ಲೇಖನಗಳು ಹಬ್ಬಗಳು-ಉತ್ಸವಗಳು

ನವರಾತ್ರಿ ವಿಶೇಷ ಲೇಖನ:  ನಮಾಮಿ ದುರ್ಗೆ – ಭಕ್ತಿ ಭಾವದ ಬೆರಗು

ಮಾರ್ನಮಿ ವರೆಗೂ ಮಳೆ ಬಂದರೆ ನೀರಿಗೆ ಬರಗಾಲವಿಲ್ಲ ಎಂಬ ಅಜ್ಜಿಯ ಮಾತಿನಂತೆ ಮತ್ತೆ ಮೈಕೊಡವಿ ಎದ್ದು ಕಾಡುತ್ತಿರುವ ಮಳೆ ನಡುವೆ ಶರನ್ನವರಾತ್ರಿ (ಮಹಾನವಮಿ, ಮಾರ್ನಮಿ, ದಸರಾ) ಹೊಸ್ತಿಲಿಗೇ ಬಂದು ನಿಂತಿದೆ.

ನವರಾತ್ರಿ ಎಂದರೆ ನವಭಾವ ಭಕುತಿ, ನವ ವಿಧ ಪೂಜೆ, ನವರಸವನ್ನು ಉಕ್ಕಿಸುವ ಮನರಂಜನೆ. ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಹೆಸರಿನಲ್ಲಿ ಯಾವುದೇ ನೆಲದ ಆಚರಣೆಯನ್ನು ಒಪ್ಪಿಕೊಂಡರೂ ಅಲ್ಲಿ ಕಾಣುವುದು ಅಪ್ಪಟ ದೇಸಿ ಸೊಗಡು.

ಮಹಾನವಮಿ, ನವರಾತ್ರಿ, ಶರನ್ನವರಾತ್ರಿ, ದಸರಾ, ಮಾರ್ನಮಿ ಹೀಗೆ ಬಹುವಿಧವಾಗಿ ಆಚರಿಸಲಾಗುವ ಈ ಹಬ್ಬದಲ್ಲಿ ಅಗ್ರಸ್ಥಾನ ದುರ್ಗೆಗೆ. ಮಾತೆಯ ಮಾಯೆಯ ಆರಾಧನೆಗೇ ಪ್ರಾಶಸ್ತ್ಯ.

ಶಕ್ತಿ ದೇವತೆಯ ಆರಾಧನೆಗೇ ಮೀಸಲಾದ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಹುತೇಕ ಒಂಬತ್ತು ದಿನಗಳಿಗೇ ಸೀಮಿತವಾಗಿ ಆಚರಿಸಲಾಗುವ ವಿಶಿಷ್ಟ ಶಕ್ತಿದೇವತೆ ದುರ್ಗೆಯನ್ನು ಎಲ್ಲಾ ಜಾತಿಗಳವರೂ ಏಕರೂಪವಾಗಿ ಆರಾಧಿಸಿ, ಪೂಜಿಸಿ ಭಕ್ತಿ ಸಮರ್ಪಣೆ ಮಾಡುವುದು ಈ ಹಬ್ಬದ ಹೆಗ್ಗಳಿಕೆ. ಜಗನ್ಮಾತೆ ಎಂಬ ಅನ್ವರ್ಥನಾಮದ ದುರ್ಗೆ ಎಲ್ಲರಿಗೂ ತಾಯಿಯೇ. ಎಲ್ಲರಿಗೂ ಸಮಾನ ಪ್ರೀತಿ.

ನವರಾತ್ರಿಯಲ್ಲಿ ಅನೇಕ ಆಚರಣೆಗಳು ರೂಢಿಯಲ್ಲಿವೆ. ನಿತ್ಯವೂ ದೇವಿಯ ಆರಾಧನೆ, ವಿಶೇಷವಾಗಿ ಸರಸ್ವತಿ ಪೂಜೆ, ಆಯುಧಪೂಜೆ, ಶಮೀಪೂಜೆ – ಹೀಗೆ ಹಲವು ಆಚರಣೆಗಳು ನಡೆಯುತ್ತವೆ. ಜೊತೆಗೆ ಬೊಂಬೆಗಳನ್ನು ಕೂಡಿಸುವ ಸಂಪ್ರದಾಯವೂ ಉಂಟು. ನಾಡಹಬ್ಬವಾಗಿಯೂ ಇದನ್ನು ಆಚರಿಸುವುದರಿಂದ ನಮ್ಮ ಸಾಂಸ್ಕೃತಿಕ ವೈಭವವನ್ನು ಎತ್ತಿಹಿಡಿಯುವ ಕಾರ್ಯಕ್ರಮಗಳೂ ರಾಜ್ಯಾದಾದ್ಯಂತ ನಡೆಯುತ್ತವೆ. ಶೃಂಗೇರಿ, ರಂಭಾಪುರಿ ಮುಂತಾದ ಮಠಗಳಲ್ಲಿ ವಿಶೇಷ ರೀತಿಯಿಂದ ನವರಾತ್ರಿಯ ಪರ್ವವನ್ನು ಆಚರಿಸಲಾಗುತ್ತದೆ.

ದೇವೀ ಶಕ್ತಿಯ ವಿದ್ಯಾರಾಧನೆ
ಶಕ್ತಿಗಳಲ್ಲಿ ಮೂರುವಿಧ. ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ. ಈ ಮೂರು ಶಕ್ತಿಗಳೂ ಜೀವರಾಶಿಯನ್ನೇ ಆಧರಿಸಿ ಕಾರ್ಯಪ್ರವೃತ್ತವಾದರೂ, ಗಮನಶೀಲತೆ- ಕಾರ್ಯಪಟುತ್ವ ಮಾತ್ರ ಭಿನ್ನ. ಮಹಾಕಾಳಿ ದುಷ್ಟನಿಗ್ರಹ- ಶಿಷ್ಟರ ರಕ್ಷಣೆ ಮಾಡಿದಾಗ ಮಹಾಲಕ್ಷ್ಮೀಯು ಕಾರ್ಯಪ್ರವೃತ್ತಳಾಗಿ ಅಪಾರ ಸಂಪತ್ತನ್ನು ಒದಗಿಸಿ, ಮಹಾಸರಸ್ವತಿ ಬೌದ್ಧಿಕ ವಿಕಾಸಕ್ಕೆ ಗಮನ ಕೊಡುವಂತೆ ಚಾಲನೆ ನೀಡುತ್ತದೆ. ಈ ತ್ರಿಗುಣಾತ್ಮಕ ಶಕ್ತಿಗಳ ಪ್ರವೃತ್ತಿಯೇ ಸೃಷ್ಟಿಗೆ ಆಧಾರ. ಇದೇ ದೇವಿಶಕ್ತಿ ಆರಾಧನೆಯ ಅಂತರಾರ್ಥ.

ಪುರಾಣ, ಮಹಾಭಾರತ ಹಾಗೂ ಅರ್ವಾಚೀನ ಇತಿಹಾಸಗಳಲ್ಲಿಯೂ ದೇವಿಯ ಆರಾಧನೆ ನಿರಂತರವಾಗಿ ನಡೆದು ಬಂದಿರುತ್ತದೆ. ಮಹಾಬಾರತದ ಭೀಷ್ಮಪರ್ವದಲ್ಲಿ ಕುರು-ಪಾಂಡವರ ಸೇನೆ ನೋಡಿ ತಟಸ್ಥನಾಗಿ ನಿಂತ ಅರ್ಜುನನಿಗೆ ಶ್ರೀಕೃಷ್ಣನು ಗೀತೋಪದೇಶಕ್ಕೆ ಮೊದಲು ಶ್ರೀದುರ್ಗಾಸ್ತೋತ್ರ ಮಾಡಲು ಹೇಳಿದ್ದಾನೆ.

ಅರ್ಜುನನ ಸ್ತೋತ್ರಕ್ಕೆ ಮೆಚ್ಚಿ ದುರ್ಗಾದೇವಿಯು ವಿಜಯಿಯಾಗುವೆ ಎಂದು ಆಶೀರ್ವದಿದ್ದಾಳೆ. ಮಾರ್ಕಂಡೇಯ ಪುರಾಣದಲ್ಲಿ ಶ್ರೀ ದುರ್ಗಾದೇವಿ ಮಹಿಮೆಯ 13 ಅಧ್ಯಾಯಗಳ ‘ದುರ್ಗಾಸಪ್ತಸತಿ’ ಎಂಬ ಪ್ರಸಿದ್ಧ ಅಭಿದಾನದಿಂದ ಈಗಲೂ ಅನುಷ್ಠಾನದಲ್ಲಿದೆ. ಶ್ರೀಭಾಗವತ ದಶಮಸ್ಕಂದದಲ್ಲಿ ರುಕ್ಮಿಣಿಯು ತನ್ನ ವಿವಾಹಪೂರ್ವದಲ್ಲಿ ಕನ್ಯೆಯು ಕುಲದೇವಿ(ಭವಾನಿ)ಯಾತ್ರೆಗೆ ಹೋಗಬೇಕಾದುದನ್ನು ವಿಪ್ರನೊಬ್ಬನ ಸಂಗಡ ಶ್ರೀಕೃಷ್ಣನಿಗೆ ತಿಳಿಸಿರುವ ಸಂಗತಿಯ ಮೇಲೆಂದ ಭೀಷ್ಮಕನ ರಾಜನ ಕುಲದೇವತೆ ಭವಾನಿ ಎಂದು ತಿಳಿದುಬರುತ್ತದೆ.

ಶಕ್ತಿ ಹಬ್ಬ ಸ್ತ್ರೀಲಿಂಗವುಳ್ಳದ್ದು. ಶಕ್ತಿಯು ಜನ್ಯಜನಕ ಭಾವವುಳ್ಳದ್ದೂ, ಆಧಾರ ಆಧೇಯ ಭಾವವುಳ್ಳದ್ದು. ಶಕ್ತಿಯು ಸುಮ್ಮನೆ ಒಂದಡೆ ಸ್ವತಂತ್ರವಾಗಿ ಇರದೆ ಜೀವರಾಶಿಯನ್ನು ಆಶ್ರಯಿಸಿಕೊಂಡೇ ಇರುತ್ತದೆ. ಜೀವರಾಶಿ ತಪ್ಪಿದಾಗ ಈ ಶಕ್ತಿಯ ಅಸ್ತಿತ್ವವೂ ಇರದು. ಶಕ್ತಿ ನಿತ್ಯ ಹುಟ್ಟುತ್ತಲೇ ಆಶ್ರಯಸ್ಥಾನದಲ್ಲಿಯೇ ಇರುತ್ತದೆ. ಶಕ್ತಿಯ ಈ ಸ್ವಭಾವ, ರೀತಿನೀತಿಗಳು ಸ್ತ್ರೀತ್ವವನ್ನೇ ಹೋಲುತ್ತವೆ.

ಈ ಹಬ್ಬಕ್ಕೆ ಇರುವ ಇನ್ನೊಂದು ಹೆಸರು ‘ಶರನ್ನವರಾತ್ರಿ’ ಎಂಬುದು. ವೇದಕಾಲದಲ್ಲಿ 365 ದಿನಗಳ ಕಾಲವನ್ನು (ಸಂವತ್ಸರವನ್ನು) ‘ಶರತ್’ ಎಂದು ಕರೆಯುತ್ತಿದ್ದರು. ಹಾಗಾಗಿ ವೇದಮಂತ್ರಗಳಲ್ಲಿ ಆ ಶಬ್ಧ ಬಹಳ ರೂಢಿಯಲ್ಲಿದೆ- ಅದರಲ್ಲೂ ಆಶೀರ್ವಾದ ಮಂತ್ರಗಳಲ್ಲಿ – ಉದಾ: ‘ಪಶ್ಯೇಮ ಶರದಶ್ಯತಂ, ಜೀವೇಮ ಶರದಶ್ಯತಂ’, ‘ಶತಂ ಜೀವೇಮ ಶರದಸ್ಸವೀರಾಃ’, ‘ಶತ ಶಾರದಂಚ’ ಇತ್ಯಾದಿ. ಅರ್ಥಾತ್: ಆಗ ನಮ್ಮ ಹೊಸ ವರ್ಷದ ಆರಂಭದ ಸಂಭ್ರಮವೇ ಶರನ್ನವರಾತ್ರಿಯ ಕೊಂಡಾಟ. ‘ಹಬ್ಬಗಳಿಗೂ, ಉಪವಾಸಗಳಿಗೂ ಹೆಸರಾದುದು ನಮ್ಮ ಹಿಂದು ಸಂಸ್ಕೃತಿ’ (Indians are know for fasting and feasting) ಎಂಬ ನಾಣ್ನುಡಿಗೆ ತಕ್ಕ ಹಾಗೆ ಇದ್ದ ವತ್ಸರಾರಂಭ -ಶರದೃತುವಿನ ಆರಂಭವಾದ ಆಶ್ವಯುಜ ಮಾಸದ (ಯಾವ ಮಾಸದಲ್ಲಿ ಚಂದ್ರನು ಹುಣ್ಣಿಮೆಯಂದು ಮೊದಲ ನಕ್ಷತ್ರವಾದ ಅಶ್ವಿನಿಯ ಜೊತೆಯಲ್ಲಿರುತ್ತಾನೋ ಆ ತಿಂಗಳು) – ಪಾಡ್ಯದಿಂದ ದಶಮಿಯವರೆಗಿನ ಈ 10 ದಿನಗಳ ಆಚರಣೆ.

‘ಬನ್ನಿ’ ಬಂಗಾರದ ಹಬ್ಬ…….
ದೇವೀ ಭಾಗವತ ಹೇಳುವಂತೆ, ಶತ್ರು ಸಂಹಾರ ಕಾರ್ಯ ಮಾಡಿ ನವರಾತ್ರಿಯ ಹತ್ತೂ ದಿನಗಳ ಕಾಲ ದೇವಿಯು ಬನ್ನಿ ಮರದಲ್ಲಿ ನೆಲೆಸಿರುತ್ತಾಳಂತೆ. ವಿಜಯದಶಮಿಯ ದಿನದಂದು ಬನ್ನಿ ಮರದಲ್ಲಿ ನೆಲೆಸಿರುವ ದೇವಿಯ ದರ್ಶನದಿಂದ ಎಲ್ಲಾ ಕಾರ್ಯಗಳಿಗೂ ವಿಜಯ ದೊರಕುತ್ತದೆ ಎಂಬ ನಂಬಿಕೆಯಿದೆ. ಧನಾಧಿಪತಿ ಕುಬೇರನು ಶಮೀಪತ್ರಗಳನ್ನು ಸುವರ್ಣ ನಾಣ್ಯಗಳನ್ನಾಗಿ ಪರಿವರ್ತಿಸಿ, ರಘು ಮಹಾರಾಜನನ್ನು ಅನುಗ್ರಹಿಸಿದ್ದನಂತೆ. ಈ ಹಿನ್ನಲೆಯಲ್ಲಿ ಬನ್ನಿ ಎಲೆಗಳನ್ನು ಸಂಪತ್ತಿನ ಪ್ರತೀಕವೆಂದು ಗೌರವಿಸಿ, ಪೂಜಿಸಿ, ತಿಜೋರಿಗಳಲ್ಲಿ ಇಡುವ ಪರಿಪಾಠವೂ ಇದೆ.

ಪಾಂಡವರು ಅಜ್ಞಾತವಾಸವನ್ನು ಪ್ರಾರಂಭಿಸುವ ಕಾಲದಲ್ಲಿ ರಹಸ್ಯವಾಗಿ ಜಗನ್ಮಾತೆಯ ಸನ್ನಿಧಿಯಲ್ಲಿರಿಸಿದ್ದ ಆಯುಧಗಳನ್ನು ತಾಯಿಯ ಅನುಗ್ರಹದೊಂದಿಗೆ ಪುನಃ ಪಡೆದು, ಉತ್ತರ ಗೋಗ್ರಹಣ ಕಾಲದಲ್ಲಿ, ಧರ್ಮಾಧರ್ಮ ಸಂಗ್ರಾಮವನ್ನು ನಡೆಸಿ ಜಯ ಗಳಿಸಿದ ದಿನವೇ ವಿಜಯದಶಮಿ ಎಂದು ಆಚರಿಸಲಾಗುತ್ತಿದೆ. ಈ ನವರಾತ್ರಿಯ ಅವಧಿಯಲ್ಲಿ ಶ್ರೀದೇವಿಯ ನಾನಾ ಪುರಾಣಕಥನಗಳನ್ನು, ಸ್ತೋತ್ರಗಳನ್ನು ಪಾರಾಯಣ ಮಾಡುವರು. ಚಂಡಿಕಾಹೋಮಾದಿಗಳನ್ನು ಆಚರಿಸುವರು. ಬನ್ನೀಮರದಲ್ಲೇ ಪಾಂಡವರು ಆಯುಧಗಳನ್ನು ಇರಿಸಿದ್ದರ ದ್ಯೋತಕವಾಗಿ ಶಮೀಪತ್ರೆಯನ್ನು (ಬನ್ನಿ ಎಲೆಯನ್ನು) ದೇವಿಗೆ ಸಮರ್ಪಿಸುವರು ಮತ್ತು ಎಲ್ಲರಿಗೂ ಪ್ರಸಾದವೆಂಬಂತೆ ನೀಡಿ, ಕಿರಿಯರು ಹಿರಿಯರಿಗೆ ನಮಿಸಿ ಆಶೀರ್ವಾದವನ್ನು ಪಡೆಯುವರು. ನವರಸಗಳಾದ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯ, ಭೀಭತ್ಸ, ಅದ್ಭುತ ಮತ್ತು ಶಾಂತತೆಯ ಸ್ವರೂಪಗಳಾದ ಜಗನ್ಮಾತೆಯನ್ನು ಶ್ರದ್ಧಾ-ಭಕ್ತಿಯಿಂದ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ಎಂಬ ಯಜ್ಞನಾಮಗಳಿಂದ ಆರಾಧಿಸುವರು. ಒಂದೊಂದು ರೂಪಕ್ಕೆ ಹೊಂದಿಕೊಂಡಂತೆ ಒಂದೊಂದು ತತ್ತ್ವವಿದೆ.

ಆದಿಶಕ್ತಿ ಸ್ವರೂಪಿಣಿಯಾದ ಜಗನ್ಮಾತೆಯು ಒಂಬತ್ತು ಮಹಾರಾಕ್ಷಸರನ್ನು ಸಂಹಾರಮಾಡಿ, ಲೋಕಕ್ಷಣೆಯನ್ನು ಮಾಡಿರುವಳು. ಆ ನವರಾಕ್ಷಸರೇ ಮಹಿಷಾಸುರ ರಕ್ತಬೀಜಾಸುರ –ಚಂಡ-ಮುಂಡ, ಶುಂಭ-ನಿಶುಂಭ, ಮಧು-ಕೈಟಭ ಮತ್ತು ಧೂಮ್ರಲೋಚನ. ಈ ರಾಕ್ಷಸರ ಸ್ವರೂಪವನ್ನು ಸೂಕ್ಷ್ಮ ದೃಷ್ಟಿತಿಂದ ಗಮಿನಿಸಿದರೆ, ನಮ್ಮಲ್ಲೇ ಇರಬಹುದಾದ ಆಸುರೀಪ್ರವೃತ್ತಿ ಎನ್ನಬಹುದು. ಆದಿಶಕ್ತಿಯನ್ನು ಆರಾಧನೆ ಮಾಡುವುದು ಈ ದುಷ್ಟಪ್ರವೃತ್ತಿಯು ನಾಶವಾಗುವುದು ಸಂಕೇತವಾಗಿಯೇ ಹೌದು.

ದುರ್ಗದೇವಿಯು ಅಗ್ನಿತತ್ತ್ವಕ್ಕೂ ಸಂಕೇತ. ಅಗ್ನಿತತ್ತ್ವವು ಜ್ಞಾನಮೂಲದ ಕರ್ಮಕ್ಕೆ ಸಂಕೇತ. ಎಂದರೆ ಯಜ್ಞತತ್ತ್ವಕ್ಕೆ ಸಂಕೇತ. ಯಜ್ಞ ಎಂದರೆ ಅದು ನಮ್ಮ ಜೀವನವೂ ಹೌದು, ಒಟ್ಟು ಸೃಷ್ಟಿಯೂ ಹೌದು, ಸೃಷ್ಟಿಯ ಸಮಸ್ತ ಸ್ವರೂಪವೂ ಹೌದು. ನಮ್ಮ ಲೌಕಿಕ ಮತ್ತು ಅಲೌಕಿಕವಾದ ಎರಡೂ ಹಂತದ ಒಳಿತಿಗಾಗಿ ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳುವಂಥ ಮಹಾಸರ್ವವೇ ದುರ್ಗಾಮಹೋತ್ಸವ. ಎಂದರೆ ನಮ್ಮಲ್ಲಿಯೇ ಇರುವಂಥ ಕಲ್ಮಷಗಳನ್ನು ದಹಿಸಿಕೊಂಡು, ನಮ್ಮ ಅಂತರಂಗದಲ್ಲಿಯೇ ಇರುವಂಥ ಆಗಾಧಶಕ್ತಿಯನ್ನು ಕಂಡುಕೊಳ್ಳುವಂಥ ಜ್ಞಾನಯೋಗದ ಕ್ರಿಯಾಯಜ್ಞವೇ ಈ ದುರ್ಗಾಮಹೋತ್ಸವ. ಅಗ್ನಿಯು ಊದ್ರ್ವಗತಿಯನ್ನು ಸಂಕೇತಿಸುತ್ತದೆ ಎಂದರೆ ನಾವು ನಮ್ಮ ಸಾಧನೆಯನ್ನೂ, ಸಿದ್ಧಿಯನ್ನೂ ಮೇಲ್ಮುಖಗೊಳಿಸಿಕೊಳ್ಳತಕ್ಕದ್ದು ಎಂಬುದನ್ನು ಇದು ನೆನಪಿಸುತ್ತದೆ. ಮೇಲ್ಮುಖಗೊಳಿಸಿಕೊಳ್ಳುವುದು, ಎತ್ತರವನ್ನಾಗಿಸುವುದು ಎಂದು.

ನವರಾತ್ರದ ಕೊನೆಯ ಅಂಗವಾಗಿ ದಶಮಿಯನ್ನು ‘ವಿಜಯದಶಮಿ’ ಎಂದೂ ಆಚರಿಸುವುದುಂಟು. ಇಲ್ಲಿ ‘ವಿಜಯ’ ಎಂದರೂ ಅದು ಅಂತರಂಗದಲ್ಲಿ ಪಡೆದುಕೊಂಡಂಥ ವಿಜಯವೇ ಹೌದೆನ್ನಿ! ವಿಜಯದಶಮಿಯಂದು ಶಮೀ ವೃಕ್ಷವನ್ನು ಪೂಜಿಸುವುದುಂಟು. ಯಜ್ಞಕಲಾಪದಲ್ಲಿ ವಿಶೇಷವಾಗಿ ಒದಗಿವರುವಂಥ ಮಹಾವೃಕ್ಷವೇ ಈ ಶಮೀ ವೃಕ್ಷ. ಋಷಿಗಳು ಈ ವೃಕ್ಷದ ಕೊರಡುಗಳನ್ನು ಮಥನ ಮಡಿ, ಆ ಮೂಲಕವೇ ಯಜ್ಞಕ್ಕೆ ಬೇಕಾದ ಅಗ್ನಿಯನ್ನು ಉತ್ಪತ್ತಿ ಮಾಡಿಕೊಳ್ಳುತ್ತಿದುಂಟು.

ಅಗ್ನಿದೇವಾತ್ಮಕವೆನಿಸಿರುವ ಈ ಮರವನ್ನು ‘ಅಗ್ನಿಗರ್ಭಾ’ ಎಂದೂ ಕರೆಯುತ್ತಾರೆ. ‘ವಹ್ನಿ’ ಎಂದರೂ ಅಗ್ನಿಯೇ. ಎಂದರೆ ನಮ್ಮಲ್ಲಿಯೇ ಇರುವಂಥ ಕಲ್ಮಶಗಳನ್ನು ದಹಿಸಿಕೊಂಡು, ನಮ್ಮ ಅಂತರಂಗದಲ್ಲಿಯೇ ಇರುವಂಥ ಆಗಾಧಶಕ್ತಿಯನ್ನು ಕಂಡುಕೊಳ್ಳುವಂಥ ಜ್ಞಾನಯೋಗದ ಕ್ರಿಯಾಯಜ್ಞವೇ ಈ ದುರ್ಗಾಮಹೋತ್ಸವ. ಈ ವಹ್ನಿವೃಕ್ಷವೇ ಕನ್ನಡದಲ್ಲಿ ‘ಬನ್ನಿ ಮರ’ ಆಗಿದೆ ಎಂದು ವಿದ್ವಾಂಸರು ಅಭಿಪ್ರಾಯಿಸಿದ್ದಾರೆ.

ಶಮೀ ಶಮಯತೇ ಪಾಪಮ್ ಶಮೀ ಶತ್ರುವಿನಾಶಿನೀ
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನೀ

ಈ ಮೇಲಿನ ಶ್ಲೋಕವು ಶಮೀ ವೃಕ್ಷಕ್ಕಿರುವ ಮಹತ್ವವನ್ನು ಸಾರುತ್ತದೆ. ಶಮೀ ಎಲೆಗಳನ್ನು ವಿನಿಮಯ ಮಾಡಿಕೊಂಡು ಕಾರ್ಯ ಯಶಸ್ವಿಯಾಗಲಿ ಎಂದು ಶ್ಲೋಕ ಹೇಳಿಕೊಳ್ಳುವುದರ ಮೂಲಕ ಹಾರೈಸಿಕೊಳ್ಳುವ ಆಚರಣೆ ಈಗಲೂ ಇದೆ. ಶಮೀ ವೃಕ್ಷವು ಪಾಪಗಳನ್ನು ನಿವಾರಿಸುತ್ತದೆ, ಅರ್ಜುನ, ಶ್ರೀ ರಾಮ ಮೊದಲಾದವರಿಗೆ ಪ್ರಿಯರ ದರ್ಶನ ಮಾಡಿಸಿದೆ; ಸ್ವತಃ ಶ್ರೀ ರಾಮನಿಂದಲೂ ಪೂಜಿಸಲ್ಪಟ್ಟ ಇಂತಹ ಶಮೀ ವೃಕ್ಷವು ನನಗೆ ಒಳಿತನ್ನು ಮಾಡಲಿ ಎಂಬುದು ಇದರ ಆಶಯ.

– ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು 9739369621
ಇ-ಮೇಲ್: : padmapranava@yahoo.com

 

Related posts

ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್- ಅತಿಯಾದ ಗೀಳಿನ ಕಾಯಿಲೆ

Upayuktha

ಕೊರೊನಾ ಮತ್ತು ಡಯಾಬಿಟಿಸ್: ಎರಡೂ ಜತೆಯಾದರೆ ಅಪಾಯ ಹೆಚ್ಚು

Upayuktha

ದಾಸವಾಳದ ಜ್ಯೂಸ್: ಆರೋಗ್ಯ ವರ್ಧಕ, ಬೊಜ್ಜು ನಿವಾರಕ

Upayuktha