ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ: ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ

ಪಾದಯಾತ್ರೆಯಿಂದ ದೋಷಗಳ ನಿವಾರಣೆ, ಮಾನಸಿಕ ಪರಿವರ್ತನೆಯೊಂದಿಗೆ ಜೀವನಯಾತ್ರೆ ಸುಗಮ

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಿವರಾತ್ರಿ ಜಾಗರಣೆ ಅಂಗವಾಗಿ ಶಿವಪಂಚಾಕ್ಷರಿ ಪಠಣೆಗೆ ಚಾಲನೆ ನೀಡಿದರು.

ಧರ್ಮಸ್ಥಳ: ಉತ್ತಮವಾದ ಸಾತ್ವಿಕ ಆಹಾರ ಸೇವನೆಯೊಂದಿಗೆ ದೇಹದ ರಕ್ಷಣೆ ಮಾಡಬೇಕು. ದೇಹಕ್ಕೆ ಜೀವವೇ ಚೈತನ್ಯ. ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರುತ್ತದೆ. ಮನಸ್ಸು ಮತ್ತು ಪಂಚೇಂದ್ರೀಯಗಳ ನಿಗ್ರಹದೊಂದಿಗೆ ಪಾದಯಾತ್ರೆಯಿಂದ ದೋಷಗಳ ನಿವಾರಣೆಯಾಗಿ, ಮಾನಸಿಕ ಪರಿವರ್ತನೆಯೊಂದಿಗೆ ಜೀವನಯಾತ್ರೆ ಸುಗಮವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಗುರುವಾರ ಅಹೋ ರಾತ್ರಿ ಜಾಗರಣೆ ಹಾಗೂ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೃಢಸಂಕಲ್ಪದೊಂದಿಗೆ, ವ್ರತ-ನಿಯಮಗಳ ಪಾಲನೆಯೊಂದಿಗೆ, ಬದ್ಧತೆಯಿಂದ ದೇಹ ದಂಡನೆಯೊಂದಿಗೆ ಪಾದಯಾತ್ರೆ ಮಾಡಿದಾಗ ನಮ್ಮ ವಿಷಯಾಸಕ್ತಿ ಕಡಿಮೆಯಾಗಿ ದೋಷಗಳ ನಿವಾರಣೆಯಾಗುತ್ತದೆ. ನಾವು ಗುಣಗ್ರಾಹಿಗಳಾಗಿ ಸನ್ಮಾರ್ಗದಲ್ಲಿ ಸಾಗಲು ಸಾಧ್ಯವಾಗುತ್ತದೆ.

ಶಿವನು ಇಂದ್ರಿಯಗಳ ಅಧಿಪತಿ. ವಿಷಕಂಠನಾದುದರಿಂದ ಭಕ್ತರ ಎಲ್ಲಾ ದೋಷಗಳನ್ನು ಸ್ವೀಕರಿಸಿ ಲೋಕಕ್ಕೆ ಮಂಗಳವನ್ನುಂಟುಮಾಡುವ ದೇವರು. ಕಣ್ಣಿನ ರೆಪ್ಪೆ ಕಣ್ಣಿನ ರಕ್ಷಣೆ ಮಾಡುವಂತೆ ನಮಗೆ ಅರಿವಿಲ್ಲದೆ ದೇವರು ಭಕ್ತರ ರಕ್ಷಣೆ ಮಾಡುತ್ತಾರೆ. ಶಿವನಾಮ ಸ್ಮರಣೆಯಿಂದ ಸರ್ವ ದೋಷಗಳ ನಿವಾರಣೆಯಾಗುತ್ತದೆ. ಶಿವರಾತ್ರಿಯಂದು ಮೊಬೈಲ್ ಫೋನ್ ಬಳಸಬಾರದು ಎಂದು ಹೇಳಿದ ಹೆಗ್ಗಡೆಯವರು ವಾರದಲ್ಲಿ ಒಂದು ದಿನವಾದರೂ ಮೊಬೈಲ್ ಫೋನ್ ಬಳಕೆ ನಿಷೇಧಿಸಬೇಕು ಎಂದು ಸಲಹೆ ನೀಡಿದರು.

ಅಹೋ ರಾತ್ರಿ ನಾಲ್ಕು ಜಾವಗಳಲ್ಲಿ ಭಕ್ತರು ಅಭಿಷೇಕ ಸೇವೆ ಮಾಡಿ ಧನ್ಯತೆಯನ್ನು ಹೊಂದಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಶ್ರೀನಿವಾಸ ರಾವ್ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ವಿಟ್ಲ ಹಿಂದೂ ಸಮಾಜೋತ್ಸವ ಮುಂದೂಡಿಕೆ

Upayuktha

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ ಸುರೇಶ ನೆಗಳಗುಳಿ ಆಯ್ಕೆ

Upayuktha

ಮಾಣಿ ಮಠದಲ್ಲಿ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ

Upayuktha