ರಾಜ್ಯ

ಮಹಿಳೆಯರ ಸಾರ್ವತ್ರಿಕ ಆರೋಗ್ಯ ಸೇವೆಯ ‘ಶಪಥ’

– ಆರ್ಟಿಸ್ಟ್ ಫಾರ್ ಹರ್ ಮತ್ತು ಇಂಟಿಗ್ರೇಟೆಡ್ ಹೆಲ್ತ್ ಅಂಡ್‌ ವೆಲ್ ಫೇರ್ (ಐಎಚ್‌ಸಿ) ಕೌನ್ಸಿಲ್‌ನ ಜಂಟಿ ಆಶ್ರಯದಲ್ಲಿ ಯೋಜನೆ


– ವೈದ್ಯೆ ಹೇಮಾ ದಿವಾಕರ್ ನೇತೃತ್ವದಲ್ಲಿ ಮುಂಬರುವ 1,000 ದಿನದೊಳಗೆ ಯೋಜನೆಯನ್ನು ಅರ್ಥಪೂರ್ಣವಾಗಿಸುವ ಗುರಿ

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಪಾಲಿಗೆ ಅತ್ಯಂತ ಮಹತ್ವದ ದಿನ..! ಹೌದು, ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾಳೆ. ಎಂತಹ ಸವಾಲನ್ನಾದರೂ ಎದುರಿಸಬಲ್ಲೇ ಅನ್ನೋದನ್ನು ನಾಗರಿಕ ಸಮುದಾಯಕ್ಕೆ ನಿರೂಪಿಸಿ ತೋರಿಸಿದ್ದಾಳೆ. ಇದೀಗ ಮಹಿಳಾ ದಿನದ ವಿಶೇಷವಾಗಿ ವಿಶಿಷ್ಟವಾದ ‘ಶಪಥ’ ದೊಂದಿಗೆ ಮಹಿಳೆಯರ ಸಾರ್ವತ್ರಿಕ ಆರೋಗ್ಯ ಸೇವೆಯ ಅವಕಾಶ ಖಚಿತ ಪಡಿಸಿಕೊಳ್ಳುವ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಲಾಗುತ್ತಿದೆ.

ಮುಂದಿನ 1,000 ದಿನಗಳ ಸುದೀರ್ಘ ಪ್ರಯಾಣವಾಗಿದ್ದು ದೇಶದ ಮಹಿಳೆಯರ ಆರೋಗ್ಯದ ಬಗ್ಗೆ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ ಡಿಜಿ)ಯನ್ನು ಹೊಂದುವ ಉದ್ದೇಶವನ್ನು ಹೊಂದಲಾಗಿದೆ.

ಈ ಕಾರ್ಯಕ್ರಮವು ಆರ್ಟಿಸ್ಟ್ ಫಾರ್ ಹರ್ ಮತ್ತು ಇಂಟಿಗ್ರೇಟೆಡ್ ಹೆಲ್ತ್ ಅಂಡ್‌ ವೆಲ್ ಫೇರ್ (ಐಎಚ್ ಸಿ ) ಕೌನ್ಸಿಲ್‌ನ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗುತ್ತಿದೆ. ಖ್ಯಾತ ವೈದ್ಯೆ ಹೇಮಾ ದಿವಾಕರ್ ನೇತೃತ್ವ ವಹಿಸಿಕೊಂಡಿದ್ದಾರೆ. ಮಹಿಳೆಯರ ಆರೋಗ್ಯ ರಕ್ಷಣೆ, ನಾಳಿನ ಭವಿಷ್ಯದ ಬಗ್ಗೆ ದೃಷ್ಟಿಹರಿಸಬೇಕಿರುವ ಅಗತ್ಯತೆ ಹಿನ್ನೆಲೆಯಲ್ಲಿ ಶಪಥಕ್ಕೆ ಹೆಚ್ಚಿನ ಮಹತ್ವ ಲಭಿಸಿದೆ.

‘ಮಹಿಳೆಯರ ಎಲ್ಲಾ ಸಮಸ್ಯೆಯೂ ಪರಿಹಾರವಾಗಿಲ್ಲ’:
ಈ ಬಗ್ಗೆ ಮಾತನಾಡಿರುವ ಆರ್ಟಿಸ್ಟ್ ಫಾರ್ ಹರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಾಗೂ FOGSI ಮಾಜಿ ಅಧ್ಯಕ್ಷರಾಗಿರುವ ಹೇಮಾ ದಿವಾಕರ್ ‘ಸಮಾಜದಲ್ಲಿ ಆಗಾಗ್ಗೆ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ನಾವು ಕೇಳುತ್ತಲೇ ಇದ್ದೇವೆ. ಈ ಮಾಹಿತಿ ಪ್ರಕಾರ ಪುರುಷ ಹಾಗೂ ಮಹಿಳೆ ಸಮಾಜದಲ್ಲಿ ಸಮಾನರು. ಆದರೆ ಮಹಿಳೆ ಇಂದಿಗೂ ಕೂಡ ಪರಾವಲಂಬಿಯಾಗಿಯೇ ಉಳಿದಿದ್ದಾಳೆ. ಮಹಿಳೆ ಹೊಸ ಹುಟ್ಟನ್ನು ನೀಡುತ್ತಾಳೆ. ಇದರ ಹೊರತಾಗಿ ಆಕೆಗೆ ಸಾರ್ವತ್ರಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಬೇಕಿದೆ. ಅದರಲ್ಲೂ ಹೆರಿಗೆಯ ಸಮಯದಲ್ಲಿ ತಾಯಿಯ ಸಾವನ್ನು ತಡೆಯುವುದು ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಮಹಿಳೆಯಿಂದ ಆಕೆಯ ರಕ್ಷಣೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಎಂದು ನಾವು ಹೇಳಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಅರ್ಥಪೂರ್ಣವಾಗಿಸುವ ಗುರಿ’
ಆರೋಗ್ಯ ಕೇತ್ರದ ಎಲ್ಲ ಪಾಲುದಾರರ ಸಹಭಾಗಿತ್ವ ಮತ್ತು ಸಹಯೋಗದ ಮೂಲಕ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಉದ್ದೇಶವನ್ನು ಹೊಂದಲಾಗಿದೆ. ಈ ಬಗ್ಗೆ ಮಾತನಾಡಿದ ಹೇಮಾ ದಿವಾಕರ್, ‘ ಮಹಿಳಾ ಆರೋಗ್ಯ ಕಾಳಜಿ ಶಪಥ ದೇಶದ ಎಲ್ಲ ವಲಯಕ್ಕೆ ತಲುಪುವ ಮಹತ್ವದ ಗುರಿಯಿದೆ. ಮಹಿಳೆ ಎದುರಿಸುವ ಪ್ರತಿಯೊಂದು ಆರೋಗ್ಯ ಸಮಸ್ಯೆಯೂ ಸಂಕೀರ್ಣವಾಗಿದೆ, ಈ ಹಿನ್ನೆಲೆಯಲ್ಲಿ ಶೃಂಗಸಭೆ , ಸಮಾವೇಶ, ತರಬೇತಿ ಅವಧಿಗಳು ಹಾಗೂ ಸಂವೇದನಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ ಡಿಜಿ)ಯನ್ನು ಒಟ್ಟು ಮುಂಬರುವ ೧,೦೦೦ ದಿನದ ಒಳಗೆ ಅರ್ಥಪೂರ್ಣವಾಗಿ ತಲುಪುವ ಉದ್ದೇಶ ಹೊಂದಿದ್ದೇವೆ’ ಎಂದು ತಿಳಿಸಿದರು.

ಸಮಸ್ಯೆ ಹರಿಹಾರಕ್ಕಿದು ಸೂಕ್ತ ಸಮಯ..!
ಮಹಿಳೆಯರ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಸಮಯ ಬಂದಿದೆ ಅನ್ನುವ ಅಭಿಪ್ರಾಯವನ್ನು ಹೇಮಾ ದಿವಾಕರ್ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಅವರು, ‘ಭೇಟಿ ಬಚಾವೋ ಆಂದೋಲನವನ್ನು ಸರ್ಕಾರ ಹಮ್ಮಿಕೊಂಡಿದೆ. ಅದೇ ರೀತಿ ಖಾಸಗಿ ಸಂಸ್ಥೆಗಳು ಕೂಡ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿಯನ್ನು ತೆಗೆದುಕೊಂಡು ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ ಹೆಣ್ಣು ಮಕ್ಕಳು ಹುಟ್ಟನ್ನು ಕೂಡ ಸಂಭ್ರಮಿಸದ ವಾತವರಣವಿದೆ. ಸರಪಳಿಯಂತೆ ಸಮಸ್ಯೆಗಳು ಬೆಳೆದು ನಿಂತಿವೆ. ಅದನ್ನೆಲ್ಲ ಪರಿಹರಿಸಬೇಕಾಗಿರುವ ಅಗತ್ಯವಿದೆ. ಗುಣಮಟ್ಟ, ರಕ್ಷಣೆ, ಘನತೆ ಹಾಗೂ ಗೌರವ ಹೆಣ್ಣು ಮಕ್ಕಳಿಗೂ ಸಿಗುವ ಹಾಗೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಪರಿಹರಿಸುವುದಕ್ಕೆ ಇದು ಸೂಕ್ತ ಸಮಯವಾಗಿದೆ ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಹೇಮಾ ದಿವಾಕರ್, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆ ಕುಟುಂಬ, ಕಾರ್ಯ ನಿರ್ವಹಿಸುವ ಸ್ಥಳ ಹಾಗೂ ಸಮಾಜದಲ್ಲಿ ಮಹಿಳೆ ಪರಸ್ಪರ ನಂಬಿಕೆ ಮತ್ತು ಗೌರವವನ್ನು ಉಳಿಸಿಕೊಳ್ಳುವ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಮಹಿಳೆ ದಿನದ ವಿಷಯ ಒಂದು ಸಾಂಕೇತಿಕ ವಿಚಾರವಾಗಿರಲೇಬಾರದು. ಎಲ್ಲ ಸಮಯದಲ್ಲೂ ನಾವು ‘ಶಕ್ತಿ’ ಎಂಬ ಸುಳ್ಳು ಪ್ರಜ್ಞೆಯನ್ನು ಆಚರಿಸುವ ಬದಲು ‘ಜೀವನ’ವನ್ನು ಆಚರಿಸುತ್ತೇವೆ. ಈ ನಿಟ್ಟಿನಲ್ಲಿ ಭೇಟಿ ಬಚಾವೋ ಆಂದೋಲನದಿಂದ ಮಹಿಳೆಯ ಜೀವನದಲ್ಲಿ ಹೊಸತನದ ಬೆಳಕು ಕಾಣುವುದರಲ್ಲಿ ಅನುಮಾನವಿಲ್ಲ ಎಂದರು.

ಡಿಜಿಟಲ್‌ ತಂತ್ರಜ್ಞಾನದ ಪಾತ್ರ ನಿರ್ಣಾಯಕ:
ಮಹಿಳೆಯರ ಸಾರ್ವತ್ರಿಕ ಆರೋಗ್ಯ ಸೇವೆ ಯಶಸ್ವಿಯಾಗುವುದಕ್ಕೆ ಇಂದಿನ ಡಿಜಿಟಲ್‌ ತಂತ್ರಜ್ಞಾನದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಜಾಗೃತಿ ಮೂಡಿಸುವಲ್ಲಿ ಈ ತಂತ್ರಜ್ಞಾನ ಪರಿಣಾಮಕಾರಿ ಕೆಲಸವನ್ನು ಮಾಡಲಿದೆ. ಡಿಜಿಟಲ್‌ ಫ್ಲಾಟ್ ಫಾರ್ಮ್ ಗಳು, ನಾವೀನ್ಯತೆ ಮತ್ತು ಆರೈಕೆ ತಂತ್ರಜ್ಞಾನಗಳ ಮೇಲೆ ಸಾಮರ್ಥ್ಯವನ್ನು ಹೆಚ್ಚಿಸುವುದರತ್ತ ಗಮನಹರಿಸಬೇಕಿದೆ. ದೇಶಾದ್ಯಂತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮೂಲಕ ಇದನ್ನು ಕಾರ್ಯಗತ ಗೊಳಿಸಬಹುದಾಗಿದೆ. ಪ್ರತಿ ಬಾಲಕಿ, ಪ್ರತಿ ಮಹಿಳೆಯ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಿದೆ. ಗರ್ಭಧರಿಸುವ ಮೊದಲು ಹಾಗೂ ನಂತರ ಆಕೆಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಿದೆ. ಮಹಿಳೆಯರ ಆರೋಗ್ಯವು ರಾಷ್ಟ್ರದ ಸಂಪತ್ತು ಅನ್ನೋದನ್ನ ನಾವು ಎಂದೂ ಮರೆಯಬಾರದು ಎಂದು ಹೇಮಾ ದಿವಾಕರ್ ತಿಳಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

 

Related posts

ಬಿಎಸ್‌ವೈ ಇಳಿಸಲು ಬಿಜೆಪಿಯಲ್ಲೇ ಸಂಚು: ಸಿದ್ದರಾಮಯ್ಯ ಆರೋಪ

Upayuktha

ಜಗತ್ತಿನ ಕತ್ತಲು ಕಳೆಯಲಿ: ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

Upayuktha

ಖ್ಯಾತ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Upayuktha