ಅಬುಧಾಬಿ: ಶಿಖರ್ ಧವನ್ ಅವರ ಭರ್ಜರಿ ಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿತು.
ಟಾಸ್ ಗೆದ್ದ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಮೊದಲ ಓವರ್ನಲ್ಲೇ ಸ್ಯಾಮ್ ಕುರನ್ ಶೂನ್ಯಕ್ಕೆ ಔಟಾಗಿ ಆಘಾತ ಮೂಡಿಸಿದರು. ಆದರೆ ಎರಡನೇ ವಿಕೆಟ್ಗೆ ಫಫ್ ಡು ಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಜತೆಗೂಡಿ 87 ರನ್ ಕಲೆಹಾಕಿದರು. ವ್ಯಾಟ್ಸನ್ 28 ಎಸೆತಗಳಲ್ಲಿ 6 ಬೌಂಡರಿ ಸಹಿತ 36 ರನ್ ಕಲೆ ಹಾಕಿದರು. ಪ್ಲೆಸಿಸ್ 47 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿ ಸಹಿತ ಭರ್ಜರಿ 58 ರನ್ ಸಿಡಿಸಿದರು. ಬಳಿಕ ಬಂದ ಅಂಬಟಿ ರಾಯುಡು ಬಿರುಸಿನ ಆಟವಾಡಿ ಕೇವಲ 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 45 ರನ್ ಗಳಿಸಿದರು. ಆದರೆ ಕಪ್ತಾನ ಧೋನಿ ಮತ್ತೆ ವಿಫಲಗೊಂಡರು. ಕೇವಲ 3 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ರವೀಂದ್ರ ಜಡೇಜಾ ಅಂತಿಮ ಹಂತದಲ್ಲಿ 4 ಸಿಕ್ಸರ್ ಸಹಿತ 33 ರನ್ ಸಿಡಿಸಿದರು. ಆದರೆ ತಂಡದ ಒಟ್ಟಾರೆ ಸ್ಕೋರ್ ತೀರಾ ಉತ್ತಮವಾಗಿರಲಿಲ್ಲ. ಅಂತಿಮವಾಗಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ಗಳ ಸಾಧಾರಣ ಮೊತ್ತ ಕಲೆ ಹಾಿತು.
ಡೆಲ್ಲಿ ತಂಡದ ಪರ ಅನ್ರಿಕ್ ನಾರ್ಜೆ 2 ವಿಕೆಟ್ ಗಳಿಸಿದರು. ಉಳಿದಂತೆ, ತುಷಾರ್ ದೇಶಪಾಂಡೆ ಹಾಗೂ ಕಗಿಸೊ ರಬಡಾ ತಲಾ 1 ವಿಕೆಟ್ ಗಳಿಸಿದರು.
ಚೆನ್ನ ಒಡ್ಡಿದ ಸಾಧಾರಣ ಮೊತ್ತ ಬೆಂಬತ್ತಿ ಹೊರಟ ಡೆಲ್ಲಿಯ ಆರಂಭವೇನೂ ಚೆನ್ನಾಗಿರಲಿಲ್ಲ. ಮೊದಲ ಓವರ್ನಲ್ಲೇ ಪೃಥ್ವಿ ಶಾ ಶೂನ್ಯಕ್ಕೆ ಔಟಾದರು. ನಂತರ ಬಂದ ಅಜಿಂಕ್ಯಾ ರೆಹಾನೆ (8) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಆರಂಭದಿಂದಲೇ ಗಟ್ಟಿಯಾಗಿ ನೆಲೆ ನಿಂತವರು ಶಿಖರ್ ಧವನ್. ಅವರು 3ನೇ ವಿಕೆಟ್ಗೆ ನಾಯಕ ಶ್ರೇಯಸ್ ಅಯ್ಯರ್ ಜತೆಗೆ 78 ರನ್ಗಳ ಜತೆಯಾಟವಾಡಿದರು. ಶ್ರೇಯಸ್ 23 ರನ್ ಗಳಿಸಿ ಔಟಾದರು. ನಂತರ ಬಂದ ಸ್ಟೋಯಿನಿಸ್ 24 ರನ್ ಗಳಿಸಿದರು. ಅಲೆಕ್ಸ್ ಕ್ಯಾರೆ (4) ಬೇಗನೆ ಔಟಾದರು. ಆದರೆ ಇನ್ನೊಂದೆಡೆ ಶಿಖರ್ ನೆಲಕಚ್ಚಿ ಆಡುತ್ತಲೇ ಹೋದರು. ಅಂತಿಮವಾಗಿ ಅಕ್ಸರ್ ಪಟೇಲ್ (21) ಜತೆಗೂಡಿ ಧವನ್ ತಂಡವನ್ನು ಗೆಲುವಿನ ದಡ ದಾಟಿಸಿದರು. ಮೊದಲ ಓವರ್ನಿಂದ ಕೊನೆಯ ಓವರ್ ತನಕ ಆಟವಾಡಿದ ಧವನ್ ಎದುರಿಸಿದ್ದು ಕೇವಲ 58 ಎಸೆತಗಳು. ಅದರಲ್ಲಿ 1 ಸಿಕ್ಸರ್ ಹಾಗೂ 14 ಬೌಂಡರಿಗಳ ಸಹಿತವಾಗಿ ಆಕರ್ಷಕ ಶತಕ (101) ರನ್ ಗಳಿಸಿ ತಂಡದ ಗೆಲುವಿಗೆ ಕಾರಣೀಭೂತರಾದರು. ಅಂತಿಮವಾಗಿ ಡೆಲ್ಲಿ 19.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.
ಚೆನ್ನೈ ಪರ ದೀಪಕ್ ಚಹಾರ್ 2 ವಿಕೆಟ್ ಗಳಿಸಿದರೆ, ಸ್ಯಾಮ್ ಕುರನ್, ಶಾರ್ದೂಲ್ ಠಾಕೂರ್ ಹಾಗೂ ಬ್ರೇವೋ ತಲಾ 1 ವಿಕೆಟ್ ಗಳಿಸಿದರು.
ಡೆಲ್ಲಿ ಈ ತನಕ 9 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಚೆನ್ನೈ ಈ ತನಕ ಆಡಿರುವ ಪಂದ್ಯಗಳು 9 ಆಗಿದ್ದು, ಅದರಲ್ಲಿ 3 ರಲ್ಲಿ ಗೆಲುವು ಸಾಧಿಸಿದೆ.
ಐಪಿಎಲ್ 2020: ಶ್ರೇಯರ್, ನಾರ್ಜೆ ಅಮೋಘ ಪ್ರದರ್ಶನ, ಕೋಲ್ಕತಾ ವಿರುದ್ಧ ಡೆಲ್ಲಿ ಜಯಭೇರಿ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ