುದ್ದಿ

‘ಸಾಧನಾ ಸಂಕಲ್ಪ’ ಪ್ರತಿಜ್ಞಾ ಸಮಾರಂಭ, ಸ್ಪೀಕರ್‌ ಕಾಗೇರಿಯವರಿಗೆ ಸನ್ಮಾನ

ಶ್ರೀ ಅಖಿಲ ಹವ್ಯಕ ಮಹಾಸಭಾದಲ್ಲಿ ವಿಧಾನಸಭಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ

ಬೆಂಗಳೂರು: ಇಂದು ಜನನಾಯಕರ ಕುರಿತಾಗಿ ಬಹಳಷ್ಟು ಮಾತನಾಡಲಾಗುತ್ತದೆ. ಆದರೆ ಜನರು ಹೇಗಿರುತ್ತಾರೋ ಅದೇ ರೀತಿಯ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿಧಾನಸಭೆ ಅಧ್ಯಕ್ಷರಾದ ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮಲ್ಲೇಶ್ವರದಲ್ಲಿರುವ ಶ್ರೀಅಖಿಲ ಹವ್ಯಕ ಮಹಾಸಭೆಯಲ್ಲಿ ಇಂದು (ನ.18) ನಡೆದ ‘ಅಭಿನಂದನಾ ಸಮಾರಂಭ’ ಹಾಗೂ ‘ಸಾಧನಾ ಸಂಕಲ್ಪ’ ಕಾರ್ಯಕ್ರಮದಲ್ಲಿ ಹವ್ಯಕ ಮಹಾಸಭೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಕಾಗೇರಿಯವರು, ಸಮಷ್ಟಿ ಸಮಾಜದ ಎಲ್ಲಾ ವಿಭಾಗಗಳಲ್ಲಿ ಹವ್ಯಕರು ತಮ್ಮ ಪ್ರತಿಭೆಯಿಂದ ನಮ್ಮ ಸಮಾಜವನ್ನು ನಾಡು ಗುರುತಿಸುವಂತೆ ಆಗಿದೆ. ಸಮಾಜದ ಸಂಘಟನೆ ಆರಂಭವಾಗಿ 75 ವರ್ಷಕ್ಕೆ ಯಾವ ಪ್ರಬುದ್ಧತೆಯನ್ನು ತೋರಿಸಬೇಕೋ ಆ ಪ್ರಬುದ್ಧತೆಯನ್ನು ಹವ್ಯಕ ಮಹಾಸಭೆ ತನ್ನ ಕಾರ್ಯದ ಮೂಲಕ ತೋರಿಸುತ್ತಾ ಇದೆ. ಕಳೆದ ವರ್ಷ ಅಮೃತ ಮಹೋತ್ಸವ ನಾಡಿಗೆ ಮಾದರಿಯಾಗಿ ನಡೆದಿತ್ತು. ಈಗ 25 ವಿವಿಧ ವೇದಿಕೆಗಳ ಮೂಲಕ ಸಮಾಜದ ಸಂಘಟನೆಗೆ ಇನ್ನೊಂದು ಮೆಟ್ಟಿಲು ಇಡಲು ಹೊರಟಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.

ಡಾ ಗಿರಿಧರ್ ಕಜೆ ಅವರ ನೇತೃತ್ವದಲ್ಲಿ ಹವ್ಯಕ ಮಹಾಸಭೆ ಬಹಳ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಆಡಳಿತ ಮಂಡಳಿಯ ಕಾರ್ಯಗಳಿಂದ ಸಮಾಜದ ಹೆಮ್ಮೆ ಹೆಚ್ಚಾಗಿದೆ, ಸಮಾಜಕ್ಕೆ ಒಳಿತಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಅವರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಲು ಸಲಹೆಗಳನ್ನು ಕೋರಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಹವ್ಯಕ ಯೋಧ ರತ್ನ ಲೆಫ್ಟಿನೆಂಟ್ ಜನರಲ್ ಡಾ. ಬಿ ಎನ್ ಬಿ ಎಮ್ ಪ್ರಸಾದ್ ( ಸೇನಾ ವೈದ್ಯ) ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ, ಸಾಧನೆ ಮಾಡಲು ಸಂಕಲ್ಪ ಬೇಕು, ಜೊತೆಜೊತೆಗೆ ಉತ್ತಮ ಉದ್ದೇಶ ಹಾಗೂ ದೈವದ ಆಶೀರ್ವಾದ ಬೇಕು ಎಂದು ಅಭಿಪ್ರಾಯಪಟ್ಟರು. ನಮ್ಮಲ್ಲಿ ಸಾಧನೆ ಮಾಡಲು ಬೇಕಾದ ಶಕ್ತಿ ನಮ್ಮ ಪೂರ್ವಜರ ಬಳುವಳಿಯಾಗಿ ಬಂದಿದೆ, ಹವ್ಯಕರಲ್ಲಿ ನಾಡಿಗೆ ಒಳಿತು ಮಾಡುವ ಸಾಮರ್ಥ್ಯ ಇದೆ. ಅದನ್ನು ನಾವು ಸದುಪಯೋಗಪಡಿಸಿಕೊಳ್ಳೋಣ ಎಂದರು.

ಯೋಧ ಹಾಗೂ ಯೋಗಿಯ ಜೀವನ ಒಂದೇ ತೆರನದ್ದಾಗಿರುತ್ತದೆ. ಜೀವನದ ಯಾವುದೇ ಸನ್ನಿವೇಶಗಳಿಗೆ ಹೆದರದೆ ಸಾಧನೆ ಮಾಡಬೇಕು ಎಂದು ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದರು.

ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹವ್ಯಕರು ರಾಜಕೀಯದಲ್ಲಿ ಅನೇಕರಿದ್ದಾರೆ. ಆದರೆ ಮುಖ್ಯಮಂತ್ರಿಯಾದವರು ರಾಮಕೃಷ್ಣ ಹೆಗಡೆಯವರು ಮಾತ್ರ, ಅದೇರೀತಿ ಸಾಂವಿಧಾನಿಕ ಹುದ್ದೆಯಾದ ವಿಧಾನಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಏಕೈಕ ವ್ಯಕ್ತಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು. ಸತತವಾಗಿ 6 ಬಾರಿ ಗೆದ್ದು ಬಂದಿರುವುದು ಅವರ ಸರಳತೆ ಹಾಗೂ ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಸರಳ ಸಜ್ಜನಿಕೆಯ ಕಾಗೇರಿಯವರಿಂದ ನಾಡಿಗೆ ಮಾದರಿಯಾಗುವ ಕಾರ್ಯಗಳಾಗಲಿ ಎಂದು ಆಶಿಸಿದರು.

ಕಳೆದ ವರ್ಷ ನಡೆದ ವಿಶ್ವ ಹವ್ಯಕ ಸಮ್ಮೇಳದ ಪ್ರಭಾವವನ್ನು ನಾಡಿನಲ್ಲಿ ಇನ್ನೂ ಕಾಣಬಹುದು. ನಮ್ಮ ಕಾರ್ಯಕ್ರಮವನ್ನು ಹೊಗಳುವ ಜೊತೆಗೆ ನಮ್ಮ ಕಾರ್ಯಕ್ರಮವನ್ನು ಮಾದರಿಯಾಗಿಸಿಕೊಂಡು ತಮ್ಮ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳುವುದನ್ನು ನಾಡಿನಲ್ಲಿ ಕಾಣಬಹುದಾಗಿದೆ. ಮಹಾಸಭೆಯ ಕಾರ್ಯಗಳನ್ನು ವಿಸ್ತರಿಸಲು 25 ವಿವಿಧ ಹವ್ಯಕ ವೇದಿಕೆಗಳಿಗೆ ಚಾಲನೆ ನೀಡಲಾಗಿದೆ. ಇದು ಮಹಾಸಭೆಯ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಮಹಾಸಭೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ಸಮಾಜಮುಖೀ ಕಾರ್ಯಗಳಿಗೆ ಇನ್ನೊಂದು ಆಯಾಮ ಕೊಡಲಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಕ್ಷೇತ್ರಾಧಿಪತಿ ಮಹಾಗಣಪತಿಗೆ ನೂರಾರು ಮಾತೆಯರು ಹಾಗೂ ವೈದಿಕರಿಂದ ವೇ.ಬ್ರ ರಾಮಚಂದ್ರ ಭಟ್ ನೇತೃತ್ವದಲ್ಲಿ ಲಕ್ಷಾರ್ಚನೆ ಸಲ್ಲಿಸಲಾಯಿತು.

ಹವ್ಯಕ ಇಂಜಿನಿಯರ್ಸ್ ವೇದಿಕೆ, ಹವ್ಯಕ ವೈದ್ಯರ ವೇದಿಕೆ, ಹವ್ಯಕ ಪಾಕ ತಜ್ಞರ ವೇದಿಕೆ, ಹವ್ಯಕ ವೃತ್ತಿನಿರತರ ವೇದಿಕೆ, ಹವ್ಯಕ ವಿದ್ಯಾರ್ಥಿ ವೇದಿಕೆ, ಹವ್ಯಕ ಪತ್ರಕರ್ತರ ವೇದಿಕೆ ಸೇರಿದಂತೆ 25 ವಿವಿಧ ವೇದಿಕೆಗಳಿಗೆ ಚಾಲನೆ ನೀಡಲಾಯಿತು. ಕಾಯೇನ ವಾಚಾ ಮನಸಾ ಕಾರ್ಯನಿರ್ವಹಿಸುವುದಾಗಿ ವೇದಿಕೆಗಳ ಪದಾಧಿಕಾರಿಗಳು ಪ್ರತಿಜ್ಞೆ ಸ್ವೀಕರಿಸಿದರು. ಡಾ.ಕಜೆ ಪ್ರತಿಜ್ಞೆಯನ್ನು ಬೋಧಿಸಿದರು. ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ್ ಸಂಪ ವೇದಿಕೆಗಳ ಕಾರ್ಯವ್ಯಾಪ್ತಿ ಹಾಗೂ ಕರ್ತವ್ಯಗಳನ್ನು ತಿಳಿಸಿದರು.

ಎನ್ ಆರ್ ಹೆಗಡೆ ರಾಘೋಣ ಅವರು ಕಾಗೇರಿ ಕುರಿತಾಗಿ ಅಭಿನಂದನಾ ನುಡಿಗಳನ್ನಾಡಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ನೂತನ ವೇದಿಕ ಪದಾಧಿಕಾರಿಗಳಿಗೆ ಪುಷ್ಪಗುಚ್ಛ ನೀಡಿದರು. ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ ಸಂಪ ಪ್ರಸ್ತಾವಿಕ ಮಾತನಾಡಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಕೃಷ್ಣಾನಂದ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ ಯಲ್ಲಾಪುರ, ಸಾಲೆಕೊಪ್ಪ ಶ್ರೀಧರ ಭಟ್, ಯು ಎಸ್ ಹೆಗಡೆ, ಚಿದಂಬರ ಭಟ್, ಡಾ. ನರಹರಿ ರಾವ್, ಡಾ. ಶ್ರೀಪಾದ್, ನಾರಾಯಣ ಭಟ್ ಬಡಜ ಮುಂತಾದವರು ಉಪಸ್ಥಿತರಿದ್ದರು.

Related posts

ನ್ಯಾಯವನ್ನು ಪ್ರತೀಕಾರವಾಗಿ ಪರಿಗಣಿಸಬಾರದು: ಸಿಜೆಐ ಎಸ್‌ಎ ಬೊಬ್ಡೆ

Upayuktha

ಮಹಿಳೆಯರ ರಕ್ಷಣೆಗಿರುವ ಕಾನೂನುಗಳು ಸದ್ಬಳಕೆಯಾಗಲಿ: ಶ್ಯಾಮಲಾ ಎಸ್ ಕುಂದರ್

Upayuktha

ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ತೆರೆ

Upayuktha