ಧರ್ಮ-ಅಧ್ಯಾತ್ಮ ಲೇಖನಗಳು-ಅಧ್ಯಾತ್ಮ

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 2

ವೇದ ಮಾತಾ ಗಾಯತ್ರೀ ದೇವಿ

-ನಾರಾಯಣ ಯಾಜಿ, ಸಾಲೇಬೈಲು

(ಭಾಗ ಎರಡು)

ಋಗ್ವೇದದಲ್ಲಿನ ಹತ್ತನೆಯ ಮಂಡಲದ ನೂರಾ ಇಪ್ಪತ್ತೊಂದನೆಯ ‘ಹಿರಣ್ಯಗರ್ಭಸೂಕ್ತ’ ಮತ್ತು ನೂರಾ ಇಪ್ಪತ್ತೊಂಬತ್ತನೆಯ‘ ನಾಸಾದೀಯ ಸೂಕ್ತ’ ಸೃಷ್ಠಿಕರ್ತನ ಸಾಮರ್ಥ್ಯ  ಮತ್ತು ಅವನಿಗಿರುವ ತಿಳುವಳಿಕೆಯ ಮಿತಿಯ ಕುರಿತು ನೇತ್ಯಾತ್ಮಕ ಅಭಿಪ್ರಾಯ ಮೂಡಿರುವದಕ್ಕೆ ಕಾರಣ ಮಾಕ್ಸ್ ಮುಲ್ಲರನ  ಅನುವಾದವನ್ನು ಆಧಾರವಾಗಿರಿಸಿಕೊಳ್ಳುವದೇ ಆಗಿದೆ. ಅದರಲ್ಲೂ ಹಿರಣ್ಯಗರ್ಭದ‘ ಕಸ್ಮೈ ದೇವಾಯ ಹವಿಷಾ ವಿಧೇಮ’ ಎನ್ನುವದು ಪ್ರಶ್ನಾರ್ಥಕಗಳೆಂದು ಅನುಮಾನವೆಂದು‘ ಸೃಷ್ಥಿಕರ್ತನ’ ಅಥವಾ ‘ಬ್ರಹ್ಮ’ ದ ಕುರಿತಾಗಿ ವಿಪರೀತವಾಗಿ ಭಾಷಾಂತರಿಸಲಾಗಿದೆ. ಈ ಕುರಿತು ಖ್ಯಾತ ಕವಿಗಳಾದ ವೀ. ಸೀ. ಯವರೂ ತಮ್ಮ ಕವಿತೆ ‘ಕಸ್ಮೈ ದೇವಾಯ’ದಲ್ಲಿ

‘ಹಳೆಯ ಕಾಲದ ತಂದೆ ತಾತದಿರ ದೇವರುಗ/ಳಳಿದು
ಹೋಗುವ ಕಡಿದು ಕಾಲ ಬರುತಿಹುದು/ಇಳಿದಿಹುದು
ಕಡುನಿಡಿದು ನೆಳಲೊಂದು ಮೇಲಿಂದ/ಅಳಿಸಿ ಹೋಗುತಲಿಹವು ಅವರ ಮೂರ್ತಿಗಳೂ

ಎನ್ನುವ ಮೂಲಕ ಹಳೆಯ ದೇವರುಗಳೆಲ್ಲ ಅಳಿದು ಹೊಸ ದೇವರುಗಳು ಬರುತ್ತಿದ್ದಾರೆ. ಮುಂದೆ ಬೇರೆ ಯಾವ ದೇವರುಗಳೆಲ್ಲ ಬರಬಹುದೋ ಏನೋ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಈ ಪ್ರಸಿದ್ಧವಾದ ಸೂಕ್ತ ಪ್ರಾರಂಭವಾಗುವದು ಹೀಗೆ:

ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯಜಾತಃ ಪತಿರೇಕ ಆಸೀತ್
ಸ ದಾಧಾರ ಪೃಥಿವೀಂದ್ಯಾಮುತೇಮಾಂಕಸ್ಮೈ ದೇವಾಯ ಹವಿಷಾ ವಿಧೇಮ(ಋ 10-121)

ಈ ಮೇಲಿನ ಋಕ್ಕಿನಲ್ಲಿ ಬರುವ

“ಕಸ್ಮೈ ದೇವಾಯ ಹವಿಷಾ ವಿಧೇಮ”
Who is the deity we shall worship with our offerings?
‘ಹವಿಸ್ಸನ್ನು ಯಾವ ದೇವರಿಗೆಂತ ಕೊಡಲಿ?’

ಎನ್ನುವ ಸರಳ ಅರ್ಥವನ್ನು ಮಾಡಿ ಈ ಮಂತ್ರದ ದೃಷ್ಟ್ರಾರರಿಗೇ ದೇವರ ಕುರಿತಾಗಿ ಸ್ಪಷ್ಟವಾದ ಕಲ್ಪನೆ ಇಲ್ಲವಾಗಿತ್ತು ಎಂಬಂತೆ ವ್ಯಾಖ್ಯಾನ ಮಾಡಿರುತ್ತಾರೆ. ನಮ್ಮ ಯಾವುದೇ ವೇದದಲ್ಲೂ ಪ್ರಶ್ನಾರ್ಥಕ ಚಿನ್ನೆಗಳಿಲ್ಲ. ಏಕೆಂದರೆ ವೇದವೆಂದರೆ ಋತ, ಅದು ‘ಸತ್ಯಸ್ಯ ಸತ್ಯ’. ದರ್ಶನವಾದ ಅನುಭವದ ಮೇಲಿನಿಂದ ಅನುಭಾವಿ ನುಡಿದ ಮಾತುಗಳು ಇವು. ವಾಕ್ಯಗಳಲ್ಲಿ ಪ್ರಶ್ನಾರ್ಥಕಚಿಹ್ನೆ ಸಹಿತವಾದ ಸೂಚನಾ ಚಿಹ್ನೆಗಳು (Punctuation Marks) ಬಂದಿರುವದೇ ಪಾಶ್ಚಾತ್ಯರಿಂದ.ಸಂಸ್ಕ್ರತದಲ್ಲಿ ಪದಗಳನ್ನು ಹೇಗೆ ಬೇಕಾದರೂ ಜೋಡಿಸಿಕೊಳ್ಳಬಹುದು. ಖ್ಯಾತ ವಿದ್ವಾಂಸರಾದ ಡಾ ಟಿ. ವಿ. ವೆಂಕಟಾಚಲ ಶಾಸ್ತ್ರಿಗಳ ಪ್ರಕಾರ ಕನ್ನಡದಲ್ಲಿಯೂ ಪ್ರಶ್ನಾರ್ಥಕದಿಂದ ಹಿಡಿದು ಯಾವುದೇ ಸೂಚನೆಯ ಚಿಹ್ನೆಗಳ ಬಳಕೆ ಇರಲಿಲ್ಲ. ವೇದಗಳು ಸತ್ಯದರ್ಶನ ಮಾಡಿಸುವವು ಎಂದು ನಾವು ನಂಬಿರುವದಾದರೆ ‘ಯಾರಿಗೆಂತ ಹವಿಸ್ಸನ್ನು ಕೊಡಲಿ’ ಎಂದು ಮೇಲಿನ ಸೂಕ್ತದಲ್ಲಿ ಸಂಶಯವನ್ನು ವ್ಯಕ್ತಪಡಿಸುವ ಭಾವ ಬರುವದಾದರೂ ಹೇಗೆ?

ಈ ವಿಷಯವನ್ನು ಅವಲೋಕಿಸುವಾಗ ಮೊದಲು ನಾವು ಸೃಷ್ಟಿಗೆ ಪೂರ್ವದಲ್ಲಿದ್ದ ಸ್ಥಿತಿಯನ್ನು ಆಲೋಚಿಸಬೇಕಾಗುತ್ತದೆ. ಋಗ್ವೇದದಲ್ಲಿ ಈ ಸೃಷ್ಟಿಯ ವಿಷಯದಲ್ಲಿ ಮತ್ತು ಸೃಷ್ಟಿ ಹೇಗಾಯಿತೆಂದು ವರ್ಣಿಸುವ ಅನೇಕ ಸೂಕ್ತಗಳಿವೆ. ಅವುಗಳಲ್ಲಿ ಹತ್ತನೆಯ ಮಂಡಲದಲ್ಲಿ ಬರುವ 81, 82, 90, 129, 130 ಮತ್ತು 190 ಬಹಳ ಮುಖ್ಯವಾದವುಗಳು. ಅದರಲ್ಲೂ 90ನೆಯ ಪುರುಷ ಸೂಕ್ತದಲ್ಲಿ ಈ ಕುರಿತಾಗಿ ವರ್ಣನೆಗಳು ಸವಿವರವಾಗಿ ಬಂದಿದೆ. ಈ ಎಲ್ಲವಗಳೂ ಒಂದಕ್ಕೊಂದಕ್ಕೆ ಪೂರಕವೂ ಆಗಿರುವದನ್ನು ಗಮನಿಸಬಹುದು. ಇವೆಲ್ಲವೂ ಪರಬ್ರಹ್ಮದ ಕುರಿತು ವರ್ಣಿಸುತ್ತವೆ. ಇಲ್ಲಿ ಬಂದಿರುವ ಆ ಹಿರಣ್ಯಗರ್ಭನೆಂದರೆ ಆ ಪರಮಾತ್ಮಅಥವಾ ಪ್ರಜಾಪತಿಯೇ ಆಗಿದ್ದಾನೆ. ಒಂದು ವಸ್ತುವಿನಲ್ಲಿಅಂತರ್ಗತವಾಗಿರುವ ಮತ್ತೊಂದು ವಸ್ತುವಿಗೆ ಗರ್ಭವೆಂದು ಹೇಳುತ್ತಾರೆ. ಪರಮಾತ್ಮನಲ್ಲಿ ಅವ್ಯಕ್ತ ರೂಪದಲ್ಲಿ ಲೀನವಾಗಿದ್ದ ಮತ್ತುಇದು ಸುವರ್ಣದಂತೆ ಪ್ರಕಾಶಮಾನವಾಗಿರುವ ಈ ಅಂಡವನ್ನು ತನ್ನೊಡಲಿನಲ್ಲಿ ಧರಿಸಿರುವನನ್ನು ಹಿರಣ್ಯಗರ್ಭನೆಂದು ಇಲ್ಲಿ ಸ್ತುತಿಸಿದ್ದಾರೆ.

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 1

ಇಂತಹ ಹಿರಣ್ಯಗರ್ಭನು ಸೃಷ್ಟಿಗೆ ಪೂರ್ವದಲ್ಲಿ ತಾನೊಬ್ಬನೇ ಇದ್ದನು ಮತ್ತು ಆಗ ಪ್ರಜಾಪತಿಯ ಹೊರತಾಗಿ ಮತ್ತಾರೂ ಇರಲಿಲ್ಲ. ಅವನಿಂದಲೇ ಈ ಎಲ್ಲವೂ ಉತ್ಪನ್ನವಾಯಿತು. ಹಾಗೇ ಉತ್ಪನ್ನವಾದ ಕೂಡಲೇ ಈ ಹಿರಣ್ಯಗರ್ಭನು ಏಕಮಾತ್ರ ಪ್ರಭುವಾಗಿದ್ದನು ಇವನನ್ನು ಬಿಟ್ಟು ಬೇರೊಬ್ಬರಿರಲಿಲ್ಲ. ತನ್ನಅಂಶದಿಂದಲೇ ಉತ್ಪತ್ತಿಯಾದ ಪ್ರಥಿವ್ಯಾಂತರಿಕ್ಷಗಳಿಗೆ ಇವನೇ ಆಧಾರಭೂತನಾಗಿದ್ದಾನೆ ಮತ್ತು ಅವನಿಂದಲೇ ಅವುಗಳ ನಿರ್ದಿಷ್ಟ ಸ್ಥಾನಗಳಲ್ಲಿ ಸ್ಥಾಪಿತವಾಗಿ ತಮ್ಮ ಕರ್ತವ್ಯ ಕರ್ಮಗಳ ನಿರ್ವಹಣೆಯಲ್ಲಿ ಸಮರ್ಥವಾಗಿರುವವು. ಹಾಗಾಗಿ ‘ಕಸ್ಮೈ ದೇವಾಯ ಹವಿಷಾ ವಿಧೇಮ’ –ದಲ್ಲಿನ ಕಃ ಶಬ್ದಕ್ಕೆ ಎನ್ನುವ ವಿವರಣೆಯನ್ನು ಹೀಗೆ ವಿವರಿಸಬಹುದು.

‘ಕಿಂ’ ಶಬ್ದಕ್ಕೆ ಏನು ಎನ್ನುವ ಅನಿಜ್ರ್ಞಾತವಾದ್ದ ಅರ್ಥವಿರುವದು. ಏನು, ಯಾವುದು ಎಂದು ಕೇಳುವಾಗ ಅದರ ಸ್ವರೂಪವು ತಿಳಿಯುವದಿಲ್ಲ. ಈಗ ‘ಕಸ್ಮೈ’ ಎಂದು ಹೇಳುವಾಗ ಈ ಪ್ರಜಾಪತಿಯ ಸ್ವರೂಪ ಅಥವಾ ಸಾಮರ್ಥ್ಯವು ಯಾರಿಂದಲೂ ಸಂಪೂರ್ಣವಾಗಿ ತಿಳಿಯಲಸಾಧ್ಯವಾದ ಸ್ವರೂಪವುಳ್ಳ ಎಂದು ಅರ್ಥಮಾಡಬಹುದು. ಅಥವಾ ‘ಕಂ’ ಎಂದರೆ ‘ಸುಖ’ವೆನ್ನುವ ಅರ್ಥವೂ ಇದೆ. ಹೀಗಾದರೆ ‘ಕಸ್ಮೈ’ ಎನ್ನುವದಕ್ಕೆ ಸುಖಸ್ವರೂಪನಾದ ಎನ್ನುವ ವ್ಯಾಖ್ಯಾನವನ್ನೂ ಮಾಡಬಹುದು. ತೈತ್ತರೀಯ ಬ್ರಾಹ್ಮಣದಲ್ಲಿ ಪ್ರಜಾಪತಿಗೆ ‘ಪ್ರಜಾಪತಿರ್ವೈ ಕಃ’ ಎಂದು ಹೆಸರು ಇರುವದನ್ನು ಹೇಳಿದ್ದಾರೆ. ಯಾಸ್ಕರು ಈ ಋಕ್ಕಿನಲ್ಲಿರುವ ಕಃ ಎನ್ನುವದಕ್ಕೆ

ಕಃ/ ಕಃ ಕಮನೋ ವಾ ಕ್ರಮನೋ ವಾ ಸುಖೋ ವಾ/ ತಸೈಷಾ ಭವತಿ// (ನಿ.10-22)

ಕಃ ಎಂದರೆ ಕಮ್ನೋ ವಾ/ ಕಮ್-ಪ್ರೀತಿಸು ಎನ್ನುವ ಧಾತುವಿನಿಂದ ಕಃ ನಿಷ್ಪನ್ನವಾಗಿದೆ. ಅಥವಾ ಕಃ ಎಂದರೆ ಕ್ರಮಣೋ ವಾ – ಅತಿಕ್ರಮಿಸುವನು, ಎಲ್ಲವನ್ನೂತನ್ನ ಶಕ್ತಿ ಸಾಮರ್ಥ್ಯಗಳಿಂದ ಅತಿಕ್ರಮಿಸುವನು, ಎಲ್ಲರಿಗಿಂತಲೂ ಅಧಿಕನಾದವನು ಎಂದರ್ಥ. ಹಾಗಾಗಿ

ಕಸ್ಮೈ ದೇವಾಯ ಹವಿಷಾ ವಿಧೇಮ’ ಎನ್ನುವದಕ್ಕೆ ‘ಇಂತಹ ಸರ್ವಗುಣ ವಿಶಿಷ್ಟನಾದ ಅಥವಾ ಸುಖಸ್ವರೂಪನಾದ ಹಿರಣ್ಯಗರ್ಭನಿಗಾಗಿ ಚರಪುರೋಡಾಶಾದಿ ಹವಿಸ್ಸುಗಳನ್ನು ಅರ್ಪಿಸೋಣ’ ಎನ್ನುವ ಅರ್ಥವೇ ಸರಿಯಾದುದು. ‘ವಿಧತಿ’ ಧಾತುವಿಗೆ ಕೊಡುವದು, ಅರ್ಪಿಸುವದು ಎನ್ನುವ ಅರ್ಥವಿದೆ. ಆದುದರಿಂದ ಇಲ್ಲಿನ ವಿಧೇಮ ಎನ್ನುವ ಶಬ್ದಕ್ಕೆ ಅರ್ಪಿಸೋಣ ಅಥವಾ ಹವಿರಾದಿಗಳಿಂದ ಉಪಚರಿಸೋಣ ಎಂದಾಗುತ್ತದೆ. ಹಾಗಾಗಿ

‘ಕಸ್ಮೈ ದೇವಾಯ ಹವಿಷಾ ವಿಧೇಮ’
ಅಂತಹ ಸುಸುಖಸ್ವರೂಪನಾದದೇವನಿಗೆ ಹವಿರಾದಿಗಳನ್ನು ಅರ್ಪಿಸೋಣ ಎನ್ನುವದೇ ಸರಿಯಾದ ಅರ್ಥ ವಿವರಣೆಯಾಗಿರುತ್ತದೆ.

(ಮುಂದುವರಿಯುವುದು…)

**********

(ಲೇಖಕರ ಬಗ್ಗೆ: ನಾರಾಯಣ ಯಾಜಿಯವರು ಮೂಲತಃ ಯಕ್ಷಗಾನದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಅರ್ಥಧಾರಿಯಾಗಿ ಖ್ಯಾತರು. ಯಕ್ಷಗಾನ ದ ಯಾವುದೇ ಪಾತ್ರಗಳ ನಿರ್ವಹಣೆಯಲ್ಲಿ ಎತ್ತಿದ ಕೈ. ಪುರಾಣಗಳ ಆಳ ಮತ್ತು ನಿಖರ ಅಧ್ಯಯನ, ಪಾತ್ರಗಳ ಸ್ವಭಾವದ ಸ್ಪಷ್ಟ ಕಲ್ಪನೆ, ಮಿತಿ ಮೀರದ ನಿರೂಪಣೆ ಯಾಜಿಯವರ ವೈಶಿಷ್ಟ್ಯ. ಜೊತೆಗೆ ಒಳ್ಳೆಯ ಕಥೆಗಾರ ಮತ್ತು ಲೇಖಕ. ಉತ್ತರ ಕನ್ನಡದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಒಳ್ಳೆಯ ಅಧ್ಯಯನ ಇರುವವರು. ಯಾಜಿಯವರ ಇತ್ತೀಚಿನ ಕಥಾಸಂಕಲನ “ನೈದಿಲೆಯ ಒಡಲು” ಅಪಾರ ಮೆಚ್ಚುಗೆ ಯನ್ನು ಪಡೆದಿದೆ.

ಕಲೆಯ ಜೊತೆಗೆ ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್ ಯಾಜಿಯವರ ಆಸಕ್ತಿಯ ಕ್ಷೇತ್ರಗಳು. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.)

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಚಿಂತನ ಲಹರಿ: ಕಲ್ಲೆಸೆತದಲ್ಲೊಂದು ಅಡಗಿದ ಸತ್ಯ

Upayuktha

ನವ (ಒಂಭತ್ತು) ವಿಧ ಭಕ್ತಿಗಳು: ಭಗವಂತನ ಆರಾಧನೆಯ ಸುಲಭ ಮಾರ್ಗಗಳಿವು

Upayuktha

ನವೆಂಬರ್ 21 ಯಾಜ್ಞವಲ್ಕ್ಯ ಜಯಂತಿ: ಮಹಾನ್‌ ದಾರ್ಶನಿಕ ಯಾಜ್ಞವಲ್ಕ್ಯರು

Upayuktha